For the best experience, open
https://m.samyuktakarnataka.in
on your mobile browser.

ಅಮೃತ ಸಿಂಚನಕ್ಕೊಳಗಾದವಳ ಕಥೆ

03:15 AM May 29, 2024 IST | Samyukta Karnataka
ಅಮೃತ ಸಿಂಚನಕ್ಕೊಳಗಾದವಳ ಕಥೆ

ಕೆಲವೊಮ್ಮೆ ಮಾನಸಿಕ ಸಮಸ್ಯೆಯುಳ್ಳವರ ಸಾಧನೆಗಳು ನಮಗೆ ನಂಬಲಿಕ್ಕಾಗದಷ್ಟು ವಿಶೇಷವಾಗಿರುತ್ತವೆ, ಆದರೆ ಅವರು ಸಾಧನೆಯೊಂದಿಗೆ ಮುಂದೆ ನಿಂತಾಗ ಅಥವಾ ಅವರ ಬಗ್ಗೆ ಪತ್ರಿಕೆಗಳಲ್ಲಿ ಓದಿದಾಗ, ನಾವು ನಂಬಲೇಬೇಕಾಗುತ್ತದೆ. ಈಗ ಹೇಳಲು ಹೊರಟಿರುವುದೂ ಅಂತಹದ್ದೇ ಸಾಧನೆ ಮಾಡಿದ ಒಬ್ಬಳ ಕತೆಯನ್ನು.
ಇದು ದಶಕದ ಹಿಂದಿನ ಮಾತು. ಆಕೆಯ ಹೆಸರು ಸುರಭಿ (ಹೆಸರು ಬದಲಾಯಿಸಲಾಗಿದೆ). ರಾಜಸ್ಥಾನದ ಯಾವುದೋ ಚಿಕ್ಕ ನಗರದವಳು. ಎಂ.ಸಿ.ಎ. ಮಾಡಲು ಬೆಂಗಳೂರಿಗೆ ಬಂದಿದ್ದಳು. ಇಂಗ್ಲಿಷ್‌ನಲ್ಲಿ ಮಾತನಾಡಲು ಬರುತ್ತಿರಲಿಲ್ಲ, ಬಹುಶಃ ಇಂಗ್ಲಿಷ್ ಸರಿಯಾಗಿ ಅರ್ಥವೂ ಆಗುತ್ತಿರಲಿಲ್ಲ. ಮೊದಲನೇ ಸೆಮಿಸ್ಟರ್‌ನಲ್ಲಿ ಎಲ್ಲ ವಿಷಯಗಳಲ್ಲೂ ಅನುತ್ತೀರ್ಣಳಾಗಿದ್ದಳು. ಅವಳಿಗೆ ಆಪ್ತ-ಸಲಹೆಯ ಅಗತ್ಯವಿದೆ ಎಂದು ಅವಳ ಮಾರ್ಗದರ್ಶಕರು ನನ್ನ ಬಳಿ ಕಳುಹಿಸಿದ್ದರು.
ಗುಂಡಗೆ, ಕುಳ್ಳಕೆ ಇದ್ದ ಸುರಭಿ, ನನ್ನ ಬಳಿ ಬಂದಾಗ ನಿಂತುಕೊಂಡೇ ಇದ್ದಳು. ಕುಳಿತುಕೋ ಎಂದರೂ ಕುಳಿತುಕೊಳ್ಳಲಿಲ್ಲ, ಬೆದರಿಸಿ ಕೂರಿಸಬೇಕಾಯಿತು. ಕೊನೆಗೂ ಕುರ್ಚಿಯ ಅಂಚಿನಲ್ಲೇ ಕುಳಿತುಕೊಂಡಳು! ಅವಳಿಗೆ ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಕೊಟ್ಟು ನಂತರ ಆಪ್ತ-ಸಲಹೆಯ ಬಗ್ಗೆ ಪರಿಚಯ ಮಾಡಿಕೊಟ್ಟೆ.
ಸುರಭಿ ತನ್ನ ಕಷ್ಟವನ್ನು ಹೇಳಿಕೊಳ್ಳಲು ಆರಂಭಿಸಿದಳು, ಅರ್ಧ ಹಿಂದಿ, ರಾಜಸ್ಥಾನಿ(ಬಹುಶಃ) ಮತ್ತು ಇಂಗ್ಲಿಷ್ ಮಿಶ್ರಿತ ಭಾಷೆ. ತುಂಬಾ ಸಣ್ಣದಾಗಿ ಮಾತಾಡುತ್ತಿದ್ದ ಅವಳು ಹೇಳಿದ್ದು ನನಗೆ ಅರ್ಧವೂ ಅರ್ಥವಾಗಲಿಲ್ಲ. ಜೊತೆಗೆ ತುಂಬಾ ಆತಂಕಕ್ಕೆ ಒಳಗಾಗಿದ್ದಳು, ಪ್ರತಿ ಪದವನ್ನು ಉಚ್ಚರಿಸಲೂ ತಡವರಿಸುತ್ತಿದ್ದಳು.
ನಿಧಾನವಾಗಿ, ಕೇವಲ ಇಂಗ್ಲಿಷ್‌ನಲ್ಲಿ ಅವಳ ಸಮಸ್ಯೆಯನ್ನು ಇನೊಮ್ಮೆ ಹೇಳಲು ಹೇಳಿದೆ. ಆಕೆ ಬಿ.ಸಿ.ಎ. ಮಾಡಿದ್ದು ರಾಜಸ್ಥಾನದಲ್ಲಿ, ಪ್ರಥಮ ದರ್ಜೆಯಲ್ಲೇ ಉತ್ತೀರ್ಣಳಾಗಿದ್ದಳು, ಆಗಾಗ್ಗೆ ಆತಂಕಕ್ಕೆ ಒಳಗಾಗಿ ಮಾನಸಿಕ ತಜ್ಞರ ಬಳಿಯೂ ಹೋಗಿ ಬಂದಿದ್ದಳು. ಆದರೆ ಪ್ರಯೋಜನವಾಗಿರಲಿಲ್ಲ. ದೂರದ ಸಂಬಂಧಿಯೊಬ್ಬ ಇದೇ ಕಾಲೇಜಿನಲ್ಲೇ ಇಂಜಿನಿಯರಿಂಗ್ ಮಾಡಿದ್ದನಂತೆ. ಅವನು, ಇವಳು ಬಿ.ಸಿ.ಎ. ಮಾಡಿದ್ದು ತಿಳಿದುಕೊಂಡು ಇಲ್ಲಿಗೆ ಬಂದು ಎಂ.ಸಿ.ಎ. ಮಾಡಲು ಹೇಳಿದ್ದನಂತೆ. ಹಾಗಾಗಿಯೇ ಇವಳು ಬೆಂಗಳೂರಿಗೆ ಬಂದಿದ್ದಳು, ಬೆಂಗಳೂರಿನ ನಯ-ನಾಜೂಕು ತಿಳಿಯದ, ಇಂಗ್ಲಿಷ್ ಬಾರದ ಹುಡುಗಿಗೆ, ತುಪ್ಪದಲ್ಲೇ ಎಲ್ಲವನ್ನು ಮಾಡುತ್ತಿದ್ದ ಅವಳ ಅಮ್ಮನ ಅಡಿಗೆಯ ಮುಂದೆ, ತುಪ್ಪದ ಒಂದಂಶವೂ ಇರದ ಬೆಂಗಳೂರಿನ ಪಿ.ಜಿ. ಊಟ ಆಘಾತ ಕೊಟ್ಟಿದ್ದಂತೂ ಸತ್ಯ.
ಸುರಭಿಗೆ ಆತಂಕದ ಸಮಸ್ಯೆಯ ಬಗ್ಗೆ ಹೇಳಿ, ಅದರಿಂದ ಅವಳಿಗೆ ಆಗುವ ತೊಂದರೆ, ಮಿತಿಗಳ ಬಗ್ಗೆ ತಿಳಿಸಿಕೊಟ್ಟು, ಪ್ರತಿ ವಾರವೂ ಬರಲು ಹೇಳಿದೆ. ಹೇಳಿದ ಸಮಯಕ್ಕೆ ಸರಿಯಾಗಿ ಬಂದ ಅವಳ ಸಮಯ ನಿಷ್ಠೆಗೆ ಮೆಚ್ಚುಗೆ ಸೂಸಿ, ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳುವ ವಿಧಾನಗಳನ್ನು, ಮತ್ತು ಪ್ರಾಣಾಯಾಮ-ಧ್ಯಾನವನ್ನು ಕಲಿಸಿದೆ. ಮುಂದಿನ ವಾರಗಳಲ್ಲಿ ಅವಳನ್ನು ಪ್ರೇರೇಪಿಸಿಕೊಳ್ಳುವ ಆಲೋಚನಾ ವಿಧಾನಗಳನ್ನು ಕಲಿಸಿ, ಗುರಿಯನ್ನು ಸಾಧಿಸುವ ಪ್ರಯತ್ನದಲ್ಲಿ ಎದುರಾಗುವ ಎಡರು-ತೊಡರುಗಳು, ಅವುಗಳನ್ನು ನಮ್ಮ ಮಿತಿಯಲ್ಲಿ ನೋಡುವ ಬಗೆಯನ್ನು ಹೇಳಿಕೊಟ್ಟೆ.
