ಸಿಎಂ ಸಂವಿಧಾನದ ಆಶಯಗಳಿಗೆ ಗೌರವ ಕೊಡಲಿ
ಮಂಗಳೂರು: ರಾಜಿನಾಮೆ ಕೊಟ್ಟು ಸಂವಿಧಾನದ ಆಶಯಗಳಿಗೆ ಗೌರವ ಕೊಡಲಿ. ಕೇವಲ ಕುರ್ಚಿಗೆ hಅಂಟಿಕೊಳ್ಳುವುದೊಂದೇ ಮುಖ್ಯಮಂತ್ರಿಗಳ ಆಶಯವಿದ್ದಂತೆ ಕಾಣುತ್ತಿದೆ ಎಂದು ದ. ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬದುಕುಳಿಯುವ ಕೊನೆಯ ಯತ್ನವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ೧೪ ಸೈಟ್ ವಾಪಾಸ್ ಕೊಟ್ಟಿರುವುದು ಅವರಿಗೆ ಬುದ್ಧಿ ಬಂದ ಹಾಗೆ ಕಾಣುತ್ತದೆ. ತನ್ನ ತಪ್ಪಿನ ಅರಿವಾದಂತೆ ಇದೆ, ಇನ್ನಾದರೂ ರಾಜಿನಾಮೆ ಕೊಡಲಿ ಎಂದು ಒತ್ತಾಯಿಸಿದರು.
ಅವೈಜ್ಞಾನಿಕ ನೀತಿಯಿಂದಾಗಿ ರಾಜ್ಯವನ್ನೇ ದಿವಾಳಿ ಹಂತಕ್ಕೆ ಸಿದ್ದರಾಮಯ್ಯ ತಂದಿಟ್ಟಿದ್ದಾರೆ. ಒಂದಿಂಚು ಅಭಿವೃದ್ಧಿ ಇಲ್ಲದೆ ಜನ ಕಂಗೆಟ್ಟಿದ್ದಾರೆ. ವಾಲ್ಮೀಕಿ ನಿಗಮದಿಂದಲೇ ನೇರವಾಗಿ ಲೋಕಸಭಾ ಚುನಾವಣೆಗೆ ಖರ್ಚು ಮಾಡಿದ್ದಾರೆ. ದಲಿತರ ಜಾಗವನ್ನು ಕಬಳಿಸಿ, ಪತ್ನಿ ಹೆಸರಿಗೆ ಸೈಟ್ ಮಾಡಿಕೊಂಡಿದ್ದಾರೆ ಎಂದರು.
ಬಿಜೆಪಿ ತನ್ನ ಹೋರಾಟದಲ್ಲಿ ಯಶಸ್ವಿಯಾಗಿದೆ. ವಿಧಾನಮಂಡಲದ ಒಳಗೆ, ಹೊರಗೆ, ಸಂಸತ್ತಿನಲ್ಲಿ ಮುಖ್ಯಮಂತ್ರಿ ಅಕ್ರಮದ ವಿರುದ್ಧ ಹೋರಾಡಿದ್ದೇವೆ. ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ರಾಜ್ಯಪಾಲರ ವಿರುದ್ಧವೇ ಏಕವಚನದಲ್ಲಿ ಮಾತನಾಡಿದ ಸಿಎಂ, ಸಾಂವಿಧಾನಿಕ ಹುದ್ದೆಗೆ ಗೌರವ ನೀಡಿಲ್ಲ ಎಂದು ಚೌಟ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.