ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ದುರ್ಗೆಯ ನಾಡಿನಲ್ಲಿ ಹೆಣ್ಣು ಭ್ರೂಣಗಳ ಆಕ್ರಂದನ

11:24 AM Dec 14, 2023 IST | Samyukta Karnataka

ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ಅಮಾನವೀಯ, ಕ್ರೂರ ಘಟನೆಗಳಿವು. ಏನೂ ಅರಿಯದ ತಾಯಿಯನ್ನು ಬೆತ್ತಲುಗೊಳಿಸಿ, ಹಿಂಸಿಸಿ, ಮೆರವಣಿಗೆ ನಡೆಸಿದ ಬೆಳಗಾವಿ ಜಿಲ್ಲೆಯ ವಂಟಮೂರಿ ಘಟನೆ ಹಾಗೂ ರಾಜ್ಯದ ಮಂಡ್ಯ, ಮೈಸೂರು, ಹಾಸನ ಭಾಗದಲ್ಲಿ ಬಯಲಿಗೆ ಬಂದ ಭ್ರೂಣ ಹತ್ಯೆಯ ಕ್ರೂರ ಜಾಲ ಯಾರೂ ಸಮರ್ಥನೆ ಮಾಡಲಾಗದ್ದು.
ಸಮರ್ಥನೆ ಬಿಡಿ, ಯೋಚಿಸುವ ಸ್ಥಿತಿಯಲ್ಲಿಯೂ ಇಲ್ಲ. ಎರಡೂ ಘಟನೆಗಳು ಪ್ರತ್ಯೇಕವಾದರೂ ಈ ನಾಡಿನ ಕಾನೂನಿನ ಲವಲೇಶ ಭಯ ಇಲ್ಲ ಎನ್ನುವುದನ್ನು ಮತ್ತೆ ಮತ್ತೆ ಸಾಬೀತುಪಡಿಸಿವೆ.
ಮಧ್ಯರಾತ್ರಿಯಲ್ಲಿ ಮಹಿಳೆಯೊಬ್ಬಳು ನಿರ್ಭೀತಿಯಿಂದ ನಡೆದಾಡುವ, ದೇಶ ಕಟ್ಟುವ ಭರವಸೆಯೊಂದಿಗೆ ಸ್ವಾತಂತ್ರ್ಯ ಪಡೆದ ನಮ್ಮಲ್ಲಿ ಈಗ ಸ್ತ್ರೀ ಭ್ರೂಣಗಳು ವಿಲಿವಿಲಿ ಒದ್ದಾಡುತ್ತ ಕಾವೇರಿ ಪಾಲಾಗುತ್ತಿವೆ. ಹಾಗೇ ಯುವ ಮಕ್ಕಳು ಮಾಡಿದ ಘಟನೆಗೆ ಅಮಾಯಕ ತಾಯಿಯ ಮನೆ ಧ್ವಂಸ ಮಾಡಿ, ಬೆತ್ತಲೆಗೊಳಿಸಿ, ಕಟ್ಟಿಹಾಕಿ ನಂತರ ಮೆರವಣಿಗೆ ನಡೆಸಲಾಗುತ್ತಿದೆ ಎಂದರೆ ಇನ್ನೆಲ್ಲಿ ಆ ಗಾಂಧಿ ಮಹಾತ್ಮನ ಮಾತು?
ಯಾರಿಗಿದೆ ರಕ್ಷಣೆ? ಮಹಿಳೆಯರಿಗೆಲ್ಲಿದೆ ಜೀವ ಭದ್ರತೆ? ಎಂಬೆಲ್ಲ ಪ್ರಶ್ನೆಗಳೊಂದಿಗೆ ಕನಿಷ್ಠ ಮಾನವೀಯತೆ, ಮನುಷ್ಯತ್ವ ಎಲ್ಲ ದುಡ್ಡು ಹಾಗೂ ಸ್ವಾರ್ಥದ ಮದದಲ್ಲಿ ಕೊಚ್ಚಿಹೋದವಲ್ಲ ಎಂದು ಹಳಹಳಿಸಬೇಕಾಗುತ್ತದೆ.
