For the best experience, open
https://m.samyuktakarnataka.in
on your mobile browser.

ನಿಜ ಸಂಗತಿ ಮುಚ್ಚಿಟ್ಟು ಪಡೆದ ತೀರ್ಪು ರದ್ದು

03:30 AM May 25, 2024 IST | Samyukta Karnataka
ನಿಜ ಸಂಗತಿ ಮುಚ್ಚಿಟ್ಟು ಪಡೆದ ತೀರ್ಪು ರದ್ದು

ಕಕ್ಷಿದಾರಳ ಸಹೋದರರು ಮನೆತನದ ಆಸ್ತಿಗಳನ್ನು ತಮ್ಮ ಹೆಸರಿನಲ್ಲಿ ದಾಖಲಿಸಿಕೊಂಡು ಐದಾರು ದಿನಗಳಲ್ಲಿ ಬೇರೆಯವರಿಗೆ ಮಾರಾಟ ಮಾಡುವವರಿದ್ದರು. ಪಾಲು ವಿಭಜನೆ ಮತ್ತು ಪ್ರತ್ಯೇಕ ಸ್ವಾಧೀನ ಕೇಳಿ ದಾವೆ ದಾಖಲಿಸಿದೆ. ದಾವೆ ಮುಗಿಯುವವರೆಗೂ ದಾವೆ ಆಸ್ತಿ ಬೇರೆಯವರಿಗೆ ಮಾರಾಟ ಮಾಡದಂತೆ ಪ್ರತಿವಾದಿಯರ ಮೇಲೆ ಮಧ್ಯಂತರ ತಡೆಯಾಜ್ಞೆ ಆದೇಶ ಕೋರಿ ಅರ್ಜಿ ದಾಖಲಿಸಿದೆ.
ಈಗೆಲ್ಲ ಆನ್‌ಲೈನ್ ತಂತ್ರಜ್ಞಾನ ನ್ಯಾಯ ವ್ಯವಸ್ಥೆ. ಕೇಸನ್ನು ಮೊದಲು ಇ-ಫೈಲಿಂಗ್‌ನಲ್ಲಿ ಅಪ್ಪಲೋಡ್ ಮಾಡಿ, ಆನಂತರ ದಾವೆ ಇ-ಫೈಲಿಂಗ್ ನಂಬರ್ ಸಹಿತ ದಾಖಲಿಸಬೇಕಿದೆ. ಇ-ಕೋರ್ಟ್ ವ್ಯವಸ್ಥೆಗೆ ನಾವೆಲ್ಲಾ ಅಪ್ಡೇಟ್ ಆಗಲೇಬೇಕು.
ಸಂಜೆ, ಕೇಸು ನ್ಯಾಯಾಧೀಶರ ಮುಂದೆ ಪ್ರಾಥಮಿಕ ಹಿಯರಿಂಗ್ ಬಂದಿತು. ನ್ಯಾಯಾಧೀಶರಿಗೆ ಮನ ಮುಟ್ಟುವ ಹಾಗೆ ಮಧ್ಯಂತರ ಅರ್ಜಿ ಮೇಲೆ ಸ್ಪಷ್ಟ ಧ್ವನಿಯಲ್ಲಿ ಸಂಕ್ಷಿಪ್ತ ವಾದ ಪ್ರಾರಂಭಿಸಿದೆ.
