ಹೆಸರು ಏಕ-ಎರಡು ಬಾರಿ ಹೆಂಗೆ?
ಏಕ್ ನಾಥ್ ಏಕ್ ಬಾರ್ ಸಿಎಂ ಆಗಿದಾನೆ ಮತ್ತೆ ಅದ್ಹೆಂಗೆ ಎಂದು ಫಡ್ನು ಬಾಬು ಅವರೆಲ್ಲ ಚಿಂತೆ ಮಾಡಿ.. ಮಾಡಿ ಸಾಕಾಗಿ… ಸಾಹೇಬರೇ ನೀವೇ ಬಗೆಹರಿಸಿ ಎಂದು ಸೋದಿ ಮಾಮಾರನ್ನು ವಿನಂತಿಸಿದಾಗ… ಅಲ್ಲಿ ಕೂತು ಮಾತು ಬೇಡ… ಎಲ್ಲ ಇಲ್ಲಿಬನ್ನಿ ಎಂದು ಕರೆದ ಕೂಡಲೇ ಮೆಟಡಾರ್ ಬುಕ್ ಮಾಡಿಕೊಂಡು ಡೆಲ್ಲಿಗೆ ಹೋಗಿದ್ದಾರೆ. ಇತ್ತ ತಿಗಡೇಸಿಯು ತನ್ನ ಗೆಳೆಯರನ್ನು ಕೂಡಿಸಿಕೊಂಡು ಇದೊಳ್ಳೆ ಪೀಕಲಾಟ ಶುರುವಾಯಿತು. ಹೆಸರಿನಲ್ಲೇ ಏಕ ಅಂತ ಇದೆ. ಹಿಂದಿಯಲ್ಲಿ ಏಕ್ ಅಂದರೆ ಒಂದು. ಈಗ ಎರಡು ಬಾರಿ ಹೇಗೆ ಸಿಎಂ ಆಕ್ತಾರೆ. ಹೆಸರಿಗೊಂದು ಕಿಮ್ಮತ್ತು ಬೇಡವೇ ಎಂದು ವಾದ ಮಾಡಿದ. ನಿನಗೆ ಬುದ್ಧಿ ಇಲ್ಲ ಅಂತ ಎಲ್ಲರೂ ಅಂತಿದ್ದರು ಈಗ ಖಾತ್ರಿ ಆಯಿತು ಎಂದು ತಳವಾರ್ಕಂಟಿ ಮುಖಕ್ಕೆ ಹೊಡೆದ ಹಾಗೆ ಹೇಳಿದ ಯಾಕೆ ಅಂದರೆ..ಅಲ್ಲಯ್ಯ ಏಕ ಅಂದರೆ ಒಂದು ನಿಜ ಹಾಗೆಂದ ಮಾತ್ರಕ್ಕೆ ಒಂದೇ ಸಲ ಆಗಬೇಕಾ? ಇಲ್ಲಿನವರು ಸಿದ್ದಣ್ಣ.. ಹಾಗಾದಾರೆ ಎಲ್ಲದಕ್ಕೂ ಸಿದ್ಧನಾ ಆ ಅಣ್ಣ? ಏನ್ ಮಾತಾಡ್ತೀಯ? ಎಂದು ರೇಗಿದ. ಹೋಗಲಿ ಬಿಡಿ…ಅನುಭವಸ್ತರನ್ನು ಕೇಳಿದರೆ ಅವರು ಏನಾದರೂ ಹೇಳಿಯಾರು… ಬೇಕಿದ್ದರೆ ಲೇವಣ್ಣನನ್ನು ಕೇಳೋಣ ಎಂದು ಅವರಿಗೆ ಕಾಲ್ ಮಾಡಿದರು. ಆ ಕಡೆಯಿಂದ ಹಲೋ ನಾನ್ಲೇವಣ್ಣ ಅಂದ. ಸಾಮಿ ಈಗ ಏಕ ನಾಥ ಆಗ್ತಾನಾ? ಎಂದು ಕೇಳಿದ್ದಕ್ಕೆ… ಆತನಿಗೆ ನನ್ಕಡೆ ಬಾ ಅನ್ನು ಎಲ್ಡು ಲಿಂಬೆಹಣ್ಣು ಮಂತ್ರಿಸಿ ಕೊಡುತ್ತೇನೆ. ಜೇಬಲ್ಲಿ ಇಟ್ಕಂಡು ಓಗ್ಲಿ ಸೋದಿ ಮಾಮಾನೂ ಊಂ ಅಂತಾನೆ… ಲಮಿತ್ ಕಾಕಾನೂ ಎಸ್ ಅಂತಾನೆ ಎಂದು ಹೇಳಿದ. ಲೇವಣ್ಣ ತನ್ನದೇ ಲೆಕ್ಕಾಚಾರದಲ್ಲಿ ಇರ್ತಾನೆ. ಇರಲಿ ಬುಡು ಅಂತ ನಿಟ್ಟುಸಿರು ಬಿಟ್ಟ ತಿಗಡೇಸಿ.