ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕುಟುಂಬ ರಾಜಕಾರಣದ ವಿಜೃಂಭಣೆ

03:00 AM Apr 01, 2024 IST | Samyukta Karnataka

ಲೋಕಸಭಾ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬ’ ಎಂದು ಆಚರಿಸಬೇಕು. ಆದರೆ ಪ್ರಜಾಪ್ರಭುತ್ವ ಅಂದರೇನು ಎಂಬುದನ್ನು ಮೊದಲು ಈ ರಾಜಕಾರಣಿಗಳು ಅರಿತುಕೊಳ್ಳಬೇಕಿದೆ.ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ರಚನೆಯಾಗಿರುವ ಸರ್ಕಾರ’ ಎಂದು ಖ್ಯಾತ ರಾಜ್ಯಶಾಸ್ತ್ರಜ್ಞ ಅಬ್ರಾಹಾಂ ಲಿಂಕನ್ ಪ್ರಜಾಪ್ರಭುತ್ವ ಕುರಿತು ವ್ಯಾಖ್ಯಾನ ನೀಡಿದ್ದಾರೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಕುಟುಂಬ ರಾಜಕೀಯ ವಿಜೃಂಭಿಸುತ್ತಿದೆ. ಅಪ್ಪ, ಮಗ, ಮೊಮ್ಮಗ, ಮಗಳು, ಸೊಸೆ, ಪತ್ನಿ, ಅಳಿಯ, ಭಾವ, ಸಹೋದರ, ಸಹೋದರಿ…, ಹೀಗೆ, ತಮ್ಮ ಕುಟುಂಬದ ಸದಸ್ಯರೇ ಅಧಿಕಾರಕ್ಕೆ ಬರಬೇಕು, ತಾವೇ ಆಡಳಿತ ನಡೆಸಬೇಕು, ತಮ್ಮ ಆಸ್ತಿ-ಅಂತಸ್ತು, ಹಣ ಉಳಿಸಿಕೊಳ್ಳಬೇಕು ಎಂಬಿತ್ಯಾದಿ ಮನಸ್ಸುಗಳೇ ನಮ್ಮ ದೇಶದ ಪ್ರಜಾಪ್ರಭುತ್ವದಲ್ಲಿ ರಾರಾಜಿಸುತ್ತಿವೆ. ಇದು ಎಲ್ಲ ರಾಜಕೀಯ ಪಕ್ಷಗಳಲ್ಲಿ ಇರುವುದನ್ನು ಈ ಬಾರಿಯ ಲೋಕಸಭಾ ಚುನಾವಣೆ ಸಾಬೀತು ಮಾಡಿದೆ. ನನಗಿಲ್ಲದಿದ್ದರೆ ನನ್ನ ಪತ್ನಿ ಇಲ್ಲವೆ ನನ್ನ ಪುತ್ರನಿಗೆ, ಇಲ್ಲವೆ ನನ್ನ ಕುಟುಂಬದ ಯಾರಾದರೊಬ್ಬ ಸದಸ್ಯನಿಗೆ ಟಿಕೆಟ್ ಕೊಡಿ.’ಅವರ ಮಗನಿಗೆ ಕೊಟ್ಟಿದ್ದೀರಿ, ನನ್ನ ಮಗನಿಗೆ ಏಕೆ ಟಿಕೆಟ್ ಕೊಟ್ಟಿಲ್ಲ..’ ನನ್ನ ಮಗಳಿಗೆ ನೀವು ಟಿಕೆಟ್ ನೀಡದಿದ್ದರೆ ನಿಮ್ಮ ಅಭ್ಯರ್ಥಿ ಅದು ಹೇಗೆ ಗೆಲ್ಲುತ್ತಾನೆ ನೋಡೋಣ..’ ಎಂಬಿತ್ಯಾದಿ ಸವಾಲುಗಳು ಕೂಡ ರಾಜಕೀಯ ಪಕ್ಷಗಳ ನೇತಾರರಿಗೆ ಹಾಕಲಾಗುತ್ತಿದೆ. ಇತ್ತೀಚೆಗೆ ವಿವಿಧ ಮಠಗಳ ಸ್ವಾಮೀಜಿಗಳು ಕೂಡ ನಮ್ಮ ಜಾತಿಯವನಿಗೆ ನೀವು ಟಿಕೆಟ್ ನೀಡಲೇಬೇಕು, ಇಲ್ಲದಿದ್ದರೆ ನಾವು ನಮ್ಮ ನಿರ್ಧಾರ ತಿಳಿಸುತ್ತೇವೆ..’ ಎಂದು ಎಚ್ಚರಿಕೆ ಕೊಡುತ್ತಿರುವುದನ್ನೂ ನೋಡುತ್ತಿದ್ದೇವೆ. ನಮ್ಮ ದೇಶದ ಪ್ರಜಾಪ್ರಭುತ್ವ ಯಾವ ಹಂತಕ್ಕೆ ಬಂದು ನಿಂತಿದೆ ನೋಡಿ..
