For the best experience, open
https://m.samyuktakarnataka.in
on your mobile browser.

ಅಭಿವ್ಯಕ್ತಿ ಪ್ರಕೃತಿಯ ಮೂಲ ಚಿರಂತನ ಲಕ್ಷಣ

03:00 AM Jun 12, 2024 IST | Samyukta Karnataka
ಅಭಿವ್ಯಕ್ತಿ ಪ್ರಕೃತಿಯ ಮೂಲ ಚಿರಂತನ ಲಕ್ಷಣ

ಮನುಷ್ಯನಲ್ಲಿ ಅಭಿವ್ಯಕ್ತಿ ಕಲೆಯು ಮುಖ್ಯವಾಗಿ ಸಂವಹನ ಅಭಿವೃದ್ಧಿ ಅಥವಾ ಮಾತನಾಡುವಿಕೆಗೆ ಸಂಬಂಧಿಸಿದೆ. ಸಹಸ್ರಾರು ವರ್ಷಗಳಿಂದಲೂ ವಾಕ್ಚಾತುರ್ಯ ಎಂಬುದು ಮೂಲತಃ ಸಾರ್ವಜನಿಕವಾಗಿ ಪರಿಣಾಮಕಾರಿಯಾಗಿ ಮಾತನಾಡುವ ಕಲೆಯಾಗಿತ್ತು. ಮಾತನಾಡುವ ಅಥವಾ ಬರವಣಿಗೆಯ ಗುರಿಯನ್ನು ತಿಳಿವಳಿಕೆಯನ್ನು ಪ್ರಖರವಾಗಿಸಲು; ಕಲ್ಪನಾ ಸಾಮರ್ಥ್ಯವನ್ನು ವೃದ್ಧಿಸಲು; ಭಾವನೆಗಳನ್ನು ಪಸರಿಸಲು ಮತ್ತು ಪ್ರಭಾವಿಸಲು ಎಂಬುದಾಗಿ ವಿಸ್ತರಿಸಬಹುದು. ನಮ್ಮ ಆಲೋಚನೆಯಲ್ಲಿ ನಾವು ಅನೇಕ ರೀತಿಯ ಸಂಕೇತ ವ್ಯವಸ್ಥೆಗಳನ್ನು ಬಳಸುತ್ತೇವೆ; ಭಾಷೆ, ಗಣಿತ, ಚಿತ್ರ, ಸಂಗೀತ, ಧಾರ್ಮಿಕ ಹೀಗೆ. ಅಂತಹ ಸಂಕೇತ ವ್ಯವಸ್ಥೆಗಳಿಲ್ಲದೆ ನಮಗೆ ಯಾವುದೇ ಕಲೆ, ವಿಜ್ಞಾನ, ಕಾನೂನು, ತತ್ತ್ವಶಾಸ್ತ್ರ ಒಲಿಯಲಾರದು. ಇವು ನಾಗರಿಕತೆಯ ಮೂಲಗಳಷ್ಟೇ ಅಲ್ಲ; ಬೇರೆ ರೀತಿಯಲ್ಲಿ ಹೇಳುವುದಾದರೆ, ನಾವು ಪ್ರಾಣಿಗಳಾಗಿಯೇ ಇರುತ್ತಿದ್ದೆವು. ಹೀಗಾಗಿ ಸಂಕೇತ ವ್ಯವಸ್ಥೆಗಳು ಮಾನವನಿಗೆ ಅನಿವಾರ್ಯ ಸಂಗಾತಿ. ಆದರೆ ಇದೇ ಸಂಕೇತ ವ್ಯವಸ್ಥೆಗಳು ನಮ್ಮದೇ ಆದ ಮತ್ತು ಇತರ ಪ್ರತಿಯೊಂದು ಯುಗದ ಇತಿಹಾಸವು ಹೇರಳವಾಗಿ ಸ್ಪಷ್ಟಪಡಿಸುವಂತೆ; ಮಾರಕವೂ ಸಹ ಆಗಬಹುದು! ಉದಾಹರಣೆಗೆ; ಒಂದುಕಡೆ ವಿಜ್ಞಾನ ಕ್ಷೇತ್ರ; ಮತ್ತೊಂದೆಡೆ ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳನ್ನು ಪರಿಗಣಿಸೋಣ. ವಿಜ್ಞಾನ ಕ್ಷೇತ್ರದಲ್ಲಿ ಪ್ರಕೃತಿಯ ಪ್ರಾಥಮಿಕ ಶಕ್ತಿಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಿಯಂತ್ರಿಸಲು ಸಂಕೇತಗಳನ್ನು ಬಳಸಲಾಗಿದ್ದರೆ; ಮತ್ತೊಂದೆಡೆ ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಕಾಲಕಾಲಕ್ಕೆ ಸಾಮೂಹಿಕ ಕ್ರಾಂತಿಯ ಸಾಧನಗಳಾಗಿ ಬಳಕೆಯಾಗಿರುವುದು ಕಂಡುಬರುತ್ತದೆ.
