For the best experience, open
https://m.samyuktakarnataka.in
on your mobile browser.

ಹೋಮ್ ನರ್ಸ್‌ನಿಂದ ಲಕ್ಷಾಂತರ ವಂಚನೆ : ಮುಂಬೈಯಲ್ಲಿ ಆರೋಪಿಗಳ ಬಂಧನ

07:32 PM Dec 16, 2024 IST | Samyukta Karnataka
ಹೋಮ್ ನರ್ಸ್‌ನಿಂದ ಲಕ್ಷಾಂತರ ವಂಚನೆ   ಮುಂಬೈಯಲ್ಲಿ ಆರೋಪಿಗಳ ಬಂಧನ

ಕಾರ್ಕಳ: ಹೋಮ್ ನರ್ಸ್ ಕೆಲಸಕ್ಕೆಂದು ಬಂದ ಯುವಕನೊಬ್ಬ ಇನ್ನೋರ್ವನ ಜತೆ ಸೇರಿಕೊಂಡು ಲಕ್ಷಾಂತರ ರೂ. ವಂಚಿಸಿದ ಘಟನೆ ಕಾರ್ಕಳದಲ್ಲಿ ನಡೆದಿದ್ದು, ಇದೀಗ ಆರೋಪಿಗಳನ್ನು ಪೊಲೀಸರು ಮುಂಬೈಯಲ್ಲಿ ಬಂಧಿಸಿದ್ದಾರೆ.
ಕಾರ್ಕಳ ಪುರಸಭೆ ವ್ಯಾಪ್ತಿಯ ನಿವಾಸಿ ಶಶಿಧರ(೭೫) ಎಂಬವರು ವಂಚನೆಗೊಳಗಾಗಿದ್ದಾರೆ. ತೆಳ್ಳಾರ್ ನಿವಾಸಿ ರತ್ನಾಕರ ಸುವರ್ಣ ಯಾನೆ ಭೂಮಿಕಾ ರತ್ನಾಕರ(೫೦) ಹಾಗೂ ಕುಕ್ಕುಂದೂರು ಕುಪ್ಪಬೆಟ್ಟು ನಿವಾಸಿ ಕಾರ್ತಿಕ್ ಶೆಟ್ಟಿ(೨೮) ಬಂಧಿತ ಆರೋಪಿಗಳು.

ಆಗಿದ್ದೇನು?: ಸುಮಾರು ೭೫ರ ಹರೆಯದ ವಯೊವೃದ್ದ ಶಶಿಧರ್ ಅವರು ಆರ್ಥಿಕ ವ್ಯವಸ್ಥೆಯಲ್ಲೂ ತಕ್ಕಮಟ್ಟಿಗೆ ಸುದೃಢರಾಗಿದ್ದರು. ಆದರೆ ಅವರ ಅಸಹಾಯಕತೆಯನ್ನು ದಾಳವಾಗಿ ಮಾಡಿಕೊಂಡ ಆರೋಪಿಗಳು, ಅವರ ಖಾತೆಯಲ್ಲಿರುವ ಹಣವನ್ನು ಎಗರಿಸುವಲ್ಲಿ ಸಂಚು ರೂಪಿಸಿದ್ದರು. ಅದಕ್ಕಾಗಿ ರತ್ನಾಕರ ಸುವರ್ಣ ಅಲೈಟ್‌ಕೇರ್ ಸಂಸ್ಥೆಯಿಂದ ಕಾರ್ತಿಕ್ ಶೆಟ್ಟಿ ಎಂಬಾತನನ್ನು ಹೋಂ ನರ್ಸ್ ಕೆಲಸಕ್ಕಾಗಿ ಅವರ ಮನೆಗೆ ಕಳುಹಿಕೊಟ್ಟಿದ್ದ.

