ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಡಿಜಿಟಲ್ ತಾಂತ್ರಿಕತೆ ಸೃಷ್ಟಿಸಿದ ಹೊಸ ಪ್ರಪಂಚ

02:00 AM Mar 17, 2024 IST | Samyukta Karnataka

ಇತ್ತೀಚೆಗೆ ೫೩ ಬೋಗಿಗಳ ಡೀಸೆಲ್ ಲೋಕೊಮೋಟಿವ್ ರೈಲೊಂದು ಜಮ್ಮು-ಕಾಶ್ಮೀರದ ಕಟುವಾದಿಂದ ಪಂಜಾಬ್‌ನ ಹೋಷಿಯಾರಪುರವರೆಗೆ ೭೦ ಕಿಮೀ ದೂರವನ್ನು ಗಂಟೆಗೆ ೧೦೦ ಕಿ. ಮೀ ವೇಗದಲ್ಲಿ ಚಾಲಕನಿಲ್ಲದೇ ಚಲಿಸಿದೆ! ಅದೃಷ್ಟವಶಾತ ಯಾವುದೇ ಅವಘಡ ಸಂಭವಿಸಿಲ್ಲ. ಚಾಲಕನ ಬದಲಾವಣೆಗಾಗಿ ಮೊದಲಿದ್ದ ಚಾಲಕ ಕಟುವಾ ರೈಲು ನಿಲ್ದಾಣದಲ್ಲಿ ರೈಲು ನಿಲ್ಲಿಸಿ ಇಳಿದು ಹೋಗುವಾಗ ಹ್ಯಾಂಡ್ ಬ್ರೇಕ್ ಹಾಕಲು ಮರೆತಿದ್ದು ಈ ಆಂತಕಕಾರಿ ಘಟನೆಗೆ ಕಾರಣ. ಇಳಿಜಾರು ಪ್ರದೇಶದೆಡೆ ಚಲಿಸಿ ವೇಗ ಪಡೆದ ರೈಲು ಪಂಜಾಬಿನ ಊಂಚಿ ಬಸ್ಸಿ ರೈಲ್ವೆ ನಿಲ್ದಾಣ ಬಳಿ ನಿಧಾನಗತಿಗೆ ಬಂದಿತ್ತು. ಅಲ್ಲಿ ಮರಳು ಚೀಲಗಳನ್ನು ಬಳಸಿ ರೈಲನ್ನು ಸುರಕ್ಷಿತವಾಗಿ ನಿಲ್ಲಿಸಲಾಯಿತು. ಈಗ ಬೆಂಗಳೂರಿನಲ್ಲಿ ಚಾಲಕರಹಿತ ಮೆಟ್ರೋ ರೈಲನ್ನು ಪ್ರಾಯೋಗಿಕವಾಗಿ ಓಡಿಸಲು ತಯಾರಿಯನ್ನು ನಡೆಸಲಾಗುತ್ತಿದೆ. ೬ ಬೋಗಿಗಳ ರೈಲಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಪ್ರೋಗ್ರಾಂ ಆಧಾರಿತ ಕಾರ್ಯನಿರ್ವಹಣೆ, ಹಾಟ್ ಆಕ್ಸಲ್, ಡಿಟೆಕ್ಷನ್ ಸಿಸ್ಟಮ್, ರೈಲ್ ಟ್ರಾಕ್ ಮಾನಿಟರಿಂಗ್ ಸಿಸ್ಟಮ್ ಮತ್ತು ಡಿರೈಲ್ಮೆಂಟ ಇತ್ಯಾದಿ ಸೌಲಭ್ಯಗಳನ್ನು ಹೊಂದಲಾಗಿದೆ. ಮೊದಲ ರೈಲಿನ ಪಯಣ ಆತಂಕಕಾರಿಯಾದರೆ ಇನ್ನೊಂದು ಆಶ್ಚರ್ಯದಾಯಕ! ಮೊದಲನೇ ರೈಲು ಹತ್ತಿದವರಿಗೆ ತಮ್ಮ ನಿಲ್ದಾಣ ಮುಟ್ಟುವವರೆಗೆ ಪರೀಕ್ಷೆಯೇ! ಆದರೆ ಎರಡನೇ ರೈಲು ಸುಮಾರು ೩೭ ಪರೀಕ್ಷೆಗಳನ್ನು ಪಾಸು ಮಾಡಿದ ನಂತರ ಅದರಲ್ಲಿ ಜನರನ್ನು ಹತ್ತಿಸುತ್ತಾರೆ. ಎರಡೂ ನಮ್ಮ ಕಾಲಖಂಡದಲ್ಲೇ ಸಂಭವಿಸಿವೆ!
