ಹಳಿ ತಪ್ಪಿದ್ದು ರೈಲು: ಮಾರ್ಗ ಬದಲಾವಣೆ
ಜೋಯಿಡಾ: ವಾಸ್ಕೋದಿಂದ ಬಳ್ಳಾರಿಗೆ ಕೋಲ್ ತುಂಬಿಕೊಂಡು ತೆರಳುತ್ತಿದ್ದ ಗೂಡ್ಸ್ ರೈಲಿನ ವ್ಯಾಗನ್ ಗುರುವಾರ ಮಧ್ಯಾಹ್ನ ದೂದ್‌ಸಾಗರ ಟನಲ್ ಬಳಿ ಹಳಿ ತಪ್ಪಿದ್ದು ಕೆಲ ರೈಲುಗಳು ಮಾರ್ಗ ಬದಲಾವಣೆಗೊಂಡು ಇನ್ನು ಕೆಲವೊಂದನ್ನು ಸ್ಥಗಿತಗೊಳಿಸಲಾಗಿದೆ.
ಘಟನೆಯಿಂದಾಗಿ ಮಧ್ಯಾಹ್ನ ಗೋವಾಗೆ ತೆರಳುತ್ತಿದ್ದ ಅಮರಾವತಿ ಎಕ್ಸಪ್ರೆಸ್ ರೈಲು ಕರಂಜೋಳ್‌ವರೆಗೆ ತೆರಳಿ ಪುನಃ ಲೋಂಡಾವರೆಗೆ ವಾಪಸ್ಸ್ ತಂದು ಪ್ರಯಾಣಿಕರನ್ನು ಅಲ್ಲಿಯೇ ಬಿಟ್ಟು ಬಸ್ ಮೂಲಕ ತೆರಳಲು ವ್ಯವಸ್ಥೆ ಮಾಡಲಾಗಿದೆ.
ಇನ್ನು ರೈಲು ಸಂಖ್ಯೆ ೧೨೭೭೯ ವಾಸ್ಕೋ ಡ ಗಾಮಾ-ಹಜರತ್ ನಿಜಾಮುದ್ದೀನ್ ಎಕ್ಸಪ್ರೆಸ್ ಪ್ರಯಾಣವನ್ನು ಮಡಗಾಂವ್, ರೋಹಾ, ಪನ್ವೆಲ್, ಪುಣೆ, ದೌಂಡ್ ಕಾರ್ಡ್ ಲೈನ್ ಮತ್ತು ಮನ್ಮಾಡ್ ನಿಲ್ದಾಣಗಳ ಮೂಲಕ ತಿರುಗಿಸಲಾಗಿದೆ. ೧೮೦೪೮ ವಾಸ್ಕೋ ಡ ಗಾಮಾ-ಶಾಲಿಮಾರ್ ಎಕ್ಸಪ್ರೆಸ್ ಪ್ರಯಾಣವು ವಾಸ್ಕೋ ಡ ಗಾಮಾ ಬದಲಿಗೆ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಡಲಿದೆ. ವಾಸ್ಕೋ ಡ ಗಾಮಾ-ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ವಾಸ್ಕೋ ಯಶವಂತಪುರ ರೈಲಿನ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಪ್ರಯಾಣಿಕರ ಸೌಕರ್ಯವನ್ನು ಖಚಿತಪಡಿಸಿಕೊಳ್ಳಲು, ಲೋಂಡಾ ನಿಲ್ದಾಣದಲ್ಲಿ ರೈಲು ಸಂಖ್ಯೆ ೧೮೦೪೭ರ ಅಂದಾಜು ೧,೧೦೦ ಪ್ರಯಾಣಿಕರಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ. ಲೋಂಡಾದಲ್ಲಿಯೇ ಸಿಲುಕಿರುವ ಪ್ರಯಾಣಿಕರನ್ನು ಕರೆದೊಯ್ಯಲು ೨೫ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣ ಪುನಃಸ್ಥಾಪನೆ ತ್ವರಿತಗೊಳಿಸಲು ಅಪಘಾತ ಪರಿಹಾರ ರೈಲನ್ನು ವಾಸ್ಕೋಡಗಾಮಾದಿಂದ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.