ಸರ್ವಾಧಿಕಾರ ಮುಕ್ತ ಸಿರಿಯಾ ಭವಿಷ್ಯ ಏನು?
೫೩ ವರ್ಷಗಳ ಕಾಲ ಆಡಳಿತ ನಡೆಸಿದ ಬಳಿಕ, ಅಸ್ಸಾದ್ ಕುಟುಂಬ ಸಿರಿಯಾದಲ್ಲಿ ವಿಧ್ವಂಸ, ಭ್ರಷ್ಟಾಚಾರ, ಮತ್ತು ನೋವುಗಳ ಪರಂಪರೆಯನ್ನೇ ಉಳಿಸಿದೆ. ಬಂಡುಕೋರರ ಪಡೆಗಳು ಡಿಸೆಂಬರ್ ೮ರಂದು ಡಮಾಸ್ಕಸ್ ಬಳಿ ಸಮೀಪಿಸಿದಂತೆ, ಬಶರ್ ಅಲ್ ಅಸ್ಸಾದ್‌ಗೆ ನಿಷ್ಠರಾದ ಸರ್ಕಾರಿ ಪಡೆಗಳು ಅಸ್ಸಾದ್ ಪರವಾಗಿ ಹೋರಾಡುವ ಸ್ಫೂರ್ತಿಯನ್ನೇ ಕಳೆದುಕೊಂಡು ಹಿಮ್ಮೆಟ್ಟತೊಡಗಿದವು.
ಬಳಿಕ, ಅಸ್ಸಾದ್ ಆಡಳಿತದಲ್ಲಿ ಬಡತನದ ಬೇಗೆಯಲ್ಲಿ ಬೆಂದಿದ್ದ ಸಿರಿಯನ್ನರು ಅಸ್ಸಾದ್‌ರ ಖಾಲಿ ಅರಮನೆಗಳನ್ನು ಆಶ್ಚರ್ಯ, ಆಘಾತಗಳಿಂದ ನೋಡುತ್ತಿದ್ದರು. ಒಂದು ಸಮಯದಲ್ಲಿ ಐಷಾರಾಮದಿಂದ ತುಂಬಿದ್ದ ಈ ಭವ್ಯ ಬಂಗಲೆಗಳು ಈಗ ಖಾಲಿಯಾಗಿದ್ದು, ಸಿರಿಯಾದ ನಾಯಕರ ವೈಭವೋಪೇತ ಜೀವನ ಮತ್ತು ನಾಗರಿಕರ ಸಂಕಷ್ಟಗಳ ವೈರುಧ್ಯದ ಪ್ರತಿನಿಧಿಯಾಗಿ ನಿಂತಿವೆ.
ಅಸ್ಸಾದ್ ಮಾಸ್ಕೋಗೆ ಪಲಾಯನ ನಡೆಸಿದ್ದು, ಪ್ರಸ್ತುತ ವಿಮೋಚನಾ ಚಳವಳಿ ಎಲ್ಲಿಗೆ ತಲುಪಲಿದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಜನಾಂಗೀಯ ಸಂಘರ್ಷ ಮತ್ತು ಧಾರ್ಮಿಕ ಉದ್ವಿಗ್ನತೆಗಳಿಂದ ನಲುಗಿರುವ ಪ್ರದೇಶದಲ್ಲಿ ಮುಂದೇನಾಗಲಿದೆಯೋ ಎಂದು ಜನರು ಆತಂಕಗೊಂಡಿದ್ದಾರೆ.
೨೦೧೦ರಿಂದ ೨೦೧೨ರ ತನಕ ನಡೆದ ಅರಬ್ ವಸಂತದಲ್ಲಿ, ಒಂದು ವೇಳೆ ದೇಶಗಳು ತಮ್ಮ ಸರ್ವಾಧಿಕಾರಿಗಳನ್ನು ಕೆಳಗಿಳಿಸಿದರೂ, ಅವರ ನಂತರ ಬರುವವರೂ ಅಷ್ಟೇ ದಮನಕಾರಿ, ಕ್ರೂರಿಗಳಾಗಿರಬಹುದು ಎಂಬುದು ಸಾಬೀತಾಗಿದೆ.
