For the best experience, open
https://m.samyuktakarnataka.in
on your mobile browser.

ನೀತಿ ನಿರೂಪಣೆಗಳಿಗೇಕೆ ರಾಜಕೀಯ ಲೇಪ?

11:42 PM Oct 18, 2023 IST | Samyukta Karnataka
ನೀತಿ ನಿರೂಪಣೆಗಳಿಗೇಕೆ ರಾಜಕೀಯ ಲೇಪ

ಸರ್ಕಾರಗಳು ಬದಲಾದಂತೆ ಅದರ ನೀತಿ ನೇಮಕ, ನಿರ್ಧಾರಗಳು ಬದಲಾಗಲೇಬೇಕೇ?
ಕಳೆದ ನಾಲ್ಕು ತಿಂಗಳಿನಿಂದ ಈಚೆಗೆ ಯಾವುದೇ ಕ್ಷೇತ್ರ ಪರಿಗಣಿಸಿ, ಸಚಿವರನ್ನು ಮಾತನಾಡಿಸಿ, ತಮ್ಮ ಇಲಾಖೆಯ ನೀತಿ ನಿರ್ಧಾರಗಳನ್ನು ಬದಲಾಯಿಸುತ್ತಿದ್ದೇನೆ; ಹೊಸ ನೀತಿ ರೂಪಿಸುತ್ತೇವೆ ಎಂಬ ಸಿದ್ಧ ಹಾಗೂ ಪೂರ್ವ ನಿರ್ಧರಿತ ಹೇಳಿಕೆ ಅವರಿಂದ. ಹಾಗೇ ಹಿಂದಿನ ಸರ್ಕಾರದ ಹಲವು ನೀತಿ ನಿರ್ಧಾರಗಳನ್ನು ರದ್ದುಗೊಳಿಸಲಾಗುತ್ತಿದೆ ಅಥವಾ ಅಮಾನತಿನಲ್ಲಿ ಇಡಲಾಗುತ್ತಿದೆ.
ದ್ವೇಷ-ಪಂಥ, ಲಾಭ-ನಷ್ಟ, ಸೇಡು-ವೈಷ್ಯಮಗಳಿಂದ ಕೂಡಿದ ಪಕ್ಷ ರಾಜಕಾರಣದಲ್ಲಿ ಸರ್ಕಾರಗಳು ಬದಲಾದಂತೆ, ಅದು ಸಕಾರಾತ್ಮಕವೋ ಅಥವಾ ನಕಾರಾತ್ಮಕವೋ, ಜನಪರವೋ-ಜನ ವಿರೋಧಿಯೋ, ಅಗತ್ಯವೋ-ಅನಗತ್ಯವೋ ಎಲ್ಲವನ್ನೂ ಬದಲಾಯಿಸುವ ಮತ್ತು ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ಸಮರ್ಥಿಸಿಕೊಂಡು ಹೇರುವ ಆಳ್ವಿಕೆ ನಡೆಯುತ್ತಿದೆ. ಇತ್ತೀಚಿನ ದಶಕಗಳಲ್ಲಂತೂ ಇದು ಪರಾಕಾಷ್ಠೇಯನ್ನೇ ತಲುಪಿದೆ.
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೇ ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಹಿಂದಿನ ಸರ್ಕಾರದ ನೀತಿ ನಿರ್ಧಾರಗಳನ್ನು ಬದಲಿಸುವುದಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿದಂತಿದೆ. ಕೈಗಾರಿಕೆ, ಗಣಿ, ಮರಳು, ಶಿಕ್ಷಣ, ಸಾಮಾಜಿಕ- ಸಾಂಸ್ಕೃತಿಕ ನೀತಿ ಧೋರಣೆಗಳನ್ನು ಬದಲಾಯಿಸುವ ಸಂಕಲ್ಪವನ್ನು ಈಗಾಗಲೇ ತೊಟ್ಟಂತಾಗಿದೆ. ಇದರಿಂದ ಸೃಷ್ಟಿಯಾಗುತ್ತಿರುವುದು ಗೊಂದಲ, ಅವಾಂತರಗಳು.
ಎಲ್ಲವನ್ನೂ ಸಾರಾಸಗಟಾಗಿ ತಿರಸ್ಕರಿಸುವ ಮನೋಭಾವ ಎಷ್ಟು ಸರಿ? ದೇಶಾದ್ಯಂತ ಸರ್ಕಾರಗಳು ಬದಲಾದಂತೆ ಈ ಪ್ರಶ್ನೆಗಳು ಎದ್ದಿವೆ. ಕೇಂದ್ರ- ರಾಜ್ಯದ ನಡುವಿನ ಸಂಘರ್ಷ, ನೀತಿ ಧೋರಣೆಗಳು, ಪಕ್ಷದ ಪ್ರಾಧಾನ್ಯತೆ ಇವೆಲ್ಲ ಅಂಶಗಳು ರಾಜಕಾರಣದಲ್ಲಿ ಹಾಸು ಹೊಕ್ಕಾಗಿರುವುದು ಇಂದು ಎದ್ದು ಕಾಣುವ ಸತ್ಯ.
ಸರ್ಕಾರ ಬದಲಾದಂತೆ ಪ್ರಾಧಾನ್ಯತೆ ಬದಲಾಗಬಹುದು. ಆದರೆ ಸಕಾರಾತ್ಮಕ, ಜನಪರ ಯೋಜನೆಗಳು ಮತ್ತು ಜನಕಲ್ಯಾಣ ಕಾರ್ಯಕ್ರಮಗಳನ್ನು ಯಾವ ಮಾನದಂಡ ಅಥವಾ ವಿಮರ್ಶೆ ಸಮೀಕ್ಷೆಗಳಿಲ್ಲದೇ ಬದಲಾಯಿಸುವುದು ಆಘಾತಕಾರಿಯೇ.
ಉದಾಹರಣೆ ನೋಡಿ. ಬೊಮ್ಮಾಯಿ ಸರ್ಕಾರ ರಾಜ್ಯದ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ (ಆರ್ ಆ್ಯಂಡ್ ಡಿ ಪಾಲಿಸಿ) ರೂಪಿಸಲು, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಮತ್ತು ಹಿರಿಯ ತಾಂತ್ರಿಕ ಸಂಶೋಧಕ ಡಾ.ಅಶೋಕ ಶೆಟ್ಟರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಕೈಗಾರಿಕೋದ್ಯಮಿಗಳು, ವಿಜ್ಞಾನಿಗಳು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಹದಿಮೂರು ಮಂದಿಯನ್ನು ಈ ಕಾರ್ಯಪಡೆ ಒಳಗೊಂಡಿತ್ತು. ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳು ಸಮಾಜದ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಪೂರಕವಾಗಿರಬೇಕು. ಒಂದು ಚಾಲನಾ ಶಕ್ತಿ ಇರಬೇಕು. ಸಂಶೋಧನೆಯ ಲಾಭ ಸಮಾಜಕ್ಕೆ ಆಗಬೇಕು. ಸಂಶೋಧನೆಯಿಂದ ನಾವಿನ್ಯತೆ ಬರುತ್ತದೆ. ಹಾಗಾಗಿ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ನಮ್ಮದೇ ಆದ ಆರ್ ಆ್ಯಂಡ್ ಡಿ ನೀತಿ ರೂಪಿಸಬೇಕೆಂಬುದು ಇದರ ಹಿಂದಿನ ಉದ್ದೇಶ. ಪ್ರೊ. ಶೆಟ್ಟರ ತುಂಬ ಆಸಕ್ತಿಯಿಂದ ಈ ಕಾರ್ಯಪಡೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಕೇವಲ ಶಿಕ್ಷಣ, ತಾಂತ್ರಿಕತೆ ಅಷ್ಟೇ ಅಲ್ಲ, ಆರೋಗ್ಯ, ಕೃಷಿ, ಕೈಗಾರಿಕೆ, ಐಟಿ-ಬಿಟಿ ಇತ್ಯಾದಿ ಕ್ಷೇತ್ರಗಳ ಹೊಸ ಸಂಶೋಧನೆ ಮತ್ತು ಜನರ ಅಗತ್ಯತೆಗಳನ್ನು ಪರಿಗಣಿಸುವ ಸಂಬಂಧ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶವನ್ನು ಕಾರ್ಯಪಡೆ ಹೊಂದಿತ್ತು. ಶೆಟ್ಟರ ಜೊತೆಗೆ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪ್ರಖ್ಯಾತ ವಿಜ್ಞಾನಿಗಳಾದ ಪ್ರೊ.ರಾಜೇಶ, ಸುಂದರೇಶ, ಶ್ರೀವರ್ಧಿನಿ, ಖಾಸಗಿ ಕಂಪನಿಗಳ ಸಿಇಓಗಳು, ಅನಂತ ಕೊಪ್ಪರ್, ಆರ್ ಆ್ಯಂಡ್ ಡಿ ಮಲ್ಟಿ ಮೀಡಿಯಾ ಮುಖ್ಯಸ್ಥರು, ಸೋಷಿಯೋ ಎಕನಾಮಿಕ್ಸ್ ಪರಿಣಿತರೆಲ್ಲರನ್ನೂ ಕಾರ್ಯಪಡೆ ಒಳಗೊಂಡಿತ್ತು. ರಾಜ್ಯದ ಪ್ರಪ್ರಥಮ ಆರ್ ಆ್ಯಂಡ್ ಡಿ ಕಾರ್ಯಪಡೆಯಿದು. ಹಾಗೆ ನೋಡಿದರೆ ಭಾರತೀಯ ಸಂಶೋಧನಾ ಸಂಸ್ಕೃತಿಯಲ್ಲಿ ಸಾಕಷ್ಟು ಬದಲಾವಣೆ ಆಗಬೇಕಿದೆ. ಸಂಶೋಧಕರಿಗೆ ಪ್ರೋತ್ಸಾಹ ಇಲ್ಲದೇ ದೇಶ ಬಳಲುತ್ತಿದೆ ಎನ್ನುವುದು ಕಾಲಕಾಲಕ್ಕೆ ಸಾಬೀತು ಆಗುತ್ತಿದೆ. ಹತ್ತು ಲಕ್ಷ ಭಾರತೀಯರಲ್ಲಿ ಕೇವಲ ೨೫೦ ಸಂಶೋಧಕರನ್ನು ಹೊಂದಲಾಗಿದೆ. ಆದರೆ ದಕ್ಷಿಣ ಕೊರಿಯಾದಲ್ಲಿ ಹತ್ತು ಲಕ್ಷದಲ್ಲಿ ಎಂಟು ಸಾವಿರ ಸಂಶೋಧಕರು, ಜಪಾನ್‌ನಲ್ಲಿ ಹತ್ತು ಲಕ್ಷ ಜನರಲ್ಲಿ ಐದು ಸಾವಿರದ ಐದು ನೂರು ಸಂಶೋಧಕರಿದ್ದಾರೆ. ಹಾಗೆಯೇ ನಮ್ಮ ಸಂಶೋಧನಾ ಫಲಿತಾಂಶವೂ ಹೆಚ್ಚು ಪ್ರಭಾವಶಾಲಿಯಾಗಿಲ್ಲ. ಚಿಕಿತ್ಸವಾಗಿಲ್ಲ. ಸಂಶೋಧನೆ ಕೂಡ ಮೂಸೆಯಿಂದ, ಲ್ಯಾಬೋರೇಟರಿಗಳಿಂದ, ಪ್ರಯೋಗಾಲಯದಿಂದ ಜನರಿಗೆ ತಲುಪುತ್ತಿಲ್ಲ. ಈ ಕೊರತೆ ರಾಜ್ಯದಲ್ಲಷ್ಟೇ ಅಲ್ಲ. ರಾಷ್ಟç ಮಟ್ಟದ ಆರ್ ಆ್ಯಂಡ್ ಡಿ ನೀತಿಯೂ ಸದೃಢವಾಗಿಲ್ಲ. ರಾಷ್ಟçದ ಮೊದಲ ಆರ್ ಆ್ಯಂಡ್ ನೀತಿ ೧೯೫೮ರಲ್ಲಿ ಬಂತು. ಆ ನಂತರ ಹೊಸ ನೀತಿ ರೂಪಿತವಾಗಿದ್ದು ೧೯೮೩ರಲ್ಲಿ. ಇಪ್ಪತ್ತು ವರ್ಷಗಳ ನಂತರ (೨೦೦೩) ಮೂರನೇ ಆರ್ ಆ್ಯಂಡ್ ಡಿ ನೀತಿ ರೂಪಿತವಾಯಿತು. ಎನ್‌ಡಿಎ ಸರ್ಕಾರ ಬಂದ ನಂತರ, ೨೦೨೦ರಲ್ಲಿ ಹೊಸ ನೀತಿ ಬಂದಿದೆ. ಆದರೆ ರಾಜ್ಯಕ್ಕೆ ಯಾವುದೇ ನಿರ್ದಿಷ್ಟ ಆರ್ ಆ್ಯಂಡ್ ಡಿ ಕಾರ್ಯತಂತ್ರ ಇರಲಿಲ್ಲ. ಶೆಟ್ಟರ ಸಮಿತಿ ಹೊರ ರಾಜ್ಯಗಳಲ್ಲಿ, ಹೊರ ದೇಶಗಳಲ್ಲಿ ಅಲ್ಲಿಯ ಸಂಶೋಧನೆಗಳು, ಅಲ್ಲಿಯ ನೀತಿಗಳನ್ನು ಅಧ್ಯಯನ ಮಾಡಿ, ತಜ್ಞರ, ಪರಿಣಿತರ ಜೊತೆ ಸಮಾಲೋಚಿಸಿ ಕರ್ನಾಟಕಕ್ಕೊಂದು ವಿನೂತನವಾದ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆ್ಯಂಡ್ ಡಿ) ನೀತಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಒಪ್ಪಿಸಿತ್ತು. ಇನ್ನೇನು ಈ ನೀತಿಯನ್ನು ಬಹಿರಂಗಗೊಳಿಸಬೇಕು, ಇದನ್ನು ಜಾರಿಗೊಳಿಸುವ ಸಂಬಂಧ ತಾಂತ್ರಿಕ ತಾತ್ವಿಕ ನಿರ್ಣಯವನ್ನು ಕೈಗೊಳ್ಳಬೇಕು ಎನ್ನುವಷ್ಟರಲ್ಲಿ ಸರ್ಕಾರ ಬದಲಾಯಿತು. ಏನಾಯ್ತು ಹೊಸ ಆರ್ ಆ್ಯಂಡ್ ಡಿ ನೀತಿ ಎಂದು ಪ್ರಶ್ನಿಸಿದರೆ,ನಾವಂತೂ ಪ್ರಾಮಾಣಿಕವಾಗಿ ಅಧ್ಯಯನ ಮಾಡಿ, ಪರಿಶ್ರಮಿಸಿ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಇನ್ನೂ ಅದನ್ನು ಕಣ್ಣೆತ್ತಿ ನೋಡಿಲ್ಲ. ಈಗ ಸರ್ಕಾರವೂ ಬದಲಾಗಿದೆ. ಏನೋ ಗೊತ್ತಿಲ್ಲ…'ಇದು ಡಾ.ಅಶೋಕ ಶೆಟ್ಟರ ಮತ್ತು ಆ ಸಮಿತಿಯಲ್ಲಿರುವ ಪರಿಣಿತರ ಅಭಿಪ್ರಾಯ !
