ಸಿದ್ದರಾಮಯ್ಯ ವಿರುದ್ಧ ಯಾರೂ ಮಾತನಾಡಿಲ್ಲ
ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಯಾವ ಶಾಸಕರು, ಸಚಿವರೂ ಮಾತನಾಡಿಲ್ಲ. ೧೩೬ ಜನ ಶಾಸಕರು ಸಿದ್ದರಾಮಯ್ಯನವರ ಪರವಾಗಿದ್ದಾರೆ ಎಂದು ಸಣ್ಣ ನೀರಾವರಿ, ತಂತ್ರಜ್ಞಾನ ಖಾತೆ ಸಚಿವ ಎನ್.ಎಸ್. ಭೋಸರಾಜು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆರ್.ವಿ. ದೇಶಪಾಂಡೆ ಅವರು ಹಿರಿಯರು. ೮ ಬಾರಿ ಶಾಸಕರಾದವರು. ಅವರು ಮೈಸೂರಿಗೆ ಹೋದಾಗ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ ಹೇಳಿದರೆ ನಾನೂ ಸಿಎಂ ಆಗುತ್ತೇನೆ ಎಂದಿದ್ದಾರೆ. ನಾನು ಸೀನಿಯರ್ ಇದ್ದೇನೆ. ಸಚಿವನಾಗಿ ಕೆಲಸ ಮಾಡಿದ್ದೇನೆ ಎಂದಿದ್ದಾರೆ. ಅದನ್ನು ಬೇರೆ ಬೇರೆ ಆಯಾಮಗಳಿಗೆ ಲಿಂಕ್ ಮಾಡುವುದು ಬೇಡ. ಅದನ್ನು ಜಮೀರ್ ಅವರ ಬಳಿ ಕೇಳಿದರೆ ಅವರೂ ಸಹ ಸಿಎಂ ಸಿದ್ದರಾಮಯ್ಯ ಈಗ ಇದ್ದಾರೆ. ಆ ಖುರ್ಚಿ ಖಾಲಿ ಇಲ್ಲ ಎಂದಿದ್ದಾರೆ. ಯಾರೂ ಸಹ ಸಿಎಂ ವಿರುದ್ಧ ಮಾತನಾಡಿಲ್ಲ ಎಂದರು.
ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯುಷನ್‌ಗೆ ಕೊಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಸಿಎಂ ಮೇಲೆ ಯಾವುದೇ ಪ್ರಕರಣ ಇಲ್ಲ. ಅವರು ಕೊಟ್ಟಿರುವ ಲೆಟರ್ ಇಲ್ಲ, ಫೋನಿನಲ್ಲಿ ಮಾತನಾಡಿದ್ದೂ ಇಲ್ಲ. ಸಭೆ ಮಾಡಿಲ್ಲ. ನಮ್ಮ ಸರ್ಕಾರ ಸಹ ಆಗ ಇರಲಿಲ್ಲ. ಆಗ ಬಿಜೆಪಿ ಸರ್ಕಾರ ಇತ್ತು. ಸಿಎಂ ಸಿದ್ದರಾಮಯ್ಯ ಅವರು ಹಾಗೆ ಯೋಚನೆ ಮಾಡಿದ್ದರೆ ೧೪ ಸೈಟ್ ತೆಗೆದುಕೊಳ್ಳಲು ಇಷ್ಟು ವರ್ಷ ಬೇಕಾಗಿರಲಿಲ್ಲ. ೧೪ ಪ್ಲಾಟ್ ತೆಗೆದುಕೊಳ್ಳುವುದು ಸಿಎಂಗೆ ದೊಡ್ಡ ವಿಷಯವೇ ಎಂದರು.