ಅನೈತಿಕ ಸಂಬಂಧದ ಮಕ್ಕಳಿಗೂ ಕಾನೂನು ರಕ್ಷಣೆ
ಕೇಳುತ್ತ ಹೋದಂತೆ ಕುತೂಹಲ ಹೆಚ್ಚಿತು. ಮಾತು ನಿಂತಾಗ ಮುಂದೆ ಏನಾಯಿತು? ಪ್ರಶ್ನಿಸಿ ಮಾತಿಗೆ ಹಚ್ಚಿದೆ. ತಾಸುಗಟ್ಟಲೆ ಕೇಳಿದರೂ, ಮುಗಿಯದ ಜೀವನಕಥಾ ನಕ, ಅಷ್ಟು ರಸವತ್ತಾಗಿ ದ್ರಾಕ್ಷಾಯಣಿ ಬಿಡಿಸಿ ಇಟ್ಟಳು. (ವ್ಯಕ್ತಿಗಳ ಹೆಸರು ಬದಲಿಸಿದೆ) ಅವಳ ಮಾತನ್ನು ಕೇಳಿ.
"ವಕೀಲ ಸಾಹೇಬ್ರೆ, ನನ್ನ ತಂದೆ ಪರಶುರಾಮನಿಗೆ ನಾನು, ನನ್ನ ಅಕ್ಕ ವಸುಂದರಾ ಇಬ್ಬರು ಹೆಣ್ಣುಮಕ್ಕಳು. ಗಂಡು ಸಂತಾನ ಇಲ್ಲ. ನಾವಿಬ್ಬರು ತಡವಾಗಿ ಜನಿಸಿದೆವು. ನಮ್ಮ ತಂದೆ ಸರಕಾರಿ ಸಣ್ಣ ಹುದ್ದೆಯಲ್ಲಿ ಸೇವೆ ಸಲ್ಲಿಸಿ ರಿಟೈರ್ ಆಗಿದ್ದಾರೆ. ಹಳ್ಳಿಯಲ್ಲಿ ಜಮೀನು ಇದೆ, ಈಗ ಉಳುಮೆ ಮಾಡುತ್ತಾರೆ. ತಾಯಿ ರುಕ್ಮಿಣಿ ಗೃಹಿಣಿ. ತಂದೆ ತಾಯಿಯ ನಡುವೆ ಒಂದೇ ವರ್ಷದ ಅಂತರ. ನನ್ನ ಮತ್ತು ಅಕ್ಕನ ನಡುವೆ ಒಂದೇ ವರ್ಷದ ಅಂತರ. ಅಕ್ಕ ನಾನು ಗೆಳತಿಯರ ಹಾಗೆ ಇದ್ದೆವು. ವಿದ್ಯೆ ತಲೆಗೆ ಹತ್ತಲಿಲ್ಲ. ಉಡಾಳ ಗಂಡು ಹುಡುಗರಂತೆ ಬಿಂದಾಸ ಬೆಳೆದೆವು. ನಮ್ಮನ್ನು ಗಂಡುಬೀರಿಗಳು ಅಂತ ಊರಲ್ಲಿ ಕರೆಯುತ್ತಿದ್ದರು. ನಮ್ಮ ಅನ್ಯೋನ್ಯತೆ ನೋಡಿ ನೀವು ಇಬ್ಬರು ಒಬ್ಬನನ್ನೇ ಲಗ್ನವಾಗಿ ಅಂತ ಗೆಳತಿಯರು ಚುಡಾಯಿಸುತ್ತಿದ್ದರು. ವರಾನ್ವೇಷಣೆ ಮೊದಲಿಗೆ ಅಕ್ಕನಿಗೆ ಪ್ರಾರಂಭವಾಯಿತು. ಅಕ್ಕ ಕಳೆದುಹೋಗುತ್ತಾಳೆ ಎಂದು ನನಗೆ, ತಂಗಿ ಕಳೆದುಕೊಳ್ಳುತ್ತೇನೆ ಎಂದು ಅವಳಿಗೆ ದುಗುಡ ಪ್ರಾರಂಭವಾಯಿತು. ಮೂರು ನಾಲ್ಕು ವರಗಳು ನೋಡಲು ಬಂದರು. ನಾನೇ ನಿರಾಕರಿಸಿದೆ. ತಂದೆ ತಾಯಿ ಸಿಟ್ಟಿಗೆ ಬಂದರು. ಮದುವೆ ಮಾಡುತ್ತಿರುವದು ಅಕ್ಕನಿಗೆ, ನೀನೇಕೆ ಮೂಗು ತೂರಿಸುತ್ತಿ ಎಂದು ಆಕ್ಷೇಪಿಸಿದರು. ಒಂದು ದಿನ ವೇದಮೂರ್ತಿ ಹೆಸರಿನ ಸುಂದರಾಂಗ ರಾಜಕುಮಾರನೊಬ್ಬ ತನ್ನ ಪರಿವಾರದ ಜೊತೆ ಬಂದನು. ಕಿಟಕಿಯಿಂದ ನೋಡಿದೆ. ನನಗೆ ಹಿಡಿಸಿದ. ಅಕ್ಕನ ಮೇಲೆ ಮೊದಲ ಸಲ ಮತ್ಸರ ಉಂಟಾಯಿತು. ಅಕ್ಕನನ್ನು ನೋಡಲು ವರ ಬಂದಾಗ, ನನ್ನನ್ನು ಹೊರಗೆ ಬಿಡುತ್ತಿರಲಿಲ್ಲ. ಅವಳಿಗಿಂತ ಸುಂದರವಾಗಿದ್ದೆ. ಮೊದಲ ಸಲ ಗೆರೆ ದಾಟಿ ಬಂದವರಿಗೆ ನೀರು ಕೊಡಲು ನಾನೇ ಮನೆಯ ಪಡಸಾಲೆಗೆ ಹೋದೆ. ಅಕ್ಕನಿಗಿಂತ ಆಕರ್ಷಕವಾಗಿ ಶೃಂಗರಿಸಿಕೊಂಡಿದ್ದೆ. ಅವನು ನನ್ನನ್ನು ನೋಡಿದ, ನಾನು ಅವನನ್ನು. ಏನೋ ಆಕರ್ಷಣೆ. ನನ್ನ ನಡವಳಿಕೆ ತಾಯಿಗೆ ಹಿಡಿಸಲಿಲ್ಲ. ಅಡುಗೆ ಮನೆಯಿಂದ ಸಿಟಿ ಪಿಟಿ ಧ್ವನಿಯಿಂದ ಒಳಗೆ ಕರೆದಳು. ಅಕ್ಕನನ್ನು ಶಾಸ್ತ್ರಬದ್ಧವಾಗಿ ಪರೀಕ್ಷೆ ಮಾಡಿದರು. ಅವರೆಲ್ಲ ತೆರಳುವಾಗ, ವರನ ಕಣ್ಣು, ನನ್ನನ್ನೆ ಹುಡುಕುತ್ತಿವೆ ಅನಿಸಿತು. ವರನಿಗೆ ಕನ್ಯೆ ಮನಸಿಗೆ ಬಂದಿದೆ ಎಂದು ತಿಳಿಸಿದರು. ವರನಿಗೆ ತಂದೆ ತಾಯಿ, ಅಕ್ಕ, ತಮ್ಮ ಯಾರೂ ಇಲ್ಲ, ಶ್ರೀಮಂತಿಕೆ ಮಾತ್ರ ಇದೆ. ಅಕ್ಕನಿಗಿಂತ ನನಗೆ ಹರುಷವಾಯಿತು. ಅಕ್ಕನ ಮದುವೆ ಆಯಿತು. ಅಕ್ಕನ ಮೇಲಿನ ಪ್ರೀತಿಗೋ, ವೇದಮೂರ್ತಿಯ ಮೇಲಿನ ಆಕರ್ಷಣೆಯೋ ಮೇಲಿಂದ ಮೇಲೆ ಅಕ್ಕನ ಜೊತೆಗೆ ಹೋಗಿ ಇರುತ್ತಿದ್ದೆ. ಅವನು ಅದನ್ನೇ ಬಯಸುತ್ತಿದ್ದ. ಅಕ್ಕಳಿಗೆ ಎರಡು ಮಕ್ಕಳಾದವು. ಬಾಣಂತನಕ್ಕೆ ಅಕ್ಕ ತವರುಮನೆಗೆ ಹೋದರೂ ನಾನು ಅವಳ ಗಂಡನ ಮನೆಯಲ್ಲಿ ಉಳಿಯುತ್ತಿದ್ದೆ. ಅಲ್ಲಿ ನಾವಿಬ್ಬರೆ. ನಾನು ಇನ್ನೂ ಅವನ ಹತ್ತಿರವಾದೆ. ಮನಸ್ಸಿಗೆ ಬಂದಿದ್ದು ನೀನು, ಲಗ್ನವಾಗಿದ್ದು ಅವಳನ್ನು ಎಂದು ಉಸಿರಿದ. ಅಕ್ಕ ಎರಡನೇ ಮಗುವಿನೊಂದಿಗೆ ಗಂಡನ ಮನೆಗೆ ಬಂದಾಗ, ನಾನು ಗರ್ಭವತಿ ಆಗಿದ್ದೆ. ಅಕ್ಕ ಅತ್ತಳು, ಬಿಕ್ಕಿದಳು, ಇಬ್ಬರ ಮೇಲೆ ಹರಿಹಾಯ್ದು ಏರಿಬಂದಳು. ತಂದೆ, ತಾಯಿ ಹಿರಿಯರನ್ನು ಕೂಡಿಸಿದಳು. ಎಲ್ಲವೂ ಮುಗಿದು ಹೋಗಿತ್ತು. ಮತ್ತೊಮ್ಮೆ ಗರ್ಭವತಿಯಾದೆ. ಕಾಲ ಉರುಳಿದಂತೆ ಅಕ್ಕ ನನ್ನನ್ನು ಒಪ್ಪಿಕೊಂಡಳು. ಇಬ್ಬರು ಒಬ್ಬನನ್ನೇ ಲಗ್ನವಾಗುವ ಕನಸು ಕಂಡಂತೆ ನಿಜವಾಯಿತು. ಅಕ್ಕ ಗಂಡನ ಹೆಂಡತಿ ಎನ್ನುವ ಪಟ್ಟದಲ್ಲಿ ಇದ್ದಳು. ಆದರೆ ಮದುವೆ ಆಗದೆ ಅಕ್ಕನ ಗಂಡನ ಇಟ್ಟುಕೊಂಡವಳು/ಉಪಪತ್ನಿಯಾಗಿದ್ದೆ. ನಾವಿಬ್ಬರೂ ಒಪ್ಪಿಕೊಂಡರೂ, ಸಮಾಜದಲ್ಲಿ ಬಂಧು ಬಾಂಧವರಲ್ಲಿ ಅವಳಿಗೆ ಮಾತ್ರ ಸ್ಥಾನಮಾನ. ನನ್ನ ಸ್ಥಾನ ಅತಂತ್ರ ಆಗಿತ್ತು. ದಿನ ಉರುಳಿದವು. ಮಕ್ಕಳು ದೊಡ್ಡವರಾದರು. ನನ್ನ ಮಕ್ಕಳಿಗೆ ಇಟ್ಟುಕೊಂಡವಳ ಮಕ್ಕಳೆಂಬ ಬಿರುದು. ಗಂಡ ಊರಿಗೆ ಹೋದವನು ಮರಳಿ ಬರಲಿಲ್ಲ, ರಸ್ತೆ ಅಪಘಾತದಲ್ಲಿ ಮರಣ ಹೊಂದಿ, ಹೆಣವಾಗಿ ಮರಳಿದ. ಇಬ್ಬರೂ ವಿಧವೆ ಆದೆವು. ಅಪಘಾತ ಪರಿಹಾರ ಧನ ಸಮನಾಗಿ ಹಂಚಿಕೊಂಡೆವು. ದೊಡ್ಡವರಾದ ಮಕ್ಕಳಲ್ಲಿ ಮನಸ್ತಾಪ ಬಂತು. ನನ್ನನ್ನು ಮಕ್ಕಳನ್ನು ಮನೆಯಿಂದ ಹೊರಗೆ ಹಾಕಲು ಪ್ರಯತ್ನಿಸಿದರು. ಆಸ್ತಿಯಲ್ಲಿ ಪಾಲು ಕೇಳಿದೆ. ಅಕ್ಕ ಅವಳ ಮಕ್ಕಳು, ನೀನು ಇಟ್ಟುಕೊಂಡವಳು, ನಿನ್ನ ಮಕ್ಕಳು ಅಕ್ರಮ ಸಂತಾನಗಳು ಎಂದು ಹಿಯಾಳಿಸಿದರು. ಸರ್ ನಮಗೆ ಆಸ್ತಿಯಲ್ಲಿ ಪಾಲು ಕೊಡಿಸಿ" ಎಂದು ಜೀವನ ಪುಸ್ತಕ ತೆರೆದಿಟ್ಟಳು.
ಇಲ್ಲಿ ಗಮನಿಸಬೇಕಿದ್ದು, ನನ್ನ ಕಕ್ಷಿದಾರಳು ಮದುವೆ ಆಗದೆ ಆಕ್ರಮ ಸಂಬಂಧದಿಂದ ಅನೈತಿಕ ಮಕ್ಕಳನ್ನು ಹೆತ್ತಿದ್ದಾಳೆ. ಅವಳಿಗೆ ತನ್ನ ಹಾಗೂ ಮಕ್ಕಳ ಕಾನೂನಿನ ಸ್ಥಾನಮಾನಗಳನ್ನು ಅರುಹಿದೆ. ಹಿಂದೂ ಏಕತ್ರ ಕುಟುಂ ಬದಲ್ಲಿ. ಮೃತನಿಗೆ ಇಬ್ಬರು ವಿಧವೆಯರು, ಅವರಿಗೆ ಏಕತ್ರ ೧/೫ ಹಿಸ್ಸೆ. ಇಬ್ಬರಿಗೂ ತಲಾ ಎರಡು ಮಕ್ಕಳು, ತಲಾ ೧/೫ ಹಿಸ್ಸೆ. ಪ್ರತಿವಾದಿಯರ ಮೇಲೆ ವಿಭಾಗ ಮತ್ತು ಪ್ರತ್ಯೇಕ ಸ್ವಾಧೀನ ಕೇಳಿ ದಾವೆ ಮಾಡಿದೆ. ಒಮ್ಮೊಮ್ಮೆ ಕೇಸಿನ ಗುಣ ಅವಗುಣ ಹೇಳಿ, ರಿಸ್ಕ್ ಎದುರಿಸಿ ಕೋರ್ಟ್ ಮೊರೆ ಹೋಗಬೇಕಾಗುತ್ತದೆ. ಪ್ರತಿವಾದಿಗೆ ಕೋರ್ಟ್ ಕಚೇರಿ ಬೇಡವೆಂದು ರಾಜಿ ಆಗುವ ಸಂದರ್ಭ ಇರುತ್ತವೆ.