ನೂರಾರು ಆಯೋಗಗಳು, ತನಿಖಾ ವರದಿಗಳು, ಪರಿಣಿತರು ಸಿದ್ಧಪಡಿಸಿದ ನೀತಿ ಧೋರಣೆಗಳು, ಸಮಿತಿಗಳ ವರದಿಗಳು, ಪ್ರಾಜೆಕ್ಟ್ ರಿಪೋರ್ಟ್ಗಳಂತೆಯೇ ಈ ಆರ್ ಆ್ಯಂಡ್ ಡಿ ಕಾರ್ಯಪಡೆ ವರದಿ ಕೂಡ ಸರ್ಕಾರ ಬದಲಾದಂತೆ ಕಪಾಟು-ಶೈತ್ಯ ಪೆಟ್ಟಿಗೆಯನ್ನು ಸೇರಿತೇ?
ಯಾರನ್ನು ಪ್ರಶ್ನಿಸುವುದು? ಇಂತಹ ಪರಿಣಿತರ ವರದಿ ಅನುಷ್ಠಾನಗೊಳಿಸುವುದರ ಹಿಂದೆ ರಾಜಕೀಯ, ಇದರಲ್ಲೇನಾದರೂ ರಾಜಕೀಯ ಒಳಸುಳಿಗಳಿವೆಯಾ? ಇಲ್ಲವಲ್ಲ. ಯಾರೊಬ್ಬ ರಾಜಕಾರಣಿಯೂ ಅಥವಾ ಪಂಥೀಯ ಧೋರಣೆಯುಳ್ಳವರೂ ಈ ಕಾರ್ಯಪಡೆಯಲ್ಲಿಲ್ಲ.
ಸರ್ಕಾರಕ್ಕೇನೋ ಶೆಟ್ಟರ ಸಮಿತಿ ವರದಿ ಸಲ್ಲಿಸಿದೆ. ಆದರೆ ಅದರ ವಾರಸುದಾರ‍್ಯಾರೋ ಗೊತ್ತಿಲ್ಲ.
ಹೊಸ ಸರ್ಕಾರ ಬಂದ ನಂತರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುವುದಿಲ್ಲ. ರಾಜ್ಯಕ್ಕೆ ಪ್ರತ್ಯೇಕ ರಾಜ್ಯ ಶಿಕ್ಷಣ ನೀತಿ ರೂಪಿಸಲಾಗುವುದು ಎಂದು ಘೋಷಿಸಿತು. ಅದೇ ವೇಳೆ ಹಿಂದಿನ ಸರ್ಕಾರ ರೂಪಿಸಿದ್ದ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸುವುದಾಗಿ ಹೇಳಿ ಹೊಸ ಪರಿಶೀಲನಾ ಸಮಿತಿಯನ್ನೂ ರಚಿಸಿತು.
ಎನ್‌ಇಪಿಯನ್ನು ದೇಶದಲ್ಲೇ ಮೊದಲು ಜಾರಿಗೊಳಿಸಿದ್ದು ಕರ್ನಾಟಕ. ಅದರ ಅನುಷ್ಠಾನ ಪದ್ಧತಿಯಲ್ಲಿ ಕೆಟ್ಟದ್ದೂ ಇರಬಹುದು. ತರಾತುರಿಯೂ ಇದ್ದೀತು. ದೋಷ ಪೂರ್ಣವೂ ಆಗಿದ್ದಿರಬಹುದು ಎನ್‌ಇಪಿ. ಆದರೆ ಅದಾಗಲೇ ಜನತೆ, ವಿಶೇಷವಾಗಿ ಶಿಕ್ಷಣ ವ್ಯವಸ್ಥೆ ಇದನ್ನು ಅಳವಡಿಸಿಕೊಂಡಾಗಿತ್ತು. ಸರ್ಕಾರ ಹೊಸ ಪ್ರತ್ಯೇಕ ನೀತಿ ರೂಪಿಸುವುದಾಗಿ ಹೇಳಿ ಈಗ ಎನ್‌ಇಪಿ ತಡೆ ಹಿಡಿದಿದೆ. ಈಗ ಇಲ್ಲಿ ಗೊಂದಲಕ್ಕೆ ಒಳಗಾದವರು ಮಕ್ಕಳು.