ಸಾಕ್ಷರತೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವ ಕೇರಳ ಮತ್ತೊಂದು ಇತಿಹಾಸವನ್ನು ನಿರ್ಮಿಸಿದೆ. ತಿರುವನಂತಪುರದ ಕೆಟಿಸಿಟಿ ಹೈಯರ್ ಸೆಕೆಂಡರಿ ಶಾಲೆಗೆ ಮೊದಲ ಕೃತಕ ಬುದ್ಧಿಮತ್ತೆಯ ಶಿಕ್ಷಕಿ ಬಂದಿದ್ದಾಳೆ. ಇಡೀ ದೇಶದ ಮೊದಲ ಬಹುಭಾಷಾ ಮಾನವ ರೂಪಿ ರೋಬೋ ಶಿಕ್ಷಕಿಯನ್ನು ಮೇಕರ್ಲ್ಯಾಬ್ಸ್ ಎಜುಟೆಕ್ ಸಂಸ್ಥೆಯು ಅಟಲ್ ಟಿಂಕರಿಂಗ್ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಿದೆ. ಈ ಐರಿಷ್‌ಳು ಹಲವಾರು ವಿಷಯಗಳ ಬಗ್ಗೆ ಕೇಳುವ ಅತೀ ಕಷ್ಟದ ಪ್ರಶ್ನೆಗಳಿಗೂ ಉತ್ತರಿಸುತ್ತಾಳೆ. ನೀತಿ ಆಯೋಗದ ಉಪಕ್ರಮದಂತೆ ಪಠ್ಯೇತರ ಚಟುವಟಿಕೆಗಳನ್ನು ಉತ್ತೇಜಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರ ಬದಲಾವಣೆ ಮಾಡಲಿರುವ ಇದು ಸದ್ಯಕ್ಕಂತೂ ಶಿಕ್ಷಕರಿಗೆ ಪರ್ಯಾಯವಾಗದು. ಆದರೆ ಬೆಂಬಲದ ಪಾತ್ರವನ್ನು ನಿರ್ವಹಿಸುತ್ತದೆ. ಬರೀ ದತ್ತಾಂಶ ಆಧಾರಿತವಾಗಿ ವರ್ತಿಸುವ ರೋಬೋಗೆ ಶಿಕ್ಷಕರಂತೆ ಮಕ್ಕಳ ಜೊತೆಗೆ ಮಾನವೀಯ ಸ್ಪರ್ಶವನ್ನಾಗಲಿ ಅಥವಾ ಭಾವನಾತ್ಮಕ ಬಂಧವನ್ನಾಗಲಿ ಹೊಂದುವುದು ಕಷ್ಟ ಸಾಧ್ಯ.
ಈಗ ಮನೆಯ ಕೆಲಸದಾಳುಗಳು ಸಿಗುವುದು ಕಷ್ಟ. ಅದಕ್ಕಾಗಿ ವಿದೇಶಗಳಲ್ಲಿ ಚಿಕ್ಕಪುಟ್ಟ ಮನೆ ಕೆಲಸಗಳಿಗೆ ರೋಬೋಟ್‌ಗಳನ್ನು ಬಳಸುವುದನ್ನು ಕೇಳಿದ್ದೇವೆ. ಒಬ್ಬಂಟಿಗರ ಆಸರೆಗಾಗಿ, ವೃದ್ಧರ ಸಹಾಯಕ್ಕಾಗಿ, ಮಕ್ಕಳ ಜೊತೆ ಆಡಲಿಕ್ಕಾಗಿ ಹಾಗೂ ಮನೋರಂಜನೆಗಾಗಿ ರೋಬೋಟ್‌ಗಳನ್ನು