ಕೆಲವೇ ದಶಕಗಳ ಹಿಂದೆ ಶಿಶು ಮತ್ತು ತಾಯಿಯ ಸಾವು ಸಾಮಾನ್ಯವಾದಾಗ, ವಿಜ್ಞಾನ- ತಂತ್ರಜ್ಞಾನ ನೀಡಿದ್ದು ಸ್ಕಾö್ಯನಿಂಗ್ ಯಂತ್ರ. ಆನುವಂಶಿಕ ಅಥವಾ ಸಮಸ್ಯಾತ್ಮಕ ರೋಗ ರುಜಿನೆಗಳಿಂದ ಗರ್ಭದಲ್ಲಿರುವಾಗಲೇ ದೋಷ ಕಂಡು ಹಿಡಿದು ಚಿಕಿತ್ಸೆ ಕೊಡುವ ಅದ್ಭುತ ಆವಿಷ್ಕಾರ ದುಡ್ಡು ಮಾಡುವವರ ಕೈಯಲ್ಲಿ ಸಿಲುಕಿ ಈಗ ಭ್ರೂಣ ಹತ್ಯೆಯ ಅಟ್ಟಹಾಸಕ್ಕೆ ಹಣಗಳಿಸುವ ಯಂತ್ರವಾಗಿಬಿಟ್ಟಿದೆ.
ಸಶಕ್ತ ಮತ್ತು ಸುರಕ್ಷಿತ ಪ್ರಸವ ಒಂದು ಮಾನವೀಯ ಆಶಯ. ಅದಕ್ಕಾಗಿ ತಂತ್ರಜ್ಞಾನ ಬೆಳೆಸಿದರೆ ಅದು ಕಲಿತವರು, ಆ ಕುಲವನ್ನೇ ನಾಶಗೈಯುವ ಕ್ರೂರ ಕೈಗೆ ಸಿಕ್ಕಂತಾಗಿದೆ. ಕಳೆದ ಎರಡು ವರ್ಷಗಳಲ್ಲಿ ಒಂಬೈನೂರಕ್ಕೂ ಹೆಚ್ಚು ಭ್ರೂಣಗಳನ್ನು ಹತ್ಯೆಗೈದು ಕಾವೇರಿಗೆ ಎಸೆದಿರುವುದನ್ನು ಮೈಸೂರು, ಹಾಸನ, ಮಂಡ್ಯದ ಕ್ರೂರ ಜಾಲ ಒಪ್ಪಿಕೊಂಡಿದೆ.
ನಿಜ. ಅಣುಬಾಂಬ್ ಸೃಷ್ಟಿಸಿದಾಗಲೇ, ವಿನಾಶಕಾರಿಗಳ ಕೈಗೆ ಸಿಕ್ಕರೆ ಎಂಬ ಭಯವಿತ್ತು. ಹಾಗೇ ಸ್ಕ್ಯಾನಿಂಗ್ ಯಂತ್ರದ ಕಥೆ. ಹುಟ್ಟುವ ಮಗು ಸಶಕ್ತ, ಸದೃಢ ಇರಬೇಕು. ಗರ್ಭದಲ್ಲಿ ಸಾಯಬಾರದು. ಗರ್ಭ ಧರಿಸಿದ ಮಹಿಳೆ ಜೀವ ಎರಡು ಆಗುವಾಗ ಸಮಸ್ಯೆ- ಸಂಕಷ್ಟಕ್ಕೆ ಸಿಲುಕಿ ಜೀವ ಕಳೆದುಕೊಳ್ಳಬಾರದು ಎಂಬ ಮಹಾನ್ ಕಲ್ಪನೆಯಿಂದ ಸೃಷ್ಟಿಯಾದ ತಂತ್ರಜ್ಞಾನವಿದು. ಇದನ್ನೇ ದುರ್ಬಳಕೆ ಮಾಡಿಕೊಂಡು ಕಲಿತ ವೈದ್ಯ ಹುಟ್ಟುವ ಮಗುವಿನ ಲಿಂಗ ನೋಡಿ ಭ್ರೂಣ ತೆಗೆಯುವ ಕ್ರೂರ ಕೆಲಸಕ್ಕೆ ಕೈ ಹಾಕಿದರೆ ಹೇಗೆ? ಲಕ್ಷಾಂತರ ರೂಪಾಯಿ ಒಂದು ಗರ್ಭಪಾತದಿಂದ ದೊರೆಯುವಾಗ, ಸರ್ಕಾರದ ಯಂತ್ರದ ದುರ್ಬಳಕೆ ಪ್ರಧಾನವಾಯಿತು.
