For the best experience, open
https://m.samyuktakarnataka.in
on your mobile browser.

ಇದೇನಾ ಪ್ರಜಾಪ್ರಭುತ್ವ?

03:00 AM Mar 29, 2024 IST | Samyukta Karnataka
ಇದೇನಾ ಪ್ರಜಾಪ್ರಭುತ್ವ

ಪ್ರಜಾಸತ್ತೆ, ಪ್ರಜಾಧಿಪತ್ಯೆ, ಎಲ್ಲರನ್ನೂ ಸಮಾನತೆ, ಸಹೋದರತ್ವ ಮಾನವರಂತೆ ನೋಡುವುದೇ ಪ್ರಜಾಪ್ರಭುತ್ವ. ಪ್ರಜೆಗಳು ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ಸರಕಾರ ಪ್ರಜಾಪ್ರಭುತ್ವ ಸರಕಾರ. ಅರ್ಥಶಾಸ್ತ್ರದ ಪ್ರಕಾರ ಪ್ರಜೆಗಳ ಸುಖದಲ್ಲೆ ರಾಜನ ಸುಖವಿದೆ ಅವರ ಕಲ್ಯಾಣದಲ್ಲಿ ಅವನ ಕಲ್ಯಾಣ. ತನಗೆ ಇಷ್ಟವೆನಿಸಿದ್ದರಿಂದಲೇ ತನ್ನ ಒಳಿತು ಎಂದು ಆತ ಪರಿಗಣಿಸಬಾರದು. ಬದಲು ತನ್ನ ಪ್ರಜೆಗಳಿಗೆ ಯಾವುದು ಇಷ್ಟವೋ ಅದರಿಂದಲೇ ತನ್ನ ಒಳಿತು ಎಂದು ಭಾವಿಸಬೇಕು.
ಬ್ರಿಟಿಷ್ ಪ್ರಜಾಪ್ರಭುತ್ವವನ್ನು ಸ್ವೀಕರಿಸಿದ ನಾವು ಅವರ ಪಾರ್ಲಿಮೆಂಟ್ ಪದಕ್ಕೆ ನಮ್ಮದು ಸಂಸತ್ತು ಎಂಬ ಶಬ್ದವನ್ನೂ ಕೂಡಾ ಬಳಸಿಕೊಂಡಿದ್ದೇವೆ. ಪಾರ್ಲಿಮೆಂಟ್ ಅಂದರೆ ಮಾತಾಡುವ ಸಭೆ. ಇದು ಇಂಗ್ಲಿಷ್ ಶಬ್ದ ಅಲ್ಲ. ಇಂಗ್ಲಿಷ್‌ಗೆ ಅಸಂಖ್ಯಾತ ಶಬ್ದಗಳನ್ನೂ ಕೊಟ್ಟ ಪ್ರಾಚೀನ ಲ್ಯಾಟೀನ್ ಅಥವಾ ಗ್ರೀಕ್ ಪದವೂ ಅಲ್ಲ. ಆದರೆ ಇದನ್ನು ಫ್ರೆಂಚ್ ಭಾಷೆಯಿಂದ ತೆಗೆದುಕೊಂಡಿದೆ.
ಫ್ರೆಂಚ್‌ನಲ್ಲಿ ಪಾರ್ಲರ್ ಎಂದರೆ ಮಾತನಾಡುವುದು. ಅದರಿಂದಲೇ ಹುಟ್ಟಿದ ಪಾರ್ಲಿ ಎಂಬ ಶಬ್ದವನ್ನು ಯಾವುದಾದರೂ ಒಪ್ಪಂದಕ್ಕಾಗಿ ಮಾಡುವ ಮಾತುಕತೆ ಎಂಬರ್ಥದಲ್ಲಿ ಇಂಗ್ಲಿಷ್‌ನಲ್ಲಿ ಬಳಸುತ್ತಾರೆ.
ನಾವು ಬಳಸುವ ಇನ್ನೊಂದು ಪದ ಸಂಸತ್ತು. ವಾಸ್ತವಿಕವಾಗಿ ಮಾತಾಡುವ ಸ್ಥಳವೇ ಆಗಿದೆ. ಅಂದರೆ ಒಟ್ಟಾಗಿ ಕುಳಿತುಕೊಳ್ಳುವ ಸ್ಥಳ. ಮನೆಗಳಲ್ಲಿ ಆರಾಮವಾಗಿ ಕೂತು ಮಾತಾಡುವ ಕೋಣೆ, ಬೈಠಕ್, ಬೈಠಕ್ ಖಾನೆ ಎಂದು ಇಂಗ್ಲಿಷ್‌ನಲ್ಲಿ ಪಾರ್ಲರ್ ಎನ್ನುವರು.