ಇದು ಸಿರಿಯಾಗೆ ಉತ್ತಮ ಭವಿಷ್ಯ ಲಭಿಸಲಿ ಎಂದು ಹಾರೈಸುವುದಕ್ಕೆ, ಮತ್ತು ಅದಕ್ಕಾಗಿ ಶ್ರಮಿಸುವುದಕ್ಕಿರುವ ಮಹತ್ವವನ್ನು ತೋರಿಸಿದೆ.
ವಿವಿಧ ಗುಂಪುಗಳು ಸಿರಿಯಾವನ್ನು ಇನ್ನಷ್ಟು ಹಿಂಸಾಚಾರದತ್ತ ಎಳೆಯಲು ಪ್ರಯತ್ನ ನಡೆಸುತ್ತಿವೆ ಎನ್ನುವುದು ಈಗಾಗಲೇ ಸ್ಪಷ್ಟವಾಗಿದೆ. ಸಿರಿಯಾ ಹಲವಾರು ಜನಾಂಗೀಯ ಗುಂಪುಗಳು ಮತ್ತು ಧರ್ಮಗಳನ್ನು ಹೊಂದಿದ್ದು, ಅವುಗಳು ಒಟ್ಟೋಮನ್ ಸಾಮ್ರಾಜ್ಯದ ಕಾಲಕ್ಕೂ ಸೇರಿವೆ.
ಒಟ್ಟೋಮನ್ ಸಾಮ್ರಾಜ್ಯ ಒಂದು ಬೃಹತ್, ಶಕ್ತಿಶಾಲಿ ಸಾಮ್ರಾಜ್ಯವಾಗಿದ್ದು, ೧೩ನೇ ಶತಮಾನದಿಂದ ೨೦ನೇ ಶತಮಾನದ ಆರಂಭದ ತನಕ ಆಡಳಿತ ನಡೆಸಿತ್ತು. ಈ ಸಾಮ್ರಾಜ್ಯ ಆಧುನಿಕ ಟರ್ಕಿ ಸೇರಿದಂತೆ, ಯುರೋಪ್, ಏಷ್ಯಾ ಮತ್ತು ಆಫ್ರಿಕಾದ ಭಾಗಗಳನ್ನು ನಿಯಂತ್ರಿಸಿತ್ತು. ಈ ಸಾಮ್ರಾಜ್ಯ ತನ್ನ ವೈವಿಧ್ಯಮಯ ಸಂಸ್ಕೃತಿ ಮತ್ತು ಧರ್ಮಗಳಿಗೆ ಹೆಸರಾಗಿದ್ದು, ಒಂದನೇ ಮಹಾಯುದ್ಧದ ಬಳಿಕ ಅಂತ್ಯ ಕಂಡಿತ್ತು. ಒಟ್ಟೋಮನ್ ಸಾಮ್ರಾಜ್ಯದ ರಾಜಧಾನಿ ಟರ್ಕಿಯ ಅತಿದೊಡ್ಡ ನಗರವಾದ ಇಸ್ತಾಂಬುಲ್ ಆಗಿದ್ದು, ೧೪೫೩ರಲ್ಲಿ ಒಟ್ಟೋಮನ್ ಸಾಮ್ರಾಜ್ಯದ ಭಾಗವಾಗುವ ಮುನ್ನ ಅದು ಕಾನ್ಸಾಟಂಟಿನೋಪಲ್ ಎಂಬ ಹೆಸರು ಹೊಂದಿತ್ತು. ಸಿರಿಯಾ ಎಂದಿಗೂ ಒಂದು ಸ್ಥಿರವಾದ ಪ್ರಜಾಪ್ರಭುತ್ವವನ್ನು ಹೊಂದಿರಲೇ ಇಲ್ಲ. ಅಸ್ಸಾದ್ ಕುಟುಂಬ ಸಿರಿಯಾದ ೧೦-೧೫% ಜನಸಂಖ್ಯೆ ಹೊಂದಿರುವ ಅಲ್ಪಸಂಖ್ಯಾತ ಅಲಾವೈಟ್ ಸಮುದಾಯಕ್ಕೆ ಸೇರಿತ್ತು. ಹಲವಾರು ವರ್ಷಗಳ ಕಾಲ ಅಸ್ಸಾದ್ ಕುಟುಂಬ ಜಾತ್ಯತೀತ ವಿಧಾನ ಮತ್ತು ಹಿಂಸಾಚಾರದ ಮೂಲಕ ಸಿರಿಯನ್ ಸಮಾಜದ ಮೇಲೆ ನಿಯಂತ್ರಣ ಸಾಧಿಸಿತ್ತು.
ಸಿರಿಯಾದ ಜನತೆ ದ್ವೇಷ ಸಾಧಿಸಲು ಹಲವಾರು ಕಾರಣಗಳನ್ನೇ ಹೊಂದಿದ್ದಾರೆ. ಆಯುಧಗಳಿಂದ ತುಂಬಿ ಹೋಗಿದ್ದ ಸಿರಿಯಾದಲ್ಲಿ, ೧೩ ವರ್ಷಗಳ ಸುದೀರ್ಘ ಅಂತರ್ಯುದ್ಧದ ಬಳಿಕ, ಕೆಲವು ಗುಂಪುಗಳು ಹಳೆಯ ಲೆಕ್ಕ ಚುಕ್ತಾ ಮಾಡುವ ಉದ್ದೇಶ ಹೊಂದಿವೆ. ಅದರೊಡನೆ, ಇತ್ತೀಚೆಗೆ ಸೆರೆಯಿಂದ ಬಿಡುಗಡೆಯಾಗಿರುವ ಕೆಲವು ಅಪಾಯಕಾರಿ ವ್ಯಕ್ತಿಗಳೂ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುವ ಸಾಧ್ಯತೆಗಳಿವೆ. ಅಸ್ಸಾದ್ ಮತ್ತವರ ಶಿಯಾ ಮತ್ತು ಆಲ್ವೈಟ್ ಬೆಂಬಲಿಗರ ಆಡಳಿತದಲ್ಲಿ, ಸುನ್ನಿ ಸಮುದಾಯ ಅಪಾರ ಹಿಂಸೆಯಿಂದ ನಲುಗಿತ್ತು. ಇದರಲ್ಲಿ ಕ್ಲೋರಿನ್ ಅನಿಲ ಮತ್ತು ರಾಸಾಯನಿಕ ಆಯುಧಗಳ ಪ್ರಯೋಗವೂ ಸೇರಿತ್ತು.
ಸಿರಿಯಾದ ನೂತನ ನಾಯಕರು ಖಂಡಿತವಾಗಿಯೂ ಶಾಂತಿಯುತ ಜನರೇನೂ ಅಲ್ಲ. ಉದಾಹರಣೆಗೆ, ಸಿರಿಯಾದಲ್ಲಿನ ಇತ್ತೀಚಿನ ಬಂಡುಕೋರರ ಮೇಲುಗೈಗೆ ಕಾರಣವಾದ, ಹಿಂದೆ ಜಭಾತ್ ಅಲ್ ನುಸ್ರಾ ಎಂದು ಹೆಸರು ಪಡೆದಿದ್ದ ಗುಂಪು ೨೦೧೬ರ ತನಕವೂ ಉಗ್ರ ಸಂಘಟನೆ ಅಲ್ ಖೈದಾದ ಭಾಗವಾಗಿತ್ತು. ಬಳಿಕ, ಅದು ತನ್ನ ಹೆಸರನ್ನು ಹಯಾತ್ ತಹ್ರಿರ್ ಅಲ್ ಶಮ್ (ಎಚ್‌ಟಿಎಸ್) ಎಂದು ಬದಲಾಯಿಸಿಕೊಂಡಿತು.
ಎಚ್‌ಟಿಎಸ್ ಸ್ಥಾಪಕ, ಅಹ್ಮದ್ ಅಲ್ ಶರಾ ಇರಾಕಿನ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಾಗವಾಗಿ, ಅಬು ಮೊಹಮ್ಮದ್ ಅಲ್ ಜೊರಾನಿ ಎಂಬ ಹೆಸರಿನಲ್ಲಿ ಅಮೆರಿಕನ್ನರ ವಿರುದ್ಧ ಸೆಣಸಿದ್ದ. ಎಚ್‌ಟಿಎಸ್ ಮತ್ತು ಶರಾ ತಾವು ಹಿಂದಿನ ವಿಚಾರಗಳನ್ನು ಬಿಟ್ಟು ಮುಂದೆ ಸಾಗಿದ್ದೇವೆ ಎಂದಿದ್ದಾರೆ. ಈಗಿರುವ ಅವ್ಯವಸ್ಥೆಯ ನಡುವೆ, ಒಂದು ವೇಳೆ ಈ ಗುಂಪುಗಳೇನಾದರೂ ಕಟ್ಟುನಿಟ್ಟಿನ ಇಸ್ಲಾಮಿಕ್ ಕಾನೂನುಗಳನ್ನು ಹೇರಲು ಪ್ರಯತ್ನ ನಡೆಸಿದರೆ, ಆಗ ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ, ಬೇರೆ ದೇಶಗಳು ಈ ಗುಂಪುಗಳ ವಿರುದ್ಧ ಹೋರಾಡಲು ಬೇರೆ ಗುಂಪುಗಳನ್ನು ಬೆಂಬಲಿಸುವ ಸಾಧ್ಯತೆಗಳಿವೆ.
ವಾಸ್ತವವಾಗಿ, ಹಲವು ದೇಶಗಳು ಈಗಾಗಲೇ ಸಿರಿಯಾದಲ್ಲಿನ ಕದನದಲ್ಲಿ ಭಾಗಿಗಳಾಗಿದ್ದು, ತಮ್ಮ ಹಿತಾಸಕ್ತಿಗಳನ್ನು ಪ್ರಚುರಪಡಿಸುತ್ತಿವೆ. ಉತ್ತರದಲ್ಲಿ ಟರ್ಕಿಯ ಸಹಯೋಗಿಗಳು ಸ್ವಾಯತ್ತ ಆಡಳಿತ ಬಯಸುತ್ತಿರುವ ಕುರ್ದ್ ಪಡೆಗಳ ವಿರುದ್ಧ ಹೋರಾಡುತ್ತಿವೆ.
ಮಧ್ಯ ಸಿರಿಯಾದಲ್ಲಿ, ಅಮೆರಿಕಾ ಐಸಿಸ್ ಮರಳಿ ಅಧಿಕಾರ ಪಡೆಯಬಾರದೆಂದು ಅದರ ತಾಣಗಳ ಮೇಲೆ ಬಾಂಬ್ ದಾಳಿ ನಡೆಸುತ್ತಿದೆ. ಇಸ್ರೇಲ್ ಸಿರಿಯಾದ ಮಿಲಿಟರಿ ಉಪಕರಣಗಳು ಮತ್ತು ರಾಸಾಯನಿಕ ಆಯುಧಗಳನ್ನು ಹಾಳುಗೆಡವಿ, ಗೋಲನ್ ಹೈಟ್ಸ್ ಆಚೆಗೆ ಇನ್ನಷ್ಟು ಸಿರಿಯನ್ ಪ್ರದೇಶಗಳನ್ನು ವಶಪಡಿಸಿಕೊಂಡಿದೆ.
ಇವೆಲ್ಲ ಉದ್ವಿಗ್ನತೆಗಳ ಜೊತೆಗೆ, ಸಿರಿಯಾ ಮತ್ತೊಂದು ಅಂತರ್ಯುದ್ಧಕ್ಕೆ ತುತ್ತಾದರೂ ಆಶ್ಚರ್ಯವಿಲ್ಲ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಹಾಗೇನಾದರೂ ಆದಲ್ಲಿ, ನಿರಾಶ್ರಿತರು, ತೀವ್ರವಾದಿಗಳು ಮತ್ತು ಉದ್ವಿಗ್ನತೆಗಳು ಮಧ್ಯ ಪೂರ್ವವನ್ನು ದಾಟಿ, ಯುರೋಪ್ ಪ್ರವೇಶಿಲಿವೆ ಎಂದು ಅವರು ಎಚ್ಚರಿಸಿದ್ದಾರೆ.