ಪ್ರತಿ ವಾರವೂ ಒಮ್ಮೆಯಾದರೂ ಅಳುತ್ತಿದ್ದ ಸುರಭಿಗೆ, ಅವಳ ಸ್ತ್ರೀ ತತ್ವದ ಸಬಲೀಕರಣವಾಗದೆ ಏನೂ ಬದಲಾವಣೆಯಾಗದು ಎಂದು ತಿಳಿದು ಅವಳಿಗೆ ನಾನು ಹೇಳಲು ಆರಿಸಿದ್ದು ಮಹಾಭಾರತದ ದಮಯಂತಿಯ ಕಥೆಯನ್ನು. ದಮಯಂತಿಯ ನಿರ್ಭೀತ ವ್ಯಕ್ತಿತ್ವ, ಸಮಯಪ್ರಜ್ಞೆ, ಮೌಲ್ಯದ ನಡೆ ಮತ್ತು ಎಷ್ಟು ಸೋಲಾದರೂ ಪುನಃ ಎದ್ದುನಿಂತು ಸಮಸ್ಯೆಯನ್ನು ಎದುರಿಸಿದ ರೀತಿಯನ್ನು ಹೇಳಿದೆ. ಆಗಲೂ ಅತ್ತುಕೊಂಡೇ ಕುಳಿತಿದ್ದಳು. ಅಳುತ್ತಲೇ ಮಾತಾಡುತ್ತಿದ್ದ ಸುರಭಿ, ಕೆಲವೊಮ್ಮೆಯಾದರೂ ಅವಳ ಕಣ್ಣ ನೀರನ್ನು ಕುಡಿದು, ಮುಖ-ಮೈಯೆಲ್ಲಾ ಒರೆಸಿಕೊಳ್ಳುತ್ತಿದ್ದಳು. ನಿನ್ನ ಕಣ್ಣ ನೀರೇ ಅಮೃತವೆಂದುಕೊಂಡು ನಂಬುತ್ತಾ ಹೋಗು, ಆಗ ನಿನ್ನಲ್ಲಿ ಬದಲಾವಣೆ ಕಾಣುತ್ತದೆ ಎಂದೆ.
ಸುರಭಿ ದಮಯಂತಿಯ ಕಥೆಯ ನಂತರ ನನ್ನ ಬಳಿ ಬರಲಿಲ್ಲ, ಆಮೇಲೆ ವಿಚಾರಿಸಿದಾಗ ಕಾಲೇಜು ಬಿಟ್ಟಿರುವ ಸಂಗತಿ ತಿಳಿಯಿತು.
ಇದಾಗಿ ಸುಮಾರು ಐದಾರು ವರ್ಷವಾದರೂ ಆಗಿರಬೇಕು, ನನಗೆ ಸುರಭಿ ಎನ್ನುವ ವಿದ್ಯಾರ್ಥಿನಿಯ ಹೆಸರೇ ಮರೆತುಹೋಗಿತ್ತು. ಒಂದು ಮಧ್ಯಾಹ್ನ, ನನ್ನ ಕಚೇರಿಯ ಎದುರಿಗೆ ಯುವತಿಯೊಬ್ಬಳು ನಿಂತಿದ್ದಳು. ಸುಮಾರು ಇಪ್ಪತ್ತೈದರ ವಯಸ್ಸಿನವಳು. ಬನ್ನಿ ಎಂದು ಕರೆದಾಕ್ಷಣ ಬಂದು ತಾನಾಗೇ ಕುಳಿತುಕೊಂಡಳು. ಸರ್, ನನ್ನ ಪರಿಚಯ ಆಯ್ತಾ ಎಂದು ಕೇಳಿದ ಹುಡುಗಿಯನ್ನೇ ನೋಡುತ್ತಿದ್ದೆ, ಗುರುತು ಸಿಕ್ಕಲಿಲ್ಲ.
ನಾನು ಸರ್, ಸುರಭಿ, ನಿಮ್ಮ ಬಳಿ ಆಪ್ತ-ಸಲಹೆಗೆ ಬಂದಿದ್ದೆ. ಚೆನ್ನಾಗಿದ್ದೀರ ಎಂದು ಕೇಳಿದಳು.
