For the best experience, open
https://m.samyuktakarnataka.in
on your mobile browser.

ದೇಶದ್ರೋಹದ ಕೂಗುಮಾರಿಗಳ ಕೂಗು ಅಡಗಬೇಡವೇ?

02:00 AM Mar 01, 2024 IST | Samyukta Karnataka
ದೇಶದ್ರೋಹದ ಕೂಗುಮಾರಿಗಳ ಕೂಗು ಅಡಗಬೇಡವೇ

ಸ್ವತಂತ್ರ ಭಾರತದಲ್ಲಿನ ರಾಷ್ಟ್ರೀಯತೆಯನ್ನು ಭಾವನಾತ್ಮಕ, ಸಾಮಾಜಿಕ, ಸಾಂಸ್ಕೃತಿಕ ಅಂಶಗಳನ್ನೊಳಗೊಂಡ ರಾಷ್ಟ್ರೀಯ ಐಕ್ಯ ಮತ್ತು ಭದ್ರತೆಯನ್ನು ನಮ್ಮ ಅಭ್ಯುದಯಕ್ಕಾಗಿ ಸಾಧಿಸಬೇಕಾಗಿದೆ. ಅದು ಇಂದಿನ ತುರ್ತು. ದೇಶದಲ್ಲಿದ್ದು ಶತ್ರು ರಾಷ್ಟ್ರಕ್ಕೆ ಜೈಕಾರ ಕೂಗುವ ಕೂಗುಮಾರಿಗಳಿಂದ ರಾಷ್ಟ್ರದ ಐಕ್ಯ ಸಾಧಿಸಬೇಕಾಗಿದೆ. ಅದರ ತಳಹದಿಯಾಗಿ ಭಾವೈಕ್ಯ ಬೇಕಾಗುತ್ತದೆ. ಭಾವೈಕ್ಯದ ಬೀಜ ರಾಷ್ಟ್ರ ಐಕ್ಯದ ಫಸಲನ್ನು ನೀಡುತ್ತದೆ. ಒಬ್ಬ ವ್ಯಕ್ತಿ ಭಾವೈಕ್ಯವನ್ನು ಸಾಧಿಸದಿದ್ದರೆ, ತನ್ನ ನೆರೆಹೊರೆಯವರೊಡನೆ ಸಮರಸವಾಗಿ ಬದುಕದಿದ್ದರೆ, ಕುಟುಂಬ, ಸಮಾಜಗಳೊಂದಿಗೆ ಹೇಗೆ ಹೊಂದಿ ಬಾಳಲು ಸಾಧ್ಯ? ಮಾನಸಿಕ ಐಕ್ಯತೆ ಹೇಗೆ ನಿರೀಕ್ಷಿಸಬಹುದು ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸುತ್ತವೆ. ದೇಶದ ಜನತೆಯಲ್ಲಿ ತಾವು ಒಂದು ದೇಶದವರು ಎಂಬ ಭಾವನೆ ಬರಬೇಕು.
ಇತ್ತೀಚೆಗೆ ರಾಜಕೀಯ ಕಾರಣಗಳಿಂದಾಗಿ ಒಕ್ಕೂಟ ತತ್ವಕ್ಕೆ ಪೆಟ್ಟು ಕೊಡುತ್ತಿರುವ ಕೂಗುಮಾರಿಗಳು ಮುನ್ನೆಲೆಗೆ ಬರುತ್ತಿವೆ. ಅನುಕೂಲಕರ ರಾಜಕೀಯ ರಕ್ಷಣಾ ಸಾಧನವಾಗಿ ರಾಜಕಾರಣಿಗಳು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಕೆಲವು ಬೇಡಿಕೆಗಳ ನೆಪವೊಡ್ಡಿ ದೇಶ ವಿಭಜನೆ, ಶತ್ರು ರಾಷ್ಟ್ರದ ಪರವಾಗಿ ಜೈಕಾರ, ಹೇಳಿಕೆಗಳನ್ನು ಕೊಡುವುದು, ಕೂಗುವುದು ಖಂಡನೀಯ. ಜನವಿರೋಧಿ ರಾಜಕಾರಣಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಬಂದಾಗ ಸೋಲು ಗೆಲುವುಗಳು ಸಹಜ ಪ್ರಕ್ರಿಯಗಳು. ಇಂತಹ ಸಂದರ್ಭಗಳಲ್ಲಿ ದೇಶದ ಒಂದು ರಾಜಕೀಯ ಪಕ್ಷ ಇನ್ನೊಂದು ರಾಜಕೀಯ ಪಕ್ಷವನ್ನು, ಆಳುವ ಪಕ್ಷವನ್ನು ವಿರೋಧಿ ಪಕ್ಷ ಟೀಕಿಸುವುದು ಸರ್ವೆ ಸಾಮಾನ್ಯ ಸಂಗತಿಗಳು. ಆದರೆ ಕೆಲವು ಕೂಗು ಹಾಕುವ ಕೂಗುಮಾರಿಗಳು ಹಾಗೂ ಹೇಳಿಕೆ ಕೊಡುವ ಮೂಲಕ ದೇಶವನ್ನು ದುರ್ಬಲಗೊಳಿಸುವ ನಾಯಕರು ಹಾಗೂ ಕಾರ್ಯಕರ್ತರುಗಳಿಗೆ ಪಕ್ಷಗಳ ಹಿರಿಯ ನಾಯಕರುಗಳು ಅವರನ್ನು ಹತೋಟಿಯಲ್ಲಿಟ್ಟು ತಹಬದಿಗೆ ತರಬೇಕು.
ಅಭಿಪ್ರಾಯ ಸ್ವಾತಂತ್ರ್ಯವಿದೆ ಎಂದಮಾತ್ರಕ್ಕೆ ದೇಶದ್ರೋಹದ ಕೂಗುಮಾರಿಗಳ ಮೂಲಕ ಒಂದು ದಂಡೆಯಲ್ಲಿ ನಿಂತು ನೋಡುವಂತಾಗಬಾರದು. ಹಾಗೆ ನಿಂತರೆ ನಾವು ಅಸಮರ್ಥರೆನಿಸಿಕೊಳ್ಳುತ್ತೇವೆ. ವ್ಯಕ್ತಿಗಳ ಚಾರಿತ್ರ್ಯವೆಂದರೆ ಸಮಾಜ, ರಾಷ್ಟ್ರೀಯ ಚಾರಿತ್ರ್ಯವೂ ಹೌದು. ರಾಷ್ಟ್ರೀಯ ಚಾರಿತ್ರ್ಯ ಆಯಾ ರಾಷ್ಟ್ರದ ಪ್ರಜೆಗಳ ವರ್ತನೆಯಿಂದ ವ್ಯಕ್ತವಾಗುತ್ತದೆ. ಒಂದು ರಾಷ್ಟ್ರದ ಪ್ರಗತಿ ಜನರ ಮನೋಬಲ, ಅವರ ಇಚ್ಛಾಶಕ್ತಿ ಮೂಲ ಕಾರಣವಾಗುತ್ತವೆ.
ಭಾರತೀಯತೆ, ರಾಷ್ಟ್ರೀಯತೆಯ ತೋರುಗಂಬಗಳಾದ ನೇತಾಜಿ ಸುಭಾಶ್ಚಂದ್ರ ಬೋಸ್, ಚಂದ್ರಶೇಖರ್ ಆಜಾದ್, ಭಗತ್‌ಸಿಂಗ್, ಸ್ವಾಮಿ ವಿವೇಕಾನಂದ, ಸರ್ ಸಿ.ವಿ. ರಾಮನ್, ಅಬ್ದುಲ್ ಕಲಾಂ ಅವರುಗಳಂತಹ ವ್ಯಕ್ತಿತ್ವಗಳು ನಮಗೆ ರಾಷ್ಟ್ರೀಯತೆಯ ಪಾಠಗಳು.
ಸವಾಲು ಸಂಕಷ್ಟಗಳ ಮಧ್ಯೆ ದೇಶ ವಿಭಜನೆ ಕಂಡರೂ, ಜಗತ್ತು ನಿಬ್ಬೆರಗಾಗುವ ರೀತಿಯ ಸಾಧನೆ ನಮ್ಮದು. ಇವುಗಳ ನಡುವೆ ಕೆಲವು ಭಾರತೀಯರು ಬೇರೆ ಬೇರೆ ಕಾರಣಗಳಿಂದಾಗಿ ಕ್ಷೆಭೆ ಮತ್ತು ನಿರಾಸೆಗಳನ್ನು ಎದುರಿಸುತ್ತಿರುವರು. ಮಾನಸಿಕ ಜಂಜಾಟಗಳು, ತುಮಲಗಳು, ಧರ್ಮ, ಜಾತಿ, ರಾಜಕಾರಣ, ಸಂಘರ್ಷಗಳು, ಗೌಜುಗದ್ದಲಗಳಲ್ಲಿ ಬಿದ್ದ ಕೆಲವು ಕೂಗುಮಾರಿಗಳು ಆಗಾಗ ದೇಶದ ವಿರುದ್ಧ ಕೂಗುತ್ತಿರುವರು.
