ಸರ್ದಾರ್ ಪಟೇಲ್ 150ನೇ ಜನ್ಮದಿನ: ಏಕತಾ ಓಟಕ್ಕೆ ಚಾಲನೆ
ಮಂಗಳೂರು: ಉಕ್ಕಿನ ಮನುಷ್ಯ ಎಂದೇ ಬಿರುದಾಂಕಿತರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಐಕ್ಯತಾ ದಿನದ ಪ್ರಯುಕ್ತ ಮಂಗಳೂರಿನಲ್ಲಿ ಮಂಗಳವಾರ ಮಂಗಳಾ ಕ್ರೀಡಾಂಗಣದಿಂದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸರ್ಕಲ್‌ವರೆಗೆ (ನವಭಾರತ್ ಸರ್ಕಲ್) ‘ರನ್ ಫಾರ್ ಯೂನಿಟಿ’ ಕಾರ್ಯಕ್ರಮ ಏರ್ಪಟ್ಟಿತು.
ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ ಕರೆಯಂತೆ ನಡೆದ ಏಕತಾ ಓಟಕ್ಕೆ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಮಂಗಳಾ ಕ್ರೀಡಾಂಗಣದಲ್ಲಿ ಚಾಲನೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಮೇಯರ್ ಮನೋಜ್ ಕೋಡಿಕಲ್, ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ಸದಸ್ಯರಾದ ಶಕಿಲಾ ಕಾವ, ಕಿರಣ್ ಕುಮಾರ್, ಬಿಜೆಪಿ ಜಿಲ್ಲಾ ವಕ್ತಾರ ರವಿಶಂಕರ್ ಮಿಜಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಮತ್ತಿರರಿದ್ದರು.
ಈ ಬಾರಿ ಪ್ರಸಾರವಾದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ದೇಶದ ಏಕತೆಯ ಮಂತ್ರದ ಜೊತೆಗೆ ಗರಿಷ್ಟ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಫಿಟ್‌ನೆಸ್ ಮಂತ್ರವನ್ನು ಎಲ್ಲೆಡೆ ಹರಡುವಂತೆ ಕರೆ ನೀಡಿದ್ದರು. ಸಂಜೆ ಮಂಗಳಾ ಕ್ರೀಡಾಂಗಣದಿಂದ ಆರಂಭವಾದ ಏಕತಾ ಓಟ ಲಾಲ್‌ಬಾಗ್, ಪಿವಿಎಸ್ ಮೂಲಕ ನವಭಾರತ್ ಸರ್ಕಲ್‌ನಲ್ಲಿ ಸಮಾಪ್ತಿಗೊಂಡಿತು.