ಅಸ್ಸಾದ್ ಆಡಳಿತವನ್ನು ಕೊನೆಗೊಳಿಸಿದರೆ, ಅನೇಕ ಜಾಗತಿಕ ಸಮಸ್ಯೆಗಳ ಹಿಂದೆ ಪಾತ್ರಧಾರಿಗಳಾಗಿರುವ ರಷ್ಯಾ ಮತ್ತು ಇರಾನ್ ದುರ್ಬಲಗೊಳ್ಳಬಹುದು ಎನ್ನಲಾಗಿತ್ತು. ಈ ವಾರ, ಬಹಳಷ್ಟು ಸಿರಿಯನ್ನರು ಅಸ್ಸಾದ್ ನಿರ್ಗಮನವನ್ನು ಸಂಭ್ರಮಿಸಿದ್ದು, ಹಲವಾರು ವರ್ಷಗಳ ಯುದ್ಧದ ಬಳಿಕವೂ ಅವರು ಶಾಂತಿಯನ್ನೇ ಆರಿಸುತ್ತಾರೆ ಎಂದು ಸೂಚಿಸಿದೆ.
ಸಿರಿಯಾ ಸ್ಥಿರವಾಗಿರಬೇಕಾದರೆ, ಅಲ್ಲಿ ಎಲ್ಲರನ್ನೂ ಒಳಗೊಳ್ಳುವಂತಹ, ಸಹಿಷ್ಣು ಸರ್ಕಾರದ ಅವಶ್ಯಕತೆಯಿದೆ. ಆದರೆ, ಯಾವುದೇ ಸಂಘಟನೆಯೂ ಬಲ ಪ್ರಯೋಗಿಸದೆ ಸಿರಿಯಾವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಈಗಿನ ಯುದ್ಧ ತೋರಿಸಿದೆ. ಆದರೆ ಬಹುಸಂಖ್ಯಾತ ಸುನ್ನಿ ಜನಾಂಗದ ಜನರಿಗೂ ತೀವ್ರವಾದಿಗಳ ಆಳ್ವಿಕೆಗೆ ಒಳಗಾಗುವ ಇಚ್ಛೆಯಿಲ್ಲ.
ಬಹಳಷ್ಟು ವಿಭಜನೆಗಳನ್ನು ಹೊಂದಿರುವ ಸಿರಿಯಾದಲ್ಲಿ ಹೊಸ ರಾಜಕೀಯ ವ್ಯವಸ್ಥೆಯನ್ನು ಜಾರಿಗೆ ತರುವ ಜವಾಬ್ದಾರಿ ಶರಾ ಹೆಗಲಿಗೇರುವ ಸಾಧ್ಯತೆಗಳಿವೆ. ಬಂಡುಕೋರರ ಕೈಯಲ್ಲಿದ್ದ ಉತ್ತರದ ಇದ್ಲಿಬ್ ಪ್ರದೇಶದ ಮುಖಂಡನಾಗಿ, ಶರಾ ವಿವಿಧ ಧರ್ಮಗಳನ್ನು ಒಳಗೊಂಡ, ಯಶಸ್ವಿ ಆರ್ಥಿಕತೆ ಹೊಂದಿರುವ ಆಡಳಿತ ನೀಡಲು ಯಶಸ್ವಿಯಾಗಿದ್ದರು.
ಶರಾ ತೀವ್ರವಾದಿ ಗುಂಪುಗಳಿಂದ ದೂರಾಗಿ, ಪಾಶ್ಚಾತ್ಯ ಬೆಂಬಲವನ್ನು ಕೋರಿದ್ದರೂ, ಅವರು ಹೆಚ್ಚು ನಿರಂಕುಶ ಆಡಳಿತಗಾರನಾಗಿ ಹೊರಹೊಮ್ಮಿದ್ದು, ತನ್ನ ವಿರೋಧಿಗಳನ್ನು ಕೆಳಗಿಳಿಸಿ, ಪ್ರತಿಭಟಿಸುವವರನ್ನು ಜೈಲಿಗೆ ಕಳುಹಿಸಿದ್ದಾರೆ.
