ಹೆತ್ತ ಮಗು ಕೆರೆಗೆ ಎಸೆದ ತಾಯಿ
ಬೆಳಗಾವಿ: ಮಗುವಿನ ಅನಾರೋಗ್ಯದಿಂದ ರೋಸಿ ಹೋಗಿದ್ದ ತಾಯಿ ತಾನು ಹೆತ್ತ ಮಗುವನ್ನೇ ಕೆರೆಗೆ ಎಸೆದು ಕೊಲೆ ಮಾಡಲು ಮುಂದಾದ ಘಟನೆ ಬೆಳಗಾವಿಯ ಮಾಳಮಾರುತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೇವಲ ಎರಡು ತಿಂಗಳು ಪ್ರಾಯದ ಮಗುವನ್ನು ಕಣಬರ್ಗಿಯ ಶಾಂತಿ ಕರವಿನಕೊಪ್ಪ(೩೫) ಎಂಬುವರು ಕಣಬರ್ಗಿ ಕೆರೆಗೆ ಎಸೆದು ಕೊಲ್ಲಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿಯೇ ಕರು ತೊಳೆಯುತ್ತಿದ್ದ ಸ್ಥಳೀಯ ಯುವಕರು ಕೆರೆಗೆ ಹಾರಿ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಇಲ್ಲಿನ ಖಾಸಗಿ ಆಸ್ಪತ್ರೆಯ ಐಸಿಯುವಿನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮಗುವಿನ ಪೋಷಕರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮಗುವಿಗೆ ಪದೇ ಪದೇ ಮೂರ್ಚೆರೋಗ ಬರತ್ತಿದ್ದು ಈ ಸಂದರ್ಭದಲ್ಲಿ ಮಗು ಕಷ್ಟಪಡುವುದನ್ನು ನೋಡಿ ಮನಸಿಗೆ ತುಂಬಾ ನೋವಾಗಿದೆ. ನಿನ್ನೆಯ ತನಕವೂ ಮಗು ಆಸ್ಪತ್ರೆಯಲ್ಲಿ ದಾಖಲಾಗಿತ್ತು ಎಂದು ಶಾಂತಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ. ನನ್ನ ಮಗು ಹುಷಾರಾಗಬೇಕು. ಅದರ ಕಷ್ಟ ನೋಡೋಕಾಗ್ತಿಲ್ಲ ಎಂದು ಅಂಗಾಲಾಚಿದ್ದಾಳೆ. ಕೊಲೆ ಯತ್ನ ಪ್ರಕರಣದಲ್ಲಿ ಪೊಲೀಸರು ಶಾಂತಿಯನ್ನು ಬಂಧಿಸಿದ್ದಾರೆ.