For the best experience, open
https://m.samyuktakarnataka.in
on your mobile browser.

ಸಾಹಿತಿ, ಕಥೆಗಾರ್ತಿ, ಆಕಾಶವಾಣಿ ಕಲಾವಿದೆ ಮನೋರಮಾ ಇನ್ನಿಲ್ಲ

10:37 PM Sep 15, 2024 IST | Samyukta Karnataka
ಸಾಹಿತಿ  ಕಥೆಗಾರ್ತಿ  ಆಕಾಶವಾಣಿ ಕಲಾವಿದೆ ಮನೋರಮಾ ಇನ್ನಿಲ್ಲ

ಮಂಗಳೂರು: ಖ್ಯಾತ ಸಾಹಿತಿ, ಕಥೆಗಾರ್ತಿ, ಆಕಾಶವಾಣಿ ಕಲಾವಿದೆ ಹಾಗೂ ಮಂಗಳೂರಿನ ಹಿರಿಯ ನ್ಯಾಯವಾದಿ, ಯಕ್ಷಗಾನ ಕಲಾವಿದ ದಿ| ಮುಳಿಯ ಮಹಾಬಲ ಭಟ್ ಅವರ ಪತ್ನಿ ಮನೋರಮಾ ಎಂ.ಭಟ್(೯೨) ವಯೋಸಹಜ ಕಾರಣದಿಂದ ಸೆ.೧೫ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಅವರು ಇಬ್ಬರು ಪುತ್ರರು, ಅಪಾರ ಬಂಧು, ಬಾಂಧವರನ್ನು ಅಗಲಿದ್ದಾರೆ. ಅವರ ಕಿರಿಯ ಸೊಸೆ ಖ್ಯಾತ ಒಡಿಸ್ಸಿ ನೃತ್ಯಗಾತಿ ಬಿಜೋಯಿನಿ ಸತ್ಪತಿ.
ಹೋರಾಟಗಾರ್ತಿ ಸಾಹಿತಿಯಾಗಿದ್ದ ಮನೋರಮಾ ಭಟ್ ಅವರು ಸಣ್ಣಕತೆಗಾರ್ಥಿಯಾಗಿ ಸಾಹಿತ್ಯಕ್ಷೇತ್ರ ಪ್ರವೇಶಿಸಿದವರು. ಸ್ವಯಂವರ(ಸಣ್ಣಕಥಾ ಸಂಕಲನ), ಆಯ್ಕೆ(ಬಾನುಲಿ ನಾಟಕ ಸಂಕಲನ), ನಿರ್ಧಾರ, ಹೊಸಹಾದಿ, ನೀನು ಮತ್ತು ನಾನು, ಋಣಾನುಬಂಧ, ಚಂದ್ರಮತಿಯ ಕನಸು, ಬಲಿ ಸೇರಿದಂತೆ ಹಲವು ಕೃತಿ ಹೊರತಂದಿದ್ದಾರೆ. ಹೆಂಗಸರು ವಿಧವೆಯರಾದಾಗ ಮಾಂಗಲ್ಯವನ್ನು ತೆಗೆಯಬೇಕೆಂಬ ನಂಬಿಕೆಯನ್ನು ಎದುರಿಸಿ ಹೋರಾಡಿದವರು. ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದು, ಬಳಿಕ ಅಧ್ಯಕ್ಷರೂ ಆಗಿದ್ದರು.
ತನ್ನ ಮಾವ ಮುಳಿಯ ತಿಮ್ಮಪ್ಪಯ್ಯನವರ ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ಎರಡು ದಶಕಗಳಗಿಂತಲೂ ಹೆಚ್ಚುಕಾಲ ಮುಳಿಯ ಪ್ರಶಸ್ತಿ ಕಾರ್ಯಕ್ರಮ ನಡೆಸಿಕೊಂಡು ಬಂದವರು. ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹಲವು ವರ್ಷಗಳ ಕಾಲ ಉರ್ವಾಸ್ಟೋರ್‌ನಲ್ಲಿದ್ದ ತಮ್ಮ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಅವರು ವೃದ್ಧಾಪ್ಯದ ಕಾರಣ ಕೆಲವು ವರ್ಷಗಳಿಂದ ನಗರದ ಹೊರವಲಯದ ಆಶ್ರಮದಲ್ಲಿದ್ದರು.
ಅವರು ಅತ್ತಿಮಬ್ಬೆ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ, ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಪುರಸ್ಕಾರ ಗಳಿಸಿದ್ದಾರೆ.