ಪಾರ್ಲಿಮೆಂಟ್ ಅಥವಾ ಸಂಸತ್ತು ಎಂದು ಎರಡೂ ಪದಗಳನ್ನು ಬಳಸುವ ನಾವು ಪ್ರಜಾಪ್ರಭುತ್ವದ ಮಾತಾಡುವ, ಒಟ್ಟಾಗಿ ಕುಳಿತುಕೊಳ್ಳುವ ಸ್ಥಳ. ಈ ಸ್ಥಳದ ಪರಿಕಲ್ಪನೆ ಒಮ್ಮೊಮ್ಮೆ ಬದಲು ಕಾಣಿಸುತ್ತದೆ. ತಲೆಬುಡವಿಲ್ಲದ ಚರ್ಚೆಗಳು, ಮಾತುಗಳು, ತಳ್ಳಾಟ, ನೂಕಾಟ, ಖುರ್ಚಿಗಳನ್ನು ಎಳೆದಾಡುವುದು, ಕೈ ಕೈ ಮಿಲಾಯಿಸುವುದು ನಡೆಯುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಇಲ್ಲಿ ಕುಳಿತವರನ್ನು ಹೆದರಿಸಲು ಬೆದರಿಸಲು ಸ್ಮೋಕ್ ಬಾಂಬು ಎಸೆಯುವಂತಹ ಸಂಗತಿಗಳನ್ನು ನೋಡಿ ಇದೇನಾ ಪ್ರಜಾಪ್ರಭುತ್ವದ ದೇಗುಲ? ಎನಿಸದು.
ಸಂಸತ್‌ನಲ್ಲಿ ಕುಳಿತು ಮಾತಾಡುವ ವ್ಯಕ್ತಿಗಳಿಗೆ ಪ್ರತಿ ೫ ವರ್ಷಕ್ಕೊಮ್ಮೆ ಮತದಾನ ಮೂಲಕ ಆಯ್ಕೆ ಆಗುತ್ತದೆ. ಆಯ್ಕೆ ಮಾಡುವ ಎಷ್ಟೋ ಕೋಟಿ ಮತದಾರ ಪ್ರಭುಗಳಿಗೆ ನಾವು ಎಲ್ಲಿದ್ದೀವಿ, ಹೇಗಿದ್ದೀವಿ ತಿಳಿಯದವರು. ಪ್ರಜಾಪ್ರಭುತ್ವದ ಗಂಧಗಾಳಿಯೂ ಗೊತ್ತಿಲ್ಲದ ಅವರೆಲ್ಲ ಅನಕ್ಷರಸ್ಥರು, ಮೌಢ್ಯತೆಯುಳ್ಳವರು, ಇಂತಹವರ ಪ್ರತಿನಿಧಿಗಳಿಂದ ಆರಿಸಿಹೋದ ಈ ಸ್ಥಳ ಇದೇನಾ ಪ್ರಜಾಪ್ರಭುತ್ವ ದೇಗುಲ? ಎನಿಸದು.
ಅಪಾರ ಸಂಖ್ಯೆಯ ಜಾತಿ ಭಾಷೆ, ಧಾರ್ಮಿಕ ವೈವಿಧ್ಯತೆಗಳು ಇರುವ ಭಾರತದಂತಹ ದೇಶದಲ್ಲಿ ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿ ತಮ್ಮ ಕ್ಷೇತ್ರದ ಎಲ್ಲ ಜನರನ್ನು ಪ್ರತಿನಿಧಿಸಬೇಕು, ಸೇವಕನಾಗಿರಬೇಕು. ಆದರೆ ಜಾತಿ ಭಾಷೆ, ಧರ್ಮ ಮುಂತಾದ ಅಪಾಯಕಾರಿ ಚಿಹ್ನೆಗಳ ಹಣೆಪಟ್ಟಿ ಹಚ್ಚಿಕೊಂಡ ಸದಸ್ಯರಿರುವ ಇಂತಹ ಸ್ಥಳ ಇದೇನಾ ಪ್ರಜಾಪ್ರಭುತ್ವ ದೇಗುಲ? ಎನಿಸದು.