ಈ ಕೇಸಿನ ವಾದಿಯು ಪ್ರತಿ ವಾದಿಯರ ಸಹೋದರಿ ಇರುತ್ತಾಳೆ. ವಾದಿ ಪ್ರತಿವಾದಿಯರ ತಂದೆ ೧೯೮೦ರಲ್ಲಿ ತನ್ನ ಹೆಂಡತಿ, ಒಬ್ಬಳೆ ಹೆಣ್ಣು ಮಗಳು ವಾದಿ, ಮೂರು ಗಂಡು ಮಕ್ಕಳು ಪ್ರತಿ ವಾದಿಯರನ್ನು ಮೊದಲ ದರ್ಜೆಯ ಉತ್ತರಾಧಿಕಾರಿಗಳೆಂದು ಬಿಟ್ಟು ಮೃತನಾಗಿದ್ದಾನೆ. ತಂದೆಯ ಮರಣದ ನಂತರ ವಾದಿ ಪ್ರತಿವಾದಿಯರು ಮತ್ತು ತಾಯಿಯ ಹೆಸರು ದಾವೆ ಜಮೀನುಗಳ ಕಂದಾಯ ದಾಖಲೆಯಲ್ಲಿ ಸಾಮೂಹಿಕವಾಗಿ ದಾಖಲಾದವು. ವಾದಿ ಪ್ರತಿವಾದಿಯರು ಮತ್ತು ತಾಯಿ ಹಿಂದೂ ಏಕತ್ರ ಕುಟುಂಬದ ಸದಸ್ಯರಾಗಿ ವಾಸ ಮಾಡಲಾರಂಬಿಸಿದರು. ವಾದಿ ಮದುವೆಯಾಗಿ ಗಂಡನ ಮನೆ ಸೇರಿದಳು. ತಾಯಿ ತೀರಿಕೊಂಡಳು. ಹಲವಾರು ವರುಷಗಳು ಉರುಳಿದವು. ಸಹೋದರರು ಸಹೋದರಿಯನ್ನು ಮರೆತು ಬಿಟ್ಟರು. ಸಣ್ಣ ಪುಟ್ಟ ಕಾರ್ಯಕ್ರಮಕ್ಕೆ ಆಹ್ವಾನಿಸುವುದನ್ನು ಮರೆತರು. ಸಹೋದರರು ಸುಖವಾಗಿದ್ದರೆ ಸಾಕೆಂದು ಸುಮ್ಮನಾದಳು. ಇತ್ತೀಚಿಗೆ ಪ್ರತಿವಾದಿಯರು ಏಕತ್ರ ಮನೆತನದ ಆಸ್ತಿಯನ್ನು ಸಮೀಪದಲ್ಲಿ ತಲೆ ಎತ್ತುತ್ತಿರುವ ಕಾರ್ಖಾನೆಗೆ ಮಾರಾಟ ಮಾಡುತ್ತಿರುವುದು ತಿಳಿಯಿತು. ವಾದಿ ತಾನು ಕೂಡ ಕುಟುಂಬದ ದಾಯಾದಿಯಾಗಿದ್ದು. ತನ್ನ ಹೆಸರು ಆಸ್ತಿಯ ದಾಖಲೆಯಲ್ಲಿ ಇದ್ದು, ತನ್ನನ್ನು ಬಿಟ್ಟು ಹೇಗೆ ಮಾರಾಟ ಮಾಡುತ್ತಾರೆ ಎಂಬ ಸಂದಿಗ್ಧದಲ್ಲಿ ಸಿಲುಕಿದಳು. ನೇರವಾಗಿ ಪ್ರತಿವಾದಿ ಸಹೋದರರನ್ನು ಪ್ರಶ್ನಿಸಿದಳು. ಆಸ್ತಿಗಳು ಕೋರ್ಟ್ ಆದೇಶದಂತೆ ವಿಭಾಗವಾಗಿವೆ. ಆಸ್ತಿಯಲ್ಲಿ ನಿನಗೇನು ಹಕ್ಕು, ಸಂಬಂಧವಿಲ್ಲ ಅಂತ ಹಾರಿಕೆಯ ಉತ್ತರ ಕೊಟ್ಟು ಸಾಗುಹಾಕಿದರು. ಅನಿವಾರ್ಯವಾಗಿ ಆಸ್ತಿಗೆ ಸಂಬಂಧಿಸಿದ ಕಂದಾಯ ದಾಖಲೆ ಪರಿಶೀಲಿಸಿದಳು. ಆಘಾತಕಾರಿ ಸಂಗತಿಗಳು ತಿಳಿದು ದೀಘ್ರಮೆಗೊಂಡಳು. ೧೯೮೦ರಲ್ಲಿ ತಂದೆ ಮರಣದ ನಂತರ ಹೆಂಡತಿ ಮಕ್ಕಳ ಹೆಸರು ಸಾಮೂಹಿಕವಾಗಿ ಕಂದಾಯ ದಾಖಲೆಯಲ್ಲಿ ದಾಖಲಾದವು. ೧೯೯೫ರಲ್ಲಿ ಪ್ರತಿವಾದಿಯರು ಹಕ್ಕುಬಿಟ್ಟ ಪತ್ರ ಸೃಷ್ಟಿಸಿ, ವಾದಿ/ಸಹೋದರಿ ಮತ್ತು ತಾಯಿ, ತಾವು ಪ್ರತಿವಾದಿಯರಿಗೆ ಮನೆತನ ಆಸ್ತಿಯಲ್ಲಿ ಹಕ್ಕು ಬಿಟ್ಟುಕೊಟ್ಟಿರುವುದಾಗಿ ಕಾಣಿಸಿದ್ದಾರೆ. ಹುಸಿ ಹಕ್ಕು ಬಿಟ್ಟ ಪತ್ರ ಜೊತೆ ವರದಿಯನ್ನು ಕಂದಾಯ ಅಧಿಕಾರಿಗೆ ನೀಡಿ ವಾದಿ ಮತ್ತು ತಾಯಿಯ ಹೆಸರನ್ನು ದಾವೆ ಆಸ್ತಿಯಲ್ಲಿ ಕಂದಾಯ ದಾಖಲೆಯಲ್ಲಿ ತೆಗೆದು ಹಾಕಿಸಿದರು. ನಂತರ ದಿನದಲ್ಲಿ, ಪ್ರತಿವಾದಿ ಸಹೋದರ ಮಧ್ಯೆ ಆಸ್ತಿ ಹಂಚಿಕೆ ವಿಷಯದಲ್ಲಿ ನ್ಯಾಯಬಂದಿತು. ಒಬ್ಬ ಪ್ರತಿವಾದಿ ಪಾಲು ವಿಭಜನೆ ಮತ್ತು ಪ್ರತ್ಯೇಕ ಸ್ವಾಧೀನ ಕುರಿತು ಸಿವಿಲ್ ದಾವೆ ಮಾಡಿದನು. ದಾವೆಯಲ್ಲಿ ವಾದಿಯನ್ನು ತಾಯಿಯನ್ನು ಪಾರ್ಟಿ ಮಾಡಿರಲಿಲ್ಲ. ಪ್ರತಿವಾದಿಯರಿಗೆ ಪ್ರ ತಿಯೊಬ್ಬರಿಗೆ ೧/೩ ಹಿಸ್ಸೆ ನಿರ್ಣಯಿಸಿ ಪ್ರಾರ್ಥಮಿಕ (ಪ್ರಿಲಿಮಿನರಿ)ಡಿಕ್ರಿ ಜಡ್ಜಮೆಂಟ್ ಡಿಕ್ರಿ ಆದೇಶವಾಯಿತು. ಪ್ರಿಲಿಮಿನರಿ ಆದೇಶದಂತೆ ಪ್ರತಿವಾದಿಯರ ಹಿಸ್ಸೇಯನ್ನು ಅಳತೆ ಮಾಡಿ ಗುರುತಿಸಿ ಬೇರೆ ಮಾಡಲು ತಹಸೀಲ್ದಾರರಿಗೆ ಆದೇಶ ಮಾಡುವಂತೆ ಕೋರಿ ಎಫ್‌ಡಿಪಿ (ಫೈನಲ್ ಡಿಕ್ರಿ ಪ್ರೊಸಿಡಿಂಗ್)ಪ್ರಕರಣ ದಾಖಲಾಗಿ ಅಂತಿಮ ಆದೇಶವಾಗಿ ಪ್ರತಿವಾದಿಯರ ಹಿಸ್ಸೆ, ಸ್ವಾಧೀನ ಬೇರೆ ಆದವು. ಯಾವ ಕಾಲಕ್ಕೂ ವಾದಿ ಸಹೋದರಿ ಮತ್ತು ತಾಯಿ ಒಪ್ಪಿಗೆ ಪತ್ರ ಬರೆದು ಕೊಟ್ಟಿಲ್ಲ ಪ್ರಕರಣಗಳಲ್ಲಿ ವಾದಿ ಪಾರ್ಟಿ ಇಲ್ಲ, ಅದಕ್ಕೆ ವಾದಿಯ ಹಿಸ್ಸೆ ಹಕ್ಕು ಕಾನೂನಿನ ಅಡಿಯಲ್ಲಿ ತಟಸ್ಥವಾಗಿದ್ದು, ಒಪ್ಪಿಗೆ ಪತ್ರ, ಪ್ರಿಲಿಮಿನರಿ ಮತ್ತು ಫೈನಲ್ ಜಡ್ಜಮೆಂಟ್ ವಾದಿಯ ಹಿಸ್ಸೆಗೆ ಬಂಧನಕಾರಕ ಆಗುವುದಿಲ್ಲ. ಆದ್ದರಿಂದ ವಾದಿಯ ೧/೪ ಹಿಸ್ಸೆ ವಿಭಜಿಸಲು ಮತ್ತು ಪ್ರತ್ಯೇಕ ಸ್ವಾಧೀನಕ್ಕಾಗಿ ವಾದಿ ದಾವೆ ಮಾಡಿದ್ದಾಳೆ. ಈಗ ಪ್ರತಿವಾದಿಯರು ತಮ್ಮ ಹೆಸರಿಗೆ ಮಾಡಿಕೊಂಡಿರುವ ಜಮೀನು ಮಾರಾಟ ಮಾಡುತ್ತಿದ್ದು ಈ ದಾವೆ ಅಂತಿಮ ನಿರ್ಣಯದವರೆಗೆ ಮಾರಾಟ ಇತರೆ ರೀತಿ ಹಸ್ತಾಂತರ ಮಾಡದಂತೆ ಏಕರ್ಫೆ ತಡೆಯಾಜ್ಞೆ (ಎಕ್ಸ್ ಪಾರ್ಟೆ ಟೆಂಪರರಿ ಇಂಜಂಕ್ಷನ್)ನೀಡಬೇಕು ಇಲ್ಲದಿದ್ದರೆ ವಾದಿಗೆ ತುಂಬಲಾರದ ಹಾನಿ ಆಗುತ್ತದೆ ಎಂದು ಪ್ರಾರ್ಥಿಸಿ ವಾದಕ್ಕೆ ವಿರಾಮ ನೀಡಿದೆ.
ನ್ಯಾಯಾಲಯವು ಪ್ರತಿವಾದಿಯರು ದಾವೆ ಆಸ್ತಿಯನ್ನು ಯಾವುದೇ ರೀತಿ ಹಸ್ತಾಂತರ ಮಾಡದಂತೆ ಏಕತರ್ಫೆ ತಡೆಯಾಜ್ಞೆ ಆದೇಶ ಮಾಡಿ ಪ್ರತಿವಾದಿಯರು ಮುಂದಿನ ದಿನಾಂಕದಂದು ಕೋರ್ಟಿಗೆ ಹಾಜರು ಇರಲು ಸಮನ್ಸ್ ಆದೇಶ ಮಾಡಿತು.
ಪ್ರತಿವಾದಿಯರು ವಕೀಲರ ಮುಖಾಂತರ ಕೋರ್ಟಿಗೆ ಹಾಜರಾಗಿ ತಮ್ಮ ಕೈಫಿಯತ್/ತಕರಾರು ಸಲ್ಲಿಸಿದರು. ವಾದಿ ಮತ್ತು ತಾಯಿ ಬರೆದು ಕೊಟ್ಟ ಹಕ್ಕುಬಿಟ್ಟ ಪತ್ರ ಆಧಾರದಿಂದ ಕಂದಾಯ ದಾಖಲೆಯಲ್ಲಿ ಹೆಸರು ಕಡಿಮೆ ಆಗಿದೆ. ವಾದಿ ಹಕ್ಕು ಬಿಟ್ಟಿರುವುದರಿಂದ ಅವಳು ಪ್ರತಿವಾದಿಯರ ಮಧ್ಯೆ ಕೋರ್ಟ್ ವ್ಯಾಜ್ಯದಲ್ಲಿ ಅವಶ್ಯಕ ಪಾರ್ಟಿ ಇರುವುದಿಲ್ಲವೆಂದು ದಾವೆ ವಜಾಗೊಳಿಸಲು ಪ್ರಾರ್ಥಿಸಿದರು.ನ್ಯಾಯಾಧೀಶರು ಸಂಧಾನಕ್ಕೆ ಸೂಚಿಸಿದರು. ಪ್ರತಿ ವಾದಿಯರು ನಿರಾಕರಿಸಿದರು. ಪ್ರಕರಣವನ್ನು ಸಾಕ್ಷಿಗಾಗಿ ಮುಂದೂಡಲಾಯಿತು.