ಇಷ್ಟಕ್ಕೂ ಜಗತ್ತಿನಾದ್ಯಂತ ಬಹುತೇಕ ದೇಶಗಳು ಲಿಂಗ ಪತ್ತೆ ಕಾರ್ಯ ಮತ್ತು ಗರ್ಭಪಾತಕ್ಕೆ ಬಿಗಿ ಕಾನೂನನ್ನು ತಂದಿವೆ. ಭಾರತ ಕೂಡ ೧೯೯೧ರಿಂದ ಲಿಂಗ ಪತ್ತೆ ಹಾಗೂ ಗರ್ಭಪಾತದ ಬಗ್ಗೆ ವಿಶೇಷ ಕಾನೂನು ತಂದು ಕಟ್ಟಳೆ ವಿಧಿಸಿದೆ. ಆ ನಂತರ ಕೂಡ ನಿಯಂತ್ರಣಕ್ಕೆ ಬಾರದಾಗ ಕಾನೂನಿನ ಕುಣಿಕೆಯನ್ನು ಬಿಗಿಗೊಳಿಸುತ್ತಿದೆ.
ಇಷ್ಟಾಗಿಯೂ ಕಳೆದ ಎರಡು ದಶಕಗಳಲ್ಲಿ ಕೇಂದ್ರ ಸರ್ಕಾರವೇ ನಡೆಸಿದ ಸಂಶೋಧನೆಯಂತೆ ಒಂಬತ್ತು ಮಿಲಿಯನ್ ಹೆಣ್ಣು ಮಕ್ಕಳ ಭ್ರೂಣ ಹತ್ಯೆ ಆಗಿದೆ. ಒಂಬತ್ತು ಮಿಲಿಯನ್‌ನಲ್ಲಿ ಶೇಕಡಾ ೮೬.೭ರಷ್ಟು ಭ್ರೂಣ ಮಣ್ಣು ಪಾಲಾಗಿದೆ.
ಅಂದರೆ ಲಿಂಗಾನುಪಾತ ಕಡಿಮೆ ಇರಬೇಕೆಂಬ ಘನ ಉದ್ದೇಶಕ್ಕೆ ಸ್ತ್ರೀ ಭ್ರೂಣ ಹತ್ಯೆ ನಿಷೇಧಿಸಿದರೆ ಇಪ್ಪತ್ತೊಂದನೇ ಶತಮಾನದ ಅಂತ್ಯಕ್ಕೆ ಇನ್ನಷ್ಟು ಹೆಚ್ಚಾಯಿತು. ಹಾಗಂತ ಭ್ರೂಣ ಹತ್ಯೆ ನಿಯಂತ್ರಣಕ್ಕೆ ಸಾಕಷ್ಟು ಬಿಗಿ ಕಾನೂನೇನೋ ಇದೆ. ಈ ಕಾನೂನು ಜಾರಿಗೊಳಿಸುವವರೇ ಭ್ರಷ್ಟರಾದರೇ!? ಈ ಕರಾಳ ದಂಧೆಯ ಜಾಲದಲ್ಲಿ ಅವರೂ ಸಿಲುಕಿಕೊಂಡರೆ ಏನಾಗುತ್ತದೆ ಎನ್ನುವುದಕ್ಕೆ ಉದಾಹರಣೆಯೇ ಇದು.