ಶಿವನನ್ನು ಕಂಡ ಸಿದ್ಧರಾಮ ಭೂಮಿಗೆ ಹಿಂದುರಿಗಿದ ಮೇಲೆ ಲೋಕೋಪಯೋಗಿ ಕೆಲಸದಲ್ಲಿ ತೊಡಗಿ ‘ಕೆಲಸ ಇಲ್ಲದವರಿಗೆ ಕೆಲಸ ಕೊಡಿಸಿದ’ ಎನ್ನುವ ಈ ಮಾತುಗಳು ಪ್ರಜಾಪ್ರಭುತ್ವದ ಸರಕಾರಗಳು ಮಾಡಬೇಕಾದ ಕೆಲಸಗಳನ್ನು ಬಿಟ್ಟು ನಾ ಮುಂದು, ತಾ ಮುಂದು ಎಂದು ಜನರನ್ನು ಕೆಲಸಗೇಡಿ ಮಾಡುವ ಇಂತಹ ಪ್ರತಿನಿಧಿಗಳ ಈ ಸ್ಥಳ ಇದೇನಾ ಪ್ರಜಾಪ್ರಭುತ್ವ ದೇಗುಲ? ಎನಿಸದು.
ನೂರು ಜನ ಕುರುಡರು ಮನೆಯಲ್ಲಿದ್ದರೂ ಒಂದು ಮನೆಯನ್ನು ರಕ್ಷಿಸಲು ಸಾಧ್ಯವಿಲ್ಲ. ಅಂತೆಯೇ ಪಾರ್ಲಿಮೆಂಟ್, ಸಂಸತ್ತಿನಲ್ಲಿ ಸೇರುವ ಆಯ್ಕೆಯಾದ ಪ್ರತಿನಿಧಿಗಳು ಯೋಗ್ಯರಿದ್ದರೆ ಮಾತ್ರ ಅದೊಂದು ಪ್ರಜಾಪ್ರಭುತ್ವಕ್ಕೆ ಸೊಬಗು ಬರಲು ಸಾಧ್ಯವಿದೆ. ಆದರೆ ಅಲ್ಲಿ ಅವಿದ್ಯಾವಂತರು, ಅವಿವೇಕಿಗಳು, ರೌಡಿಗಳು ದುಂದುಗಾರಿಕೆ, ಹಿಂಸಾಚಾರದ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಇಂತಹ ಸ್ಥಳ, ಇದೇನಾ ಪ್ರಜಾಪ್ರಭುತ್ವ ದೇಗುಲ? ಎನಿಸದು.
ತಮ್ಮ ತಮ್ಮ ಕುಟುಂಬಗಳ ಸುತ್ತ ಗಿರಿಕಿ ಹೊಡೆಯುವ ಸ್ವಾರ್ಥ ರಾಜಕಾರಣಿಗಳು ಸೇರುವ ಈ ಹೊತ್ತಲ್ಲಿ ನೂರು ಜನ ಕುರುಡರು ದಾರಿ ಹುಡುಕಿದಂತೆ ಆಗುತ್ತದೆ. ಹಿಟ್ಲರ್ ವೆಯ್ ಕೆಂಪ್ ಎಂಬ ಪುಸ್ತಕದಲ್ಲಿ ಪ್ರಜಾಪ್ರಭುತ್ವವನ್ನುದ್ದೇಶಿಸಿ ಒಬ್ಬ ವಿವೇಚನಾ ಶಕ್ತಿಯುಳ್ಳ ವ್ಯಕ್ತಿಗಳು ಮಾಡುವ ಕೆಲಸವನ್ನು ನೂರು ಜನ ಮೂರ್ಖರು ಸೇರಿ ಮಾಡಬಲ್ಲರೇ? ಎಂದು ಪ್ರಶ್ನಿಸಿದ್ದಾರೆ. ಇಂತಹ ಸಂಖ್ಯಾಬಲ ನ್ಯಾಯಸಮ್ಮತವಾಗೋದಿಲ್ಲ.
ಕಾಲವು ರಾಜನಿಗೆ ಕಾರಣವೋ? ರಾಜನೇ ಕಾಲ ಕೆಡಲು ಕಾರಣವೇ? ಎಂಬ ಸಂಶಯ ಬೇಡ. ರಾಜನೇ ಕಾಲಕ್ಕೆ ಕಾರಣ. ರಾಜನು ಧರ್ಮ ಮಾರ್ಗದಲ್ಲಿದ್ದರೆ ಕಾಲವೂ ಚೆನ್ನಾಗಿರುತ್ತದೆ. ಪ್ರಯುಕ್ತ ಅಂತಹ ರಾಜನನ್ನು ಅವನ ಸದಸ್ಯರನ್ನು ಪ್ರಜೆಗಳು ಆಯ್ಕೆ ಮಾಡಬೇಕಾಗುತ್ತದೆ. ಅಂದಾಗ ಆ ಪಾರ್ಲಿಮೆಂಟ್, ಸಂಸತ್ತು ಪ್ರಜಾಪ್ರಭುತ್ವದ ದೇಗುಲವೆನಿಸಲು ಸಾಧ್ಯವಿದೆ.