ಬಳಸಲಾಗುತ್ತಿದೆ. ಅಂತಹುದೇ ಪರಿಸ್ಥಿತಿಯು ಈಗ ಭಾರತದಲ್ಲಿಯೂ ಬರುತ್ತಿದೆ. ಇನ್ನು ಹೆಚ್ಚು ಸಂಸ್ಕರಿತ, ವೃದ್ಧಿತ ನಮೂನೆಯ ಮತ್ತು ಕೃತಕ ಬುದ್ಧಿಮತ್ತೆ ಬೆಂಬಲಿತ ರೋಬೋಗಳನ್ನು ಆಳವಾದ ಗಣಿಗಾರಿಕೆ, ಸಮುದ್ರದಾಳದ ಮೀನುಗಾರಿಕೆ, ಅತೀ ಆಳದಲ್ಲಿ ಮುತ್ತುಗಳ ಹುಡುಕಾಟಗಳಲ್ಲಿ ತೊಡಗಿಸಬಹುದು. ಫರ್ನೇಸ್, ಬಾಯಲರ್ ಹಾಗೂ ಫೌಂಡ್ರಿಗಳಂತಹ ಸಾವಿರಾರು ಡಿಗ್ರಿ ಸೆಂಟಿಗ್ರೇಡ್ ತಾಪಮಾನವಿರುವ ವಾತಾವರಣಗಳಲ್ಲಿ ಮತ್ತು ಕಾಡ್ಗಿಚ್ಚನ್ನು ಆರಿಸುವಲ್ಲಿ ಸೂಕ್ತವಾಗಿ ವಿನ್ಯಾಸಗೊಳಿಸಿದ ರೋಬೋಟ್‌ಗಳನ್ನು ನಿಯುಕ್ತಿಗೊಳಿಸಬಹುದು. ಅತ್ಯಂತ ಹೆಚ್ಚಿನ ತಾಪಮಾನವಿರುವ ಜ್ವಾಲಾಮುಖಿ ಅಧ್ಯಯನದಲ್ಲೂ ರೋಬೋಗಳು ಸಹಾಯಕ್ಕೆ ಬರುತ್ತವೆ. ಅಂತೆಯೇ ಮೈನಸ್ ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇರುವ ಅಂಟಾರ್ಟಿಕಾದಂತಹ ಉತ್ತರ ಮತ್ತು ದಕ್ಷಿಣ ದೃವ ಪ್ರದೇಶಗಳ ಅತೀಶೀತ ಪ್ರದೇಶಗಳಲ್ಲಿ ಸಂಶೋಧನೆ, ಮಾಹಿತಿ ಸಂಗ್ರಹಕ್ಕಾಗಿ ರೋಬೋಗಳನ್ನು ಉಪಯೋಗಿಸಬಹುದು. ಇತ್ತೀಚೆಗೆ ಕಾಡಂಚಿನ ಪ್ರದೇಶಗಳಲ್ಲಿ ಆಹಾರ ಅರಸಿ ಬರುವ ಕಾಡುಪ್ರಾಣಿಗಳ ದಾಳಿ ಹೆಚ್ಚುತ್ತಿದೆ. ತಮಿಳುನಾಡಿನಲ್ಲಿ ಮಾನವ-ಪ್ರಾಣಿ ಸಂಘರ್ಷವನ್ನು ತಪ್ಪಿಸಲು ಕೃತಕ ಬುದ್ಧಿಮತ್ತೆ ವಿಧಾನಗಳನ್ನು ಅನುಸರಿಸುತ್ತಿದೆ. ಕಾಡಲ್ಲಿ ಹಾದು ಹೋಗುವ ರೈಲು ರಸ್ತೆಗಳಲ್ಲಿ ಸಂಚಿರಿಸುವವರಿಗೆ ಎಐ ಆಧಾರಿತ ಮಾಹಿತಿಯನ್ನು ಸಕಾಲಕ್ಕೆ ಒದಗಿಸಿ ಅಪಾಯವನ್ನು ತಪ್ಪಿಸಬಹುದಾಗಿದೆ.