ಪ್ರತಿಯೊಬ್ಬನೂ ಪಾಲ್ಗೊಳ್ಳಲು ಅವಕಾಶ ಇರುವ ಸರ್ಕಾರವೇ ಪ್ರಜಾಪ್ರಭುತ್ವ. ಜಾತಿ, ಧರ್ಮ, ಲಿಂಗ, ಬಣ್ಣ ಹೀಗೆ ಯಾವುದೇ ತಾರತಮ್ಯ ಭೇದಭಾವವಿಲ್ಲದೆ ಪ್ರತಿಯೊಬ್ಬನ ಹಿತಕ್ಕೆ ಅನುಗುಣವಾದ ಸಮಾಜ ವ್ಯವಸ್ಥೆಯೇ ಪ್ರಜಾಪ್ರಭುತ್ವ. ಶ್ರೀಮಂತ ವರ್ಗದ ವಿಶೇಷ ಹಕ್ಕುಗಳನ್ನು ರಕ್ಷಿಸುವ ಸಮಾಜ ವ್ಯವಸ್ಥೆ ಇದಲ್ಲ. ಪ್ರಜಾಪ್ರಭುತ್ವ ಅರಸೊತ್ತಿಗೆಯಂತೆ ನಿರಂಕುಶ ಪ್ರಭುತ್ವವಲ್ಲ ಇಲ್ಲವೆ ಶ್ರೀಮಂತ ವರ್ಗದವರ ರಾಜ್ಯವಲ್ಲ, ಇದು ಪ್ರಜೆಗಳ ರಾಜ್ಯ. ಇಲ್ಲಿ ಆಳುವವರೂ ಆಳಲ್ಪಡುವವರೂ ಪ್ರಜೆಗಳೇ ಆಗಿರುವುದರಿಂದ ಹೆಚ್ಚು-ಕಡಿಮೆ ಎಂಬ ಭೇದ ಇರುವುದಿಲ್ಲ. ಕೆಲವೇ ವ್ಯಕ್ತಿಗಳು ಸ್ವೇಚ್ಛೆಯಾಗಿ ಆಳಲು ಅವಕಾಶ ಇಲ್ಲ. ಪ್ರಜಾಪ್ರತಿನಿಧಿಗಳು ಪ್ರಜೆಗಳ ಹತೋಟಿಯಲ್ಲಿರಬೇಕಾಗುತ್ತದೆ. ಇಂತಹ ಹತೋಟಿಯನ್ನು ಪರಿಣಾಮಕಾರಿಯಾಗಿಸಲು ಸಂವಿಧಾನ ಮತ್ತು ಕಾನೂನುಗಳಿವೆ. ಆದರೆ, ಸಂವಿಧಾನ ಹಾಗೂ ಕಾನೂನುಗಳ ಒಳಸುಳಿಗಳನ್ನು ಅರಿತಿರುವ ದೇಶದ ರಾಜಕಾರಣಿಗಳು ಅವುಗಳಿಂದ ಹೇಗೆ ಬಚಾವಾಗಬೇಕು ಎಂಬುದನ್ನು ಸಮರ್ಥವಾಗಿ ಅರಿತಿದ್ದಾರೆ. ಇನ್ನು ಪ್ರಜೆಗಳಾದವರಿಗೆ ಸಂವಿಧಾನ ಮತ್ತು ಕಾನೂನುಗಳ ಬಗ್ಗೆ ಅರಿವಿರಬೇಕಾಗುತ್ತದೆ. ಸಂವಿಧಾನ-ಕಾನೂನು ವಿರುದ್ಧವಾಗಿ, ಪ್ರಜೆಗಳಿಗೆ ವಿರುದ್ಧವಾಗಿ ಇಲ್ಲವೆ ಶ್ರೀಮಂತರ ಪರವಾಗಿ ಅಥವಾ ಕೆಲವೇ ವರ್ಗದವರು ಆಡಳಿತ ನಡೆಸುತ್ತಿದ್ದರೆ ತಕ್ಷಣ ಅವರನ್ನು ಚುನಾವಣೆ ಮೂಲಕ ಹಿಂದಕ್ಕೆ ಕರೆಸಿಕೊಳ್ಳುವ ಅವಕಾಶ ಇರುತ್ತದೆ. ಇಂತಹ ಅವಕಾಶ ಈಗ ದೇಶಕ್ಕೆ ಬಂದಿದ್ದು, ಜನತೆ ಕೂಲಂಕುಷವಾಗಿ ಪರಿಶೀಲಿಸಿ ತಮ್ಮ ಪ್ರತಿನಿಧಿಗಳು ಯಾರಾಗಬೇಕು ಎಂಬುದನ್ನು ಪರಾಮರ್ಶಿಸಿ ಮತ’ ಎಂಬ ಅಸ್ತçದ ಮೂಲಕ ಪ್ರತಿನಿಧಿಗಳನ್ನು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕಿದೆ. ಇದು ನಮ್ಮ ಗ್ಯಾರಂಟಿ-ಅದು ಅವರ ಗ್ಯಾರಂಟಿ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಗ್ಯಾರಂಟಿ ತಂತ್ರ ಮತ್ತೆ ಅನುಸರಿಸುತ್ತಿವೆ. ಇನ್ನು