ಯಾವುದೇ ರೀತಿಯ ಸಾಮಾಜಿಕ ಅಥವಾ ವ್ಯಾವಹಾರಿಕ ಬದ್ಧತೆಗಳನ್ನು ಹೊಂದಿರುವ ಪ್ರತಿಯೊಬ್ಬನೂ ತಮ್ಮ ಆಲೋಚನೆಗಳು ಮತ್ತು ಕಲ್ಪನೆಗಳನ್ನು ತನ್ನ ಸಹವರ್ತಿಗಳೊಂದಿಗೆ ಸ್ಪಷ್ಟವಾಗಿ ವ್ಯಕ್ತಪಡಿಸುವ ಮತ್ತು ಆತನನ್ನು ಪ್ರಭಾವಿಸುವಂತಿರಬೇಕು. ಪ್ರತಿಯೊಬ್ಬ ವ್ಯಕ್ತಿಯೂ ತನ್ನನ್ನು ತಾನು ಕೆಲವು ರೀತಿಯಲ್ಲಿ ಅಭಿವ್ಯಕ್ತಿಗೊಳಿಸುತ್ತಾನೆ. ಕೆಲವರಿಗೆ ಅಭಿವ್ಯಕ್ತಿ ಪ್ರಕ್ರಿಯೆಯು ಸುಲಭ ಮತ್ತು ಆಹ್ಲಾದಕರವಾಗಿದ್ದರೆ; ಇನ್ನು ಕೆಲವರಿಗೆ ತಮ್ಮ ಆಲೋಚನೆಯ ಹಿಂದಿನ ಕಲ್ಪನೆಯ ಆತ್ಮ ಮತ್ತು ಅರ್ಥ ರೂಪುಗೊಂಡಿರದೆ ಸಮಯೋಚಿತವಾಗಿ ಪದಗಳು, ವಾಕ್ಯಗಳು ಹೊರಬರುವುದೇ ಇಲ್ಲ. ತಿಳಿವಳಿಕೆಯ ಕೊರತೆಯಿಂದ ತಮ್ಮ ಆಲೋಚನೆಗಳ ಅಭಿವ್ಯಕ್ತಿ ಸಾಧ್ಯವಾಗದವರು ಇನ್ನು ಕೆಲವರಿರುತ್ತಾರೆ. ಇವೆಲ್ಲಾ ಅಭಿವ್ಯಕ್ತಿ ಕಲೆಯ ಮೂಲಭೂತ ತತ್ವಗಳು. ವಿಶೇಷವಾಗಿ ಚಿಕಿತ್ಸಾ ಕ್ಷೇತ್ರದಲ್ಲಿರುವವರಿಗೆ ತಮ್ಮ ತಮ್ಮ ಆಯ್ದ ಕ್ಷೇತ್ರದಲ್ಲಿನ ವಿಷಯತಜ್ಞತೆ ಜೊತೆ ಜೊತೆಗೆ ಉತ್ತಮ, ಸಮಯೋಚಿತ ಮತ್ತು ಸಾಂದರ್ಭಿಕ ವಾಕ್ಚಾತುರ್ಯವೂ ಜೊತೆಗೂಡಿದರೆ ರೋಗಿಯ ಗುಣಪಡಿಸುವಿಕೆ ಪ್ರಕ್ರಿಯೆ ತನ್ನಿಂತಾನೇ ಶೀಘ್ರಗತಿಯನ್ನು ಪಡೆದುಕೊಳ್ಳುತ್ತದೆ. ಯಾವಾಗಲೂ ನೆನಪಿನಲ್ಲಿ ಇರಿಸಿಕೊಳ್ಳಬೇಕಾದ ವಿಚಾರವೆಂದರೆ; ಅಭಿವ್ಯಕ್ತಿಯು ಪ್ರಭಾವಕ್ಕಿಂತ ಮುಂಚಿತವಾಗಿರುತ್ತದೆ; ಇತರರ ಮನಸ್ಸಿನಲ್ಲಿ ಬಲವಾದ, ಆಳವಾದ, ಸ್ಪಷ್ಟವಾದ ಮತ್ತು