For the best experience, open
https://m.samyuktakarnataka.in
on your mobile browser.

ಅಬ್ಬಾ..! ಎಂಥಾ ಅದ್ಭುತ ಸಾಧನೆ

04:00 AM May 13, 2024 IST | Samyukta Karnataka
ಅಬ್ಬಾ    ಎಂಥಾ ಅದ್ಭುತ ಸಾಧನೆ

ಸಾಧನೆಗೆ ಅಂತಸ್ತಿನ ಹಂಗಿಲ್ಲ; ಹಂಗಿದ್ದರೆ ಪ್ರತಿಭೆಯ ವಿಕಸನ ಆಗುವುದಿಲ್ಲ. ಆದರೆ, ಸಾಧನೆ ಹಾಗೂ ಪ್ರತಿಭೆಗಳು ವಿಲೀನಗೊಂಡು ಖಚಿತ ದಾರಿಯಲ್ಲಿ ಸಾಗಲು ಸ್ಪಷ್ಟ ಗುರಿ ಜೊತೆಗೆ ಹಾರೈಸುವ ಗುರುವೂ ಇದ್ದರೆ ಅಂದುಕೊಂಡದ್ದನ್ನು ಮಾಡಿ ತೋರಿಸಲು ಮೂರೇ ಗೇಣು ಸಾಕು ಎಂಬುದಕ್ಕೆ ಬಾಗಲಕೋಟೆಯ ಅಂಕಿತಾ ಬಸಪ್ಪ ಕೊಣ್ಣೂರ ಇದಕ್ಕೆ ಜ್ವಲಂತ ನಿದರ್ಶನ.
ಅಂಕಿತಾ ಕೊಣ್ಣೂರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ನ್ನೂ ಗಳಿಸಿ ಇಡೀ ರಾಜ್ಯವೇ ತನ್ನತ್ತ ತಿರುಗಿನೋಡುವಂತೆ ಮಾಡಿದ ಅದ್ಭುತ ಸಾಧಕಿ. ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದ ಬಸಪ್ಪ ಅವರ ಮುದ್ದಿನ ಕುವರಿ ಮೆಣ್ಣಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ೬ನೇ ತರಗತಿಯಿಂದ ೧೦ನೇ ತರಗತಿವರೆಗೆ ವ್ಯಾಸಂಗ ಮಾಡಿ ಅಂದುಕೊಂಡದ್ದನ್ನು ಸಾಧಿಸಿರುವ ಧೀಮಂತ ಬಾಲಕಿ. ಹಾಗಿದ್ದರೆ ಇಂತಹ ಅದ್ಭುತ ಸಾಧನೆಗೆ ನೀರೆರೆದ ಮಹಾಪುರುಷರು ಯಾರೆಂಬುದು ಎಲ್ಲರಿಗೂ ಕುತೂಹಲ. ಸತತ ಅಭ್ಯಾಸ ಹಾಗೂ ಏಕಾಗ್ರತೆ ಇಟ್ಟು ತರಗತಿಯಲ್ಲಿ ಪಾಠ ಕೇಳಿದ್ದನ್ನು ಬಿಟ್ಟರೆ ಈ ಸಾಧಕಿ ಮತ್ತಾವ ಪೂರಕ ಪರಿಕರಗಳನ್ನು ಬಳಸಲಿಲ್ಲ ಎನ್ನುವುದಕ್ಕಿಂತ ಬಳಸುವ ಸುಸ್ಥಿತಿಯಲ್ಲೂ ಇರಲಿಲ್ಲ ಎಂಬ ಮಾತಿನಲ್ಲಿ ಸಾಧನೆಯ ದಾರಿ ಎದ್ದು ಕಾಣುತ್ತದೆ. ಅಂಕಿತಾಗೆ ಗುರು ಹಿರಿಯರ ಮೇಲೆ ಅಪರಿಮಿತ ಗೌರವ. ಶಾಲೆಯ ಅಧ್ಯಾಪಕರ ಪಾಠವೇ ತನಗೆ ಸರ್ವಸ್ವ. ಮನೆಯಲ್ಲಿ ತಂದೆ ತಾಯಿಯ ಹಾರೈಕೆಯೇ ಆತ್ಮವಿಶ್ವಾಸದ ದಾರಿ ಎಂಬ ಮಾತುಗಳನ್ನು ಹೇಳುವಾಗ ಆಕೆಗೆ ಲೋಕದ ಮುಂದೆ ತನ್ನನ್ನು ಪರಿಚಯಿಸಿಕೊಳ್ಳಲು ಏನೋ ಒಂದು ರೀತಿಯ ಸಂಕೋಚ.
ಮುಧೋಳ ತಾಲೂಕಿನ ಪ್ರದೇಶ ಈಗ ನೀರಾವರಿ ಸೌಲಭ್ಯಗಳನ್ನು ಒಳಗೊಂಡು ಜನರ ಪರಿಸ್ಥಿತಿ ಸುಧಾರಿಸಿದೆ ಎಂಬುದು ನಿಜವೇ. ಶಿಕ್ಷಣ ಸಂಸ್ಥೆಗಳ ಸಂಖ್ಯೆಯೂ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಿದೆ. ಆದರೆ, ಅಂಕಿತಾ ಓದಿದ್ದು ಸರ್ಕಾರಿ ಒಡೆತನದ ಮೊರಾರ್ಜಿ ವಸತಿ ಶಾಲೆಯಲ್ಲಿ. ಸಾಮಾನ್ಯವಾಗಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ರ‍್ಯಾಂಕ್ ಪಡೆಯುವ ವಿದ್ಯಾರ್ಥಿಗಳು ಪ್ರತಿಷ್ಠಿತ ಖಾಸಗಿ ಶಾಲೆಯಿಂದ ಬಂದವರು. ಜೊತೆಗೆ ಉತ್ತಮ ಶೈಕ್ಷಣಿಕ ಹಿನ್ನೆಲೆ ಇರುವ ಕುಟುಂಬದ ಕುಡಿಗಳು. ಆದರೆ, ಅಂಕಿತಾ ಇವೆರಡರಿಂದಲೂ ವಂಚಿತ. ಹೀಗಿದ್ದರೂ ಇಂತಹ ನಿರೀಕ್ಷೆಗೂ ಮೀರಿದ ಸಾಧನೆ ಗುರುತಿಸಿ ಈ ಹೆಣ್ಣ ಮಗಳ ಉನ್ನತ ವ್ಯಾಸಂಗಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುವುದು ಸಾರ್ವಜನಿಕರ ಜವಾಬ್ದಾರಿ.
ಅಂಕಿತಾ ಬಡಕುಟುಂಬದ ಕುಡಿ. ಅವರ ಕುಟುಂಬಕ್ಕೆ ಇರುವುದು ನಾಲ್ಕು ಎಕರೆ ಜಮೀನು. ಅದನ್ನು ಬಿಟ್ಟರೆ ಆಕಾಶ ಇಲ್ಲವೇ ಭೂಮಿಯೇ ಆಸರೆ. ಈ ವಿದ್ಯಾರ್ಥಿನಿಯ ಸಾಧನೆ ಗುರುತಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೂರವಾಣಿ ಕರೆ ಮೂಲಕ ಸಂಪರ್ಕಿಸಿ ಬೆನ್ನು ತಟ್ಟಿರುವುದು ಈ ಪ್ರದೇಶದ ಜನರಿಗೆ ಖುಷಿ ತಂದಿದೆ.
ಈ ಅಭಿನಂದನೆಗಳ ಭಾರದ ನಡುವೆ ತನ್ನ ಭಾವನೆಗಳನ್ನು ಹಂಚಿಕೊಂಡ ಅಂಕಿತಾ ಹೇಗಾದರೂ ಮಾಡಿ ಐಎಎಸ್ ಅಧಿಕಾರಿಯಾಗಬೇಕೆಂಬ ಆಸೆಯನ್ನು ತೋಡಿಕೊಂಡದ್ದು ಆಕೆಯ ಮುಂದಿನ ಮಾರ್ಗದ ದಿಕ್ಸೂಚಿ.
