ಹಿಂಪಡೆದರೆ ಅನುಕೂಲವಾಗುತ್ತದೆ….
ಜೋ ಬೈಡನ್ ಅಲಿಯಾಸ್ ಬುಡ್ಡೇ ಸಾಬನನ್ನು ಕರೆಯಿಸಿ ನಮ್ಮ ಎಲ್ಲ ಪಕ್ಷಗಳ ರಾಜಕಾರಣಿಗಳಿಗೆ ಪಾಠ ಮಾಡಿಸಬೇಕು ಎಂದು ತಿಗಡೇಸಿ ತಯಾರಿ ನಡೆಸಿದ್ದಾನೆ. ಜಗತ್ತಿನಲ್ಲಿ ಇದಕ್ಕಿಂತ ಎಷ್ಟೆಷ್ಟೋ ಪಾಲು ಉತ್ತಮರಿದ್ದ ರಾಜಕಾರಣಿಗಳು ಇದ್ದರು. ಎಲ್ಲ ಬಿಟ್ಟು ಬುಡ್ಡೇಸಾಬನೇ ಬೇಕೆ? ಇದೆಲ್ಲ ಯಾಕೆ? ಎಂದು ಅನೇಕರು ತಿಗಡೇಸಿಯನ್ನು ಪ್ರಶ್ನಿಸುತ್ತಿದ್ದರು. ಎಲ್ಲದಕ್ಕೂ ಒಂದೇ ಉತ್ತರ ಕಾಯ್ದು ನೋಡಿ ಎಂದು ಹೇಳುತ್ತಿದ್ದ. ಹಲವು ಮಂದಿ ತಿಗಡೇಸಿ ಮನೆಗೆ ಹೋಗಿ ನೋಡಪಾ… ವಿಚಾರ ಮಾಡು ಆತನನ್ನು ಕರೆಯಿಸಿ ಇವರಿಗೆಲ್ಲ ಯಾಕೆ ಪಾಠ ಹೇಳಿಸುತ್ತಿ? ಎಂದು ಕೇಳಿದರು. ಕರಿಭಾಗೀರತಿಯಂತೂ ಬರೀ ಬುಡ್ಡೇಸಾಬ ಬರುತ್ತಾನಾ? ಅಥವಾ ಟ್ರಂಪೇಸಿಯನ್ನೂ ಕರೆದಿದ್ದೀಯ? ಎಂದು ಕೇಳಿದರು. ಏನಿಲ್ಲ. ಬುಡ್ಡೇಸಾಬನ ಜತೆ ಕಮಲಕ್ಕ ಬಂದರೆ ಬರಬಹುದು ಇನ್ನೂ ಗ್ಯಾರಂಟಿ ಇಲ್ಲ ಎಂದು ಹೇಳಿದ್ದ. ಜನರಿಗೆಲ್ಲ ಭಾರೀ ಕುತೂಹಲ ಕೆರಳಿತ್ತು. ಆತನನ್ನು ಕರೆಯಿಸಿ ಇವರಿಗೇನು ಪಾಠ ಹೇಳಿಸುತ್ತಾನೆ? ಆಮೇಲೆ ನಮ್ಮವರೆಲ್ಲ ಆತನಿಗೇ ಪಾಠ ಹೇಳಿ ಕಳುಹಿಸುತ್ತಾರೆ ನೋಡುತಿರಿ ಎಂದು ಮಾತನಾಡಿಕೊಂಡರು. ಮೊದಲೇ ಯಾರ ಕಡೆಯಿಂದ ಹೇಳಿಸಬೇಕೋ ಅವರ ಕಡೆಯಿಂದ ಹೇಳಿಸಿ ಇಲ್ಲಿನ ರಾಜಕಾರಣಿಗಳನ್ನು ಒಪ್ಪಿಸಿದ್ದ. ಅಂದು ಬುಡ್ಡೇಸಾಬನ ಕಾರ್ಯಕ್ರಮ. ಎಲ್ಲರೂ ಬಂದಿದ್ದರು. ಸ್ವಾಗತ ಅದು ಇದು ಆದಮೇಲೆ ಈಗ ಸನ್ಮಾನ್ಯ ಜೋ ಬೈಡನ್ ಅಲಿಯಾಸ್ ಬುಡ್ಡೇಸಾಬ ಅವರಿಂದ ಪಾಠ ಎಂದು ನಿರೂಪಕರು ಹೇಳಿದರು. ಮೈಕ್ ಮುಂದೆ ಬಂದು… ನೋಡಿ… ನಾನು.. ನನ್ನವರು.. ರಿಲೇಷನ್ನು-ಗಿಲೇಷನ್ನು ಅಂತ ಇಟ್ಟುಕೊಂಡು ಅವರಿಗೆ ಟಿಕೆಟ್ ಕೊಡಬಾರದು. ಬೇರೆಯವರನ್ನು ಕುರ್ಚಿಯ ಮೇಲೆ ಕೂಡಿಸಿ ಅವರನ್ನು ನೋಡಿದಾಗ ಸಿಗುವ ಆನಂದ ಏಲ್ಲೂ ಸಿಗಲ್ಲ ಎಂದು ಏನೇನೋ ಹೇಳಿದ. ಆತನ ಭಾಷಣವಾದ ನಂತರ…ಬರೀ ಹಿರಿಯರಾದ ಪಂ. ಲೇವೇಗೌಡರು, ಸಿಟ್ಯೂರಪ್ಪವರು, ಮದ್ರಾಮಣ್ಣನವರು, ಬಂಡಿ ಸಿವು ಇನ್ನೂ ಮುಂತಾದವರ ಜತೆ ಸಭೆ ನಡೆಸಿದ. ಸಭೆಯಲ್ಲಿ ನೋಡಿ ಬುಡ್ಡೇಸಾಬ… ಈಗ ಕಮಲಮ್ಮನಿಗೆ ಟಿಕೆಟ್ ಕೊಟ್ಟಿರಿ. ಆಕೆಯನ್ನು ಆರಿಸಿ ತರುತ್ತೀರಿ… ನಿಮಗೇನು ಲಾಭ? ಆಕೆ ಇನ್ನೊಂದು ವರ್ಷವಾದ ಮೇಲೆ ಏಯ್ ಬಾರೋ ಬುಡ್ಯಾ ಇಲ್ಲಿ ಎಂದು ಅನ್ನದಿದ್ದರೆ ಕೇಳಿ… ನಿಮಗೆ ಗೊತ್ತಾಗುವುದಿಲ್ಲ ಇವರೇ ಅಂದಾಗ… ಗಾಬರಿ ಮಾರಿ ಮಾಡಿದ ಬುಡ್ಡೇಸಾಬ… ಇರಲಿ ಇರಲಿ ಎಂದು ಸುಮ್ಮನೇ ಇದ್ದ. ತನ್ನ ಊರಿಗೆ ಹೋದ ಮೇಲೆ… ಕಮಲಕ್ಕನನ್ನು ಕರೆಯಿಸಿ… ನೋಡಿ ಕಮಲಕ್ಕ ನಿಮಗೆ ಟಿಕೆಟ್ ಕೊಟ್ಟು ನಾನು ತಪ್ಪು ಮಾಡಿಬಿಟ್ಟೆ… ನನ್ನ ಧರ್ಮಪತ್ನಿ, ಇಲ್ಲವೇ ಕಂದಮ್ಮಗಳು… ಅಥವಾ ನನ್ನ ಅಣ್ತಮ್ಮಂದಿರ ಮಕ್ಕಳು ಇವರಿಗೆ ಕೊಟ್ಟಿದ್ದರೆ ಆಗುತ್ತಿತ್ತು. ನೀನು ನಾಮಪತ್ರ ಹಿಂಪಡೆದರೆ ನಮ್ಮ ಮಕ್ಕಳಿಗೆ ಅನುಕೂಲವಾಗುತ್ತದೆ… ನೋಡು ಏನು ವಿಚಾರ ಮಾಡುತ್ತೀಯ? ಎಂದು ಹೇಳಿ… ಏನೇನೋ ಯೋಚಿಸುತ್ತ ಕುಳಿತ.