ಶಾಶ್ವತವಾದ ಅನಿಸಿಕೆಗಳನ್ನು ಪ್ರತಿಷ್ಠಾಪಿಸಲು ಅಭಿವ್ಯಕ್ತಿಯ ರೂಪ ಮತ್ತು ವಿಧಾನಗಳು ಬಹುಮುಖ್ಯ ಪಾತ್ರವಹಿಸುತ್ತವೆ' ಎಂಬುದು. ದಿನನಿತ್ಯದ ಜೀವನದ ಅವಶ್ಯಕತೆಗಳನ್ನು ಪೂರೈಸಲು ಅಭಿವ್ಯಕ್ತಿಯಲ್ಲಿ ವಾಕ್ಯಗಳ ರೂಪ ಮತ್ತು ರಚನೆಯನ್ನು ಮಾತ್ರವಲ್ಲ; ಅವುಗಳಲ್ಲಿ ಒಳಗೊಳ್ಳುವ ಪದಗಳು ಅಥವಾ ಪದಗುಚ್ಛಗಳ ಹಿಂದಿರಬೇಕಾದ ಮನೋವಿಜ್ಞಾನವನ್ನೂ ಪರಿಗಣಿಸಬೇಕು. ಮನೋವಿಜ್ಞಾನವಿಂದು ಕೇವಲ ಆರೋಗ್ಯ ಕ್ಷೇತ್ರವನ್ನಷ್ಟೇ ಅಲ್ಲ; ಬದುಕಿನ ಬಹುತೇಕ ಎಲ್ಲಾ ಕ್ಷೇತ್ರಗಳನ್ನೂ ಆವರಿಸಿದೆ ಮತ್ತು ಪ್ರಾಯೋಗಿಕ ನಿರ್ವಹಣೆಯಲ್ಲಿ ತನ್ನ ಸ್ಥಾನವನ್ನು ಪ್ರತಿಷ್ಠಾಪಿಸಿದೆ ಎಂಬುದನ್ನು ಮರೆಯಬಾರದು. ನಾವಿದನ್ನು ವಾಕ್ಚಾತುರ್ಯದ ದೃಷ್ಟಿಕೋನದಿಂದ ಮಾತ್ರವಷ್ಟೇ ಪರಿಗಣಿಸದೆ ಮನೋವಿಜ್ಞಾನದ ದೃಷ್ಟಿಕೋನದಿಂದ ಪರಿಗಣಿಸಬೇಕಿದೆ. ಬಹುಶಃ ಜೀವಿಗಳ ಅಭಿವ್ಯಕ್ತಿಯ ಅತ್ಯಂತ ಮೂಲಭೂತ ರೂಪವೆಂದರೆಸನ್ನೆಗಳು.' ದೇಹದ ಚಲನೆಗಳು, ದೇಹದ ಭಾಗ ಅಥವಾ ಅಂಗಗಳ ಚಲನೆಗಳು, ಮುಖದಲ್ಲಿನ ಬದಲಾವಣೆಗಳು ಭಾವನೆಗಳ ಸುಪ್ತಾವಸ್ಥೆಯ ಅಭಿವ್ಯಕ್ತಿಯಾಗಿ ರೂಪುಗೊಂಡಿವೆ. ಪ್ರಕೃತಿತಜ್ಞರು ಹೇಳುವಂತೆ; ಚಿಂತನೆಯು ಕ್ರಿಯೆಯಲ್ಲಿ ರೂಪವನ್ನು ತಾಳುತ್ತದೆ ಮತ್ತು ಪ್ರತಿ ಮಾನಸಿಕ ಪ್ರಕ್ರಿಯೆಯು ಬಾಹ್ಯ ದೈಹಿಕಚಲನೆಯಲ್ಲಿ ಪುನರುತ್ಪಾನೆಯಾಗುತ್ತದೆ.' ಪ್ರಾಣಿ-ಪಕ್ಷಿಗಳಲ್ಲಿ ಬಾಲವನ್ನು ಕುಣಿಸುವುದು, ವಿಚಿತ್ರವಾಗಿ ಹಲ್ಲುಗಳನ್ನು