ಹುಬ್ಬಳ್ಳಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ರಘುವೀರಾನಂದ ಇನ್ನಿಲ್ಲ
ಹುಬ್ಬಳ್ಳಿ: ವಿದ್ಯಾನಗರ ಕಲ್ಯಾಣ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ರಘುವೀರಾನಂದ ಮಹಾರಾಜರು(೬೦) ಇಂದು ಬೆಳಗ್ಗೆ ನಿಧನರಾದರು.
ಸ್ವಾಮೀಜಿಯವರ ಪಾರ್ಥಿವ ಶರೀರವನ್ನು ಭಕ್ತರ ದರ್ಶನಕ್ಕೆಂದು ಆಶ್ರಮದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಸೆ. ೨೪ರಂದು ಬೆಳಗ್ಗೆ ೧೦ಗಂಟೆಗೆ ಕೇಶ್ವಾಪುರದ ಮುಕ್ತಿಧಾಮದಲ್ಲಿ ರಾಮಕೃಷ್ಣ ಆಶ್ರಮದ ಪರಂಪರೆಯಂತೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಆಶ್ರಮದ ಮೂಲಗಳು ತಿಳಿಸಿವೆ.
೧೯೬೪ರಲ್ಲಿ ಜನಿಸಿದ್ದ ಸ್ವಾಮಿ ರಘುವೀರಾನಂದರು ಬಿಇ ಪದವೀಧರರು. ೧೯೮೮ರಲ್ಲಿ ತಮ್ಮ ಕಾಲೇಜು ದಿನಗಳಲ್ಲಿ ಬೆಂಗಳೂರಿನ ರಾಮಕೃಷ್ಣ ಮಠ ಸಂಪರ್ಕಕ್ಕೆ ಬಂದರು. ವಿವೇಕಾನಂದ ಯುವಕ ಸಂಘದ ಸದಸ್ಯರಾಗುವ ಮೂಲಕ ತಮ್ಮನ್ನು ಆಶ್ರಮದ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಸ್ವಾಮಿ ಪುರುಷೋತ್ತಮಾನಂದಜಿ ಮಹಾರಾಜ್ ಅವರಿಂದ ಸ್ಫೂರ್ತಿಗೊಂಡು ದಿವ್ಯತ್ರಯರ ಸೇವೆಗೆ ತಮ್ಮ ಜೀವನ ಸಮರ್ಪಿಸಿದರು.
ಸ್ವಾಮಿಗಳ ಮಾರ್ಗದರ್ಶನದಂತೆ ೧೯೯೨ರಲ್ಲಿ ಬೆಂಗಳೂರಿನಲ್ಲಿ ರಾಮಕೃಷ್ಣ ಸಂಕೀರ್ತನ ಸಭೆ ಪ್ರಾರಂಭಿಸಿದರು. ಭಜನೆ, ಸಂಕೀರ್ತನೆಗಳ ಮೂಲಕ ದಿವ್ಯತ್ರಯರ ಸಂದೇಶ ಮನೆ ಮನೆಗೂ ಮನಮನಕ್ಕೂ ತಲುಪಿಸುವ ಕಾರ್ಯ ಆರಂಭಿಸಿದರು.
೧೯೯೩ರಲ್ಲಿ ಸ್ವಾಮಿ ಪುರುಷೋತ್ತಮಾನಂದಜಿಯವರು ಪೊನ್ನಂಪೇಟೆಗೆ ಹೋದಾಗ ಅವರೊಂದಿಗೆ ಅಲ್ಲಿಗೆ ಹೋಗಿ ಸೇವೆ ಸಲ್ಲಿಸಿದರು. ೧೯೯೪ರಲ್ಲಿ ಬೆಂಗಳೂರಿಗೆ ಹಿಂದಿರುಗಿ ರಾಮಕೃಷ್ಣ ಯೋಗಾಶ್ರಮ ಪ್ರಾರಂಭಿಸಿದರು. ೨೦೦೦ರಲ್ಲಿ ಧಾರವಾಡದ ರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ ಬಂದು ಅಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದರು. ನಂತರ ಸ್ವಾಮಿ ಪುರುಷೋತ್ತಮಾನಂದಜಿಯವರ ಆದೇಶದಂತೆ ಹುಬ್ಬಳ್ಳಿಗೆ ಬಂದು ೨೦೦೨ರ ಮೇ ೧೩ರಂದು ರಾಮಕೃಷ್ಣ ವಿವೇಕಾನಂದ ಆಶ್ರಮ ಸ್ಥಾಪಿಸಿದರು. ಉತ್ತರ ಕರ್ನಾಟಕದಾದ್ಯಂತ ದಿವ್ಯತ್ರಯರ ಸಂದೇಶ ಪ್ರಚಾರ ಮಾಡಿದರು. ತಮ್ಮ ಸುಮಧುರ ಕಂಠದಿಂದ ಭಕ್ತಿಪೂರ್ವಕ ಭಜನೆ, ಉಪನ್ಯಾಸ ಮೂಲಕ ಪ್ರಖ್ಯಾತಿ ಹೊಂದಿದ್ದ ಅಪಾರ ಭಕ್ತ ವೃಂದ ಹೊಂದಿದ್ದರು.