ಮನುಷ್ಯನ ಜೀವಕ್ಕೆ ಅಪಾಯವೊಡ್ಡುವ ವಿಷಾನಿಲ ಸೂಸುವ ಕೊಳಚೆ ಚರಂಡಿಗಳ, ಕ್ಯಾನೆಲ್‌ಗಳ ಸ್ವಚ್ಛತಾ ಕಾರ್ಯದಲ್ಲಿ, ಸಾಂಕ್ರಾಮಿಕ ರೋಗಯುಕ್ತ ಪ್ರದೇಶಗಳಲ್ಲಿ, ಕ್ಯಾನ್ಸರ್‌ಗೆ ಕೊಡುವ ರೇಡಿಯೇಷನಂತಹ ಅಪಾಯವಿರುವ ಉಪಚಾರದ ಸಂದರ್ಭಗಳಲ್ಲಿ ರೋಬೊಗಳನ್ನು ಉಪಯೋಗಿಸಬಹುದು. ವೈರಿ ದೇಶದ ದಾಳಿಗಳನ್ನು ಮೊದಲೇ ಅಂದಾಜಿಸಿ ಉಪಕ್ರಮ ಕೈಗೊಳ್ಳಲು ಮತ್ತು ಯುದ್ಧಭೂಮಿಯಲ್ಲಿ ಮಾನವ ಸೈನಿಕರ ಬದಲಿಗೆ ರೋಬೋ ಸೈನಿಕರನ್ನು ಉಪಯೋಗಿಸಬಹುದು. ಡ್ರೋನ್‌ಗಳ ಸಹಾಯದಿಂದ ಮನುಷ್ಯರು ತಲುಪಲಾಗಾದ ಸ್ಥಳಗಳು ಅಂದರೆ ನೆರೆ ಬಾಧಿತ, ಭೂಕಂಪ ಪೀಡಿತ ಮತ್ತು ಯುದ್ಧಪೀಡಿತ ಪ್ರದೇಶಗಳಿಗೆ ಸಾಮಾನುಗಳನ್ನು ಸಾಗಿಸುವುದು ಹಾಗೂ ಏರಿಯಲ್ ಸರ್ವೇಕ್ಷಣೆ ನಡೆಸುವುದು ಸಾಧ್ಯವಾಗಿದೆ. ಡ್ರೋನ್‌ಗಳ ಮೂಲಕ ದೇಶದ ಗಡಿಗಳನ್ನು ಕಾಯುವುದು ಅಥವಾ ದಟ್ಟವಾದ ಅರಣ್ಯ ಪ್ರದೇಶಗಳಲ್ಲಿ ವಸ್ತು/ವ್ಯಕ್ತಿ ಹುಡುಕಾಡಲು ಅನುಕೂಲವಾಗಿದೆ.
ಅಮೆರಿಕದ ಟೆಕ್ ಕಂಪನಿ ಕಾಗ್ನಿಷನ್ ಈಗ ಒಂದು ಹೆಜ್ಜೆ ಮುಂದೆ ಹೋಗಿ ವಿಶ್ವದ ಮೊದಲ ಕೃತಕ ಬುದ್ಧಿಮತ್ತೆಯ ಸಾಫ್ಟೆವೇರ್ ಇಂಜಿನಿಯರನನ್ನೇ ನಿರ್ಮಿಸಿದೆ. ಡೆವಿನ್ ಹೆಸರಿನ ಈ ಎಐ ಇಂಜನಿಯರ್ ಪ್ರೋಗ್ರಾಂ ಬರೆಯುವುದು, ಡಿಬಗ್ ಮಾಡುವುದು, ತಪ್ಪುಗಳನ್ನು ತಿದ್ದುವುದು, ವೆಬ್‌ಸೈಟ್ ರಚನೆ ಮಾಡುವುದು, ತನ್ನನ್ನು ತಾನು ಅಪಡೇಟ್ ಮಾಡಿಕೊಳ್ಳುವುದು, ಅಪ್ಲಿಕೇಶನ್ ನಿರ್ಮಿಸುವುದು, ವಿವರವಾದ ವರದಿಗಳನ್ನು ಕಂಪೈಲ್ ಮಾಡುವಂತಹ ಹಲವಾರು ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತದೆ. ಈ ಯಂತ್ರಮಾನವ ನಿರ್ಧಾರಗಳನ್ನು ಕೈಗೊಳ್ಳುವಂತಹ ಸಂಕಿರಣ ಕೆಲಸ ಮಾಡಬಹುದಾದರೂ ಸ್ವಂತವಾಗಿ ಕೆಲಸ ಮಾಡಲಾರದು. ಇದಕ್ಕೆ ಮಾನವ ನಿಯಂತ್ರಣ ಅಗತ್ಯ. ಮಾನವ ಇಂಜಿನಿಯರ್‌ಗಳನ್ನು ಇದು ಸ್ಥಳಾಂತರಿಸದು ಎನ್ನಲಾಗಿದೆ.
