ಸಮಾಜ ವಿಭಜಿಸುವ ಮನಸ್ಥಿತಿಯವರು ದೇಶದ್ರೋಹಿಗಳು
ಮಂಗಳೂರು: ಸ್ವಾತಂತ್ರ್ಯ ನಂತರದ 78 ವರ್ಷಗಳಲ್ಲಿ ರಾಜಕೀಯ ವ್ಯವಸ್ಥೆಯು ನಮ್ಮ ಸಮಾಜವನ್ನು ಮತ್ತೆ ಜಾತಿ, ಧರ್ಮ, ದ್ವೇಷ ಮತ್ತು ಮೂಲಭೂತವಾದದ ಮೂಲಕ ಪ್ರತ್ಯೇಕಿಸಲು ಪ್ರಯತ್ನಿಸುತ್ತಿದೆ. ಇಂತಹ ಸಮಾಜವನ್ನು ವಿಭಜಿಸುವ ಮನಸ್ಥಿತಿಯವರು ದೇಶದ್ರೋಹಿಗಳು. ಅವರು ಸಂವಿಧಾನದ ಬಗ್ಗೆ ನಂಬಿಕೆ ಇಲ್ಲದವರು ಎಂದು ಮಹಾತ್ಮ ಗಾಂಧೀಜಿಯವರ ಮರಿಮಗ ಮತ್ತು ಸಾಮಾಜಿಕ ಚಿಂತಕ ತುಷಾರ್ ಗಾಂಧೀ ಅಭಿಪ್ರಾಯಿಸಿದ್ದಾರೆ.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ, ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನ ಕಜೆಮಾರು ಕೆದಂಬಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ವಿಚಾರ ಸಂಕಿರಣ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ‘ಇಂದಿನ ಯುವಜನತೆಗೆ ಗಾಂಧೀ ವಿಚಾರಧಾರೆಯ ಪ್ರಸ್ತುತತೆ’ ಬಗ್ಗೆ ಮಾತನಾಡಿದರು.
ಕಾಮನಬಿಲ್ಲು ಏಳು ಬಣ್ಣಗಳಿಂದ ಭಿನ್ನ ಗುರುತನ್ನು ಹೊಂದಿದ್ದರೂ ಅದು ಭಿತ್ತರಗೊಳ್ಳುವಾಗ ತನ್ನ ಎಲ್ಲಾ ಬಣ್ಣಗಳೂ ಒಂದೇ ಎಂಬ ಐಕ್ಯತೆಯ ಸಂದೇಶವನ್ನು ನೀಡುತ್ತದೆ. ಇದೇ ಕಾಮನಬಿಲ್ಲಿನ ರೀತಿಯಲ್ಲಿ ನಮ್ಮ ಸಮಾಜ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನ ಒಗ್ಗಟ್ಟನ್ನು ಪ್ರದರ್ಶಿಸಿತ್ತು. ಸತ್ಯಾಗ್ರಹ, ಕ್ರಾಂತಿಕಾರಿ ಮಾರ್ಗಗಳ ಮೂಲಕ ಅಂದು ಬ್ರಿಟಿಷರ ವಿರುದ್ಧ ನಡೆದ ಹೋರಾಟದಂತೆಯೇ ಇಂದು ಧರ್ಮ, ಜಾತಿ, ದ್ವೇಷದ ಮೂಲಕ ದೇಶದ ಜನರ ಒಗ್ಗಟ್ಟನ್ನು ಮುರಿಯಲು ಪ್ರಯತ್ನಿಸುತ್ತಿರುವ ದೇಶ ದ್ರೋಹಿಗಳ ವಿರುದ್ಧ ಹೋರಾಟದ ಧ್ವನಿ ಮೊಳಗಬೇಕಾಗಿದೆ. ಈ ಜವಾಬ್ಧಾರಿಯನ್ನು ಯುವಕರು ವಹಿಸಬೇಕು ಎಂದವರು ಕರೆ ನೀಡಿದರು.
