For the best experience, open
https://m.samyuktakarnataka.in
on your mobile browser.

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ: ರಾಜ್ಯ ಸರ್ಕಾರದಿಂದ ತುಷ್ಟ್ರೀಕರಣದ ರಾಜಕಾರಣ

12:23 PM Oct 13, 2024 IST | Samyukta Karnataka
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ  ರಾಜ್ಯ ಸರ್ಕಾರದಿಂದ ತುಷ್ಟ್ರೀಕರಣದ ರಾಜಕಾರಣ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಎನ್‌ಐಎ ತನಿಖೆ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಪ್ರಕರಣವನ್ನು ಸರ್ಕಾರ ವಾಪಸ್‌ ಪಡೆಯುವ ಮೂಲಕ ತುಷ್ಠಿಕರಣ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೊಲೀಸ್ ಸ್ಟೇಷನ್ ಮೇಲೆ ದಾಳಿ ಮಾಡಿದ್ದು, ರಾಜ್ಯದ ಮೇಲಿನ ದಾಳಿಯಾಗಿದೆ. ಇದು ಗಂಭೀರವಾದ ಪ್ರಕರಣ, ಇದನ್ನು ಎನ್‌ಐಎಗೆ ನೀಡಲಾಗಿದ್ದು, ಚಾರ್ಜ್‌ ಶೀಟ್ ಆಗಿದೆ. ಯುಎಪಿಐ ಅಡಿ ಎನ್‌ಐಎಗೆ ತನಿಖೆಗೆ ನೀಡುವಂತಹ ಪ್ರಕರಣವನ್ನು ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಈಗ ಇವರು ಸಮಾಜವನ್ನು ಸಂತುಷ್ಟಿ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಎನ್‌ಐಎಗೆ ನೀಡಿರುವ ಪ್ರಕರಣವನ್ನು ವಾಪಸ್ ಪಡೆಯಲು ಬರುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೂ ಗೊತ್ತಿದೆ. ಆದರೂ, ತುಷ್ಠಿಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು.

ರಾಜ್ಯಸರ್ಕಾರ ದೊಡ್ಡ ತಪ್ಪು ಸಂದೇಶ ರವಾನೆ ಮಾಡುತ್ತಿದೆ. ರಾಜ್ಯದಲ್ಲಿ ಡಿಜೆ ಹಳ್ಳಿ ಕೆಜೆ ಹಳ್ಳಿ ಪ್ರಕರಣ, ಮಂಗಳೂರಿನಲ್ಲಿ ಗಲಭೆ, ಹುಬ್ಬಳ್ಳಿಯಲ್ಲಿ ಪೊಲೀಸ್ ಸ್ಟೇಶನ್ ಮೇಲೆ ದಾಳಿ ಮಾಡಲಾಗಿದೆ. ಹಾಗಿದ್ದರೆ ಇನ್ನು ಮುಂದೆ ಪೊಲೀಸ್ ಸ್ಟೇಶನ್ ಮೇಲೆ ದಾಳಿ ಮಾಡಿದರೆ ಪೊಲೀಸರು ಏನೂ ಮಾಡುವಂತಿಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ತಮ್ಮ ರಕ್ಷಣೆ ಮಾಡಿಕೊಳ್ಳದಂತಹ ಪರಿಸ್ಥಿತಿಗೆ ಬಂದಿದೆ. ನನ್ನ ಪ್ರಕಾರ ಕಾನೂನು ಸುವ್ಯವಸ್ಥೆ ಕಿತ್ತು ಹೋಗಿದೆ. ಈ ಥರ ಒಂದು ಕಾನೂನಾತ್ಮಕ ಚಿಂತನೆಯನ್ನೂ ರಾಜ್ಯ ಸರ್ಕಾರ ಕಳೆದುಕೊಂಡಿದೆಯಲ್ಲ ಎಂದು ಖೇದ ಅನಿಸುತ್ತಿದೆ. ತಮ್ಮ ತಪ್ಪು ಹಾಗೂ ಹಗರಣಗಳನ್ನು ಮುಚ್ಚಿಕೊಳ್ಳಲು ಈ ರೀತಿಯ ಆತುರದ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರ ಹುಬ್ಬಳ್ಳಿ ಕೇಸ್‌ ವಾಪಸ್‌ ಪಡೆದಿರುವುದನ್ನು ವಿರೋಧಿಸಿ ಬಿಜೆಪಿಯವರು ಶಾಂತಿಯುತವಾಗಿ ಮನವಿ ಸಲ್ಲಿಸಲು ತೀರ್ಮಾನಿಸಿದ್ದರೂ, ಪೊಲೀಸರು ಅನುಮತಿ ನೀಡದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು. ಇದು ಪೊಲೀಸ್ ರಾಜ್ಯವಾಗಿದೆ. ಇಲ್ಲಿ ಪಜಾಪಭುತ್ವ ಇಲ್ಲದಾಗಿದೆ ಎಂದರು.

ರಾಜ್ಯ ಸರ್ಕಾರ ದುಷ್ಟರ ಸಂಹಾರ ಮಾಡುವ ಬಗ್ಗೆ ಜಾಹೀರಾತು ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಅಪರಾಧಿ ಮನೋಭಾವ. ತಾವು ಏನೂ ತಪ್ಪು ಮಾಡಿಲ್ಲ ಎಂಬ ಭಾವನೆ ಮೂಡಿಸುವ ಸಲುವಾಗಿ ಇತರರನ್ನು ದುಷ್ಟರು ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ರೀತಿ ಹಿಂದೆ ಆಗಿರಲಿಲ್ಲ. ಸರ್ಕಾರಿ ಜಾಹೀರಾತನ್ನು ತಮ್ಮ ಸ್ವಂತ ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ಇದೇ ಪಥಮ ಇದು ಅತ್ಯಂತ ಖಂಡನೀಯ ಎಂದು ಹೇಳಿದರು.

Tags :