ಹನಿಟ್ರ್ಯಾಪ್ : ಇಬ್ಬರು ಮಹಿಳೆಯರು ಸೇರಿ ಐವರ ಬಂಧನ
ಹುಬ್ಬಳ್ಳಿ: ನಗರದ ವ್ಯಾಪಾರಿಯೊಬ್ಬರ ಬೆತ್ತಲೆ ವಿಡಿಯೋ ಮಾಡಿಕೊಂಡು, ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಮಹಿಳೆ ಸೇರಿ ಐದು ಮಂದಿಯನ್ನು ಮಂಗಳವಾರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮುಲ್ಲಾ ಓಣಿಯ ಜೋಯಾ, ತೊರವಿಹಕ್ಕಲದ ಪರ್ವಿನಾ ಬಾನು, ಡಾಕಪ್ಪ ವೃತ್ತದ ಸಯ್ಯದ್, ಹಳೇ ಹುಬ್ಬಳ್ಳಿಯ ತೌಸಿಫ್ ರೆಹಮಾನ್, ಸಯ್ಯದ್ ತೌಸಿಫ್ ಮತ್ತು ಅಬ್ದುಲ್ ರೆಹಮಾನ್ ಬಂಧಿತರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಚಗನ್‌ಲಾಲ್ ಎಂಬುವರ ಅವರ ಬೆತ್ತಲೆ ವಿಡಿಯೊಗಳನ್ನು ಮಾಡಿಕೊಂಡು ಬೆದರಿಕೆ ಹಾಕಿದ್ದರು.
‘ಚಗನ್‌ಲಾಲ್ ಅವರನ್ನು ಪರಿಚಯಿಸಿಕೊಂಡ ಆರೋಪಿ ಜೋಯಾ, ಅವರನ್ನು ಉಣಕಲ್ ಕ್ರಾಸ್‌ಗೆ ಕರೆಸಿಕೊಂಡಿದ್ದಾಳೆ. ನಂತರ ರಾಜನಗರದ ಮನೆಗೆ ಕರೆದುಕೊಂಡು ಹೋಗಿ ಬೆತ್ತಲೆಗೊಳಿಸಿ ವಿಡಿಯೊ ಮಾಡಿಕೊಂಡಿದ್ದಾಳೆ. ನಂತರ ಆರೋಪಿಗಳೆಲ್ಲ ಸೇರಿ ಕೇಳಿದಷ್ಟು ಹಣ ನೀಡದಿದ್ದರೆ ವಿಡಿಯೊ ವೈರಲ್ ಮಾಡುವುದಾಗಿ ಹೇಳಿ, ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಚಗನ್‌ಲಾಲ್ ಸೋಮವಾರ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಈ ಗ್ಯಾಂಗ್‌ನ ಪುರುಷರು ಅಂಗಡಿಯ ಹೊರಗೆ ಹಾಕಿರುವ ನಂಬರ್‌ಗಳನ್ನು ಕಲೆಕ್ಟ್ ಮಾಡಿ ಮಹಿಳೆಯರಿಗೆ ಕೊಡುತ್ತಿದ್ದರು. ಅವರು ವ್ಯಾಪಾರಿಗಳ ಮೊಬೈಲ್ ಫೋನ್ ಸಂಖ್ಯೆಗೆ ಸಂದೇಶ ಕಳುಹಿಸಿ, ಕಾಲ್ ಮಾಡಿ ಸಲುಗೆ ಬೆಳೆಸಿಕೊಂಡು ಬಲೆಗೆ ಹಾಕಿಕೊಳ್ಳುತ್ತಿದ್ದರು. ನಂತರ ಅವರೊಂದಿಗೆ ಇರುವ ಅಶ್ಲೀಲ ವಿಡಿಯೋಗಳನ್ನು ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎನ್ನಲಾಗಿದೆ.