ಪ್ರದರ್ಶಿಸುವುದು, ಬೆರಳುಗಳನ್ನು ತೆರೆಯುವುದು, ಪ್ರೀತಿಯ ಭಾವನೆಗಳನ್ನು ಸ್ವರ, ಹಾಡು, ಸುಶ್ರಾವ್ಯ ಧ್ವನಿಯ ಮೂಲಕ ವ್ಯಕ್ತಪಡಿಸುವುದು-ಹೀಗೆ ನೂರಾರು ಬಗೆಯ ಅಭಿವ್ಯಕ್ತಿಗಳನ್ನು ನೋಡಿರುತ್ತೇವೆ. ಈ ಸನ್ನೆಗಳು ಮತ್ತು ಚಲನೆಗಳು ಮಾತಿನ ರೂಪವಾಗಿ ಕಾರ್ಯನಿರ್ವಹಿಸುತ್ತವೆ. ಮನುಷ್ಯ ಅಥವಾ ಪ್ರಾಣಿ ಈ ಸನ್ನೆಗಳನ್ನುಈ ಹಿಂದೆ ಗ್ರಹಿಸಿದ ಕಾರಣಗಳಿಂದ' ಗುರುತಿಸುತ್ತದೆ ಮತ್ತು ಸಾಮಾನ್ಯವಾಗಿ ಸೂಕ್ತವಾದ ಮತ್ತು ಅನುಗುಣವಾದ ಕ್ರಿಯೆಯೊಂದಿಗೆ ಅನುಸರಿಸುತ್ತದೆ. ದೈಹಿಕ ಚಲನೆ ಅಥವಾ ಆಂಗಿಕ ಅಭಿವ್ಯಕ್ತಿ ಅಥವಾ ಭಂಗಿ ಮಾನಸಿಕ ಭಾವನೆ ಪ್ರಕಟವಾಗುವಿಕೆಯ ವಿಧಾನ.
ಜಗತ್ತಿನಲ್ಲಿ ಸಾರ್ವತ್ರಿಕ ಸಂಕೇತ ಭಾಷೆಗಳಿದ್ದು ಅದನ್ನು ಎಲ್ಲಾ ಕಾಲಗಳಲ್ಲಿಯೂ ಮಾನವರು ಅರ್ಥೈಸಿಕೊಂಡು, ಅನುಸರಿಸಿಕೊಂಡು ಬಂದಿದ್ದಾರೆ. ಉದಾಹರಣೆಗೆ; ತೆರೆದ ಬಾಯಿಯನ್ನು ತೋರಿಸಿ ಹೊಟ್ಟೆಯನ್ನು ಸ್ಪರ್ಶಿಸುವುದು ಹಸಿವು ಮತ್ತು ಆಹಾರದ ಬೇಡಿಕೆಯ ಸಂಜ್ಞೆಯಾದರೆ; ಭುಜದ ಮೇಲೆ ತಲೆಯನ್ನು ವಾಲಿಸಿ ಕಣ್ಣುಮುಚ್ಚುವುದು ನಿದ್ದೆಮಾಡುವ ಬಯಕೆಯ ಸೂಚನೆಯಾಗಿರುತ್ತದೆ. ಮೈಯನ್ನು ನಡುಗಿಸಿದರೆ ಶೀತ ಯಾ ಜ್ವರದ ಚಿಹ್ನೆಯಾದರೆ; ಮುಷ್ಠಿ ಬಿಗಿಹಿಡಿದು ತೋರಿಸಿದರೆ ಪ್ರತಿಭಟನೆ ಅಥವಾ ಹೋರಾಟದ ಸೂಚನೆ. ಸೂಕ್ಷö್ಮವಾದ ಒಂದು ಕಣ್ಣೋಟದೊಂದಿಗೆ ತೋಳುಗಳನ್ನು ವಿಶಾಲವಾಗಿ ತೆರೆದು ತೋರಿಸುವುದು ಪ್ರೀತಿಯ ಅಪ್ಪುಗೆಯ ಸಂಕೇತವಾಗಿರುತ್ತದೆ. ಬೆರಳಿನಿಂದ ತಲೆಯನ್ನು ಕೆರೆದುಕೊಳ್ಳುವುದು `ಯೋಚಿಸಬೇಕಾದ ವಿಚಾರ' ಎಂಬ ಅರ್ಥವನ್ನು ಸೂಚಿಸುತ್ತದೆ. ಹೀಗೆ ಇಂತಹ ಸಾರ್ವತ್ರಿಕ ಸಂಕೇತಗಳನ್ನು ಎಲ್ಲಾ ಜನಾಂಗಗಳೂ ಉಳಿಸಿ, ಬೆಳೆಸಿಕೊಂಡು ಬಂದಿವೆ.
ಆತ್ಮವು ದೇಹ ಮತ್ತು ಮನಸ್ಸಿನ ಸಹಕಾರವಿಲ್ಲದೆ ತಾನಾಗಿಯೇ ಒಂದೇ ಒಂದು ಕ್ರಿಯೆಯನ್ನೂ ಮಾಡುವುದಿಲ್ಲ. ಆಂತರಿಕ ಭಾವನೆಗಳಿಲ್ಲದೆ ಬಾಹ್ಯ ಭೌತಿಕ ಅಭಿವ್ಯಕ್ತಿಯನ್ನು ಊಹಿಸಲು ಸಾಧ್ಯವಿಲ್ಲ. ಆದ್ದರಿಂದ ಒಂದು ಅಭಿವ್ಯಕ್ತಿ ಪ್ರಕಟವಾಗಬೇಕಾದರೆ ಅದಕ್ಕೆ ಅನುಗುಣವಾದ ಆಂತರಿಕ ಭಾವನೆಯ ಸ್ಥಿತಿ ಉಂಟಾಗಿರಲೇಬೇಕು. ಹೊರ ಪ್ರಪಂಚಕ್ಕೆ ಮನಸ್ಸಿನೊಳಗಿನ ಭಾವನೆಗಳು ಗೋಚರಿಸುವುದೇ ಬಾಹ್ಯ ಅಭಿವ್ಯಕ್ತಿಯಿಂದ. ಆಳವಾದ, ಶುದ್ಧವಾದ, ಯೋಗ್ಯವಾದ, ಅಧ್ಯಾತ್ಮಿಕ ಸಂಗತಿಗಳಾಗಿದ್ದರೆ ಅಭಿವ್ಯಕ್ತಿಯೂ ಅಷ್ಟೇ ಆಳ, ಶುದ್ಧ, ಯೋಗ್ಯ, ಅಧ್ಯಾತ್ಮಿಕ ಹಾಗೂ ಗೌರವಾನ್ವಿತವಾಗಿಯೇ ಪ್ರಕಟವಾಗುತ್ತವೆ. ಮನುಷ್ಯನ ಮನಸ್ಸು ಅಥವಾ ಚೈತನ್ಯವು ದೇಹದಲ್ಲಿ ಮತ್ತು ಅದರ ಮೂಲಕ ತನ್ನ ಕಾರ್ಯಚಟುವಟಿಕೆಗಳಲ್ಲಿ ಅದು ನಿರ್ವಹಿಸುವ ಪ್ರತಿಯೊಂದು ಪ್ರಜ್ಞಾಪೂರ್ವಕ ಕ್ರಿಯೆಯ ರಚನೆಯಲ್ಲಿ ಪ್ರಭಾವ ಅಥವಾ ತನ್ನ ಕುರುಹುಗಳನ್ನು ಬಿಡುತ್ತದೆಯೇ? ಆ ಕುರುಹು ಶಾಶ್ವತವಾಗಿ ಮನಸ್ಸಿನಲ್ಲಿ ಸ್ಥಿರವಾಗಿರುತ್ತದೆಯೇ ಮತ್ತು ಅವೆಲ್ಲದರ ದಾಖಲೆಯನ್ನು ರೂಪಿಸುತ್ತದೆಯೇ? ಎಂಬೆಲ್ಲಾ ಜಿಜ್ಞಾಸೆಗಳಿವೆ.