ಮುಂದೊಂದು ದಿನ ಹುಮನೈಡ್ ರೋಬೊಗಳದ್ದೇ ದರಬಾರು ಮತ್ತು ಕಾರುಬಾರು ಜೋರಾಗಬಹುದು. ಅವುಗಳದ್ದೇ ಒಂದು ಜಾತಿ ಆಗಬಹುದು! ಮಾನವ ನಿರ್ಮಿತ ರೋಬೋಗಳು ಮತ್ತು ಮನುಷ್ಯರ ನಡುವೆ ಸ್ಪರ್ಧೆ ಮತ್ತು ಸಂಘರ್ಷ ನಡೆಯಬಹುದು. ನಮ್ಮ ಕೆಲಸಗಳನ್ನು ಕಿತ್ತುಕೊಂಡ ಬಾಡಿಗೆ ಮಿದಳು ಎಂದೂ, ಯಂತ್ರ ರಾಕ್ಷಸ ಎಂದೂ ಮನುಷ್ಯರಿಂದ ಬೈಯಿಸಿಕೊಳ್ಳಬಹುದು. ಮನುಷ್ಯರು ತಮ್ಮೊಳಗೆ ಜಗಳ ಕಾಯ್ದಾಗ ನೀನು ಹೇಳಿದಂಗ ಕೇಳಲಿಕ್ಕೆ ನನ್ನನ್ನೇನು ರೋಬೋ ಅಂದ್ಕೊಂಡಿಯೇನು? ಎಂದು ಮೂದಲಿಸಬಹುದು. ಗಂಡ-ಹೆಂಡಿರ ನಡುವೆ, ಉದ್ಯಮಿ-ಉದ್ಯೋಗಿಗಳ ನಡುವೆ ಭಿನ್ನಾಭಿಪ್ರಾಯ ಮಿತಿಮೀರಿದಾಗ ನೀನೇನು ನನಗೆ ಅನಿವಾರ್ಯವಲ್ಲ ಹೋಗು, ನಿನ್ನ ಜಾಗದಲ್ಲಿ ನಾನು ರೋಬೊನ್ನ ನೇಮಿಸಿಕೊಳ್ಳುತ್ತೇನೆ ಅನ್ನಬಹುದು. ಹೀಗಾಗಿ ರೋಬೊಗಳು ಬರೀ ತಾಂತ್ರಿಕ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೇ, ಕೌಟುಂಬಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ವ್ಯವಹಾರಿಕ ಇತ್ಯಾದಿ ರಂಗಗಳಲ್ಲಿ ಮಹತ್ತರವಾದ ಪ್ರಭಾವವನ್ನು ಬೀರಲಿವೆ. ಇದರಿಂದ ನಮ್ಮ ಆಡುವ ಭಾಷೆಗಳಲ್ಲಿ, ಶಬ್ದ ಪ್ರಯೋಗಗಳ ರೀತಿ ರಿವಾಜುಗಳಲ್ಲಿ, ವ್ಯವಹಾರದಲ್ಲಿ ಮತ್ತು ಸಂಬಂಧಗಳಲ್ಲಿ ಮಹತ್ತರ ಪರಿವರ್ತನೆ ಆಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ಬೃಹನ್ನಗರಗಳಲ್ಲಿ, ಪಟ್ಟಣಗಳಲ್ಲಿ ಇದೆಲ್ಲ ಓಕೆ. ಆದರೆ ಗ್ರಾಮೀಣ ಭಾಗಗಳಲ್ಲಿ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಎಷ್ಟು ಮಹಿಳೆಯರ ಹತ್ತಿರ ಎಂಡ್ರೋಯ್ಡ್ ಮೊಬೈಲು ಅಥವಾ ಸ್ಮಾರ್ಟ್ಫೋನ್ ಇರುತ್ತದೆ ಅದನ್ನು ಉಪಯೋಗಿಸುವ ಜ್ಞಾನ ಇರುತ್ತದೆ?. ಹೀಗಾಗಿ ಈ ಡಿಜಿಟಲ್ ತಂತ್ರಜ್ಞಾನದ ನವೋನ್ವೇಷಣೆಗಳು ಸಮಾಜದಲ್ಲಿ ಹೊಸದಾದ ಪ್ರಾದೇಶಿಕ ಮತ್ತು ಲಿಂಗಾಧಾರಿತ ಡಿಜಿಟಲ್ ಡಿವೈಡ್ ಉಂಟು ಮಾಡುತ್ತವೆಯೇ? ಎನ್ನುವ ಅಂಜಿಕೆಯನ್ನೂ ತಳ್ಳಿಹಾಕುವಂತಿಲ್ಲ. ಕೃತಕ ಬುದ್ಧಿಮತ್ತೆಯಂತಹ ತಾಂತ್ರಿಕತೆಯಿಂದ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ತೀರ ಹಿಂದುಳಿದ ಪ್ರದೇಶಗಳ ಜನರ ಹಾಗೂ ಇತರರ ನಡುವಿನ ಅಂತರ ಹೆಚ್ಚುವ ಭಯವೂ ಇದೆ. ಟಾರ್ ರೋಡ್‌ಗಳನ್ನೇ ನೋಡಿರದ ಗುಡ್ಡಗಾಡು ಆದಿವಾಸಿಗಳು ಮತ್ತು ವಾರಾಂತ್ಯಕ್ಕೆ ಚಂದ್ರಯಾನ ಮಾಡಬಯಸುವ ಸಿಲಿಕಾನ್ ಸಿಟಿಯ ಜನರ ನಡುವಿನ ಕಂದರ ಹೆಚ್ಚುವ ಹೆದರಿಕೆಯೂ ಇದೆ.
