For the best experience, open
https://m.samyuktakarnataka.in
on your mobile browser.

ಶಾಸಕತ್ವ ಅನರ್ಹತೆಯ ತೂಗುಗತ್ತಿ ತಪ್ಪಿದ್ದಲ್ಲ

05:30 AM Feb 28, 2024 IST | Samyukta Karnataka
ಶಾಸಕತ್ವ ಅನರ್ಹತೆಯ ತೂಗುಗತ್ತಿ ತಪ್ಪಿದ್ದಲ್ಲ

ರಾಜ್ಯಸಭೆಯ ಚುನಾವಣೆಯಲ್ಲಿ ಶಾಸಕರು ಅಡ್ಡಮತದಾನವನ್ನು ಮಾಡಿದ್ದಾರೆ ಅಂದರೆ ತಮ್ಮ ಪಕ್ಷದ ನಿರ್ದೇಶನವನ್ನು ಉಲ್ಲಂಘಿಸಿ ಮತ್ತೊಂದು ಪಕ್ಷದ ಅಭ್ಯರ್ಥಿಯ ಪರವಾಗಿ ಮತವನ್ನು ಚಲಾಯಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಮೇಲೆ ಪಕ್ಷಾಂತರ ನಿಷೇಧ ಕಾನೂನಿನ ಆಧಾರದ ಮೇಲೆ ಕ್ರಮ ಜರುಗಿಸಬಹುದೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ.
ಸಂವಿಧಾನದ ೧೦ನೇ ಶೆಡ್ಯೂಲ್‌ನಲ್ಲಿ ಯಾವ ಸಂದರ್ಭದಲ್ಲಿ ಅನರ್ಹಗೊಳಿಸಬಹುದು ಎಂದು ತಿಳಿಸಲಾಗಿದೆ. ಯಾವುದೇ ಶಾಸಕ ಚುನಾಯಿತನಾದ ನಂತರ ತನ್ನ ಪಕ್ಷಕ್ಕೆ ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟ ಪಕ್ಷದಲ್ಲಿ ಅಥವಾ ಮತದಾನ ಮಾಡುವ ಸಂದರ್ಭದಲ್ಲಿ ಪಕ್ಷದ ನಿರ್ದೇಶನವನ್ನು ಉಲ್ಲಂಘಿಸಿದರೆ ಅನರ್ಹಗೊಳಿಸುವ ಅವಕಾಶವಿದೆ. ಆದರೆ ಪಕ್ಷದ ನಿರ್ದೇಶನವನ್ನು ಉಲ್ಲಂಘಿಸುವುದು ವಿಧಾನಸಭೆ ಅಥವಾ ವಿಧಾನಪರಿಷತ್ತಿನ ಒಳಗಡೆ ನಡೆಯುವ ಚುನಾವಣೆಯಲ್ಲಿ ಮಾತ್ರ ಎಂಬ ಅಭಿಪ್ರಾಯವಿದೆ. ಅಂತಹ ಸಂದರ್ಭದಲ್ಲಿ ಅಡ್ಡಮತದಾನ ಮಾಡಿದರೂ ಸಹ ಪಕ್ಷಾಂತರ ನಿಷೇಧ ಕಾನೂನು ಅನ್ವಯವಾಗುವುದಿಲ್ಲ ಎನ್ನುವ ಧೈರ್ಯದಿಂದ ಈ ರೀತಿಯ ಅಡ್ಡಮತದಾನ ಆಗಿರುವ ಸಾಧ್ಯತೆ ಇದೆ.
ಸರ್ವೋಚ್ಚ ನ್ಯಾಯಾಲಯವು ೨೦೦೬ರ ಕುಲದೀಪ್ ನಾಯರ್ ಮೊಕದ್ದಮೆಯಲ್ಲಿ ಕೊಟ್ಟಿರುವ ತೀರ್ಪಿನ ಪ್ರಕಾರ ರಾಜ್ಯಸಭೆಯ ಚುನಾವಣೆ ವಿಧಾನಸಭೆ ಅಥವಾ ವಿಧಾನಪರಿಷತ್ತಿನ ಹೊರಗಡೆ ನಡೆಯುವ ಪ್ರಕ್ರಿಯೆ ಎಂದು ತಿಳಿಸಲಾಗಿದೆ. ಹಾಗಿದ್ದರೆ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷಾಂತರ ನಿಷೇಧ ಕಾನೂನು ಅನ್ವಯ ಮಾಡುವುದು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ಅಷ್ಟು ಸುಲಭ ಸಾಧ್ಯವಾದದ್ದಲ್ಲ. ಆದರೆ ೧-೮-೨೦೧೭ ರಲ್ಲಿ ಚುನಾವಣಾ ಆಯೋಗ ಒಂದು ನಿರ್ದೇಶನ ನೀಡಿದ್ದು, ಅದರ ಪ್ರಕಾರ ರಾಜ್ಯಸಭಾ ಚುನಾವಣೆಯಲ್ಲಿ ಯಾವ ಅಭ್ಯರ್ಥಿ ಪರವಾಗಿಯೂ ಸಹ ಮತದಾನ ಮಾಡದಿರುವ ಅವಕಾಶ ಕಲ್ಪಿಸಲಾಯಿತು.
ಅಂದರೆ ನೋಟಾ ಅವಕಾಶವನ್ನು ನೀಡಲಾಯಿತು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮುಖ್ಯ ಸಚೇತಕ ಶೈಲೇಶ್ ಮನುಭಾಯಿ ಪರಮಾರ್ ಅವರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದರು. ೨೦೧೮ರಲ್ಲಿ ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ನೀಡಿ ಚುನಾವಣಾ ಆಯೋಗದವರ ನಿರ್ದೇಶನ ಅಸಿಂಧು ಎಂದು ಘೋಷಿಸಲಾಯಿತು. ಆ ತೀರ್ಪಿನಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಮತವನ್ನು ನೀಡುವಾಗ ಪಕ್ಷದ ನಿರ್ದೇಶನವನ್ನು ಪಾಲಿಸುವುದು ಅತ್ಯವಶ್ಯ ಎಂದು ತಿಳಿಸಲಾಗಿದೆ. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಕ್ಕೆ ಸೇರಿದ ಒಬ್ಬ ವ್ಯಕ್ತಿ ಪಕ್ಷದ ನಿರ್ದೇಶನವನ್ನು ಪಾಲಿಸದೆ ಇರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ತಿಳಿಸಿದ್ದಾರೆ. ಚುನಾವಣಾ ಪ್ರಕ್ರಿಯೆಯ ಪರಿಶುದ್ಧತೆಯನ್ನು ಕಾಪಾಡಿಕೊಳ್ಳುವ ಅವಶ್ಯಕತೆ ಇದೆ. ಒಂದು ಪಕ್ಷಕ್ಕೆ ಸೇರಿದಂತ ವ್ಯಕ್ತಿ ಮತ್ತೊಂದು ಪಕ್ಷದ ಪರವಾಗಿ ಮತದಾನ ಮಾಡದಿರಲು ತೆರೆದ ಮತದಾನ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಆದಕಾರಣ ತೆರೆದ ಮತದಾನವನ್ನು ಪಕ್ಷದ ನಿರ್ದೇಶನವನ್ನು ಉಲ್ಲಂಘಿಸಿ ಮಾಡುವುದಾದರೆ ಪಕ್ಷಾಂತರ ನಿಷೇಧದ ಕಾನೂನಿನ ಉದ್ದೇಶ ವಿಫಲವಾಗುತ್ತದೆ ಆದ ಕಾರಣ ರಾಜ್ಯಸಭೆಯ ಚುನಾವಣೆಯಲ್ಲಿಯೂ ಸಹ ಪಕ್ಷದ ನಿರ್ದೇಶನವನ್ನು ಉಲ್ಲಂಘಿಸಿದರೆ ಆ ವ್ಯಕ್ತಿಯನ್ನು ತಕ್ಷಣವೇ ಅನರ್ಹತೆಗೊಳಿಸುವ ಜವಾಬ್ದಾರಿ ಸ್ಪೀಕರ್ ಅವರಿಗೆ ಸೇರಿದ್ದಾಗಿದೆ. ರಾಜ್ಯಸಭೆಯ ಚುನಾವಣೆಯಲ್ಲಿ ಈ ರೀತಿಯ ಅಡ್ಡಮತದಾನ ಮಾಡುವ ಪ್ರಕ್ರಿಯೆಗಳಿಗೆ ಪ್ರೋತ್ಸಾಹವನ್ನು ನೀಡಿದರೆ ಅವರನ್ನು ಶಾಸಕರನ್ನಾಗಿ ಚುನಾಯಿಸಿದ ಮತದಾರರಿಗೆ ದ್ರೋಹ ಬಗೆದಂತಾಗುತ್ತದೆ.
ಈ ರೀತಿಯ ವರ್ತನೆಗಳನ್ನು ಕಡಿವಾಣ ಹಾಕುವ ಜವಾಬ್ದಾರಿ ಸ್ಪೀಕರ್ ಅವರ ಮೇಲಿದೆ. ಈ ರೀತಿ ಅಡ್ಡಮತದಾನ ಮಾಡುವ ವರ್ತನೆಯನ್ನು ಸ್ವಯಿಚ್ಛೆಯಿಂದ ಆ ವ್ಯಕ್ತಿ ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ಭಾವಿಸಲು ಅವಕಾಶವಿದೆ. ಹಾಗಾಗಿ ರಾಜ್ಯಸಭೆಯ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದಂತ ಶಾಸಕನ ತಲೆಯ ಮೇಲೆ ಅನರ್ಹತೆಯ ತೂಗು ಕತ್ತಿ ಇದ್ದೇ ಇರಲಿದೆ.