ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ತೆರೆ
ಸಂಸತ್ತಿನ ಒಳಗೆ ಹಾಗೂ ಹೊರಗೆ ಪ್ರತಿಭಟನೆ ನಡೆದಿದ್ದವು
ನವದೆಹಲಿ: 2024ನೇ ಸಾಲಿನ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಇಂದು ತೆರೆ ಬಿದ್ದಿದೆ.
ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ವಿಚಾರವಾಗಿ ಸಂಸತ್ತಿನ ಒಳಗೆ ಹಾಗೂ ಹೊರಗೆ ಪ್ರತಿಭಟನೆ ನಡೆದಿದ್ದವು. ಸಂಸತ್ತಿನ ಹೊರಗೆ ಗುರುವಾರ ಎನ್ ಡಿಎ ಹಾಗೂ ಪ್ರತಿಪಕ್ಷಗಳು ಪ್ರತಿಭಟನೆ ವೇಳೆ ಮುಖಾಮುಖಿಯಾದಾಗ ನೂಕಾಟ-ತಳ್ಳಾಟ ನಡೆದು ಇಬ್ಬರು ಬಿಜೆಪಿ ಸಂಸದರು ಗಾಯಗೊಂಡಿದ್ದರು. ಈ ವಿಚಾರವಾಗಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಪೊಲೀಸರಿಗೆ ದೂರು ನೀಡಿತ್ತು. ಇತ್ತ ಬಿಜೆಪಿ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕೂಡಾ ಪ್ರತಿದೂರು ದಾಖಲಿಸಿತ್ತು. ಇದರ ನಡುವೆ ದೆಹಲಿ ಪೊಲೀಸರು ರಾಹುಲ್ ಗಾಂಧಿ ಮತ್ತಿತರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ, ಸ್ಪೀಕರ್ ಓಂ ಬಿರ್ಲಾ ಯಾವುದೇ ಸಂಸದರು, ಸದಸ್ಯರ ಗುಂಪು ಅಥವಾ ರಾಜಕೀಯ ಪಕ್ಷಗಳು ಮತ್ತು ಸದಸ್ಯರು ಸಂಸತ್ತಿನ ಆವರಣದಲ್ಲಿ ಪ್ರದರ್ಶನಗಳನ್ನು ನಡೆಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ, ಇದೆಲ್ಲರ ಅಂತಿಮ ದಿನವಾದ ಇಂದು ಲೋಕಸಭೆಯಲ್ಲಿ, ಒಂದು ದೇಶ ಒಂದು ಚುನಾವಣೆಗೆ ಸಂಬಂಧಿಸಿದ ಸಂವಿಧಾನದ 129ನೇ ತಿದ್ದುಪಡಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ಒಪ್ಪಿಸಲು ಅನುಮೋದನೆ ನೀಡಲಾಯಿತು.