ಸಿಎಂ ಆಕಾಂಕ್ಷಿಯಾದರೂ ಸಿದ್ದು ಆಶೀರ್ವಾದ ಅವಶ್ಯ
ಕೊಪ್ಪಳ: ನಾನೂ ಕೂಡಾ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದು, ಸಿದ್ದರಾಮಯ್ಯ ಸೂಚಿಸಿದ ವ್ಯಕ್ತಿ ಮುಂದಿನ ಸಿಎಂ ಆಗುತ್ತಾರೆ ಎಂಬುದು ನನ್ನ ಅಭಿಪ್ರಾಯವಾಗಿದೆ. ಹಾಗಾಗಿ ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಶೀರ್ವಾದ ಅವಶ್ಯ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೂ ಕೂಡಾ ಈ ರಾಜ್ಯದ ಮುಖ್ಯಮಂತ್ರಿ ಆಗಬಹುದು. ರಾಜ್ಯದ ಸಿಎಂ ಆಗಬೇಕು ಎಂದು ಅನೇಕರು ಆಸೆ ಪಡುತ್ತಿದ್ದಾರೆ. ಸಿಎಂ ಹುದ್ದೆಗೆ ಆಸೆ ಪಡುವುದು ತಪ್ಪಲ್ಲ. ಆದರೆ, ಯಾರು ಸಿಎಂ ಆಗಬೇಕು ಎಂಬುದನ್ನು ವರಿಷ್ಠರು, ಶಾಸಕರು ತೀರ್ಮಾನ ಮಾಡಬೇಕು. ಯಾರಿಗೆ ಯಾವಾಗ ಲಾಟರಿ ಹೊಡೆಯುತ್ತದೆ ಎಂಬುದು ಗೊತ್ತಿಲ್ಲ. ಆದರೆ, ಪ್ರಸ್ತುತ ಸಿಎಂ ಹುದ್ದೆ ಖಾಲಿ ಇಲ್ಲ ಎಂದರು.
ಸಿದ್ದರಾಮಯ್ಯ ಮುಂದಿನ ಮೂರು ವರ್ಷ ಸಿಎಂ ಆಗಿರುತ್ತಾರೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎಂದು ಯಾರು ಹೇಳುತ್ತಾರೆ? ಕೋರ್ಟ್ ತನಿಖೆಗೆ ಆದೇಶ ನೀಡಿದರೂ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬಾರದು. ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಯುತ್ತಾರೆ ಎನ್ನುವ ಭರವಸೆ ಇದೆ ಎಂದು ಹೇಳಿದರು.