ಈ ರಾಜ್ಯದಲ್ಲಿ ಕೇಂದ್ರ ಶಿಕ್ಷಣ ಸಂಸ್ಥೆಗಳು, ರಾಜ್ಯ ಪರವಾನಗಿ ಪಡೆದ ಶಿಕ್ಷಣ ಸಂಸ್ಥೆಗಳ ಪದ್ಧತಿಗಳೆರಡೂ ಇರುವಾಗ ಮಕ್ಕಳಲ್ಲಿ ಮತ್ತು ಪಾಲಕರಲ್ಲಿ ಹುಟ್ಟಿಸಿರುವ ಗೊಂದಲ ಬಹುಶಃ ತುಂಬ ಕೆಟ್ಟ ಪರಿಣಾಮವನ್ನು ಎದುರಿಸುವಂತಾದೀತು.
ಅಕ್ಟೋಬರ್ ಅಂತ್ಯದವರೆಗೂ ಇನ್ನೂ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ಆರಂಭವಾಗಿಲ್ಲ. ಹೊಸ ಪಠ್ಯ ರಚನೆಯಾಗಿಲ್ಲ. ಯಾವುದನ್ನು ಕಲಿಸಬೇಕು? ಯಾವುದನ್ನು ಬಿಡಬೇಕು ಎನ್ನುವ ಗೊಂದಲದಲ್ಲೇ ಶಿಕ್ಷಕ ವರ್ಗವಿದೆ.
ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಡಾ.ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಸಾಂಸ್ಕೃತಿಕ ನೀತಿಗಾಗಿ ಸಮಿತಿಯನ್ನು ರಚಿಸಿತ್ತು. ಅದು ೨೦೧೪-ಜೂನ್ ೨೫ರಲ್ಲಿ ವರದಿ ಸಲ್ಲಿಸಿ ಇಡೀ ರಾಜ್ಯದ ಸಾಂಸ್ಕೃತಿಕ ಹಿರಿಮೆ- ಗರಿಮೆ ಉಳಿವು ಮತ್ತು ಸಂರಕ್ಷಣೆಗಾಗಿ ಸಮಗ್ರ ವರದಿಯನ್ನೇನೋ ನೀಡಿತ್ತು. ಇದರ ಜಾರಿಗೆ ಸಚಿವ ಎಚ್.ಕೆ ಪಾಟೀಲ ನೇತೃತ್ವದ ಉಪಸಮಿತಿ ರಚಿಸಿ ೨೦೧೭. ಅ.೧೦ರಿಂದ ಬರಗೂರು ಸಮಿತಿಯ ಸಾಂಸ್ಕೃತಿಕ ನೀತಿ ಜಾರಿಗೆ ಆದೇಶ ಹೊರಡಿಸಿ ಬದ್ದತೆ ತೋರಿತ್ತೆನ್ನಿ.
`ಸಾಂಸ್ಕೃತಿಕ ಕ್ಷೇತ್ರಕ್ಕೆ ರಾಜಕೀಯ- ಪಕ್ಷ ಪಂಗಡ ತರಬೇಡಿ. ಇದನ್ನು ಹೊಲಸುಗೊಳಿಸದಿರಿ- ಕಲುಷಿತಗೊಳಿಸದಿರಿ' ಎನ್ನುವುದನ್ನು ಸ್ಪಷ್ಟವಾಗಿ ಹೇಳಿತ್ತು. ಸರ್ಕಾರ ಬಹುತೇಕ ಶಿಫಾರಸುಗಳನ್ನು ಒಪ್ಪಿಕೊಂಡಿತ್ತು ಕೂಡ'.