ಪ್ರಕೃತಿಯು ನಮ್ಮ ಸುತ್ತಲಿನ ಪರಿಸರದಲ್ಲಿ ಎಲ್ಲೆಡೆಯೂ ತನ್ನ ಚಟುವಟಿಕೆಗಳ ಕುರುಹುಗಳನ್ನು ಭೌತಿಕರೂಪಗಳಲ್ಲಿ ದಾಖಲಿಸುವುದನ್ನು ಕಾಣಬಹುದು: ಭೂಮಿಯ ಹೊರಪದರಗಳಲ್ಲಿ; ಬಂಡೆಗಳ ಸಂಯೋಜನೆಯಲ್ಲಿ; ಮರಗಿಡಗಳ ರಚನೆಯಲ್ಲಿ; ಪಶು-ಪಕ್ಷಿ-ಜೀವಿಗಳು-ಮಾನವರ ದೇಹಗಳ ರಚನೆಯಲ್ಲಿ ಮತ್ತು ಮನುಷ್ಯನ ದೇಹದೊಳಗಿರುವ ಚೈತನ್ಯಶಕ್ತಿಯಲ್ಲಿ; ಯೋಚನೆ ಹಾಗೂ ಅವುಗಳ ಪ್ರಭಾವಗಳು ವ್ಯಕ್ತಿಯ ಪ್ರಭಾವಳಿಯಲ್ಲಿ ಶಾಶ್ವತವಾಗಿ ದಾಖಲಾಗಿ ಮತ್ತು ಜನ್ಮಜನ್ಮಾಂತರಗಳಲ್ಲಿ ಸಂರಕ್ಷಿಸಲ್ಪಡುವ ನಿರಂತರ ಪ್ರಕ್ರಿಯೆಯನ್ನು ನಾವು ಗುರುತಿಸಬಹುದು. ಇವೆಲ್ಲವೂ ಪ್ರಕೃತಿಯ ಚಟುವಟಿಕೆಗಳ ಹೆಜ್ಜೆಗುರುತುಗಳು. ಉರುಳುವ ಬಂಡೆಯು ತನ್ನ ಗೀರುಗಳನ್ನು ಪರ್ವತದ ಮೇಲೆ ಬಿಡುತ್ತದೆ; ಹರಿಯುವ ನದಿಯು ಮಣ್ಣಿನಲ್ಲಿ ತನ್ನ ಜಾಡನ್ನು ಪ್ರಕಟಿಸುತ್ತದೆ; ಪ್ರಾಣಿಯು ಮೂಳೆಗಳ ಸ್ತರದಲ್ಲಿ; ಎಲೆಗಳು ಕಲ್ಲಿದ್ದಲು ಮತ್ತು ನೈಸರ್ಗಿಕ ಇಂಧನಗಳಲ್ಲಿ; ಬೀಳುವ ನೀರಿನ ಹನಿಗಳು ಕಲ್ಲಿನಲ್ಲಿ ರಚಿಸುವ ಗುಳಿಗಳಲ್ಲಿ-ಹೀಗೆ ಪ್ರಕೃತಿಯಲ್ಲಿ ಪ್ರತಿಯೊಂದು ಕ್ರಿಯೆಯೂ ನಿರಂತರವಾಗಿ ತಮ್ಮ ತಮ್ಮ ಕಾರ್ಯಚಟುವಟಿಕೆಗಳ ಗುರುತನ್ನು ಅಂದರೆ ಅಭಿವ್ಯಕ್ತಿಯನ್ನು ಪ್ರಕಟಿಸುತ್ತವೆ.