For the best experience, open
https://m.samyuktakarnataka.in
on your mobile browser.

೪ ವರ್ಷದಲ್ಲಿ ೨೮೬ ಆನೆಗಳ ಸಾವು

04:26 AM Aug 11, 2024 IST | Samyukta Karnataka
೪ ವರ್ಷದಲ್ಲಿ ೨೮೬ ಆನೆಗಳ ಸಾವು

ಮಲ್ಲಿಕಾರ್ಜುನ ಚಿಲ್ಕರಾಗಿ
ಬಳ್ಳಾರಿ:
ಕಳೆದ ನಾಲ್ಕು ವರ್ಷಗಳಲ್ಲಿ ಬರೋಬ್ಬರಿ ೨೮೬ ಆನೆಗಳು ಸಾವಿಗೀಡಾಗಿವೆ. ಸಹಜ ಸಾವಿನ ಜೊತೆ ಅಸಹಜ ಮರಣಗಳ ಸಂಖ್ಯೆ ಕೂಡ ಏರುಗತಿಯಲ್ಲಿರುವುದು ರಾಜ್ಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಆನೆ ಭಾರತದ ರಾಷ್ಟ್ರೀಯ ಪರಂಪರೆಯ ಪ್ರಾಣಿ ಎಂದು ಗುರುತಿಸಲ್ಪಟ್ಟಿದೆ. ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ಆನೆಗಳ ಸಂತತಿಯೂ ಹೆಚ್ಚಿದ್ದು ಇವುಗಳ ರಕ್ಷಣೆಗೆ ಕಾಯಿದೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಆದರೂ ನೈಸರ್ಗಿಕ ಆವಾಸಸ್ಥಾನಗಳು ಮತ್ತು ಮಾನವ ಅಭಿವೃದ್ಧಿ ಚಟುವಟಿಕೆಗಳ ವಿಘಟನೆಯಿಂದ ಏಷ್ಯಾದ ಆನೆಗಳು ಹೆಚ್ಚಿನ ಅಪಾಯಗಳನ್ನು ಎದುರಿಸುತ್ತಿವೆ ಎನ್ನುವ ವರದಿಗಳು ಇವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಕಳೆದ ನಾಲ್ಕು ವರ್ಷದಲ್ಲಿ ಉಂಟಾಗಿರುವ ಆನೆಗಳ ಮರಣ ಪ್ರಮಾಣ ಕಳವಳಕ್ಕೆ ಕಾರಣವಾಗಿದೆ.
ಹೀಗಿದೆ ಮರಣ ವಿವರ
ಕಳೆದ ೨೦೨೧ರಿಂದ ೨೦೨೪ರ ಆಗಸ್ಟ್‌ವರೆಗೆ ಒಟ್ಟು ೨೮೬ ಆನೆಗಳು ಮೃತಪಟ್ಟಿವೆ. ೨೦೨೧ ರಲ್ಲಿ ೮೨, ೨೦೨೨ ರಲ್ಲಿ ೭೨, ೨೦೨೩ ರಲ್ಲಿ ೯೭ ಹಾಗೂ ೨೦೨೪ರ ಆಗಸ್ಟ್ವರೆಗೆ ೩೫ ಆನೆಗಳು ಸಾವಿಗೀಡಾಗಿವೆ. ೨೦೨೫ರಲ್ಲಿ ಉಂಟಾದ ಆನೆಗಳ ಮರಣ ವಿವರವನ್ನು ರಾಜ್ಯ ಅರಣ್ಯ ಇಲಾಖೆ ಬಹಿರಂಗಪಡಿಸಿಲ್ಲ. ನಾಲ್ಕು ವರ್ಷದಲ್ಲಿ ವಿದ್ಯುತ್ ಸ್ಪರ್ಶದಿಂದಲೇ ಬರೋಬ್ಬರಿ ೪೧ ಆನೆಗಳು ಮೃತಪಟ್ಟಿದ್ದರೆ, ೫ ಆನೆಗಳು ಗುಂಡೇಟಿಗೆ ಬಲಿಯಾಗಿವೆ. ಇನ್ನು ೩ ಆನೆಗಳು ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದು ವರದಿಯಾಗಿವೆ. ಒಂದು ಆನೆ ಉರುಳು ಬಿಗಿದುಕೊಳ್ಳುವ ಮೂಲಕ ಸತ್ತಿದೆ. ಉಳಿದ ೨೩೬ ಆನೆಗಳು ಸಹಜ ಸಾವಿಗೆ ಬಲಿಯಾಗಿವೆ.