ನಂತರದ ಸಮ್ಮಿಶ್ರ ಸರ್ಕಾರ, ಆಮೇಲಿನ ಬಿಜೆಪಿ ಸರ್ಕಾರಗಳು ಈ ಹಿಂದಿನಂತೆಯೇ ತಮ್ಮ ಮೂಗಿನ ನೇರಕ್ಕೆ, ತಮಗನುಕೂಲವಾಗುವ ರೀತಿ ಸಾಂಸ್ಕೃತಿಕ ಕ್ಷೇತ್ರವನ್ನು ಎಷ್ಟು ಕಲುಷಿತಗೊಳಿಸಲು ಸಾಧ್ಯವೋ ಅಷ್ಟನ್ನು ಮಾಡಿದವು. ನೇಮಕ, ಸರ್ಕಾರ ಬದಲಾದಂತೆ ಅಕಾಡೆಮಿಗಳು, ಸಾಂಸ್ಕೃತಿಕ ಆಯೋಗಗಳು, ಸಾಂಸ್ಕೃತಿಕ ಪ್ರಾಧಿಕಾರಗಳ ಅಧ್ಯಕ್ಷರು, ಕುಲಪತಿಗಳು ಬದಲಾಗಬಾರದೆಂಬ ಷರತ್ತನ್ನು ಬರಗೂರರ ಸಾಂಸ್ಕೃತಿಕ ನೀತಿಯಲ್ಲಿ ವಿಧಿಸಲಾಗಿತ್ತು. ಆದರೆ ಹಿಂದಿನ ಅವಧಿಯ ಸಿದ್ದರಾಮಯ್ಯ ಸರ್ಕಾರ ಹೋಗುತ್ತಿದ್ದಂತೆಯೇ, ಬದಲಾಯಿಸುವುದೇ ತಮ್ಮ ಹಕ್ಕು ಎಂಬಂತೆ ಎಲ್ಲ ಅಕಾಡೆಮಿಗಳು, ರಂಗಾಯಣಗಳು, ಸಾಂಸ್ಕೃತಿಕ ಕ್ಷೇತ್ರಗಳ ಸಂಸ್ಥೆಗಳಿಗೆ ಹೊಸಬರನ್ನು ನೇಮಕ ಮಾಡಲಾಯಿತು.
ಈಗ ಮತ್ತೆ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆಯೇ ಹಿಂದಿನ ಅಧ್ಯಕ್ಷರುಗಳ ರಾಜೀನಾಮೆ ಪಡೆಯಲಾಗಿದೆ. ಹೊಸ ನೇಮಕಗಳನ್ನು ಮಾಡಿಲ್ಲ. ನಿಗಮ ಮಂಡಳಿಗಳ ರಾಜಕೀಯ ಹುದ್ದೆ ನಿರ್ವಹಣೆಯ ರೀತಿ ಸಾಂಸ್ಕೃತಿಕ ಕ್ಷೇತ್ರವನ್ನೂ ಪರಿಗಣಿಸಲಾಗುತ್ತಿದೆ. ಪಠ್ಯಪುಸ್ತಕ ರಚನೆ, ಪರಿಷ್ಕರಣೆಯಂತೂ ಜಿದ್ದಾಜಿದ್ದಿ ಸ್ವರೂಪ ಪಡೆದಿದೆ. ಸಾಂಸ್ಕೃತಿಕ ಲೋಕ ತಲ್ಲಣಗೊಂಡಿದ್ದರೆ, ಮಕ್ಕಳ ಮನಸ್ಸು ಗೊಂದಲದ ಗೂಡಾಗಿದೆ…..