ಸ್ಕಾö್ಯನಿಂಗ್ ಯಂತ್ರಗಳ ನೋಂದಣಿ, ಅದನ್ನು ನಿಭಾಯಿಸುವ ಸಂಸ್ಥೆ ಅಥವಾ ವ್ಯಕ್ತಿಯ ಮಾಹಿತಿ, ದಾಖಲೆ, ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ಎಲ್ಲವೂ ಇದೆ. ಲಿಂಗ ಪರೀಕ್ಷೆ ನಡೆಸಿದರೆ, ಅದನ್ನು ಬಹಿರಂಗಪಡಿಸಿದರೆ, ಗರ್ಭಪಾತ ಮಾಡಿಸಿದರೆ ಮೂರರಿಂದ ಐದು ವರ್ಷಗಳವರೆಗಿನ ಜೈಲು ಶಿಕ್ಷೆ ಇದೆ. ಹತ್ತರಿಂದ ಐವತ್ತು ಸಾವಿರ ರೂಪಾಯಿವರೆಗಿನ ದಂಡವೂ ಇದೆ. ಈ ಅಕ್ರಮ ಜಾಲ ನಿಯಂತ್ರಿಸಲು ಸರ್ಕಾರದ ಕಾರ್ಯಪಡೆ ಇದೆ. ಸ್ವತಃ ಜಿಲ್ಲೆಯ ಆರೋಗ್ಯಾಧಿಕಾರಿ, ತಾಲ್ಲೂಕಿನ ಆರೋಗ್ಯಾಧಿಕಾರಿ, ಇಡೀ ವೈದ್ಯಕೀಯ ಅಧಿಕಾರಿಗಳ ಪಡೆ ಇವೆ.
ಮೈಸೂರಿನ ಮಾತಾ ಪ್ರಸೂತಿ ಕೇಂದ್ರವಿರಬಹುದು. ಆಲೆಮನೆಯ ಆಸ್ಪತ್ರೆಗಳಿರಬಹುದು. ಅವೆಲ್ಲವೂ ಈ ದಂಧೆಗಿಳಿದಿವೆ ಎಂಬುದು ಈ ಕಾರ್ಯಪಡೆಗೆ ಗೊತ್ತಿಲ್ಲ ಅಂತಲ್ಲ. ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲಿನ ದಾಳಿ ಕೇವಲ ಮಾಮೂಲಿ, ಕೈಬಿಸಿಯ ವ್ಯವಸ್ಥೆಯಾಗಿರುವಾಗ ಭ್ರೂಣ ಹತ್ಯೆ ಅಥವಾ ಲಿಂಗ ಪರೀಕ್ಷೆಗೆ ಯಾವ ಅಂಜಿಕೆ, ಯಾವ ಕಾನೂನಿನ ಭಯ? ಮನುಷ್ಯತ್ವ, ಮಾನವೀಯತೆ ಎಲ್ಲವೂ ಅಪಹಾಸ್ಯ, ಅಣಕಿನಂತಾಗಿವೆ.