ಹೀಗೆ ಇಂದು ನಾವು ಚಾಲಕರಿಲ್ಲದ ರೈಲು/ಕಾರು, ಶಿಕ್ಷಕರಿಲ್ಲದ ಶಾಲೆ, ವೈದ್ಯರಹಿತ ಆಸ್ಪತ್ರೆ, ರೋಬೊ ಶಸ್ತç ಚಿಕಿತ್ಸೆಗಳ ಹೊಸ ಜಗತ್ತಿಗೆ ತೆರೆದುಕೊಳ್ಳುತ್ತಿದ್ದೇವೆ. ಇವುಗಳು ಹಲವರ ಹೊಟ್ಟೆ ಮೇಲೆ ಕಾಲು ಕೊಟ್ಟಂತೆ ಭಾಸವಾಗುತ್ತದೆ. ರೋಬೋ ಮಷೀನುಗಳನ್ನು ತಯಾರಿಸಲು ಮನುಷ್ಯ ಬೇಕೇ ಬೇಕು. ಅವುಗಳ ಮಿದುಳಿಗೆ ಪ್ರೋಗ್ರಾಂ ಬರೆಯಲು ಮಾನವ ಬೇಕೇ ಬೇಕು. ಹೀಗಾಗಿ ಉದ್ಯೋಗಗಳ ರೀತಿ ರಿವಾಜು, ಅವುಗಳಿಗೆ ಬೇಕಾಗುವ ಜ್ಞಾನ, ಕುಶಲತೆಗಳು ಬೇರೆಯಾಗಿರಬಹುದು. ಅವುಗಳ ಸ್ವರೂಪ ಬದಲಾಗುತ್ತದೆಯೆ ಹೊರತು ಉದ್ಯೋಗ ಅವಕಾಶಗಳು ಕಡಿಮೆಯಾಗಲಾರವೆಂದು ಎಐ ಉದ್ದಿಮೆದಾರರು ಹೇಳುತ್ತಾರೆ. ಅಂದರೆ ಒಂದು ರೀತಿಯ ಉದ್ಯೋಗಿಗಳ ಅವಶ್ಯಕತೆ ಕಡಿಮೆಯಾಗಿ ಮತ್ತೊಂದು ರೀತಿಯ ಉದ್ಯೋಗಿಗಳ ಬೇಡಿಕೆ ಹೆಚ್ಚಾಗಬಹುದು. ಕಂಪ್ಯೂಟರ್ ಆಗ ತಾನೇ ಬಂದಾಗ ಇದೇ ಬಗೆಯ ಆತಂಕ ಉಂಟಾಗಿತ್ತು. ಕ್ರಮೇಣ ಅದು ಮಾಯವಾಯಿತು. ತಜ್ಞರು ಏನೇ ಹೇಳಿದರೂ ರೋಬೊಗಳಿಗೆ ಮಾನವೀಯ ಸ್ಪರ್ಶವಾಗಲಿ, ಭಾವನಾತ್ಮಕ ಸ್ಪಂದನವಾಗಲಿ ಬರದು. ಮನುಷ್ಯ ಮನುಷ್ಯನೇ, ಮಷಿನ್ನು ಮಷಿನ್ನೇ! ಅದೂ ಭಾರತದಂತಹ ಜನಬಾಹುಳ್ಯದ ರಾಷ್ಟ್ರಕ್ಕೆ ಇದೊಂದು ರೀತಿಯ ಸವಾಲೇ ಸರಿ.

Next Article