ಹೈಕೋರ್ಟ್ ಆದೇಶ ಗೌರವಿಸುವುದು ಎಲ್ಲರ ಧರ್ಮ
ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯರ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಪ್ರಾಶುಕ್ಯುಷನ್ ಗೆ ಅನುಮತಿ ಅವಕಾಶ ನೀಡಿದ್ದು, ಹೈಕೋರ್ಟ್ ಆದೇಶಕ್ಕೆ ಗೌರವಿಸಬೇಕು. ಇದು ಎಲ್ಲರ ಧರ್ಮವಾಗಿದೆ ಎಂದು ಸಂಸದ ಕೆ.ರಾಜಶೇಖರ ಹಿಟ್ನಾಳ್ ಹೇಳಿದರು.
ನಗರದ ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಫ್ರಿಂ ಕೋರ್ಟಿಗೆ ಮೇಲ್ಮನವಿಗೆ ಅವಕಾಶ ಇದ್ದು, ಪಕ್ಷ ಮತ್ತು ನಾಯಕರು ಮುಂದಿನ ದಿನಗಳಲ್ಲಿ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ಇದೆ. ಹೈಕೋರ್ಟಿನಲ್ಲಿ ಸೋತು, ಸುಫ್ರಿಂಕೋರ್ಟಿನಲ್ಲಿ ಗೆದ್ದಿರುವ ಅನೇಕ ಉದಾಹರಣೆಗಳಿವೆ ಎಂದರು.
ಬಿಜೆಪಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡಲಿ ಎಂದು ರಾಜಕೀಯವಾಗಿ ಒತ್ತಾಯ ಮಾಡುತ್ತಾರೆ. ಇದರಲ್ಲಿ ಏನೂ ಇಲ್ಲ ಎನ್ನುವುದು ಬಿಜೆಪಿಯವರಿಗೂ ಗೊತ್ತಿದೆ. ರಾಜೀನಾಮೆ ಏಕೆ ಕೊಡಬೇಕು. ಖಾಲಿ ಕೂರಬಾರದೆಂದು ಬಿಜೆಪಿಯವರು ಹೀಗೆ ಮಾಡುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗಲೇ ಪ್ಲಾಟ್ ಕೊಟ್ಟಿದ್ದು, ಅವರೇ ದೂರು ನೀಡಿದ್ದಾರೆ. ಅವರೇ ಹೋರಾಟ ಮಾಡಿದ್ದಾರೆ. ಈ ಹಿನ್ನಲೆ ಸಿಎಂ ಸಿದ್ದರಾಮಯ್ಯರ ಹೆಸರು ಕೆಡಿಸುವ ಪ್ರಯತ್ನವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ ಎಂದರು.
ರಾಜ್ಯದ ಜನರು ೫ ವರ್ಷ ಕೆಲಸ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆ. ಸಣ್ಣ ಕಾರಣಕ್ಕೆ ರಾಜೀನಾಮೆ ನೀಡಿದರೆ, ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಹಾಗಾಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದರು.