For the best experience, open
https://m.samyuktakarnataka.in
on your mobile browser.

ಹೊತ್ತಲ್ಲದ ಹೊತ್ತಿನಲ್ಲಿ?.

07:00 AM Dec 15, 2024 IST | Samyukta Karnataka
ಹೊತ್ತಲ್ಲದ ಹೊತ್ತಿನಲ್ಲಿ

ನಾವು ಅನೇಕ ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸಬೇಕೆಂದರೆ ಇದ್ದಕ್ಕಿದ್ದಂತೆ ಶುರು ಹಚ್ಚಿಕೊಂಡರೆ ಆಗುವುದಿಲ್ಲ. ಅದಕ್ಕೆ ಸಾಕಷ್ಟು ಮೊದಲೇ ಯೋಚನೆ, ಯೋಜನೆ ಮತ್ತು ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಮುಂದೆ ಬಂದು ಒದಗಬಹುದಾದ ಅನೇಕ ಆತಂಕಗಳನ್ನು ಮೊದಲೇ ಗ್ರಹಿಸಿ ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ. ಸಮಯೋಚಿತವಾಗಿ ನಿರ್ಧಾರ ಕಾರ್ಯಗಳನ್ನು ಕೈಗೊಳ್ಳಬೇಕಾಗುತ್ತದೆ. ಆಧುನಿಕ ಯುಗದಲ್ಲಿ ಇದು ಅನಿವಾರ್ಯವಾಗಿರುತ್ತದೆ. ಮರುದಿನ ಸಂತೆಯಲ್ಲಿ ಮಾರಬೇಕೆಂದು ನೇಕಾರನು ಹಿಂದಿನ ದಿನ ರಾತ್ರಿಯಿಡೀ ನೇಯ್ದರೆ ಆ ಧಾವಂತದಲ್ಲಿ ಒಂದೆರಡು ಎಳೆಗಳು ಬಿಟ್ಟುಹೋಗಬಹುದು. ಬಿಟ್ಟುಹೋದ ಎಳೆಗಳೇ ಬಟ್ಟೆ ತುಂಡಾಗಲು ಕಾರಣವಾಗಬಹುದು. ಆದ್ದರಿಂದ ನಾವು ಮಾಡುವ ಯಾವುದೇ ಕೆಲಸದಲ್ಲಿ ತರಾತುರಿಯ ತಯಾರಿ ಬೇಡ.

ಕಲ್ಪನಾ ಚಾವ್ಲಾ ನಮ್ಮೆಲ್ಲರ ಹೆಮ್ಮೆಯ ಅನಿವಾಸಿ ಭಾರತೀಯರು. ಅಮೆರಿಕದ ನಾಸಾ ಸಂಸ್ಥೆಯ ಗಗನಯಾತ್ರಿಯಾಗಿ ಅಂತರಿಕ್ಷಕ್ಕೆ ಕಳಿಸಲ್ಪಟ್ಟ ಮೊದಲ ಭಾರತ ಸಂಜಾತ ಗಗನ ಯಾತ್ರಿ ಅವರು. ಆದರೆ ೨೦೦೩ರ ಫೆಬ್ರವರಿ ೧ ರಂದು ದುರದೃಷ್ಟವಶಾತ್ ಅವರು ಪಯಣಿಸುತ್ತಿದ್ದ ಅಂತರಿಕ್ಷ ನೌಕೆ ಭೂ ವಾತಾವರಣವನ್ನು ಪ್ರವೇಶಿಸುತ್ತಿದಂತೆ ಬೆಂಕಿ ಹೊತ್ತಿಕೊಂಡು ಸುಟ್ಟಿತು. ನೌಕೆಯೊಳಗಿದ್ದ ಏಳೂ ಗಗನಯಾತ್ರಿಗಳು ಇಹಲೋಕ ಯಾತ್ರೆ ಮಾಡಬೇಕಾಯಿತು. ಇನ್ನೊಬ್ಬ ಭಾರತೀಯ ಸಂಜಾತೆ ಸುನೀತಾ ವಿಲಿಯಮ್ಸ್ ಅವರು ೫೦ ತಾಸು ೪೦ ನಿಮಿಷಗಳವರೆಗೆ ಅಂತರಿಕ್ಷದಲ್ಲಿ ನಡಿಗೆ ಮಾಡಿದ ದಾಖಲೆ ಹೊಂದಿದ್ದಾರೆ. ೨೦೨೪ರ ಅಗಸ್ಟ್ನಲ್ಲಿ ಬಂಚ್ ವಿಲ್ಮೋರ್ ಜೊತೆಗೆ ಇಂತಹ ಮತ್ತೊಂದು ಸಾಹಸದ ಗಗನಯಾನ ಕೈಗೊಂಡ ಅವರು ಭೂಮಿಗೆ ಹಿಂದಿರುಗುವುದು ತಾಂತ್ರಿಕ ಕಾರಣಗಳಿಂದ ತಡವಾಗುತ್ತಿದೆ. ನಾಸಾದ ವಿಜ್ಞಾನಿಗಳು ಇಲ್ಲಿಂದಲೇ ಅವರು ಪಯಣಿಸುತ್ತಿದ್ದ ಗಗನ ನೌಕೆಯನ್ನು ಸರಿಪಡಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಆರು ತಿಂಗಳಿಂದ ಅಂತರಿಕ್ಷದಲ್ಲಿ ಪರಿಭ್ರಮಣ ಮಾಡುತ್ತಿರುವ ಸುನೀತಾ ಸುರಕ್ಷಿತವಾಗಿ ಭುವಿಗೆ ಮರಳಿ ಬರುವಂತಾಗಲಿ ಎಂದು ಎಲ್ಲರ ಅಪೇಕ್ಷೆ. ಇದೇ ಸಮಯದಲ್ಲಿ ನಾಸಾ ಚಂದ್ರನ ಮೇಲೆ ಅಂತರಿಕ್ಷದಲ್ಲಿ ಕಾರಣಾಂತರಗಳಿಂದ ಸಿಕ್ಕಿಕೊಂಡಿರುವ ಯಾತ್ರಿಗಳನ್ನು ಸುರಕ್ಷಿತವಾಗಿ ಭುವಿಗೆ ಮರಳಿ ಬರುವಂತೆ ಮಾಡುವ ಯೋಜನೆಯನ್ನು ತಯಾರಿಸಿದವರಿಗೆ ಅಮೆರಿಕದ ೨೦ ಸಾವಿರ ಡಾಲರ್ ಹಣವನ್ನು ಬಹುಮಾನವಾಗಿ ಕೊಡುವುದಾಗಿ ಘೋಷಿಸಿದೆ. ಅಂದರೆ ಗಗನಯಾತ್ರಿಗಳ ಜೀವರಕ್ಷಕ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲು ಸೃಜನಶೀಲ ತಂತ್ರಜ್ಞರನ್ನು ವಿನಂತಿಸಿದೆ. ಗಡ್ಡಕ್ಕೆ ಬೆಂಕಿ ಹತ್ತಿದಾಗ ಭಾವಿ ತೋಡಲು ಹೋದಂತಾಯಿತು! ಇಂತಹ ಪ್ರಯತ್ನವನ್ನು ನಾಸಾ ಸುನೀತಾ ವಿಲಿಯಂಳನ್ನು ಕಳಿಸುವ ಮೊದಲೇ ಮಾಡಬೇಕಿತ್ತು. ವಿಲಿಯಂಳಿಗೆ ಇದು ಮೊದಲ ಗಗನಯಾತ್ರೆ ಅಲ್ಲವಾದರೂ ಕಲ್ಪನಾ ಚಾವ್ಲಾ ಅಪಘಾತದಿಂದ ನಾಸಾ ಪಾಠವನ್ನು ಕಲಿಯಬೇಕಿತ್ತು. ಈಗ ಸುನೀತಾ ಮತ್ತು ಅವರ ಸಹ ಗಗನ ಯಾನಿ ಭೂಮಿಗೆ ಮರಳಲಾಗದೆ, ನಭದಲ್ಲಿ ಅನಿರ್ದಿಷ್ಟಾವಧಿಯವರೆಗೆ ಪರಿಭ್ರಮಣವನ್ನು ಮಾಡಲಾಗದೇ ತ್ರಿಶಂಕು ಸ್ಥಿತಿಯಲ್ಲಿ ೬ ತಿಂಗಳಿಂದ ಸಿಲುಕಿದ್ದಾರೆ. ಅವರಿಬ್ಬರ ಪರಿಸ್ಥಿತಿ ದೇವರಿಗೆ ಪ್ರಿಯವಾದುದು! ಮತ್ಯಾರಿಗೂ ಬರಬಾರದು. ಇದರಿಂದ ಒಬ್ಬರ ಪ್ರಾಣದ ಜೊತೆಗೆ ಚೆಲ್ಲಾಟವಾಡಿದಂತಾಗಬಾರದು. ಆದಷ್ಟು ಬೇಗ ಪರಿಹಾರ ಸಿಕ್ಕು ಸುಖವಾಗಿ ಅವರಿರ್ವರೂ ಮರಳುವಂತಾಗಲಿ ಎಂದೇ ನಮ್ಮ ಪ್ರಾರ್ಥನೆ.
ಅನೇಕ ಸಲ ಎಂದೋ ಹಾಕಿದ ಅಂಚೆಪತ್ರಗಳು ಎಂದೋ ತಲುಪುವ ಉದಾಹರಣೆಗಳು ಈ ಹಿಂದೆ ಇದ್ದವು. ಹತ್ತಿಪ್ಪತ್ತು ವರುಷಗಳ ನಂತರವೂ ಪ್ರಾಮಾಣಿಕವಾಗಿ ಪತ್ರವನ್ನು ಸಂಬಂಧಪಟ್ಟವರಿಗೆ ಅಂಚೆ ಕಚೇರಿ ತಲುಪಿಸಿರುವ ಉದಾಹರಣೆಗಳಿವೆ! ಬರೆದವರು ಮತ್ತು ಅವರು ಯಾರಿಗೆ ಬರೆದಿದ್ದರೋ ಅವರಿಬ್ಬರೂ ಇನ್ನೂ ಜೀವಂತವಾಗಿದ್ದರೆ ಪತ್ರ ತಲುಪಿದ್ದು ಅವರಿಗೆ ಒಂದು ಹಬ್ಬವೇ ಆಗುತ್ತದೆ ಬಿಡಿ!
ಎಲ್ಲ ಮುಗಿದ ಮೇಲೆ ಮತ್ತೆ ಮರಳಿ ಕಾಡದಿರು ನೆನಪೇ ಎಂದು ಕವಿ ಎಷ್ಟೊಂದು ಸುಂದರವಾಗಿ ಬಣ್ಣಿಸಿದ್ದಾರೆ. ಸಿನಿಮಾ, ಧಾರಾವಾಹಿಗಳಲ್ಲಂತೂ ಏನಾದರೂ ಅನಾಹುತ, ಹೊಡೆದಾಟ, ಬಡಿದಾಟಗಳಿದ್ದರೆ ಎಲ್ಲ ಸ್ಟಂಟ್‌ಗಳು ಮುಗಿದ ಮೇಲೆಯೇ ಪೊಲೀಸರು ಪ್ರತ್ಯಕ್ಷವಾಗುತ್ತಾರೆ! ಅಲ್ಲಾದರೋ ಪೊಲೀಸರು ನಿರ್ದೇಶಕರು ಹೇಳಿದ ಮೇಲೆ ರಂಗ ಪ್ರವೇಶಿಸಬೇಕು. ನಿಜ ಜೀವನದಲ್ಲಿಯೂ ಈಗ ಹಾಗೆಯೇ ಆಗುತ್ತಿದೆ. ಹಾಳಾಗುವುದೆಲ್ಲ ಹಾಳಾದ ಮೇಲೆ ಮೆಲ್ಲನೆ ಪೊಲೀಸರು ಬರುತ್ತಾರೆ.
ಕೋರ್ಟಿನಲ್ಲಿ ಕೆಲವರು ತಮಗೆ ನ್ಯಾಯ ಸಿಗಲೆಂದು ವ್ಯಾಜ್ಯ ಹೂಡುತ್ತಾರೆ. ಹತ್ತಾರು ಮುದ್ದತ್ತುಗಳ ಹಲವಾರು ಸಾಕ್ಷಿಗಳು ವರ್ಷಾನುಗಟ್ಟಲೆ ಕೇಸ್ ವಿಚಾರಣೆ ನಡೆದು ಎಂದೋ ಒಂದು ದಿನ ತೀರ್ಪು ಹೊರಬೀಳುತ್ತದೆ. ದೂರುದಾರರಿಗೆ ನ್ಯಾಯವೇ ದೊರಕಿದ್ದರೂ ಅದೆಷ್ಟೋ ಸಲ ಅದನ್ನು ಸಂಭ್ರಮಿಸಲು ಸಂಬಂಧಪಟ್ಟವರು ಇರುವುದೇ ಇಲ್ಲ. ಅದನ್ನು ಆನಂದಿಸುವ ಒಂದು ಥ್ರಿಲ್ ಹೋಗಿ ಬಿಟ್ಟಿರುತ್ತದೆ. ಬೇಕಾದಾಗ ಸಿಗದ ನ್ಯಾಯ ಮರೆತುಹೋದ ಮೇಲೆ ಹುಡುಕಿಕೊಂಡು ಬಂದರೇನು ಪ್ರಯೋಜನ? ನಿವೃತ್ತರಾದ ಕೆಲವು ಸರಕಾರಿ ನೌಕರರಿಗೆ ನಿವೃತ್ತರಾದ ತಕ್ಷಣ ಸಿಗಬೇಕಾದ ಪಿಂಚಣಿ ಸೌಲಭ್ಯವು ಕಾರಣಾಂತರಗಳಿಂದ ತಡವಾಗಿ ಸಿಗುವ ಹೊತ್ತಿಗೆ ಅವರು ಇಹಲೋಕ ಯಾತ್ರೆ ಮುಗಿಸಿರುವ ಉದಾಹರಣೆಗಳೂ ಇವೆ.