ಪ್ರತಿವಾದಿಯರಿಗೆ ಸಮನ್ಸ್ ಮುಟ್ಟಿದವು. ವಕೀಲರ ಮುಖಾಂತರ ಕೋರ್ಟಿಗೆ ಹಾಜರು ಆಗಿ ಕೈಫಿಯತ/ತಕ ರಾರು ಸಲ್ಲಿಸಿದರು. ಅವರ ತಕರಾರಿನಲ್ಲಿ, ಒಂದನೆ ವಾದಿ ದ್ರಾಕ್ಷಿಯಣಿ ವೇದಮೂರ್ತಿಯ ಹೆಂಡತಿ ಅಲ್ಲ ಆದರೆ ಅವನ ಜೊತೆ ಆಕ್ರಮ ಸಂಬಂಧ ಹೊಂದಿದ್ದಳು. ಈ ಅಕ್ರಮ ಸಂಬಂಧದಿಂದ ಹುಟ್ಟಿದ ಅನೈತಿಕ ಮಕ್ಕಳು ಆ ದುದರಿಂದ ದಾವೆ ಆಸ್ತಿಯಲ್ಲಿ ಯಾವುದೇ ಪಾಲು ಇಲ್ಲ ಎಂದು ವಾದಿಸಿದರು.
ನ್ಯಾಯಾಲಯವು ವಾದಿ ಪ್ರತಿವಾದಿಗಳಿಗೆ ಸಂಧಾನದ ಮೂಲಕ ರಾಜಿ ಮಾಡಿಕೊಳ್ಳಲು ಸೂಚಿಸಿತು. ಸಂಧಾನ ವಿಫಲವಾಯಿತು. ಪ್ರಸ್ತುತ ಪ್ರಕರಣದಲ್ಲಿ ವಾದಿ ದ್ರಾಕ್ಷಾಯಣಿ ಮೃತ ವೇದಮೂರ್ತಿಯ ಜೊತೆ ಮದುವೆ ಆಗಿ ಲ್ಲ. ಈ ಅನೈತಿಕ ಸಂಬಂಧದಿಂದ ಇಬ್ಬರು ಮಕ್ಕಳು ಹುಟ್ಟಿದ್ದಾರೆ ಎಂಬುದು ನಿರ್ವಿವಾದ. ಅನೈತಿಕ ಸಂತಾನದ ಹಕ್ಕುಗಳು ಏನು ಎಂಬುದು ವಿವಾದ. ವಾದಿಯರು ಮತ್ತು ಪ್ರತಿವಾದಿಯರು, ತಮ್ಮ ಪರ ಸಾಕ್ಷಿದಾರರನ್ನು ಕೋರ್ಟಿಗೆ ದಾಖಲೆ ಸಮೇತ ಹಾಜರುಪಡಿಸಿದರು.
ಅಂತಿಮವಾಗಿ ವಾದಿಯರ ಪರ ನಾನು ವಾದಿಸುತ್ತ ದ್ರಾಕ್ಷಿಯಣಿ ಮತ್ತು ವಸುಂದರಾ ಮೃತ ಪರಶುರಾಮನ ಹೆಂಡತಿಯರು ಇದ್ದು, ಒಂದೇ ಸೂರಿನಡಿಯಲ್ಲಿ ಬದುಕಿರುತ್ತಾರೆ. ಆದ್ದರಿಂದ ದ್ರಾಕ್ಷಿಯಣಿ, ವಸುಂದರಾ ಮೃತನ ಹೆಂಡತಿಯರು ಎಂದು ಪರಿಗಣಿಸತಕ್ಕದ್ದು. ಅವರ ಮಕ್ಕಳು ಅನೈತಿಕ ಮಕ್ಕಳಲ್ಲ. ಹಿಂದು ಉತ್ತರಾಧಿಕಾರ ಕಾನೂನು ಅಡಿಯಲ್ಲಿ ಮೃತ ವಿಧವೆಯರು ಏಕತ್ರವಾಗಿ ಒಂದು ಪಾಲು