ಕೂಗುಮಾರಿಗಳು ನಮ್ಮ ದೇಶದಲ್ಲಿ ಅಷ್ಟೇ ಅಲ್ಲ ಬಹುತೇಕ ಎಲ್ಲ ರಾಷ್ಟ್ರಗಳಲ್ಲಿ ಸಿಗುತ್ತಾರೆ.
ನಮ್ಮ ದೇಶದ ರಾಷ್ಟ್ರೀಯತೆಯ ಸ್ವಭಾವವನ್ನು ಮೈಗೂಡಿಸಿಕೊಳ್ಳದೇ ದೇಶಭಕ್ತನಾಗಲಾರ. ಕೇವಲ ನಕಾಶೆಗಳ ಸರಹದ್ದುಗಳ ಮಧ್ಯದಲ್ಲಿ ಜೀವಿಸಿದ ಮಾತ್ರಕ್ಕೆ ಭಾರತೀಯತೆ ಬರುವುದಿಲ್ಲ. ಅವರ ಭಾವ ಮನಸ್ಸುಗಳು, ಶಿಕ್ಷಣ ವ್ಯಕ್ತಿಯಲ್ಲಿ ದೇಶದ ಕುರಿತು ಸದಭಿರುಚಿಯನ್ನು ಬೆಳೆಸಿಕೊಂಡಾಗ ದೇಶಭಕ್ತಿ ಬರಲು ಸಾಧ್ಯ.
ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ತಮ್ಮ ಅಪವಿತ್ರ ಹಸ್ತಗಳನ್ನು ಧರ್ಮ, ಜಾತಿ, ಪ್ರಾದೇಶಿಕತೆಗಳತ್ತ ಚಾಚಬಾರದು, ರಾಜಕೀಯ ಜಾಗ್ರತೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಿ. ರಾಜಕೀಯದಲ್ಲಿ ದೇಶ ಮೊದಲಾಗಲಿ, ನಾಡು-ನುಡಿ, ಸಂಸ್ಕೃತಿ, ಜಾತ್ಯತೀತತೆಗಳು, ಪ್ರೀತಿ ವಿಶ್ವಾಸ ವಿನಯಗಳ ಕೀಲಿಕೈಗಳ ಮೂಲಕ ಕೂಗುಮಾರಿಗಳು ಅಡಗಿ, ಬದಲಾವಣೆಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ.
ದೇಶದ ಯಾವುದೇ ಭಾಗದ ಕೂಗುಮಾರಿಗಳನ್ನು ಅಲಕ್ಷಿಸದೇ ಅವರ ಬೇರುಗಳು ಆಳವಾಗಿ ಬಿಡದಂತೆ ರಾಷ್ಟ್ರೀಯತೆ, ಸಾಮರಸ್ಯ, ಸೌಹಾರ್ದತೆಗಳನ್ನು ಸಮಾಜ ಅಂಗೀಕರಿಸಿ ಮೌಲ್ಯಗಳನ್ನು ಒಪ್ಪಿಕೊಳ್ಳುವ ನಿಟ್ಟಿನಲ್ಲಿ, ಸಾತ್ವಿಕ ಕ್ರಮಗಳ ಮೂಲಕ ದೇಶಭಕ್ತಿ ಬೆಸೆಯುವ ಕಾರ್ಯಕ್ರಮಗಳು ಪಕ್ಷ ರಾಜಕಾರಣದಲ್ಲಿ ಮೂಡಿ ಬರಲಿ. ಆಗ ಜನರ ಮನದಲ್ಲಿ ರಾಷ್ಟ್ರೀಯತೆಯ ಹೂ ಅರಳಲು ಸಾಧ್ಯ.