ಸಹಕಾರಿ ಸಂಘಗಳ ಮೂಲಕ ಗ್ರಾಮೀಣ ಜನರ ಏಳಿಗೆ
ಧಾರವಾಡ ಕ್ಷೇತ್ರದಲ್ಲಿನ 192 ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳಿಗೆ ತಲಾ ರೂ. 2.65 ಲಕ್ಷ ನೀಡಲಾಗುತ್ತಿದೆ
ಹುಬ್ಬಳ್ಳಿ: ನಮ್ಮ ಸರ್ಕಾರ ಸಹಕಾರಿ ಸಂಘಗಳ ಮೂಲಕ ಗ್ರಾಮೀಣ ಭಾಗದಲ್ಲಿ ಜನರ ಏಳಿಗೆಗೆ ಸಹಕರಿಸಲು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ನಗರದ ಗೋಕುಲ ಗ್ರಾಮದಲ್ಲಿ ಇಂದು ಮಲ್ಲಿಕಾರ್ಜುನ ಸೌಹಾರ್ದ ಸಹಕಾರಿ ನಿಗಮದ ನೂತನ ಶಾಖೆ ಮತ್ತು ನವೋದಯ ಸ್ವ-ಸಹಾಯ ಸಂಘಗಳ ಉದ್ಘಾಟನೆ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಅವರು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳ ಡಿಜಿಟಲೀಕರಣಕ್ಕೆ ದೊಡ್ಡ ಪ್ರಮಾಣದಲ್ಲಿ ಅನುದಾನಗಳನ್ನು ನೀಡಲಾಗುತ್ತಿದೆ. ಇದರ ಅನ್ವಯ ಧಾರವಾಡ ಕ್ಷೇತ್ರದಲ್ಲಿನ 192 ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳಿಗೆ ತಲಾ ರೂ. 2.65 ಲಕ್ಷ ನೀಡಲಾಗುತ್ತಿದೆ. ಸಹಕಾರಿ ಸಂಘಗಳಿಗೆ ಉಗ್ರಾಣಗಳನ್ನು ನಿರ್ಮಾಣ ಮಾಡುವುದಕ್ಕೆ ಸಾಲ ಹಾಗೂ ಸಬ್ಸಿಡಿ ಎರಡನ್ನೂ ನೀಡಲಾಗುತ್ತಿದೆ. ಜೊತೆಗೆ ಗ್ಯಾಸ್ ಸಿಲಿಂಡರ್ ವಿತರಣೆ, ಪೆಟ್ರೋಲ್ ಬಂಕ್, ಪಡಿತರ, ಗೊಬ್ಬರದ ವಿತರಣೆ ಎಲ್ಲವನ್ನು ಸಹಕಾರಿ ಸಂಘಗಳ ಮೂಲಕ ಜನರಿಗೆ ಲಭ್ಯವಾಗಿಸಲು ನಾವು ತೀರ್ಮಾನ ಮಾಡಿದ್ದೇವೆ. ನಮ್ಮ ಸರ್ಕಾರ ಸಹಕಾರಿ ಸಂಘಗಳ ಮೂಲಕ ಗ್ರಾಮೀಣ ಭಾಗದಲ್ಲಿ ಜನರ ಏಳಿಗೆಗೆ ಸಹಕರಿಸಲು ಸಂಪೂರ್ಣವಾಗಿ ಬದ್ಧವಾಗಿದೆ ಎಂದಿದ್ದಾರೆ,