ನೈಸರ್ಗಿಕ ವಿಕೋಪಗಳಾದ ಭೂಕಂಪ, ಅತಿವೃಷ್ಟಿ, ಅನಾವೃಷ್ಟಿ, ಸುನಾಮಿ, ಕೊರೊನಾದಂತಹ ಸಂದರ್ಭಗಳಲ್ಲಿ ಸಿಲುಕಿ ತೊಂದರೆಗೀಡಾದವರಿಗೆ ಸಕಾಲಿಕ ನೆರವು ಪರಿಹಾರ ಸಿಗದಿದ್ದರೆ ಅದು ನಿಜಕ್ಕೂ ಅಮಾನುಷವಾದುದು. ರೈತರು ಉತ್ತಿ ಬಿತ್ತಿ ಮಳೆಗಾಗಿ ಕಾದಾಗ ಮಳೆ ಬರುವುದಿಲ್ಲ. ಬರದಿಂದ ಬೆಳೆ ಒಣಗಿ ಹೋಗುತ್ತದೆ. ಇನ್ನೇನು ಮಳೆ ಬೇಡವಾದಾಗ ಬೆಳೆದು ನಿಂತ ಬೆಳೆಯು ಅತಿವೃಷ್ಟಿಯಾಗಿ ಕೊಳೆತು ಹೋಗುತ್ತದೆ. ಬೇಕಾದಾಗ ಬರದ ಮಳೆ ಬೇಡವಾದಾಗ ಬಂದು ಹಾಳುಮಾಡುತ್ತದೆ.
ನೆರೆ ರಾಷ್ಟ್ರಗಳಿಂದ ಅತಿಕ್ರಮಣಕಾರರು ದೇಶದೊಳಗೆ ನುಗ್ಗದಂತೆ ಸೂಕ್ತ ಗಡಿರಕ್ಷಣಾ ಕ್ರಮವನ್ನು ಕೈಗೊಳ್ಳುವುದು ದೇಶವನ್ನಾಳುತ್ತಿರುವವರ ಹೊಣೆ. ಆದರೆ ಅದನ್ನು ಸರಿಯಾಗಿ ಮಾಡದೇ ಅತಿಕ್ರಮಣಕಾರರು ಬಾಂಗ್ಲಾ ಪಾಕ್ ಮತ್ತು ಅಪಘಾನಿಸ್ತ್ರಾನಗಳಿಂದ ದೇಶದೊಳಗೆ ನುಸುಳಿ, ಅಸಮತೋಲನವುಂಟು ಮಾಡುತ್ತಿದ್ದಾರೆ. ಅನಪೇಕ್ಷಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರನ್ನು ಹೊರಹಾಕುವ ಕಾಲ ಮೀರಿ ಹೋಗಿದೆ. ಈಗ ಅದು ಜಾರಿಗೆ ಬಂದಿದೆಯಾದರೂ ಕಟ್ಟುನಿಟ್ಟಾಗಿ ರಾಜ್ಯ ಸರ್ಕಾರಗಳು ಅದನ್ನು ಪಾಲಿಸುತ್ತಿಲ್ಲ. ದೇಶ, ಗಡಿ ರಾಜ್ಯಗಳಲ್ಲಿ ಉಂಟಾಗುತ್ತಿರುವ ಅರಾಜಕತೆ, ಕಾನೂನು ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ. ಮೊದಲೇ ಗಡಿಗಳನ್ನು ಬಂದೋಬಸ್ತು ಮಾಡಿಕೊಳ್ಳದೇ ಈಗ ಅವರನ್ನು ದೂಷಿಸಿದರೇನು ಫಲ! ಕೈಲಾಗದವರು ಮೈ ಪರಚಿಕೊಂಡಂತೆ!