ಈಗ ಬೆಳಕಿಗೆ ಬಂದಿರುವ ಜಾಲ ರಾಜಧಾನಿಯಲ್ಲಷ್ಟೇ ಅಸ್ತಿತ್ವದಲ್ಲಿದೆ ಅಂತಲ್ಲ. ತಾಲ್ಲೂಕು ಕೇಂದ್ರ, ಪ್ರಮುಖ ಹೋಬಳಿಯಿಂದ ವಿಧಾನಸೌಧದ ಅಕ್ಕಪಕ್ಕದ ಆಸ್ಪತ್ರೆಗಳಲ್ಲಿ, ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಲಿಂಗಪರೀಕ್ಷೆ ಎಗ್ಗಿಲ್ಲದೇ ನಡೆಯುತ್ತಿದೆ. ಇದಕ್ಕಾಗಿ ಏಜೆಂಟರು ಹುಟ್ಟಿಕೊಂಡಿದ್ದಾರೆ. ಅಜ್ಞಾನಿ ವೈದ್ಯರು ಮಹಿಳೆಯರ ಗರ್ಭಕ್ಕೆ ಕೈ ಹಾಕುವ, ಹಾಗೇ ಅವೈಜ್ಞಾನಿಕವಾಗಿ ಗರ್ಭಪಾತ ಮಾಡಿಸುವ ಮಂದಿಯೂ ಸಾಕಷ್ಟಿದ್ದಾರೆ. ಗರ್ಭಪಾತ ಮತ್ತು ಲಿಂಗಪರೀಕ್ಷೆ ಈಗ ನೂರಾರು, ಸಾವಿರಾರು ಕೋಟಿಯ ದಂಧೆಯಾಗಿದೆ. ವೈದ್ಯರ ಮತ್ತು ವೈದ್ಯಕೀಯ ಶಿಕ್ಷಣದ ಕರಾಳ ಜಾಲದ ಒಂದು ಭಾಗ ಕೂಡ ಇದಾಗಿದೆ.
ಐಎಂಎ, ಎಂಸಿಐ, ವೈದ್ಯಕೀಯ ನಿಯಂತ್ರಣ ಸಂಸ್ಥೆಗಳು ಎಲ್ಲವುಗಳೂ ಪರೋಕ್ಷವಾಗಿ ಶಾಮೀಲಾದಂತೆ ಕಂಡು ಬರುತ್ತಿದೆ. ವಿಧಾನ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಸರ್ಕಾರವೇನೋ ಮಹಿಳಾ ಸದಸ್ಯರ ಮಾತಿಗೆ ಮರುಗಿತು. ನೋವಿಗೆ ಕಿವಿಯಾಯಿತು. ಆದರೆ ಇಷ್ಟಕ್ಕೇ ನಿಧಾನವಾಗಿ ಮರೆತೂ ಹೋಗಲೂ ಬಾರದು.
ಭ್ರೂಣ ಹತ್ಯೆಯೂ ನರಹತ್ಯೆಯಂತೆಯೇ ಅಲ್ಲವೇ? ಈ ದಂಧೆಗೈಯುವವರಿಗೆ ಹತ್ಯೆಗೈದ ಆರೋಪ ಹೊರಿಸಬೇಕು. ಅಂತಹ ಪ್ರಕರಣ ದಾಖಲಿಸಬೇಕು. ಕಾನೂನಿನ ದೌರ್ಬಲ್ಯ ಅರಿತು, ಚಾಪೆ ಕೆಳಗೆ ನುಸುಳುವ ತಂತ್ರವನ್ನು ಅಧ್ಯಯನ ಮಾಡಿ ದೋಷ ನಿವಾರಿಸಿ ಬಿಗಿ ಭಯ ಹುಟ್ಟಿಸುವ ಕ್ರಮ ಆಗಲೇಬೇಕು.