ಹಂತ ಹಂತವಾಗಿ ಹಣ ವರ್ಗಾವಣೆ: ಕಳೆದ ನ.೯ರಂದು ಆರೋಪಿ ರತ್ನಾಕರ ಸುವರ್ಣ ತಾನು ಕಳುಹಿಸಿಕೊಟ್ಟ ಹೋಂ-ನರ್ಸ್ ಕಾರ್ತಿಕ್ ಶೆಟ್ಟಿ ಖಾತೆಗೆ ಗೂಗಲ್ ಪೇ ಮೂಲಕ ೧೦ ಸಾವಿರ ರೂ. ಪಾವತಿಸುವಂತೆ ಮನೆ ಮಾಲಿಕ ಶಶಿಧರ ಎಂಬವರನ್ನು ಒತ್ತಾಯಿಸಿದ್ದ. ಶಶಿಧರ್ ಅವರು ನಗದು ನೀಡುತ್ತೇನೆ ಎಂದರೂ ಕೇಳದೆ, ಆನ್‌ಲೈನ್ ಮೂಲಕ ಪಾವತಿಸುವಂತೆ ವಿನಂತಿಸಿಕೊಂಡಿದ್ದ. ಆದರೆ ಮನೆ ಮಾಲಿಕರಿಗೆ ಇವರಿಬ್ಬರು ಸೇರಿಕೊಂಡು ನಡೆಸುತ್ತಿರುವ ವಂಚನೆ ಬಗ್ಗೆ ತಿಳಿಯಲೇ ಇಲ್ಲ. ಮುಗ್ದರಾಗಿದ್ದ ಅವರು ರತ್ನಾಕರ ಸುವರ್ಣ ಅವರ ವಿನಯತೆಯ ಮಾತುಗಳನ್ನೇ ನಂಬಿ ಗೂಗಲ್ ಪೇ ಮೂಲಕ ಹಣ ಪಾವತಿಸಿದ್ದರು. ದುರಾದೃಷ್ಟ ಏನೆಂದರೆ, ಮೊಬೈಲ್‌ನಲ್ಲಿ ಗೂಗಲ್ ಪೇ ಮಾಡುತ್ತಿರುವ ಸಂದರ್ಭ ಫಿನ್ ನಂಬರನ್ನು ಹೋಂ-ನರ್ಸ್ ಕಾರ್ತಿಕ್ ಶೆಟ್ಟಿ ನೋಡಿ ತಿಳಿದುಕೊಂಡಿದ್ದ. ಅಲ್ಲಿಗೆ ಆತನ ಆಟ ಶುರುವಾಯಿತು. ಕಳೆದ ನ.೧೦ರಿಂದ ನಿರಂತರವಾಗಿ ಡಿ.೮ರವರೆಗೆ ಮನೆಯ ಮಾಲಿಕನ ಕಾರ್ಕಳದ ಯೂನಿಯನ್ ಬ್ಯಾಂಕ್ ಶಾಖೆಯ ಖಾತೆಯಿಂದ ಗೂಗಲ್ ಪೇ ಮೂಲಕ ಬರೋಬ್ಬರಿ ೯.೮೦ ಲಕ್ಷ ರೂ.ವನ್ನು ಎಗರಿಸಿಕೊಂಡು, ತನ್ನ ಭಾರತ್ ಬ್ಯಾಂಕ್ ಕೋ ಅಪರೇಟಿವ್ ಸೊಸೈಟಿ ಖಾತೆಗೆ ಕಾರ್ತಿಕ್ ಶೆಟ್ಟಿ ವರ್ಗಾವಣೆ ಮಾಡಿಕೊಂಡಿದ್ದಾನೆ. ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿರುವ ಸತ್ಯವನ್ನು ತಿಳಿದುಕೊಂಡ ಶಶಿಧರ್ ಅವರು ನ್ಯಾಯಕ್ಕಾಗಿ ಕಾರ್ಕಳ ನಗರ ಠಾಣೆ ಮೆಟ್ಟಿಲೇರಿದ ಪರಿಣಾಮ, ಸತ್ಯಾಂಶ ಬಯಲಾಗಿದೆ. ಆರೋಪಿಗಳಿಬ್ಬರು ಇದೀಗ ಪೊಲೀಸರು ಅತಿಥಿಯಾಗಿದ್ದಾರೆ.

ಹೆಚ್ಚಿದ ಕುತೂಹಲ…!: ಪ್ರಕರಣದ ರಹಸ್ಯ ಬಯಲಾಗುತ್ತಿದ್ದಂತೆ ಆರೋಪಿಗಳನ್ನು ಬಂಧಿಸಿದ್ದಾರೆಯೇ? ಎನ್ನುವ ಕುತೂಹಲ ಅನೇಕ ಜನರಲ್ಲಿತ್ತು. ಹಲವಾರು ಪ್ರಕರಣಗಳಲ್ಲಿ ಪರೋಕ್ಷ ಭಾಗಿಯಾಗಿ, ಕ್ರಿಮಿನಲ್ ದಂಧೆಯನ್ನೇ ವೃತ್ತಿಯಾಗಿಸಿಕೊಂಡ ಇವರಿಬ್ಬರ ಬಗ್ಗೆ ಸಮರ್ಪಕ ವಿಚಾರಣೆ ನಡೆಸಿ, ಸೂಕ್ತ ನ್ಯಾಯ ಒದಗಿಸಿ ಜನತೆಯನ್ನು ಭಯಮುಕ್ತಗೊಳಿಸಬೇಕು ಎನ್ನುವ ಆಗ್ರಹ ಕೂಡಾ ಕೇಳಿ ಬಂದಿತ್ತು. ಈಗ ಕಾರ್ಕಳ ನಗರ ಪೊಲೀಸರ ಕಾರ್ಯವೈಖರಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.