ಉತ್ತರ ಪ್ರದೇಶದಲ್ಲಿ ಬಾಲಕನೊಬ್ಬ ಟಿಫಿನ್‌ನಲ್ಲಿ ಬಿರಿಯಾನಿ ಇದೆ ಎಂದು ಆತನನ್ನು ಶಾಲೆಯಿಂದ ಹೊರದಬ್ಬಲಾಗುತ್ತದೆ. ಪೊಲೀಸ್ ಪೇದೆಯೊಬ್ಬ ರೈಲಿನಲ್ಲಿ ಮುಸ್ಲಿಂ ವ್ಯಕ್ತಿಯೆಂಬ ಕಾರಣಕ್ಕೆ ಗುಂಡೇಟು ಹಾಕಿ ಕೊಲ್ಲುತ್ತಾನೆ. ನಮ್ಮ ಪಕ್ಕದಲ್ಲಿರುವವರನ್ನೇ ಅನುಮಾನಿಸುವ ಪರಿಸ್ಥಿತಿ. ದೇಶದ ಪ್ರಧಾನಿ ಹಾಗೂ ಗೃಹ ಸಚಿವರೇ ಇಂತಹ ಕೃತ್ಯಗಳನ್ನು ಖಂಡಿಸುವ ಬದಲು ಪ್ರಚೋದನೆ ನೀಡುವ ರೀತಿಯ ಸಂದೇಶಗಳನ್ನು ನೀಡುತ್ತಾರೆ. ಇಂತಹ ದ್ವೇಷದ ಮನಸ್ಥಿತಿ ಸ್ವೀಕಾರಾರ್ಹವೇ ? ಇದು ಯಾವ ರೀತಿಯ ಅಮೃತ ಕಾಲ. ನಮ್ಮದೇ ದೇಶದ ಇನ್ನೊಂದು ಮೂಲೆಯಲ್ಲಿ ನಡೆಯುವ ಇಂತಹ ಅಮಾನುಷ ಕೃತ್ಯಗಳ ಬಗ್ಗೆ ನಮಗೇಕೆ ನೋವಾಗುವುದಿಲ್ಲ? ಅಪರಾಧಗಳು ಮೇಳೈಸಿದಂತೆ ಸತ್ಯ, ನ್ಯಾಯಕ್ಕಾಗಿನ ಧ್ವನಿ ಮೌನವಾಗುತ್ತದೆ. ಭವಿಷ್ಯದ ದೇಶದ ಕರ್ತೃಗಳಾದ ಯುವಕರು ಈ ವಿಚಾರಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ಭಾಷೆ, ಜಾತಿ, ಲಿಂಗ, ಧರ್ಮದ ಆಧಾರದಲ್ಲಿ ನಡೆಯುತ್ತಿರುವ ದ್ವೇಷದ ವಿರುದ್ಧ ಪ್ರೀತಿ, ಭಾತೃತ್ವ ಹಾಗೂ ಒಗ್ಗಟ್ಟಿನ ಮೂಲಕ ಉತ್ತರ ನೀಡಬೇಕಾಗಿದೆ. ನಮ್ಮ ಪೂರ್ವಜರು ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ ತ್ಯಾಗ ಬಲಿದಾನದ
ಮಹತ್ವವನ್ನು ನಾವು ಎತ್ತಿ ಹಿಡಿಯಬೇಕು. ಈ ನಿಟ್ಟಿನಲ್ಲಿ ಗಾಂಧಿಯ ಪ್ರಸ್ತುತತೆಯನ್ನು ಯುವಕರು ಅರಿಯಬೇಕು ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಬಡತನವಿದ್ದರೂ ಒಗ್ಗಟ್ಟಿದ್ದ ಕಾರಣ ಬ್ರಿಟಿಷರಿಂದ ನಮ್ಮ ಸ್ವಾತಂತ್ರ್ಯವನ್ನು ಪಡೆಯಲು ಸಾಧ್ಯವಾಯಿತು. ಆದರೆ ಇಂದು ರಾಜಕೀಯ ನಾಯಕರು ಅಧಿಕಾರಕ್ಕಾಗಿ ಬ್ರಿಟಿಷರ ವಿಭಜಿಸಿ ಆಳುವ ತಂತ್ರವನ್ನು ಅನುಸರಿಸಿ ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ. ಹಿಂದಿನ ರಾಜಕೀಯ ನಾಯಕರು ತಮ್ಮ ಸಾಮಾಜಿಕ ಜೀವನದ ಕೆಲಸ ಕಾರ್ಯಗಳ ಮೂಲಕ ಗುರುತಿಸಿಕೊಳ್ಳುತ್ತಿದ್ದರೆ ಇಂದು