ಹಾಗಂತ, ಅಮಾಯಕರು ಬಲಿಯಾಗಬಾರದು. ನ್ಯಾಯಾಂಗ ವ್ಯವಸ್ಥೆಯಲ್ಲೂ ಇರುವ ದೋಷಗಳು ನಿವಾರಣೆಯಾಗಬೇಕು. ಏನಿದ್ದರೂ ಹಣದ ಥೈಲಿಯ ಮುಂದೆ ದಿಢೀರ್ ಶ್ರೀಮಂತಿಕೆಯ ಕನಸು ಕಾಣುವವರು, ಒಳ ಮಾರ್ಗವನ್ನು ಹುಡುಕಿಕೊಳ್ಳುತ್ತಲೇ ಇರುತ್ತಾರೆ. ಹಾಗಾಗಿ ಕಾವೇರಿ, ಕೃಷ್ಣೆ, ಶರಾವತಿ ಸೇರುವ ಹಸಿ ಗರ್ಭಗಳ ವಿಲವಿಲ ಒದ್ದಾಟ ಸಾಗಿರುತ್ತದೆ. ಇವಕ್ಕೆ ಮುಕ್ತಿ ಇರಲಿಕ್ಕಿಲ್ಲ. ಆಘಾತ ಎಂದರೆ ಇಷ್ಟು ದೊಡ್ಡ ಗರ್ಭಪಾತ ಜಾಲ ಬಯಲಾದರೂ ಐಎಂಎ,
ವೈದ್ಯರುಗಳು, ವೈದ್ಯಕೀಯ ವ್ಯವಸ್ಥೆಯ ಪ್ರಮುಖರು, ಸ್ತ್ರೀ ಕಾಳಜಿ ನಾಯಕರು, ಧರ್ಮ ರಕ್ಷಕರು, ಮಠಾಧೀಶರಾರೂ ತುಟಿ ಪಿಟ್ ಎನ್ನುತ್ತಿಲ್ಲ. ಏಕೆಂಬುದು ಬಿಚ್ಚಿ ಹೇಳಬೇಕಾಗಿಲ್ಲ. ಬಹುತೇಕ ಆಸ್ಪತ್ರೆಗಳ ನಿಯಂತ್ರಕರು ಅವರೇ ಇರುವುದರಿಂದ!
ಇದಕ್ಕೆ ಪೂರಕವಾಗಿ ನಕಲಿ ವೈದ್ಯರ ಹಾವಳಿ ಅಂಶವನ್ನು ಇಲ್ಲಿ ಗಮನಿಸಲೇಬೇಕು. ಭ್ರೂಣ ಹತ್ಯೆಗೆ ನೇರವಾಗಿ ಪೂರಕವಲ್ಲದಿರಬಹುದು. ಆದರೆ ಪರೋಕ್ಷವಾಗಿ ನಕಲಿ ವೈದ್ಯರು, ಭ್ರೂಣ ಹತ್ಯೆ ಮತ್ತು ಒಟ್ಟಾರೆ ಸಾರ್ವಜನಿಕ ಬದುಕಿಗೆ ಪರಸ್ಪರ ಸಂಬಂಧವಿದೆ. ಜನರ ಅನಾರೋಗ್ಯ, ರೋಗ ರುಜಿನೆಗಳು ಹೇಗೆ ಧನಮೂಲವಾಗಿ ಪರಿವರ್ತನೆಯಾಗಿವೆ, ಮತ್ತು ನಿಯಂತ್ರಣವೇ ಇಲ್ಲದ ವ್ಯವಸ್ಥೆಯಾಗಿವೆ ಎನ್ನುವುದಕ್ಕೆ ರಾಜ್ಯದಲ್ಲಿ ೧೭೬೬ ನಕಲಿ ವೈದ್ಯರು ಅನಧಿಕೃತವಾಗಿ ಪತ್ತೆಯಾಗಿರುವುದು ನಿದರ್ಶನ. ಅಂದರೆ ಇವರಲ್ಲಿ ಯಾವ ಪ್ರಮಾಣ ಪತ್ರವೂ ಇಲ್ಲ. ತರಬೇತಿ ಇಲ್ಲ. ಆದರೂ ಕ್ಲಿನಿಕ್ ತೆಗೆದು ಹಳ್ಳಿ, ತಾಲ್ಲೂಕು, ರಾಜಧಾನಿಯ ಸ್ಲಂಗಳಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಯಾವುದೋ ವೈದ್ಯರ ಬಳಿ ಮರ‍್ನಾಲ್ಕು ವರ್ಷ ಔಷಧ- ಗುಳಿಗೆ ನೀಡುವುದನ್ನು ಕಲಿತು ಆಸ್ಪತ್ರೆ ತೆರೆಯುತ್ತಾರೆ. ಜನರ ಜೀವ ಎಷ್ಟು ಅಗ್ಗ ಇವರಿಗೆ ಎನ್ನುವುದಕ್ಕೆ ಇನ್ನೇನು ಬೇಕು ಉದಾಹರಣೆ?
