For the best experience, open
https://m.samyuktakarnataka.in
on your mobile browser.

ಸ್ಥಳೀಯ ಸಂಸ್ಥೆ ಚುನಾವಣೆಗೆ ಆಪ್ ಸ್ಪರ್ಧೆ

06:00 PM Dec 18, 2024 IST | Samyukta Karnataka
ಸ್ಥಳೀಯ ಸಂಸ್ಥೆ ಚುನಾವಣೆಗೆ ಆಪ್ ಸ್ಪರ್ಧೆ

ಮಂಗಳೂರು: ಮುಂಬರುವ ಜಿಪಂ, ತಾಪಂ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ. ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಕರಾವಳಿಯ ಜನತೆ ಎಎಪಿಯನ್ನು ಬೆಂಬಲಿಸುವ ವಿಶ್ವಾಸವಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ರಾಜ್ಯದಲ್ಲಿ ಎಲ್ಲ ಇಲಾಖೆಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ. ಲಂಚ ನೀಡದೆ ಯಾವುದೇ ಕೆಲಸಗಳಾಗುತ್ತಿಲ್ಲ. ಮುಂಚೂಣಿಯಲ್ಲಿರುವ ರಾಜಕೀಯ ಪಕ್ಷಗಳು ಕೂಡ ಈ ವಿಷಯದಲ್ಲಿ ಮೌನವಹಿಸಿವೆ. ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಆಮ್ ಆದ್ಮಿ ಪಕ್ಷ ಆರಂಭಗೊಂಡಿದ್ದು, ದೆಹಲಿಯಲ್ಲಿ ಅಧಿಕಾರ ವಹಿಸಿಕೊಂಡಿದೆ. ಮಂಗಳೂರು ನಗರದ ಜನತೆಯ ಮೂಲಭೂತ ಹಕ್ಕುಗಳನ್ನು ಒದಗಿಸುವುದು ಎಎಪಿಯ ಮುಖ್ಯ ಧ್ಯೇಯವಾಗಿದೆ. ಜಾತಿ, ಧರ್ಮ ರಾಜಕಾರಣ ಬಿಟ್ಟು ಅಭಿವೃದ್ಧಿಪರ ಇರುವ ಆಮ್ ಆದ್ಮಿ ಪಕ್ಷಕ್ಕೆ ಕರಾವಳಿಯ ಜನ ಬೆಂಬಲಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಕುಟುಂಬ ರಾಜಕಾರಣದಿಂದ ಅಭಿವೃದ್ಧಿಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ಕುಟುಂಬ ರಾಜಕಾರಣದ ಜೆಡಿಎಸ್ ಜತೆ ಅವರು ಮೈತ್ರಿ ಮಾಡಿದ್ದು ಎಷ್ಟು ಸರಿ? ಬಿಜೆಪಿಯ ಕೆಲವರು ಕುಟುಂಬ ರಾಜಕಾರಣದಲ್ಲಿದ್ದಾರೆ. ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಮುಂತಾದ ನಾಯಕರಲ್ಲಿ ಕುಟುಂಬ ರಾಜಕಾರಣವಿದೆ ಎಂದು ಅರೋಪಿಸಿದರು.
ಕಾಂಗ್ರೆಸ್ ಕಿತಾಪತಿಯಿಂದ ಇಂಡಿಯಾ ಒಕ್ಕೂಟ ದಿಕ್ಕಾಪಾಲಾಗುತ್ತಿದೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಬೇಕು ಎನ್ನುವುದು ಎಎಪಿ ಗುರಿಯಾಗಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಣಬಲದಲ್ಲಿ ಬಲಿಷ್ಟವಾಗಿದೆ. ಹಣ ಬಲದಲ್ಲಿ ಅವರೊಂದಿಗೆ ಆಮ್ ಆದ್ಮಿಗೆ ಪೈಪೋಟಿ ನೀಡಲು ಸಾಧ್ಯವಾಗಿಲ್ಲ ಎಂದರು.
ತುಳುಭಾಷೆಗೆ ಸಾಂವಿಧಾನಿಕ ಸ್ಥಾನ ಸಿಗಬೇಕು. ಅದಕ್ಕೆ ನನ್ನ ಪೂರ್ಣ ಬೆಂಬಲ ಇದೆ. ಮಂಗಳೂರಿನವರ ಕನ್ನಡವೂ ಕೂಡ ಉತ್ತಮವಾಗಿದೆ ಎಂದರು
ಆಪ್ ಜಿಲ್ಲಾಧ್ಯಕ್ಷ ವಿಶು ಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ್ ಮುದಿಗೌಡರ್, ರಾಜ್ಯ ಒಬಿಸಿ ಘಟಕ ಅಧ್ಯಕ್ಷ ಬಿ. ನವೀನ್ ಚಂದ್ರ ಪೂಜಾರಿ, ಉಪಾಧ್ಯಕ್ಷ ವಿವೇಕಾನಂದ ಸಾಲ್ಯಾನ್, ಕಾರ್ಯದರ್ಶಿಗಳಾದ ಕಬೀರ್ ಕಾಟಿಪಳ್ಳ, ಸೀಮಾ ಮಡಿವಾಳ ಉಪಸ್ಥಿತರಿದ್ದರು.