ಅಭ್ಯರ್ಥಿಗಳು ಕೂಡ ತಮ್ಮ ಶಕ್ತಾನುಸಾರ ಹಣ, ಹೆಂಡ ಮತ್ತಿತರ ಆಮಿಷಿಗಳಿಂದ ಮತದಾರರನ್ನು ಸೆಳೆಯಲು ಆರಂಭಿಸಿದ್ದಾರೆ. ಇದಕ್ಕೆ ಇಂಬು ಕೊಡುವಂತೆ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲೂ ಅಕ್ರಮವಾಗಿ ಸಾಗಿಸುತ್ತಿದ್ದ ಹಣ, ಬಂಗಾರ-ಬೆಳ್ಳಿ, ಕುಕ್ಕುರ್, ರೇಷ್ಮೆ ಸೀರೆಗಳು, ಬಟ್ಟೆಗಳು ಸೇರಿದಂತೆ ಯಥೇಚ್ಛ ಪ್ರಮಾಣದಲ್ಲಿ ಹಲವು ವಸ್ತುಗಳನ್ನು ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿದ್ದಾರೆ. ಉಚಿತ ಸೌಲಭ್ಯಗಳನ್ನು ನೀಡುವುದು, ಆಸೆ-ಆಮಿಷಗಳನ್ನೊಡ್ಡಿ ಮತದಾರರನ್ನು ಸೆಳೆಯವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದವು. ಇಂಥಹ ಕೃತ್ಯಗಳಿಂದ ಯಾವುದೇ ಸುಧಾರಣೆ ಆಗುವುದಿಲ್ಲ. ಅನೇಕ ಕಡೆ ಪೊಲೀಸರು ಕೂಡ ತಾವೂ ಕರ್ತವ್ಯದಲ್ಲಿದ್ದೇವೆಂದು ತೋರ್ಪಡಿಸಲು ಒಂದಿಷ್ಟು ವಸ್ತುಗಳನ್ನು, ನಗದು ಹಣವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸುವ ಶಾಸ್ತç ಮಾಡಿದರೆ ಸಾಲದು, ಪ್ರಭಾವಿ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ನೀಡುವ ಉಡುಗೊರೆಗಳನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಬೇಕು. ಆಮಿಷಗಳಿಗೆ ಬಲಿಯಾಗಬೇಕು ಎಂದು ಪ್ರತಿ ಚುನಾವಣೆ ಸಂದರ್ಭದಲ್ಲೂ ಮತದಾರರಿಗೆ ಎಷ್ಟೇ ಜಾಗೃತಿ ಮೂಡಿಸಿದರೂ, ಅನೇಕರು ಬದಲಾಗುವ ಗೋಜಿಗೆ ಹೋಗುವುದಿಲ್ಲ, ವಿದ್ಯಾವಂತ ಮತದಾರರು ಹದಗೆಟ್ಟ ವ್ಯವಸ್ಥೆಯನ್ನು ಹಿಯಾಳಿಸುವಲ್ಲಿ ಕಾಲ ಕಳೆಯುತ್ತಾರೆಯೇ ವಿನಃ ಮತಗಟ್ಟೆಗಳಿಗೆ ಹೋಗಿ ಮತ ಚಲಾಯಿಸಿ ವ್ಯವಸ್ಥೆಯನ್ನು ಸರಿಪಡಿಸುವ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ. ಈ ಕಾರಣದಿಂದಲೇ ನಗರ-ಪಟ್ಟಣಗಳಲ್ಲಿ ನಿರೀಕ್ಷಿತ ಪ್ರಮಾಣದ ಮತದಾನ ಆಗುತ್ತಿಲ್ಲ. ಪರಿಣಾಮವಾಗಿ ನಿರೀಕ್ಷಿತ ಫಲಿತಾಂಶ ಉಲ್ಟಾ ಆಗುತ್ತದೆ. ವ್ಯವಸ್ಥೆ ಸರಿಪಡಿಸಬೇಕೆನ್ನುವ ಕೆಲವೇ ಕೆಲವು ಜನರಿಗೆ ಮತ್ತೆ ನಿರಾಶೆಯಾಗುತ್ತದೆ. ಈ ಬಾರಿಯಾದರೂ ಪ್ರಜ್ಞಾವಂತ ಮತದಾರರು ತಮ್ಮ ಸ್ಥಳೀಯ ಮಟ್ಟದ ಸಮಸ್ಯೆಗಳತ್ತ ಚುನಾವಣೆಗೆ ಸ್ಪಧಿಸುವ ಅಭ್ಯರ್ಥಿಗಳ ಗಮನ ಸೆಳೆಯಲಿ, ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸುವಂತಾಗಲಿ. ಬಹಿಷ್ಕಾರದ ಭಿತ್ತಿಪತ್ರ ಪ್ರತಿ ಚುನಾವಣೆ ಘೋಷಣೆಯಾದಾಗಲೂ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಹಲವೆಡೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆಯ ಬ್ಯಾನರ್‌ಗಳು ರಾರಾಜಿಸುತ್ತವೆ. ಶಿವಮೊಗ್ಗ ಜಿಲ್ಲೆಯ ಕುಗ್ರಾಮಗಳಲ್ಲಿ ಕಾಲುಸಂಕ ನಿರ್ಮಾಣವಾಗಿಲ್ಲ, ಶರಾವತಿ ಮುಳುಗಡೆ ಸಂತ್ರಸ್ತರ ಗೋಳು, ಮೈಸೂರು ಕಾಗದ ಕಾರ್ಖಾನೆ, ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಪುನಶ್ಚೇತನ, ಚಿಕ್ಕಮಗಳೂರಿನಲ್ಲಿ ಕಾಫಿ ಬೆಳೆಗಾರರ ಸಮಸ್ಯೆ, ನೀರಾವರಿ ಸೌಲಭ್ಯದ ಕೊರತೆ, ರಸ್ತೆಗಳ ದುಃಸ್ಥಿತಿ, ಕುಡಿಯುವ ನೀರಿನ ಕರಾಳತೆ, ಚಿತ್ರದುರ್ಗದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ, ದಾವಣಗೆರೆ-ತುಮಕೂರು ನೇರ ರೈಲು ಮಾರ್ಗ, ನಿರುದ್ಯೋಗ ಸಮಸ್ಯೆ, ಅಕ್ರಮ ಗಣಿಗಾರಿಕೆ, ಅಕ್ರಮ ಮರಳು ಸಾಗಾಟ ಹೀಗೆ.., ಸಾಲು ಸಾಲು ಸಮಸ್ಯೆಗಳ ಭಿತ್ತಿಪತ್ರಗಳನ್ನು ಹಿಡಿದು ಚುನಾವಣೆ ಬಹಿಷ್ಕಾರದ ಎಚ್ಚರಿಕೆಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಎಂದಿನಂತೆ ರಾಜಕೀಯ ಧುರೀಣರು ಮತ್ತೆ ಮತದಾರರನ್ನು ಸಮಾಧಾನಪಡಿಸಿ ಮತ ಗಿಟ್ಟಿಸಿಕೊಳ್ಳುವ ಮಾಮೂಲಿ ಪ್ರಕ್ರಿಯೆಗಳೂ ನಡೆಯುತ್ತಿವೆ. ಪ್ರಜಾಪ್ರಭುತ್ವ ಉಳಿಸಿ ನಿರುಂಕುಷ ಪ್ರಭುತ್ವ, ಕುಟುಂಬ ರಾಜಕಾರಣ, ಶ್ರೀಮಂತರ ದಬ್ಬಾಳಿಕೆ, ಸಂವಿಧಾನ-ಕಾನೂನು ಉಲ್ಲಂಘನೆ, ಮಿತಿಮೀರಿ ಅಕ್ರಮ ಆಸ್ತಿ ಸಂಪಾದನೆ, ಹಲವಾರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವುದು, ಒಂದು ಜಾತಿಯನ್ನು ಇನ್ನೊಂದು ಜಾತಿ ವಿರುದ್ಧ ಎತ್ತಿಕಟ್ಟುವುದು, ಲಿಂಗ ತಾರತಮ್ಯ ಮಾಡುವುದು... ಮತ್ತಿತರ ಸಂಗತಿಗಳೇ ದೇಶದಲ್ಲಿ ವಿಜೃಂಭಿಸುತ್ತವೆ. ಇವೆಲ್ಲ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದವು. ಹಾಗಾದರೆ ಇದನ್ನೆಲ್ಲ ಬದಲಾವಣೆ ಮಾಡಲು ಸಾಧ್ಯವಿಲ್ಲವೆ? ಏಕಿಲ್ಲ, ಈಗ ಒದಗಿ ಬಂದಿರುವ ಚುನಾವಣೆ ಎಂಬ ಮಹಾ ಹಬ್ಬದಲ್ಲಿಮತ’ ಎಂಬ ಅಸ್ತçವನ್ನು ಬಳಸಿ ಕುಟುಂಬ ರಾಜಕಾರಣ, ನಿರುಂಕುಷ ಪ್ರಭುತ್ವ, ಶ್ರೀಮಂತರ ದಬ್ಬಾಳಿಕೆಗೆ ಕೊನೆ ಹಾಡಬಹುದು. ಅದಕ್ಕಾಗಿ ಸಾಮಾನ್ಯರಲ್ಲೇ ಅಸಾಮಾನ್ಯ ಇರುವ ವ್ಯಕ್ತಿಗಳನ್ನು ಹೆಕ್ಕಿ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಬೇಕು, ಅವರ ಪರವಾಗಿ ಪ್ರಚಾರ ಮಾಡಬೇಕು. ಪ್ರಜೆಗಳಾದ ನಾವೆಲ್ಲ, ಯಾವುದೇ ಆಸೆ-ಆಮಿಷಗಳಿಗೆ ಬಲಿಯಾಗದೆ ಇಂತಹ ಶುದ್ಧ, ದಕ್ಷ, ಪ್ರಾಮಾಣಿಕ ಮತ್ತು ಜನಪರವಾಗಿರುವ ವ್ಯಕ್ತಿಯನ್ನು ಆಯ್ಕೆ ಮಾಡುವ ಮೂಲಕ ಈ ಹದಗೆಟ್ಟ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಸಾಧ್ಯ ಇದೆ. ಕಡ್ಡಾಯ ಮತದಾನ, ಮತದಾನದಲ್ಲಿ ಭಾಗಿಯಾಗದವರಿಗೆ ಸರ್ಕಾರದ ಸೌಲಭ್ಯಗಳ ಕಡಿತ, ಸರ್ಕಾರಿ ಮತ್ತು ಖಾಸಗಿ ನೌಕರರಿಗೆ ಹಿಂಬಡ್ತಿ ನೀಡುವುದು ಮತ್ತಿತರ ಸುಧಾರಣೆಗಳನ್ನು ಜಾರಿಗೊಳಿಸಬೇಕು. ಹಾಗೆಯೇ ವಂಶಾಡಳಿತಕ್ಕೆ ಇತಿಶ್ರೀ ಹಾಡಲು ಒಂದು ಕುಟುಂಬದ ಓರ್ವ ವ್ಯಕ್ತಿ ಎರಡು ಬಾರಿ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಕಾನೂನು ಜಾರಿಗೊಳಿಸಬೇಕು. ಹೀಗೆ ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಯ ಕ್ರಮಗಳು ಮತ್ತು ಮತದಾರರಲ್ಲಿ ಜಾಗೃತಿ ಮೂಡಿಸಿ ಭಷ್ಟರ ವಿರುದ್ಧ ಮತ ಚಲಾಯಿಸಲು ಪ್ರೇರೇಪಣೆ ನೀಡುವ ಪ್ರಕ್ರಿಯೆಗಳು ಒಟ್ಟೊಟ್ಟಿಗೆ ನಡೆದಾಗ ಮಾತ್ರ ಮುಂದಿನ ದಿನಗಳಲ್ಲಿ ಭಾರತದಲ್ಲಿ ನಿಜವಾದ `ಪ್ರಜಾಪ್ರಭುತ್ವ’ವನ್ನು ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ಲೋಕಸಭಾ ಚುನಾವಣೆ ಮೊದಲ ಹೆಜ್ಜೆಯಾಗಲಿ.

Next Article