ತಮ್ಮ ಸುತ್ತಮುತ್ತಲಿರುವ ಬಾಡಿ ಗಾರ್ಡ್‌ಗಳ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜೀವನದಲ್ಲಿ ಇಲ್ಲದವರನ್ನು ಇಂದು ನಾವು ಮತ್ತೆ ಮತ್ತೆ ಅಧಿಕಾರಕ್ಕೇರಿಸುತ್ತಿದ್ದೇವೆ. ಈ ಮೂಲಕ ಮತದಾನ ಮೌಲ್ಯವು ಕುಸಿಯುತ್ತಿದೆ. ಸಂವಿಧಾನ ವಿರೋಧಿ ಕಾನೂನುಗಳು ದೇಶದ ಸಂಸತ್ತಿನಲ್ಲಿ ಚರ್ಚೆ ರಹಿತವಾಗಿ ಮಂಜೂರಾಗುತ್ತಿವೆ. ಸರಕಾರಿ ಅಧಿಕಾರಿಗಳು ಆರೆಸ್ಸೆಸ್ ಸಂಘಟನೆಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇದು ಸಂವಿಧಾನವನ್ನು ಬದಲಿಸಿ, ಕೇವಲ ಹಿಂದೂ ರಾಷ್ಟ್ರ ಮಾತ್ರವಲ್ಲ, ಜಾತಿ ಆಧಾರಿತ ಹಿಂದೂ ರಾಷ್ಟ್ರ ನಿರ್ಮಾಣದ ತಂತ್ರದ ಆರೆಸೆಸ್ ಭಾಗವಾಗಿದ್ದು, ಇದನ್ನು ಯುವ ಸಮುದಾಯ ಅರಿಯಬೇಕಾಗಿದೆ ಎಂದವರು ಹೇಳಿದರು.
ಇಂದಿರಾ ಗಾಂಧಿಯವರೂ ಒಂದು ಬಾರಿ ತಮ್ಮ ಸರ್ವಾಧಿಕಾರಿ ಧೋರಣೆಯಿಂದ ಸಂವಿಧಾನವನ್ನು ಅಮಾನತಿನಲ್ಲಿಸಿರಿಸಿದ್ದರು. ಆದರೆ ಅದರ ಪರಿಣಾಮ ಹಾಗೂ ತಮ್ಮ ತಪ್ಪನ್ನು ಆಕೆ ಬಹುಬೇಗ ಅರ್ಥೈಸಿಕೊಂಡರು. ತನ್ನ ಅಹಂಗಿಂತ ದೇಶದ ಪ್ರಜಾಪ್ರಭುತ್ವ, ಸಂವಿಧಾನ ಮುಖ್ಯ ಎಂಬುದನ್ನು ಅರಿತರು. ಆದರೆ ಇಂದು ಮತ್ತೆ ದೇಶದ ರಾಜಕೀಯದಲ್ಲಿ ಅಹಂ ಮೆರೆಯುತ್ತಿದೆ. ಮೋದಿ ಹೆ ತೊ ಮುಕಿನ್ ಹೆ ಎಂಬ ಮಾತು ವಿಜೃಂಭಿಸಲಾಗುತ್ತಿದೆ. ಆದರೆ ನಾವಿರುವುದು ಪ್ರಜಾಪ್ರಭುತ್ವ ದೇಶದಲ್ಲಿ. ಮುಂದಿನ ಜನಾಂಗಕ್ಕೆ ನಾವು ಪ್ರಜಾಪ್ರಭುತ್ವ ಸಮಾಜವನ್ನು ನೀಡಬೇಕಾಗಿದೆಯೇ ಹೊರತು ಜೀತದಾಳುಗಳಾಗಿ ಬದುಕುವ ಸಮಾಜವನ್ನು ಅಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂಬುದನ್ನು ನಿರೂಪಿಸಬೇಕಾಗಿದೆ ಎಂದು ತುಷಾರ್ ಗಾಂಧಿ ಅಭಿಪ್ರಾಯಿಸಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಬಡತನ ದಾರಿದ್ರ್ಯದಿಂದ ಕೂಡಿದ್ದರೂ ಆಧ್ಯಾತ್ಮಿಕ ಹಾಗೂ ಪ್ರಜ್ಞಾವಂತ ಭಾರತ ನಮ್ಮದಾಗಿತ್ತು. ಆದರೆ ಗಾಂಧಿಯನ್ನು ನಾವು ಬಳುವಳಿಯಾಗಿ ಮಾತ್ರ ಪಡೆದುಕೊಂಡಿದ್ದೇವೆ. ಅವರ ತತ್ವ, ಸಿದ್ಧಾಂತಗಳನ್ನು ನಾವು ಮರೆತಿದ್ದೇವೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಗಾಂಧಿ ಹಾಗೂ ನೆಹರೂ ಅವರ ಮೌಲ್ಯಗಳ ಅಧ:ಪತನವಾಗುತ್ತಿದೆ. ಆದರೆ ಭಾರತ ಬಿಟ್ಟು ಗಾಂಧಿ ಇಲ್ಲ. ಗಾಂಧಿ ಬಿಟ್ಟು ಭಾರತ ಇಲ್ಲೆ ಎಂಬುದನ್ನು ಯುವ ಸಮುದಾಯ ತಿಳಿಯಬೇಕಾಗಿದೆ. ಅದಕ್ಕಾಗಿ ಅವರನ್ನು ಓದಬೇಕು. ಅರ್ಥಮಾಡಿಕೊಳ್ಳಬೇಕು. ಸಂಶಯ ಇದ್ದಾಗ ಪ್ರಶ್ನಿಸಬೇಕು ಎಂದರು.
ಸಂವಿಧಾನವನ್ನು ಅಲ್ಲಾಡಿಸಲು ಹೊರಟಿರುವ ದುಷ್ಟಶಕ್ತಿಗಳು ನಮ್ಮ ನಡುವೆ ಇದ್ದು, ಗುಲಾಮಗಿರಿಯಲ್ಲಿ ಬದುಕಿದ ಜನರಿಗೆ ಮೂರ್ತರೂಪ ನಮ್ಮ ಸಂವಿಧಾನ ಎಂಬ ಅರಿವು ಮೂಡಿಸುವ ಗಾಂಧಿ ಮನಸ್ಕ ಯುಕವರನ್ನು ನಾವು ತಯಾರು ಮಾಡಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ವಹಿಸಿದ್ದರು.
‘ಆನ್ ದಿ ಟ್ರಾಯಲ್ ಆಫ್ ಗಾಂಧೀಸ್ ಫುಟ್‌ಸ್ಟೆಫ್ಸ್’ ಮತ್ತು ‘ಬಿಫೋರ್ ಐ ರಿಟರ್ನ್ ಟು ದಿ ಸಾಯಿಲ್’ ಪುಸ್ತಕವನ್ನು ಬನಿಟ್ಟೆವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಡಾ. ಶಾಂತಾರಾಮ ಶೆಟ್ಟಿಬಿಡುಗಡೆಗೊಳಿಸಿದರು.
ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನದ ಸಂಸ್ಥಾಪಕ ಪ್ರಮೋದ್ ಕುಮಾರ್ ರೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರೊ. ಗಣಪತಿ ಗೌಡ ಉಪಸ್ಥಿತರಿದ್ದರು. ಮಂಗಳೂರು ವಿವಿ ಎನ್‌ಎಸ್‌ಎಸ್‌ನ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶೇಷಪ್ಪ ಕೆ. ವಂದಿಸಿದರು. ಆರ್‌ಜೆ ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು.
ಗಾಂಧಿ ಸ್ಮೃತಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ಅತಿಥಿಗಳಿಗೆ ತುಳುನಾಡ ಸಂಪ್ರದಾಯದಂತೆ ವೀಳ್ಯದೆಲೆ ಅಡಿಕೆ , ಖಾದಿ ಶಾಲು ಹಾಗೂ ಚರಕವನ್ನು ನೀಡಿ ಗೌರವಿಸಲಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.