For the best experience, open
https://m.samyuktakarnataka.in
on your mobile browser.

ಸಿಗರೇಟು ಸೇದಿ ಸಿಗಬಿದ್ದ

02:48 AM Aug 29, 2024 IST | Samyukta Karnataka
ಸಿಗರೇಟು ಸೇದಿ ಸಿಗಬಿದ್ದ

ಲೊಂಡೆನುಮ, ಲಾದುಂ ಚಿರಾಜ, ಮೇಕಪ್ ಮರೆಮ್ಮ, ಕ್ವಾಟಿಗ್ವಾಡಿ ಸುಂದ್ರವ್ವ, ಕರಿಭಾಗೀರತಿ ಮುಂತಾದವರು ಕಂಟ್ರಂಗಮ್ಮತ್ತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿರುವುದು ಸಭೆಗೆ ಮತ್ತಷ್ಟು ರಂಗುತರುತ್ತಿದೆ ಎಂದು ಕಿವುಡನುಮಿ ತನ್ನ ಚಾನಲ್‌ನಲ್ಲಿ ಒಂದೇಸಮ ಒದರುತ್ತಿದ್ದಳು. ಸಭೆಯಲ್ಲಿ ಮುಖ್ಯವಾಗಿ ದರ್ಶನ್ ಬಗ್ಗೆ ಚರ್ಚೆಯಾಗುತ್ತಿದೆ ನಾನು ಬೇಕಾದರೆ ಲೈವ್ ತೆಗೆದುಕೊಳ್ಳುತ್ತೇನೆ ಲಕ್ಷ್ಯಗೊಟ್ಟು ನೋಡಿರಿ ಎಂದು ಹೇಳಿದಾಗ ಟಿವಿ ನೋಡುತ್ತಿದ್ದವರ ಕುತೂಹಲ ಹೆಚ್ಚಾಯಿತು. ಓವರ್ ಟು ಸಭೆ ಎಂದು ಹೇಳಿದಳು. ಅಲ್ಲಿ ಮೇಕಪ್ ಮರೆಮ್ಮಳು…. ದರ್ಶನ್‌ದು ಏನಾಗಬಹುದು? ಎಂದಳು. ಅದೇನಾಗುತ್ತದೆ ಅವನು ಅಲ್ಲಿಗೆ ಹೋಗಿ ಸಜ್ಜಿರೊಟ್ಟಿ ತಿನ್ನುತ್ತಾನೆ ಹೊಟ್ಟೆಯಲ್ಲಿ ವ್ಯತ್ಯಾಸವಾದರೆ ಜೋಳದ ರೊಟ್ಟಿ ಜಡಿಯುತ್ತಾನೆ ಅಷ್ಟೇ ಎಂದು ಕಂಟ್ರಂಗಮ್ಮತ್ತಿ ಜೋರಾಗಿ ನಕ್ಕಳು. ಒಂಥರಾ ಮುಖ ಮಾಡಿದ ಕ್ವಾಟಿಗ್ವಾಡಿ ಸುಂದ್ರವ್ವಳು ಎಂಥಾ ಕಾಲ ಬಂತು ನೋಡಿ, ಬರೀ ಒಂದೇ ಒಂದು ಸಿಗರೇಟು ಸೇದಿದ ಎತ್ತಂಗಡಿ ಆದ. ಅಲ್ಲಿ ಸಿಗರೇಟು ಸಿಗುವುದು ಕಷ್ಟ ಏನಿದ್ದರೂ ಅಲ್ಲಿ ಗಣೇಶಬೀಡಿ ಅಂದಳು. ಇವನಿಗೆ ಇದೆಲ್ಲ ಬೇಕಾಗಿತ್ತ? ಇಲ್ಲಿಯೇ ಗಣೇಶ ಬೀಡಿ ಸೇದಿದ್ದರೆ ಆಗುತ್ತಿತ್ತು. ಈಗ ನೋಡಿ ಸಿಗರೇಟು ಸೇದಿ ಸಿಗಬಿದ್ದ ಅಂದಳು. ಮುಂದೆ ಏನಾಗಬಹುದು ಎಂದು ಲಾದುಂಚಿರಾಜ ದೊಡ್ಡ ಧ್ವನಿಯಲ್ಲಿ ಅಂದಾಗ… ನೀನು ಮೊದಲು ಸಣ್ಣ ಧ್ವನಿಯಿಂದ ಮಾತನಾಡು, ಇಲ್ಲಿ ಗೋಡೆಗೂ ಕಿವಿ ಅನ್ನುವುದು ಮರೆತೆಯಾ? ಎಂದು ಲೊಂಡೆನುಮ ತಿವಿದ. ಸಭೆಯ ಅಧ್ಯಕ್ಷತೆ ವಹಿಸಿದ್ದ ಕಂಟ್ರಂಗಮ್ಮತ್ತಿ ಲೊಂಡೆನುಮ ನೀ ತಡಿ ಆತ ಏನು ಹೇಳುತ್ತಾನೋ ಕೇಳು ಮೊದಲು ಅಂದಳು. ಆಗ ಲಾದುಂಚಿ ರಾಜನು… ಮೇಡಂ ಅವತ್ತು ಏನಾಯಿತು ಅಂದರೆ ಎಂದು ಹೇಳುತ್ತಿದ್ದಂತೆ ಅಡ್ಡಬಾಯಿ ಹಾಕಿದ ಕರಿಭಾಗೀರತಿ ನೀ ಏನೇನರ ಹೇಳಬೇಡ. ಹುಟ್ಟುವ ಮೊದಲು ಸತ್ತಿಲ್ಲ-ಸುಡಗಾಡಿ ಕಂಡಿಲ್ಲ ಎಂದು ಬೈಯ್ದಳು. ಆ ಮಾತು ಯಾರಿಗೂ ಅರ್ಥವಾಗದೇ ಸುಮ್ಮನೇ ಕುಳಿತರು. ಸಭೆಯಲ್ಲಿ ಇನ್ನೂ ಏನೇನೋ ಚರ್ಚೆಯಾಗುತ್ತಿದ್ದವು. ಅಷ್ಟರಲ್ಲಿ ಕಿವುಡನುಮಿ ನೋಡಿದ್ರಾ… ನೋಡಿದ್ರಾ… ಎಲ್ಲರೂ ಈಗ ಸಿಗರೇಟು ಸೇದಿ ಸಿಗಬಿದ್ದ ಎಂಬ ಮಾತನ್ನು ಹೇಳುತ್ತಿದ್ದಾರೆ. ಇದೆಲ್ಲ ದರ್ಶನ್‌ಗೆ ಬೇಕಿತ್ತಾ?. ಇದು ನಮ್ಮಲ್ಲೇ ಮೊದಲು… ತಿಳಿಯಿರಿ.. ತಿಳಿಯಿರಿ ತಿಳಿಯಿರಿ ಎಂದಾಗ ಟಿವಿ ಪರದೆಯ ಮೇಲೆ ಕೋಲ್ಗೇಟ್ ಪೇಸ್ಟ್ನ ಜಾಹಿರಾತು ಬಿತ್ತರವಾಯಿತು.