ಪಡೆಯುತ್ತಾರೆ. ಅಂದರೆ ಮೃತನ ಇಬ್ಬರು ಹೆಂಡಂದಿರು ಏಕತ್ರವಾಗಿ ೧/೫ ಮತ್ತು ನಾಲ್ಕು ಮಕ್ಕಳು ಪ್ರತಿಯೊಬ್ಬರು ೧/೫ ಹಿಸ್ಸೆ ಹೊಂದಿರುತ್ತಾರೆ ಎಂದು ವಾದ ಮಂಡಿಸಿದೆ. ಪ್ರತಿವಾದಿ ಪರ ವಕೀಲರು, ವಾದಿ ದ್ರಾಕ್ಷಿಯಣಿ ಇವಳು ಮೃತನ ಹೆಂಡತಿಯಲ್ಲ, ಅವಳ ಮಕ್ಕಳು ಅನೈತಿಕ ಮಕ್ಕಳು ಅವರಿಗೆ ದಾವಾ ಆಸ್ತಿಯಲ್ಲಿ ಯಾವುದೇ ಹಕ್ಕು ಪ್ರಾಪ್ತಿಯಾಗಿಲ್ಲ ಎಂದು ವಾದಿಸಿ ದಾವೆ ವಜಾಗೊಳಿಸಲು ವಿನಂತಿಸಿದರು.
ನ್ಯಾಯಾಧೀಶರು ವಾದಿ ಪ್ರತಿವಾದಿ ಪರ ವಾದವನ್ನು ಸಂಯಮದಿಂದ ಆಲಿಸಿದರು. ಮೃತ ಗಂಡ ಅವನ ಹೆಂಡತಿ ವಸುಂದರಾ ಮತ್ತು ಇಬ್ಬರು ಮಕ್ಕಳು ತಲಾ ೧/೫ ಹಿಸ್ಸೆ ಹೊಂದಿದ್ದು, ಮೃತ ಗಂಡನಿಗೆ ೧/೫ ಹಿಸ್ಸೆಯೆಂದು ಪರಿಗಣಿಸಿ ಅದರಲ್ಲಿ ವಸುಂದರಾ ಅವಳ ಮಕ್ಕಳು ಮತ್ತು ದ್ರಾಕ್ಷಾಯಣಿಯ ಇಬ್ಬರು ಅನೈತಿಕ ಮಕ್ಕಳು ತಲಾ ೧/೫ ಪಾಲು ಇರುತ್ತದೆ. ಮೃತನ ಉಪ ದ್ರಾಕ್ಷಿಯನಿಗೆ ಹಿಸ್ಸೆ ಇಲ್ಲವೆಂದು ಭಾಗಶಃ ಡಿಕ್ರಿ ತೀರ್ಪು ನೀಡಿತು.
ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯ ಹಲವಾರು ಪ್ರಕರಣಗಳಲ್ಲಿ, ಕಾನೂನುಬಾಹಿರ ಮಕ್ಕಳ ಹಕ್ಕಿನ ಬಗ್ಗೆ ನಿರ್ಣಯಿಸಿದೆ. ತಂದೆ ಮರಣಾನಂತರ ಪಿತ್ರಾರ್ಜಿತ ಆಸ್ತಿಯಲ್ಲಿ ಹಂಚಿಕೆಯಾದ ಮತ್ತು ಸ್ವಯಾರ್ಜಿತ ಆಸ್ತಿಯಲ್ಲಿ ಹೆಂಡತಿ ಮಕ್ಕಳ ಜೊತೆ ಬಂದ ಮೃತನ ಹಿಸ್ಸೇಯಲ್ಲಿ, ಹೆಂಡತಿ ಮಕ್ಕಳ ಜೊತೆ ಸಮಾನ ಹಿಸ್ಸೆ ಅನೈತಿಕ ಮಕ್ಕಳಿಗೂ ಇದೆ ಎಂದು ತೀರ್ಪು ನೀಡಿದ್ದಾರೆ.