ಹಾಸ್ಟೆಲ್‌ನಲ್ಲಿ ಅವ್ಯವಸ್ಥೆ: ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡ ಕಾಶಪ್ಪನವರ
ಬಾಗಲಕೋಟೆ(ಇಳಕಲ್): ಮೆಟ್ರಿಕ್ ನಂತರದ ಮಹಿಳೆಯರ ಹಾಸ್ಟೆಲ್‌ಗೆ ರವಿವಾರದಂದು ದಿಢೀರ್ ಭೇಟಿ ನೀಡಿದ ಶಾಸಕ ವಿಜಯಾನಂದ ಕಾಶಪ್ಪನವರ ಅಲ್ಲಿನ ಅವ್ಯವಸ್ಥೆ ಕಂಡು ಕೆಲಸಗಾರರ ಎತ್ತಂಗಡಿ ಮಾಡುವ ಎಚ್ಚರಿಕೆ ಹಾಕಿದ ಪ್ರಸಂಗ ನಡೆಯಿತು.
ಶಾಸಕರು ತಮ್ಮ ಕಾರ್ಯಕರ್ತರು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ರವಿವಾರ ಮೆಟ್ರಿಕ್ ನಂತರದ ಮಹಿಳೆಯರ ಹಾಸ್ಟೆಲ್‌ಗೆ ಭೇಟಿ ನೀಡಿದಾಗ ಅಲ್ಲಿನ ಪರಿಸ್ಥಿತಿಯನ್ನು ನೋಡಿ ಅಧಿಕಾರಿಗಳ ಮತ್ತು ಅಲ್ಲಿನ ಕೆಲಸಗಾರರ ಮೇಲೆ ಹರಿಹಾಯ್ದರು.
ಹಾಸ್ಟೆಲ್‌ನ ಎಲ್ಲಾ ಕೊಠಡಿಗಳನ್ನು ಮತ್ತು ಶೌಚಾಲಯಗಳನ್ನು ನೋಡಿ ಅಲ್ಲಿನ ವಿದ್ಯಾರ್ಥಿನಿಯರ ಜೊತೆಗೆ ಮಾತನಾಡಿ, ಅವರ ಕುಂದುಕೊರತೆಗಳನ್ನು ಸಮಾಧಾನವಾಗಿ ಆಲಿಸಿದರು. ವಿದ್ಯಾರ್ಥಿನಿಯರು ಒಬ್ಬೊಬ್ಬರಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಅಡುಗೆಯವರು ಮಾಡುವ ಅನ್ನದಲ್ಲಿ ಬಾಲ ಹುಳುಗಳು ಹಾಗೆ ಇರುತ್ತವೆ ಎಂಬುವುದನ್ನು ವಿಡಿಯೋ ದಾಖಲೆ ಮೂಲಕ ತೋರಿಸಿದರು. ಕೊಠಡಿಯಲ್ಲಿ ಹಾಕಿದ ಫ್ಯಾನ್‌ಗಳು ಕರ್ಕಶ ಶಬ್ಧ ಮಾಡುವದರಿಂದ ಓದಲು ಆಗುತ್ತಿಲ್ಲಾ ಇವುಗಳನ್ನು ದುರಸ್ತಿ ಮಾಡಿಸಿ ಎಂದರೂ ಕಿವಿಗೆ ಹಾಕಿಕೊಳ್ಳುವುದಿಲ್ಲ ಎಂದು ಆರೋಪಿಸಿದರು. ಏನಾದರೂ ಹೆಚ್ಚು ಕಡಿಮೆ ಮಾತನಾಡಿದರೇ ನಿಮ್ಮ ಹುಡುಗಿಯ ನಡತೆ ಚೆನ್ನಾಗಿಲ್ಲ ಬಂದು ಕರೆದುಕೊಂಡು ಹೋಗಿ ಎಂದು ಪಾಲಕರಿಗೆ ಕರೆ ಮಾಡುತ್ತಾರೆ ಎಂದು ವಿದ್ಯಾರ್ಥಿನಿಯರು ದೂರಿದರು.
ಅಧಿಕಾರಿಗಳ ಜೊತೆಗೆ ಮಾತನಾಡಿ, ಹೊಸ ಹಾಸ್ಟೆಲ್ ಕಟ್ಟಡ ಯಾವಾಗ ಪೂರ್ಣವಾಗುತ್ತದೆ ಎಂದು ವಿಚಾರಿಸಿದಾಗ ಎಲ್ಲಾ ಕಾಮಗಾರಿ ಮುಗಿದಿದೆ. ಕಾಂಪೌಂಡ್ ಕಟ್ಟುವದು ಮಾತ್ರ ಉಳಿದಿದೆ ಎಂದು ಹೇಳಲಾಯಿತು.
ಸರಿಯಾಗಿ ಅಡುಗೆ ಮಾಡದ ಅಡುಗೆ ತಯಾರಕರನ್ನು ಮತ್ತು ವಾರ್ಡನ್ ಅವರಿಗೆ ಕ್ಲಾಸ್ ತೆಗೆದುಕೊಂಡ ಶಾಸಕರು ಇದೇ ರೀತಿ ನೀವು ಕೆಲಸ ಮಾಡಿದರೆ ನಿಮ್ಮನ್ನು ಇಲ್ಲಿಂದ ಎತ್ತಂಗಡಿ ಮಾಡಲಾಗುವುದು ಎಂದು ಎಚ್ಚರಿಸಿ ವಿದ್ಯಾರ್ಥಿನಿಯರು ಸಹ ಹಾಸ್ಟೆಲ್‌ನಲ್ಲಿ ಜವಾಬ್ದಾರಿಯಿಂದ ಇರಬೇಕು ತಂದೆ-ತಾಯಿಗೆ ಕೆಟ್ಟ ಹೆಸರು ತರದಂತೆ ಇದ್ದು ಉತ್ತಮವಾಗಿ ಅಭ್ಯಾಸ ಮಾಡಬೇಕು ಎಂದು ಕಿವಿಮಾತು ಹೇಳಿದರು.