"ಚೆನಾಗಿದ್ದೇನೆ, ನೀನು ಹೇಗಿದ್ದೀಯಮ್ಮಾ ಮತ್ತು ಏನು ಮಾಡುತ್ತಿದ್ದಿ?"
``ಸರ್, ನಾನು ದೆಹಲಿಯಲ್ಲಿ ಇದ್ದೇನೆ. ಇಲ್ಲಿ ನನ್ನ ಗೆಳತಿಯೊಬ್ಬಳ ಮದುವೆ ಇತ್ತು. ಅದಕ್ಕೆ ಬಂದಿದ್ದೆ. ಹಾಗೇ ನೀವು ಇದ್ದಿರಬಹುದು ಎಂದು ಅಂದುಕೊಂಡು ನೋಡಲಿಕ್ಕೆ ಬಂದಿದ್ದೇನೆ. ತೆಗೆದುಕೊಳ್ಳಿ ಸರ್, ಸ್ವೀಟ್'' ಎಂದು ಒಂದು ಬಾಕ್ಸ್ ಕೊಟ್ಟಳು. ತುಂಬಾ ಸಂತೋಷ, ನೀನು ಇದ್ದಕ್ಕಿದ್ದಂತೆ ಕಾಲೇಜು ಬಿಟ್ಟೆ ಎಂದು ಗೊತ್ತಾಯಿತು. ಏನಾಯಿತು ಅಂತ ಗೊತ್ತಾಗಲಿಲ್ಲ.
ಹೌದು ಸರ್, ಅಪ್ಪನಿಗೆ ಅರಾಮಿರಲಿಲ್ಲ, ಊರಿಗೆ ಹೋದವಳು ಆಮೇಲೆ ಅಲ್ಲೇ ಉಳಿದುಕೊಂಡೆ, ಅಮ್ಮ ಒಬ್ಬರೇ ಆಗುತ್ತಾರೆ ಅಂತ. ಅಪ್ಪನಿಗೆ ಆರಾಮದ ಮೇಲೆ ನನ್ನ ಓದು ಮುಂದುವರಿಸಿದೆ, ಜೈಪುರಕ್ಕೆ ಶಿಫ್ಟ್ ಆಗಿ ಅಲ್ಲೇ ಎಂ.ಎಸ್ಸಿ ಮಾಡಿದೆ. ಆಮೇಲೆ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಸಿಕ್ತು. ಈಗ ಅದೇ ಸಂಸ್ಥೆಯಲ್ಲಿ ಸೀನಿಯರ್ ಮ್ಯಾನೇಜರ್ ಆಗಿದ್ದೀನಿ, ನೀವು ಹೇಳಿದ, ಮನಸ್ಸನ್ನು ಶಾಂತಗೊಳಿಸುವ ಎಲ್ಲ ಕ್ರಮವನ್ನೂ ಮಾಡುತ್ತಿದ್ದೇನೆ, ಯಾವುದಕ್ಕೂ ಅಂಜಿಕೆಯಿಲ್ಲ. ಈಗ ಆತಂಕದ ಛಾಯೆಯೂ ನನ್ನಲ್ಲಿ ಇಲ್ಲ. ಜೊತೆಗೆ ನೀವು ಹೇಳಿದ ಕಣ್ಣ ನೀರೇ ಅಮೃತವಾಗಬೇಕು ಎನ್ನುವ ಸಲಹೆ ನನ್ನ ಮೇಲೆ ತುಂಬಾ ಪ್ರಭಾವ ಬೀರಿತು. ದುಃಖವಾದಾಗ ಅಳಬೇಕೇ ಹೊರತು ಭಯವಾದಾಗ ಅಲ್ಲ ಎನ್ನುವುದು ನನಗೆ ಈಗ ಅರ್ಥವಾಗಿದೆ. ಕಳೆದೆರಡು ವರ್ಷಗಳಿಂದ ಅನೇಕ ದೇಶಗಳನ್ನು ಸುತ್ತಿದ್ದೇನೆ. ನಿಮ್ಮ ಸಹಕಾರ-ಸಹಾಯವನ್ನು ಯಾವತ್ತೂ ಮರೆಯುವುದಿಲ್ಲ ಎಂದು ಹೇಳುವಾಗ ಅವಳ ಕಣ್ಣು ತುಂಬಿ ಬಂದಿತ್ತು. ಅದು ಭಯ-ಭೀತಿ, ದುಃಖ, ಸಂತೋಷಗಳಾಚೆಗಿನ ಹೃದಯದ ಭಾವ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.