೨೮ ರಂದು ಜಿಲ್ಲೆಯಾದ್ಯಂತ ರಸ್ತೆ ತಡೆ
ಮಂಗಳೂರು: ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರ ವಿರುದ್ಧ ದೂರು ನೀಡಿದರೂ ಪೊಲೀಸರು ಇನ್ನೂ ಪ್ರಕರಣ ದಾಖಲಿಸದಿರುವುದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಯುವಮೋರ್ಚ ವತಿಯಿಂದ ಆಗಸ್ಟ್ ೨೮ ರಂದು ಜಿಲ್ಲೆಯಾದ್ಯಂತ ರಸ್ತೆ ತಡೆ ಮಾಡುವ ಮೂಲಕ ಹೋರಾಟಕ್ಕೆ ಚಾಲನೆ ನೀಡುತ್ತೇವೆ ಎಂದು ಬಿಜೆಪಿ ಯುವಮೋರ್ಚ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಪೊಲೀಸರ ನಿರ್ಲಕ್ಷ್ಯದಿಂದಾಗಿ ರಾಷ್ಟ್ರವಿರೋಧಿಗಳಿಗೆ ಕುಮ್ಮಕ್ಕು ಸಿಗುವಂತಾಗಿದೆ. ಐವನ್ ಅವರ ವಿರುದ್ಧ ಪ್ರಕರಣ ದಾಖಲು ಮಾಡುವವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ. ಸದ್ಯ ಕೃಷ್ಣ ಜನ್ಮಾಷ್ಟಮಿ ಹಬ್ಬ ಬರಲಿದ್ದು, ಜನರಿಗೆ ತೊಂದರೆ ಆಗಬಾರದು ಎಂದು ರಸ್ತೆ ತಡೆ ಪ್ರತಿಭಟನೆಯನ್ನುನಾಲ್ಕು ದಿನ ಮುಂದೂಡಿದ್ದೆವು. ರಾಷ್ಟ್ರವಿರೋಧಿ ಹೇಳಿಕೆ ನೀಡಿದ ಐವನ್ ಅವರು ಕ್ಷಮೆ ಕೇಳುವ ಬದಲು ತನ್ನ ಹೇಳಿಕೆಯನ್ನೇ ಸಮರ್ಥಿಸಿದ್ದಾರೆ. ಕಾನೂನು ತಜ್ಞರ ಸಲಹೆ ಪಡೆದು ಪ್ರಕರಣ ದಾಖಲು ಮಾಡುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದರು. ಬಿಜೆಪಿ ಶಾಸಕರ ಮೇಲೆ ಕೆಲವೇ ಗಂಟೆಗಳಲ್ಲಿಕೇಸ್ ದಾಖಲಾಗಿತ್ತು. ಕಾನೂನು ರಕ್ಷಿಸುತ್ತೇವೆ ಎಂದು ಪೊಲೀಸರು ಪ್ರಮಾಣವಚನ ಸ್ವೀಕರಿಸುತ್ತಾರೆ. ಆದರೆ ಐವನ್ ವಿಚಾರದಲ್ಲಿ ಕಾನೂನು ಬದ್ಧವಾಗಿ ನಡೆದುಕೊಳ್ಳಬೇಕಿದ ಎಂದು ತಿಳಿಸಿದರು.
ಐವನ್ ಡಿಸೋಜ ಅವರು ರಾಷ್ಟ್ರವಿರೋಧಿ ಹೇಳಿಕೆ ನೀಡಿದ್ದು, ಅವರ ವಿರುದ್ಧ ಕಾನೂನು ಹೋರಾಟದ ಬಗ್ಗೆಯೂ ನಾವು ಚಿಂತನೆ ಮಾಡುತ್ತಿದ್ದೇವೆ. ತನ್ನ ಬೆಂಬಲಿಗರಿಂದಲೇ ಐವನ್ ಅವರು ತಮ್ಮ ಮನೆಗೆ ಕಲ್ಲು ಎಸೆಯಲು ಹೇಳಿ ಆ ಆರೋಪವನ್ನುಬಿಜೆಪಿಯತ್ತ ಮಾಡುತ್ತಿದ್ದಾರೆ. ಬಿಜೆಪಿಯದ್ದು ಕಲ್ಲನ್ನು ಪೂಜೆ ಮಾಡುವ ಸಂಸ್ಕೃತಿಯೇ ಹೊರತು ಕಲ್ಲು ಎಸೆಯುವ ಸಂಸ್ಕೃತಿಯಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿಮುಖಂಡರಾದ ಉಮೇಶ್ ಕುಲಾಲ್, ಅರುಣ್ ಶೇಟ್, ಅಶ್ವಿತ್ ಕೊಟ್ಟಾರಿ, ರಕ್ಷಿತ್ ಪೂಜಾರಿ, ನಿತೇಶ್ ಕಲ್ಲೇಗ, ಶಶಿರಾಜ್ ಬೆಳ್ತಂಗಡಿ, ಮುರಳಿ, ಭರತ್ ರಾಜ್ ಕೃಷ್ಣಾಪುರ ಇದ್ದರು.