ಈ ವಾರ ಘೋಷಿಸಲ್ಪಟ್ಟಿರುವ ಮಧ್ಯಂತರ ಸರ್ಕಾರ, ಕೇವಲ ಎಚ್‌ಟಿಎಸ್ ಬೆಂಬಲಿಗರನ್ನು ಮಾತ್ರವೇ ಒಳಗೊಂಡಿದೆ. ಎಚ್‌ಟಿಎಸ್ ನಲುಗಿಹೋಗಿರುವ ಸಿರಿಯಾದ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿರುವುದರಿಂದ, ಅದು ದೇಶದಲ್ಲಿ ಸ್ಥಿರತೆ ಕಾಪಾಡಲು ಪ್ರಯತ್ನಿಸುವುದು ಅತ್ಯಂತ ಮುಖ್ಯವಾಗಿದೆ. ಒಂದು ವೇಳೆ ಶರಾ ಸಂಪೂರ್ಣ ಸಿರಿಯಾವನ್ನು ಇದ್ಲಿಬ್ ಮಾದರಿಯಲ್ಲಿ ಆಳಲು ಪ್ರಯತ್ನಿಸಿದರೆ, ಅವರು ವಿಫಲರಾಗಲಿದ್ದಾರೆ. ಸಿರಿಯಾ ಯುದ್ಧಕೋರ ಗುಂಪುಗಳ ನಡುವೆ ವಿಭಜಿತವಾಗಿಯೇ ಮುಂದುವರಿಯಬಹುದು.
ಸಿರಿಯಾ ಏನಾದರೂ ಸ್ಪರ್ಧೆಗಿಳಿದಿರುವ ವಿದೇಶೀ ಶಕ್ತಿಗಳ ಯುದ್ಧರಂಗವಾದರೆ, ಅದು ಇನ್ನಷ್ಟು ಸಂಕಷ್ಟಕ್ಕೆ ತುತ್ತಾಗಲಿದೆ. ವಿದೇಶೀ ಶಕ್ತಿಗಳು ಸಿರಿಯಾವನ್ನು ಅದರ ಪಾಡಿಗೆ ಬಿಟ್ಟರೆ, ಅದಕ್ಕೆ ಒಳಿತಾಗಬಹುದೇನೋ. ಸಿರಿಯಾ ಸ್ಥಿರವಾಗಿ, ಯಶಸ್ಸು ಕಂಡರೆ ಲಕ್ಷಾಂತರ ನಿರಾಶ್ರಿತರು ಸ್ವದೇಶಕ್ಕೆ ಮರಳಬಹುದು. ೩೦ ಲಕ್ಷ ಸಿರಿಯನ್ ನಿರಾಶ್ರಿತರನ್ನು ಹೊಂದಿ ಹೈರಾಣಾಗಿರುವ ಟರ್ಕಿಗೆ ಇದು ಒಳ್ಳೆಯ ಬೆಳವಣಿಗೆಯಾಗಲಿದೆ. ಎಚ್‌ಟಿಎಸ್ ಬೆಂಬಲಿಗನಾಗಿರುವ ಟರ್ಕಿ, ಸಿರಿಯಾ ಯಶಸ್ವಿಯಾದರೆ ಅದರೊಡನೆ ಔದ್ಯಮಿಕ ಸಂಬಂಧ ಹೊಂದುವ ಆಸೆಯಲ್ಲಿದೆ. ರಿಸೆಪ್ ತಯ್ಯಿಪ್ ಎರ್ದೋಗನ್ ಕುರ್ದಿಶ್ ಸ್ವಾತಂತ್ರ‍್ಯಕ್ಕೆ ಬೆಂಬಲ ನೀಡುವ ಬದಲು, ಕುರ್ದ್ಗಳು ಮತ್ತು ಇತರ ಸಮುದಾಯಗಳು ಜೊತೆಯಾಗಿರುವ ಸಿರಿಯಾವನ್ನು ನಿರ್ಮಿಸುವ ಕುರಿತು ಆಲೋಚಿಸಬೇಕಿದೆ.
ಜಗತ್ತು ಈಗ ಎಚ್‌ಟಿಎಸ್ ಸಂಘಟನೆಯನ್ನು ಬೆಂಬಲಿಸಲು ಸಿದ್ಧವಿಲ್ಲ. ಆದರೆ, ಸಿರಿಯಾದಲ್ಲಿ ಸ್ಥಿರ ಸರ್ಕಾರದ ಸ್ಥಾಪನೆಯನ್ನು ತಡೆದರೆ, ಈ ಅಸ್ಥಿರತೆ ಇರಾಕ್, ಜೋರ್ಡಾನ್, ಮತ್ತು ಲೆಬನಾನ್‌ಗಳಿಗೂ ಹಬ್ಬಬಹುದು.
ಅಮೆರಿಕಾ ಮತ್ತು ಸೌದಿ ಅರೇಬಿಯಾಗಳು ಇಸ್ರೇಲ್, ಟರ್ಕಿ ಮತ್ತು ಯುಎಇಗಳು ಸಿರಿಯಾದ ಸ್ಥಿರತೆಗೆ ಅಡ್ಡಿಯಾಗದಂತೆ ಸೂಚಿಸಬೇಕು. ಒಂದೊಮ್ಮೆ ಶರಾ ನಂಬಿಕಾರ್ಹ ರಾಷ್ಟ್ರೀಯ ನಾಯಕನಾಗಿ ಹೊರಹೊಮ್ಮಿದರೆ, ಆಗ ಪಾಶ್ಚಾತ್ಯ ಜಗತ್ತು ಎಚ್‌ಟಿಎಸ್ ಅನ್ನು ಉಗ್ರ ಸಂಘಟನೆಯ ಪಟ್ಟಿಯಿಂದ ತೆಗೆಯಬೇಕು.
ನೂತನ ಸಿರಿಯಾಗೆ ಮಹತ್ವದ ಅನುಕೂಲತೆಗಳಿದ್ದು, ಅದು ಇರಾನ್ ಮತ್ತು ರಷ್ಯಾಗಳ ಕೈಯಿಂದ ಸ್ವತಂತ್ರವಾಗಬಹುದು. ರಷ್ಯಾ ಮತ್ತು ಇರಾನ್ ಅಸ್ಸಾದ್‌ರನ್ನು ಅಧಿಕಾರದಲ್ಲಿ ಮುಂದುವರಿಸಲು ಬಿಲಿಯಾಂತರ ಮೊತ್ತವನ್ನು ಖರ್ಚು ಮಾಡಿವೆ.
ರಷ್ಯಾ ಇತರ ಪ್ರದೇಶಗಳಿಗೆ ತನ್ನ ನಿಯಂತ್ರಣವನ್ನು ವಿಸ್ತರಿಸುವ ಗುರಿ ಸಾಧಿಸಲು ಸಾಧ್ಯವಾಗಿಲ್ಲ. ಇದು ಕಾಕಸಸ್ ಮತ್ತು ಮಧ್ಯ ಏಷ್ಯಾಗೆ (ರಷ್ಯಾದ ಬಳಿಯ, ಕಾಕಸಸ್‌ನ ಜಾರ್ಜಿಯಾ, ಅರ್ಮೇನಿಯಾ, ಅಜರ್‌ಬೈಜಾನ್ ಮತ್ತು ಮಧ್ಯ ಏಷ್ಯಾದ ಕಜಕಿಸ್ತಾನ್, ಉಜ್ಬೆಕಿಸ್ತಾನ್, ತುರ್ಕ್ಮೆನಿಸ್ತಾನ್, ಕಿರ್ಗಿಸ್ತಾನ್ ಮತ್ತು ತಜಕಿಸ್ತಾನ್) ಸ್ಪಷ್ಟ ಸಂದೇಶ ರವಾನಿಸಿದೆ.
ಕಳೆದ ಒಂದು ವರ್ಷದಲ್ಲಿ, ಗಾಜಾ, ಲೆಬನಾನ್, ಮತ್ತು ಈಗ ಸಿರಿಯಾದಲ್ಲಿ ಇರಾನಿನ ಸಹಯೋಗಿಗಳು ಸೋಲು ಕಂಡಿದ್ದಾರೆ. ಇದು ಮಧ್ಯ ಪೂರ್ವದಲ್ಲಿ ಇರಾನಿನ ಪ್ರಭಾವವನ್ನು ಕಡಿಮೆಗೊಳಿಸಿ, ಮುಂಬರುವ ಟ್ರಂಪ್ ಸರ್ಕಾರದೊಡನೆ ಅದು ಮಾತುಕತೆಗೆ ಇಳಿಯುವಂತೆ ಮಾಡಲಿದೆ.