ಬಾಗಲಕೋಟೆ ಜಿಲ್ಲೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಸಾಮಾನ್ಯವಾಗಿ ಇದುವರೆಗೂ ಮೊದಲ ಸ್ಥಾನಕ್ಕೆ ಬಂದಿಲ್ಲ. ಐದು ತಪ್ಪಿದರೆ ಆರರ ಸ್ಥಾನದಲ್ಲಿ ಈ ಜಿಲ್ಲೆಯ ಹೆಸರು ದಾಖಲಾಗುತ್ತದೆ. ಆದರೆ, ಅಂಕಿತಾ ಇಡೀ ರಾಜ್ಯಕ್ಕೆ ಮೊದಲಿಗಳಾಗಿ ರ‍್ಯಾಂಕ್ ವಿದ್ಯಾರ್ಥಿಗಳ ಪೈಕಿ ಮೊದಲ ಸ್ಥಾನದಲ್ಲಿ ಇರುವುದು ಮೂರ್ತಿ ಚಿಕ್ಕದಾದರೂ ಕೀರ್ತಿ ಎಳವೆಯಲ್ಲಿಯೇ ದೊಡ್ಡದು ಎಂಬುದನ್ನು ನಿಜ ಮಾಡಿದೆ. ಅವರ ತಂದೆ ತಾಯಿಗಳಂತೂ ಮಗಳ ಸಾಧನೆಯ ಬಗ್ಗೆ ಎಲ್ಲಿಲ್ಲದ ಸಂತೋಷ. ಊರ ಜನರಷ್ಟೇ ಅಲ್ಲ ಇಡೀ ಬಾಗಲಕೋಟೆ ಜನರಿಗೆ ಅತೀವ ಸಂತಸ. `ಮಗಳ ಆಸೆಯಂತೆ ಏನೇ ಕಷ್ಟವಾದರೂ ಉನ್ನತ ಶಿಕ್ಷಣ ಕೊಡಿಸುತ್ತೇವೆ. ಎಷ್ಟೇ ಕಷ್ಟವಾದರೂ ಸರಿಯೇ ಮಗಳ ಬಯಕೆಯನ್ನು ಈಡೇರಿಸಿಯೇ ತೀರುತ್ತೇವೆ' ಎಂಬ ಪೋಷಕರ ಮಾತಿಗೆ ಬೆಂಬಲಿಸುವಂತೆ ನೆರೆಹೊರೆಯವರು ಅದೇ ರೀತಿಯಲ್ಲಿ ಸಹಮತ ಸೂಚಿಸುವುದು ಗೆಲುವಿನ ಮಹಿಮೆಯನ್ನು ತೋರುತ್ತದೆ.
ಸರ್ಕಾರಿ ಶಾಲೆಯ ವಿದ್ಯಾರ್ಥಿ ಇಂತಹ ಪವಾಡ ಸದೃಶ ಸಾಧನೆ ಮಾಡಿರುವುದು ಸಾರ್ವಜನಿಕರಿಗೆ ಕುತೂಹಲದ ಸಂಗತಿಯಾಗಿದೆ. ಈ ಶಾಲೆಯಿಂದಾಗಿ ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಉತ್ತಮವಾಗಿದೆ ಎಂಬುದನ್ನು ಎತ್ತಿತೋರುವ ಜೊತೆಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಸರ್ಕಾರಿ ಶಾಲೆಯ ಸೇರ್ಪಡೆಯ ಕಡೆ ಒಲವು ಹೆಚ್ಚಾಗುವ ನಿರೀಕ್ಷೆ ಕಂಡುಬಂದಿದೆ. ಇದೇ ಸಂದರ್ಭದಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಆಧುನಿಕ ಸೌಲಭ್ಯಗಳಿಂದ ಸರ್ಕಾರಿ ಶಾಲೆಗಳನ್ನು ಸಜ್ಜುಗೊಳಿಸಿ ಮಾದರಿ ಶಿಕ್ಷಣ ಸಂಸ್ಥೆಗಳನ್ನಾಗಿ ರೂಪಿಸುವ ಮೂಲಕ ನಾಡಿನ ಶೈಕ್ಷಣಿಕ ಪ್ರಗತಿ ಸಾಧಿಸಬಹುದು ಎಂಬುದರ ಸಂದೇಶವೂ ಇದರಲ್ಲಿ ಅಡಗಿದೆ.