ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಹುಬ್ಬಳ್ಳಿ: ಮಹಿಳಾ ಪೊಲೀಸ್ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪದ ಮೇಲೆ ಹಳೇಹುಬ್ಬಳ್ಳಿ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ ಯಳ್ಳೂರ ಮೇಲೆ ಆ ಠಾಣೆಯ ಮಹಿಳಾ ಸಿಬ್ಬಂದಿ ಡಿಜಿ, ಐಜಿಪಿ ಮತ್ತು ಮುಖ್ಯಮಂತ್ರಿಗಳು, ಗೃಹಸಚಿವರು, ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಮಹಿಳಾ ಸಿಬ್ಬಂದಿ ಪೊಲೀಸ್ ಇನ್ಸಪೆಕ್ಟರ್ ವಿರುದ್ಧ ಮಹಿಳಾ ಆಯೋಗ, ಮಾನವ ಹಕ್ಕುಗಳ ಆಯೋಗ ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳು ಸೇರಿದಂತೆ ಹಲವರಿಗೆ ಪತ್ರ ಬರೆದು ಇಂತಹ ಅಧಿಕಾರಿಯಿಂದ ಮುಕ್ತಿ ನೀಡಿ ಎಂದು ಮನವಿ ಮಾಡಿದ್ದಾರೆ.
ಇನ್ಸ್‌ಪೆಕ್ಟರ್ ಸುರೇಶ್ ಯಳ್ಳೂರು ವಿರುದ್ಧ ಮೂರು ಪುಟಗಳಷ್ಟು ದೂರು ಬರೆದು ಮನವಿ ಮಾಡಿದ ಮಹಿಳಾ ಸಿಬ್ಬಂದಿ ನಮ್ಮ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಮಹಿಳಾ ಸಿಬ್ಬಂದಿಗೆ ಕೆಟ್ಟದಾಗಿ ಮಾತನಾಡುತ್ತಾರೆ. ತಮಗೆ ಬೇಕಾದ ಸಿಬ್ಬಂದಿಗೆ ತಿಂಗಳುಗಟ್ಟಲೇ ಕಚೇರಿಗೆ ಬರದಿದ್ದರೂ ಕೇಳುವುದಿಲ್ಲ. ಅವರು ಕೂಡ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ರಜೆ ಕೇಳಿದರೂ ಕೊಡುವುದಿಲ್ಲ ಎಂದು ಪತ್ರದಲ್ಲಿ ದೂರಿದ್ದಾರೆ.
ಮಹಿಳಾ ಸಿಬ್ಬಂದಿ ರಜೆ ಕೇಳಲು ಹೋದರೆ, ಅವರ ಸೌಂದರ್ಯದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಕಿರಿಯ ಮಹಿಳಾ ಸಿಬ್ಬಂದಿಗೆ ಕೆಟ್ಟದಾಗಿ ಕಾಮಪ್ರಚೋದಕ ಕೈ ಸನ್ನೆಗಳನ್ನು ಮಾಡುವುದು, ಅಸಹ್ಯವಾಗಿ ಮಾತನಾಡುವುದು ಮಾಡುತ್ತಾರೆ. ಲೈಂಗಿಕ ಕ್ರಿಯೆಗೆ ಆಹ್ವಾನಿಸುತ್ತಾರೆ. ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಹೀಗಾಗಿ, ಇನ್ಸ್‌ಪೆಕ್ಟರ್ ಮಾಡುವ ದುರ್ವತನೆಗೆ ಕುಟುಂಬದಲ್ಲಿ ಬಿರುಕು ಮೂಡಿವೆ. ಅಂತವರಿಂದ ಮುಕ್ತಿ ಕೊಡಿಸಿ ಎಂದು ಮನವಿ ಮಾಡಿದ್ದಾರೆ.