ವಾದಿಯ ಮುಖ್ಯ ವಿಚಾರಣೆ ಪ್ರಮಾಣ ಪತ್ರ ದಾಖಲಿಸಿ ಕಾಗದ ಪತ್ರ ಹಾಜರಪಡಿಸಿ ಗುರುತಿಸಿದೆ. ವಾದಿಯರ ಪರ ಒಬ್ಬ ಸಾಕ್ಷಿ ಹೇಳಿಸಿದೆ. ವಾದಿ ಮತ್ತು ಸಾಕ್ಷಿದಾರ ದಾವೆಗೆ ಪೂರಕವಾಗಿ ಪಾಟಿ ಸವಾಲಿನಲ್ಲಿ ಉತ್ತರಿಸಿದರು. ಪ್ರತಿವಾದಿಯರು ಪಾಟಿ ಸವಾಲಿನಲ್ಲಿ ಹಕ್ಕು ಬಿಟ್ಟ ಪತ್ರ ಎಲ್ಲಿದೆ ಎಂದು ಗೊತ್ತಿಲ್ಲ ಮತ್ತು ನೋಂದಣಿ ಆಗಿಲ್ಲವೆಂದು ಒಪ್ಪಿಕೊಂಡರು. ನ್ಯಾಯಾಲಯವು, ವಾದಿ ಮತ್ತು ಪ್ರತಿವಾದಿ ಪರ ವಾದ ಆಲಿಸಿತು. ವಾದಿ ಪರ ವಾದಿಸುತ್ತ ಹಕ್ಕು ಬಿಟ್ಟ ಪತ್ರ ಪ್ರತಿವಾದಿ ಹಾಜರು ಪಡಿಸಿಲ್ಲ. ಅದು ರಿಜಿಸ್ಟ್ರೇಷನ್ ಕಾನೂನು ಪ್ರಕಾರ ನೋಂದಣಿ ಆಗಿಲ್ಲ ಮತ್ತು ಪ್ರತಿವಾದಿಯರ ಮಧ್ಯೆ ನಡೆದ ದಾವೆಯಲ್ಲಿ ಉದ್ದೇಶ ಪೂರ್ವಕವಾಗಿ ತಾಯಿ ಮತ್ತು ವಾದಿಯನ್ನು ಸೇರಿಸಿಲ್ಲ ಎಂದು ಗಮನಕ್ಕೆ ತಂದೆನು.
ನ್ಯಾಯಾಲಯದ ಅಂತಿಮ ತೀರ್ಪು
ವಾದಿಯು ಮತ್ತು ತಾಯಿ ಬರೆದು ಕೊಟ್ಟಿರುವಳೆಂಬ ಹಕ್ಕು ಬಿಟ್ಟ ಪತ್ರ ಪ್ರತಿವಾದಿಯರು ಹಾಜರು ಪಡಿಸಿಲ್ಲ ಅದು ನೋಂದಣಿ ಆದ ಬಗ್ಗೆ ದಾಖಲೆ ಇಲ್ಲ ಅದರ ಆಧಾರಿತ ಕಂದಾಯ ದಾಖಲೆಯಿಂದ ವಾದಿಯ ಹಿಸ್ಸೆ ನಷ್ಟ ಆಗಿಲ್ಲ ಮತ್ತು ಪ್ರತಿವಾದಿಯರ ಮಧ್ಯದ ತೀರ್ಪು ವಾದಿಯ ಹಿಸ್ಸೆಗೆ ಬಂಧಕಾರಕ ಇಲ್ಲವೆಂದು ಅಭಿಪ್ರಾಯ ಪಟ್ಟಿತು. ವಾದಿಗೆ ದಾವೆ ಆಸ್ತಿಯಲ್ಲಿ ೧/೪ ಹಿಸ್ಸೆ ಇದೆ ಎಂದು ತೀರ್ಪು ನೀಡಿತು.
ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾರೆ ಅನ್ಯಾಯಕ್ಕೆ, ಅಲಕ್ಷಕ್ಕೆ ಒಳಗಾದರೆ ನ್ಯಾಯ ಪಡೆಯಲು ದಾರಿ ಇದೆ. ನ್ಯಾಯಾಲಯಕ್ಕೆ ಇನ್ನೊಬ್ಬರ ಹಕ್ಕನ್ನು ಮುಚ್ಚಿಟ್ಟು, ಏನೇ ತೀರ್ಪು ಪಡೆದರೂ, ಅನ್ಯಾಯಕ್ಕೆ ಒಳಪಟ್ಟವರಿಗೆ ಪರಿಹಾರ ಇದ್ದೆ ಇದೆ.