ಪ್ರತಿಕ್ರಿಯಿಸಬೇಕಾದ ಸಮಯದಲ್ಲಿ ಪ್ರತಿಕ್ರಿಯೆಸದೇ, ಕ್ರಮ ಕೈಗೊಳ್ಳಬೇಕಾದಾಗ ಸೂಕ್ತ ಕ್ರಮ ಕೈಗೊಳ್ಳದೇ ಆಮೇಲೆ ಮಾಡುವ ಪ್ರಯತ್ನಗಳು ವ್ಯರ್ಥವಾಗುತ್ತದೆ. ರೈಲು ಹೊರಟು ಹೋದ ಮೇಲೆ ಅದರ ಟಿಕೆಟ್ ತೆಗೆದುಕೊಂಡಂತೆ! ಕೆಲ ದಿನಗಳ ಹಿಂದಷ್ಟೇ ಮಲ್ಲೇಶ್ವರಂನ ರಾಜಾಶಂಕರ್ ಉದ್ಯಾನವನದ ಗೇಟ್ ಬಿದ್ದು ಬಾಲಕನೊಬ್ಬ ಸಾವನಪ್ಪಿದ್ದ. ಇದರಿಂದ ಬಿಬಿಎಂಪಿ ಪಾಠವನ್ನು ಕಲಿತಂತೆ ಕಾಣುತ್ತಿಲ್ಲ. ಇದೀಗ ಚಾಮರಾಜಪೇಟೆಯ ಉದ್ಯಾವನದ ತುಕ್ಕು ಹಿಡಿದ ಗೇಟ್ ಬಿದ್ದು ಸೆಕ್ಯುರಿಟಿ ಗಾಯಗೊಂಡಿದ್ದಾನೆ. ಸಮಯಕ್ಕೆ ಸರಿಯಾಗಿ ಮೇಂಟೆನನ್ಸ್ ಮಾಡುತ್ತಿದ್ದರೆ ಇಂತಹ ಅನಾಹುತಗಳಾಗುವುದಿಲ್ಲ. ದುರಂತ ಸಂಭವಿಸಿದ ಮೇಲೆ ಅದರ ಪೋಸ್ಟ್ ಮಾರ್ಟಂ ಮಾಡುವುದಕ್ಕಿಂತ ಅದು ಸಂಭವಿಸುವ ಮೊದಲೇ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಜಾಣತನವಾಗುತ್ತದೆ. ಆದರೆ ಆ ಸೂಕ್ಷ್ಮ ಸಂವೇದನೆ ನಮ್ಮ ಸಾರ್ವಜನಿಕ ಅಧಿಕಾರಿಗಳಿಗೆ ಇದೆಯಾ? ದುರಂತಗಳಿಗೆ ಅವರು ಕುಂಟುನೆಪಗಳನ್ನು ಹೇಳುತ್ತಾರೆ. ಆದರೆ ಅದು ತಮ್ಮ ಹೊಣೆ ಎಂದು ಅವರು ಒಪ್ಪಿಕೊಳ್ಳುವುದಿಲ್ಲ. ಈ ಬೇಜವಾಬ್ದಾರಿ ನಡವಳಿಕೆಯಿಂದ ಅದೆಷ್ಟೋ ಅಮಾಯಕ ಜನ ತೊಂದರೆಯೊಳಗಾಗುತ್ತಿದ್ದಾರೆ. ಆಮೇಲೆ ಜನಾಕ್ರೋಶಕ್ಕೆ ಹೆದರಿ ವಿಚಾರಣೆ ನಾಟಕವಾಡಿ, ಯಾರಿಗೋ ಅಮಾನತು ಮಾಡಿದಂತೆ ಇಲ್ಲವೋ ವರ್ಗಾವಣೆ ಮಾಡಿ ಅಥವಾ ದಂಡ ವಿಧಿಸಿದಂತೆ ಮಾಡಿ ಕೈ ತೊಳೆದುಕೊಳ್ಳುತ್ತಾರೆ. ಜನಪ್ರತಿನಿಧಿಗಳು ಕಿರಿಚಾಡುವಷ್ಟು ಕಿರಚಿ ಸುಮ್ಮನಾಗುತ್ತಾರೆ.
ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ! ಎನ್ನುವ ಮಾತೊಂದು ಇದೆ. ವೈರಿ ಪಡೆಯು ಕೋಟೆಯನ್ನು ಪ್ರವೇಶಿಸುವ ಮೊದಲೇ ಕೋಟೆಯ ಬಾಗಿಲವನ್ನು ಹಾಕಿ ಭದ್ರಗೊಳಿಸಬೇಕು. ಅದನ್ನು ಬಿಟ್ಟು, ವೈರಿ ಪಡೆ ದೇಶದೊಳಗೆ ನುಗ್ಗಲು ಬಿಟ್ಟು ಎಲ್ಲ ಲೂಟಿ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರೇನು ಪ್ರಯೋಜನ? ``ಯುದ್ಧ ಕಾಲೇ ಶಸ್ತ್ರಾಭ್ಯಾಸಃ'' ಎನ್ನುವ ಇನ್ನೊಂದು ಮಾತು ಇದೆ. ಅಂದರೆ ಯುದ್ಧದ ಸಮಯದಲ್ಲಿ ಶಸ್ತ್ರ ಅಭ್ಯಾಸವನ್ನು ಪ್ರಾರಂಭಿಸಿದರೆ ಗೆಲುವು ಹೇಗೆ ಸಾಧ್ಯ? ಯುದ್ಧಕ್ಕೂ ಸಾಕಷ್ಟು ಮೊದಲೇ ತಯಾರಿ ನಡೆಸುತ್ತಿರಬೇಕು. ಅದು ನಿತ್ಯದ ಅಭ್ಯಾಸವಾಗಿರಬೇಕು. ಏಕೆಂದರೆ ವೈರಿ ಹೇಳಿಕೇಳಿ ದಾಳಿ ಮಾಡಲಾರ. ನಾವದನ್ನು ಮೊದಲೇ ನಿರೀಕ್ಷಿಸಿರಬೇಕು. ಮೊದಲೇ ಸನ್ನದ್ಧವಾಗಿರಬೇಕು. ಈ ವಿಷಯದಲ್ಲಿ ನಾವು ಇಸ್ರೇಲ್ ದೇಶವನ್ನು ನೋಡಿ ಕಲಿಯುವುದು ಬೇಕಾದಷ್ಟಿದೆ. ವೈರೀ ದೇಶಗಳಿಂದಲೇ ಸುತ್ತುವರಿಯಲ್ಪಟ್ಟ ಪುಟ್ಟ ದೇಶವದು. ಸಾವಿರಾರು ವರ್ಷಗಳಿಂದ ಯುದ್ಧದ ಕರಿ ನೆರಳಲ್ಲೇ ಬದುಕಿರುವ ಸ್ಥಿತಿ ಅದರದು. ಯಾವ ಕ್ಷಣಕ್ಕೂ ಯಾವ ನೆರೆ ರಾಷ್ಟ್ರದವರೂ ದಂಡೆತ್ತಿ ಬರುವ ಆತಂಕದ ಅದರದು. ಆದರೂ ಅದು ಅದೆಲ್ಲವನ್ನೂ ಸಮರ್ಥವಾಗಿ ಎದುರಿಸಿ, ತಲೆ ಎತ್ತಿ ನಿಂತಿದೆ. ಸಾವಿರಾರು ವರ್ಷಗಳ ಸತತ ದಾಳಿಗಳ ನಂತರವೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಅದಕ್ಕಾಗಿ ಆ ದೇಶದ ಪ್ರತಿ ಕುಟುಂಬದ ಪ್ರತಿಯೊಬ್ಬ ಪ್ರಜೆಗೂ ಸೈನ್ಯದಲ್ಲಿ ಸೇವೆಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಮಹಿಳಾಮಣಿಗಳ ಒಂದು ದೊಡ್ಡ ಸೈನ್ಯದ ವಿಭಾಗವೇ ಅಲ್ಲಿದೆ. ಹುಟ್ಟುವ ಪ್ರತಿಯೊಂದು ಮಗುವಿನ ಕೈಯಲ್ಲಿ ಆಟಿಕೆಯ ಜೊತೆಗೆ ಬಂದೂಕು ಇರುತ್ತದೆ. ಇದು ಆದರ್ಶವಾದ ಸ್ಥಿತಿ ಅಲ್ಲವಾದರೂ ಅಸ್ತಿತ್ವಕ್ಕಾಗಿ ಅನಿವಾರ್ಯವಾಗಿದೆ.

Tags :