ಬೆಳಗಾವಿಯ ವಂಟಮೂರಿಯಲ್ಲಿ ತಾಯಿಯೊಬ್ಬರ ಬೆತ್ತಲೆಗೊಳಿಸಿ ಹಲ್ಲೆ ನಡೆಸಿರುವ ಘಟನೆ ಬಹುಶಃ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ರಕ್ಷಣೆ, ಭಯ ಯಾವುವೂ ಇಲ್ಲ ಎನ್ನುವುದನ್ನು ತೋರಿಸಿದಂತಿದೆ. ಆಕೆಯ ಮಗ ಶ್ರೀಮಂತ ಹುಡುಗಿಯನ್ನು ಪ್ರೀತಿಸಿ, ಇಬ್ಬರೂ ಊರು ಬಿಟ್ಟು ಹೋದದ್ದಕ್ಕೆ ಈ ತಾಯಿಯ ಮರ್ಯಾದೆಗೆ ಧಕ್ಕೆ ತರಲಾಗಿದೆ.
ವಂಟಮೂರಿ ಘಟನೆಯ ಹಿಂದಿರುವುದು ದುಂಡಾವರ್ತಿ ಎನ್ನುವ ಧಾಷ್ಟö್ರ್ಯ. ಇದೇ ಬೆಳಗಾವಿ ಜಿಲ್ಲೆಯಲ್ಲಿ ಕೆಲವು ತಿಂಗಳ ಹಿಂದೆ ಪರಿಶಿಷ್ಟ ಪಂಗಡದ ಮಹಿಳೆಯರ ಮೇಲೆ ಕೆಲ ಪುಂಡರು, ರಾಜಕಾರಣಿಗಳ ಬೆಂಬಲಿತರು ವಿವಸ್ತçಗೊಳಿಸಿ ಮೆರವಣಿಗೆ ನಡೆಸಿದ ಘಟನೆ ಬೆಳಕಿಗೆ ಬಂದಿತ್ತು. ಎಸ್‌ಪಿವರೆಗೆ ದೂರು ನೀಡಿದ್ದರೂ ಮಹಿಳೆಗೆ ರಕ್ಷಣೆ ನೀಡಿರಲಿಲ್ಲ. ಆರೋಪಿಗಳು ಲೀಲಾಜಾಲವಾಗಿ ಜಾಮೀನು ಪಡೆದು ಹೊರಗುಳಿದರು. ನಮ್ಮನ್ನು ಏನೂ ಮಾಡಲಿಕ್ಕೆ ಆಗಲ್ಲ ಎನ್ನುವ ಮನೋಭಾವದವರು ಮತ್ತೆ ಇಂತಹ ದುಷ್ಕೃತ್ಯ ಎಸಗುತ್ತಾರೆ.
ಗೃಹ ಮಂತ್ರಿ, ಜಿಲ್ಲಾ ಮಂತ್ರಿಗಳೆಲ್ಲ ಮಹಿಳೆಗೆ ಧೈರ್ಯ ತುಂಬಿದ್ದಾರೆ. ಆದರೆ ನಮ್ಮ ಕಾನೂನು, ರಕ್ಷಣೆ ಎಷ್ಟು ಸಡಿಲು ಎನ್ನುವುದನ್ನು ಕೂಡ ಘಟನೆ ಬಯಲುಗೊಳಿಸಿದೆ. ಬೆಳಗಾವಿ ಅಧಿವೇಶನದ
ಸಂದರ್ಭದಲ್ಲಿ, ಇಡೀ ಸರ್ಕಾರ ಅದೇ ಊರಿನಲ್ಲಿ ಇರುವಾಗ ಮಹಿಳೆಯೊಬ್ಬರ ಸ್ಥಿತಿ ಹೀಗಾಗಿದೆ ಎನ್ನುವುದು ಗಮನಾರ್ಹ. ಈ ಪುಂಡರಿಗೂ ರಕ್ಷಣೆ ಕೊಡುವವರಿದ್ದಾರಲ್ಲ? ಇದು ದುರ್ದೈವ.

Next Article