ಯಾಕಿಷ್ಟು ಸಾವು?
ಕರ್ನಾಟಕದ ಅರಣ್ಯ ಪ್ರದೇಶದಲ್ಲಿ ವನ್ಯಜೀವಿ ಗಳು ಸಮೃದ್ಧವಾಗಿದ್ದು, ಭಾರತದ ಶೇ. ೨೫ರಷ್ಟು ಆನೆ ಸಂತತಿಯೂ ರಾಜ್ಯದಲ್ಲಿ ಆಗುತ್ತಿದೆ. ಐದು ರಾಷ್ಟ್ರೀಯ ಉದ್ಯಾನವನ, ೩೦ ವನ್ಯಜೀವಿ ಅಭಯಾರಣ್ಯಗಳು, ಹದಿನಾರು ಸಂರಕ್ಷಿತ/ಸಮುದಾಯ ಮೀಸಲು ಪ್ರದೇಶವಿದೆ. ಇಲ್ಲಿನ ಪ್ರದೇಶಗಳಲ್ಲೇ ಆನೆಗಳಿಗೆ ಈ ಸಾವು-ನೋವು ಸಂಭವಿಸಿದೆ. ಇತ್ತೀಚಿನ ದಿನಗಳಲ್ಲಿ ಈ ಸಾವಿನ ಪ್ರಮಾಣ ಏರುಗತಿಯಲ್ಲಿರುವುದು ಯಾಕೆ ಎನ್ನುವ ಜಿಜ್ಞಾಸೆ ಕಾಡುತ್ತಿದೆ. ಆನೆಗಳ ಸಾವಿನ ಬಗ್ಗೆ ಹಲವು ಬಾರಿ ವಿಧಾನಸಭೆ ಸೇರಿ ಹಲವು ಕಡೆಗಳಲ್ಲಿ ಚರ್ಚೆಯೂ ನಡೆಯುತ್ತಲೆ ಇವೆ. ಆನೆ ಕಾರಿಡಾರ್ ಯೋಜನೆಯಂತಹ ಅಂಶಗಳನ್ನು ಪ್ರಸ್ತಾಪಿಸಲಾಗುತ್ತದೆ ಆದರೂ ಆನೆಗಳ ಸಾವು ನಿಲ್ಲದಾಗಿವೆ.

ಸಮ್ಮೇಳನದಲ್ಲಿ ಪರಿಹಾರ ಸಿಗಲಿ
ಆ. ೧೨ರಿಂದ ಬೆಂಗಳೂರಿನಲ್ಲಿ ಆನೆ-ಮಾನವ ಸಂಘರ್ಷದ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜನೆ ಮಾಡಲಾಗಿದೆ. ಏಷ್ಯನ್ ಆನೆ ಮತ್ತು ಅದರ ನಿರ್ವಹಣೆಯ ಬಗ್ಗೆ ಸಂಶೋಧನೆ ಮತ್ತು ಡೇಟಾ ಆಧರಿಸಿ, ಸಂಬಂಧಿತ ಮಧ್ಯಸ್ಥಗಾರರೊಂದಿಗೆ ಸಂವಾದ ನಡೆಸಲು ರಾಜ್ಯ ಸರ್ಕಾರ ಚಿಂತಿಸಿದೆ. ದೇಶ ಮತ್ತು ವಿದೇಶದಲ್ಲಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಶೈಕ್ಷಣಿಕ ಸಂಶೋಧಕರು ಮತ್ತು ನಾಗರಿಕ ಸಮಾಜ ಸಂಸ್ಥೆಗಳು ಇದರಲ್ಲಿ ಭಾಗಿಯಾಗಲಿದ್ದು, ಆನೆಗಳ ಸಾವು-ನೋವು ತಡೆಯುವ ನಿಟ್ಟಿನಲ್ಲಿ ನಿರ್ಣಾಯಕ ಚರ್ಚೆಗಳು ನಡೆಯಬೇಕು, ಸಾವು ತಡೆಯುವ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬೇಕು ಎನ್ನುತ್ತಾರೆ ವನ್ಯಜೀವಿ ಪ್ರೇಮಿಗಳು.

Tags :