ಇಷ್ಟೇ ಅಲ್ಲ. ನೀತಿ ನಿರೂಪಣೆ ಹಾಗೂ ಆಡಳಿತವನ್ನು ಹಠ ತೊಟ್ಟಂತೆಯೋ ಏನೋ ಸರ್ಕಾರಗಳು ಬದಲಾದಾಗಲೆಲ್ಲ, ಕೈಗಾರಿಕೆ, ಗಣಿ, ಕಾರ್ಮಿಕ, ಕೃಷಿ, ತೋಟಗಾರಿಕೆ ಇತ್ಯಾದಿಗಳ ನೀತಿಗಳನ್ನು ಬದಲಾಯಿಸಿ ಹೊಸ ನೀತಿಗಳನ್ನು ತರಲಾಗುತ್ತಿದೆ. ಕರ್ನಾಟಕದ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಬೆಳೆದದ್ದೇ ತಮ್ಮಿಂದ ಎಂದು ಹೇಳುವ ಎಲ್ಲ ಸರ್ಕಾರಗಳೂ ಪ್ರಾಂಜಲವಾಗಿ ಪರಿಗಣಿಸಿದರೆ ಅವು ಬೆಳದದ್ದೇ ತಮ್ಮ ಸ್ವಂತಿಕೆಯಿಂದ, ವಿನಾ ಯಾವ ನಾಯಕರಿಂದಲೂ ಅಲ್ಲ ಎಂಬುದು ಗೊತ್ತಾಗುತ್ತದೆ.
ರಾಜಕೀಯ ಯಾವ ಕ್ಷೇತ್ರದಲ್ಲಿ ಪದಾರ್ಪಣ ಮಾಡುತ್ತದೋ ಅಲ್ಲೆಲ್ಲ ಕಲುಷಿತಗೊಂಡಿದ್ದೇ ಹೆಚ್ಚು. ಗುಜರಾತ್, ತೆಲಂಗಾಣ, ತಮಿಳುನಾಡು, ಕೇರಳ, ಆಂಧ್ರ ಇಲ್ಲೆಲ್ಲ ಸರ್ಕಾರ ಬದಲಾದಂತೆ ಹಿಂದಿನ ಸರ್ಕಾರಗಳ ನೀತಿ ನಿರ್ಧಾರಗಳನ್ನು ಹಠಾತ್ ಬದಲಾವಣೆ ಮಾಡುತ್ತಿಲ್ಲ. ಬದಲು, ಹಿಂದಿನ ನೀತಿಗಳು ಉತ್ತಮವಿದ್ದರೆ ಅವಕ್ಕೆ ಪೂರಕ ಟಾನಿಕ್ ನೀಡುವ ಕೆಲಸ ಮಾಡುತ್ತಿವೆ. ಹಾಗಾಗಿಯೇ ಅಲ್ಲಿನ ವಾಣಿಜ್ಯೋದ್ಯಮ ಕ್ಷೇತ್ರ ಮತ್ತು ಮೂಲಭೂತ ಸೌಕರ್ಯ ಜನರನ್ನು, ಹೂಡಿಕೆದಾರರನ್ನು ಆಕರ್ಷಿಸುತ್ತಿವೆ.
ಸರ್ಕಾರ ಬದಲಾದಂತೆ ಆದ್ಯತೆಗಳನ್ನು ಬದಲಾಯಿಸಬಹುದು. ಆದರೆ ನೀತಿ ನಿಯಮಗಳನ್ನು ಹಠಾತ್ ಬದಲಾವಣೆ ಮಾಡಿದರೆ, ಅದು ಅತ್ಯುತ್ತಮವಾಗಿದ್ದರೂ ಒಪ್ಪಿಕೊಳ್ಳದ ಮನೋಭಾವ ಹೊಂದಿದ್ದರೆ ಹಾನಿ ಅನುಭವಿಸುವರು ಜನತೆಯೇ. ಆಳುವವರಿಗೆ, ಸರ್ಕಾರ ನಡೆಸುವವರಿಗೆ ಮೊದಲು ಇರಬೇಕಾದದ್ದು ಎಲ್ಲವನ್ನೂ ಪಾರದರ್ಶಕ ಮತ್ತು ಪ್ರಾಂಜಲ ಮನಸ್ಸಿನಿಂದ ನೋಡುವ ಹೃದಯ… ಮುಕ್ತ ನಿಷ್ಕರ್ಷೆ. ಅಲ್ಲವೇ?