ಸಚಿವ ಜಾರಕಿಹೊಳಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು
ಬೆಳಗಾವಿ: ಹಿಂದೂ ಧರ್ಮದ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಪ್ರಕರಣವನ್ನು ಬೆಂಗಳೂರಿನ ರಾಜ್ಯ ಹೈಕೋರ್ಟ್ ರದ್ದು ಮಾಡಿದೆ.
ತಮ್ಮ ಮೇಲೆ ಹಾಕಿದ್ದ ಮಾನನಷ್ಟ ಮೊಕದ್ದಮೆ, ಸತ್ರ ನ್ಯಾಯಾಲಯ ಆದೇಶವನ್ನು ರದ್ದು ಮಾಡಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ. ಗುರುವಾರ ಕೇಸ್ ರದ್ದು ಮಾಡಿ ಆದೇಶ ನೀಡಿದೆ.
``ಹಿಂದೂ ಎನ್ನುವುದು ಭಾರತೀಯ ಪದವಲ್ಲ. ಅದು ಪರ್ಷಿಯನ್ ನೆಲಕ್ಕೆ ಸೇರಿದ್ದು, ಅದೊಂದು ಅಶ್ಲೀಲ ಪದ'' ಎಂದು ಕಾರ್ಯಕ್ರಮವೊಂದರಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಐಪಿಸಿ ಸೆಕ್ಷನ್‌ಗಳಾದ ೧೫೩ (ಗಲಭೆಗೆ ಪ್ರಚೋದನೆ) ಮತ್ತು ೫೦೦ರ (ಬೇರೊಬ್ಬರಿಗೆ ಅವಮಾನ ಮಾಡುವುದು) ಅಡಿ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಂಜ್ಞೇ ತೆಗೆದುಕೊಂಡು ಕಾನೂನಿನ ಅನ್ವಯ ಮುನ್ನಡೆಯಬೇಕು ಎಂದು ಸತ್ರ ನ್ಯಾಯಾಲಯ ಮಾಡಿದ್ದ ಆದೇಶವನ್ನು ಸತೀಶ್ ಜಾರಕಿಹೊಳಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.