ಸಂಶಯದ ಸುಳಿಯಲ್ಲಿ ಸಿಲುಕಿದ ಮೃತ್ಯು ಪತ್ರ
ನ್ಯಾಯಾಧೀಶರು ಕೋರ್ಟ್ ಹಾಲಿಗೆ ಪ್ರವೇಶಿಸಿ, ನ್ಯಾಯ ಪೀಠಕ್ಕೆ ನಮಸ್ಕರಿಸಿ ಪೀಠವನ್ನು ಅಲಂಕರಿಸಿದರು. ಇಂದು ನ್ಯಾಯಾಲಯದಲ್ಲಿ ಹಾಜರಾಗಬೇಕಿದ್ದ ಪ್ರಕರಣ ಐದನೆಯ ಕ್ರಮಾಂಕದಲ್ಲಿತ್ತು. ನನ್ನ ಕಕ್ಷಿದಾರರ ಪ್ರಕರಣ ಸರದಿ ಬಂದು, ನೀರಜ.. ಧೀರಜ.. ಅಂತ ಮೂರು ಸಲ ವಾದಿಯರನ್ನು ಕೂಗಿಸಲಾಯಿತು. ವಾದಿಯರು ನ್ಯಾಯಪೀಠಕ್ಕೆ ನಮಸ್ಕರಿಸಿ ನಿಂತರು. ಪ್ರದೀಪ ಅಂತ ಮೂರು ಸಲ ಪ್ರತಿವಾದಿಯನ್ನು ಕೂಗಿಸಲಾಯಿತು. (ಇ ಪ್ರಕರಣದ ವ್ಯಕ್ತಿಗಳ ಹೆಸರುಗಳನ್ನು ಬದಲಿಸಿದೆ) ಪ್ರತಿವಾದಿಗಳು ನ್ಯಾಯ ಪೀಠದ ಮುಂದೆ ವಿನೀತನಾಗಿ ನಿಂತುಕೊಂಡನು. ಪ್ರತಿ ವಾದಿಯ ಪರವಾಗಿ ವಕಾಲತ್ತನ್ನು ದಾಖಲಿಸಿ, ಕೈಫಿಯತ್/ ತಕರಾರು ಸಲ್ಲಿಸಲು ಸಮಯ ಪಡೆದುಕೊಂಡೆನು.
ಸುಮಾರು ಒಂದು ವಾರದ ಹಿಂದೆ, ಪ್ರತಿವಾದಿಯು ನ್ಯಾಯಾಲಯದಿಂದ ಬಂದ ಸಮನ್ಸ್ ಹಾಗೂ ಇತರೆ ದಾಖಲಾತಿಗಳನ್ನು ತೆಗೆದುಕೊಂಡು ಬಂದನು. ಎಲ್ಲ ದಾಖಲಾತಿಗಳನ್ನು ಸಮಗ್ರವಾಗಿ ಪರಿಶೀಲಿಸಿದೆ. ವಾದಿಯರು ದಾವಾಸ್ತಿಯ ಮಾಲೀಕರು ಮತ್ತು ಸ್ವಾಧೀನದಾರರು ಎಂದು ಘೋಷಿಸಿ ಜಡ್ಜ್ಮೆಂಟ್ ಮತ್ತು ಡಿಕ್ರಿ ಆದೇಶ ಮಾಡಲು ನ್ಯಾಯಾಲಯಕ್ಕೆ ಪ್ರಾರ್ಥಿಸಿದ್ದರು.
ವಾದಿಯರು ತಮ್ಮ ವಾದ ಪತ್ರದಲ್ಲಿ, ತಾವು ಸಹೋದರರು ಇರುತ್ತೇವೆ. ನಮ್ಮ ಸಹೋದರಿ ರೂಪಾದೇವಿಯ ಗಂಡ ೨೧/೩/೨೦೦೪ ರಂದು ಮೃತನಾದನು. ಮೃತನಿಗೆ ರೂಪಾದೇವಿ ಹೆಂಡತಿ ಒಬ್ಬಳೇ ಉತ್ತರಾಧಿಕಾರಿ. ರೂಪಾದೇವಿ ಆಸ್ತಿಗಳನ್ನು ನಮ್ಮ ಹೆಸರಿಗೆ ಕೊನೆಯ ನೊಂದಾಯಿತ ಮೃತ್ಯು ಪತ್ರ ದಿ. ೧೩/೩/೨೦೦೭ ಪ್ರಕಾರ ಬರೆದಿಟ್ಟಿದ್ದಳು. ಆನಂತರ ದಿ. ೧೩/೪/೨೦೧೦ ಮರಣ ಹೊಂದಿದಳು. ಸ್ವತ್ತುಗಳಿಗೆ ನಾವೇ ಮಾಲೀಕರು ಆಗಿದ್ದೇವೆ. ೨೦೧೬ರಲ್ಲಿ ಕಂದಾಯ ದಾಖಲೆಗಳಲ್ಲಿ, ನಮ್ಮ ಹೆಸರುಗಳನ್ನು ದಾಖಲಿಸಿಕೊಳ್ಳಲು ದಾವಾ ಸ್ವತ್ತಿನ ದಾಖಲೆಗಳನ್ನು ಪರಿಶೀಲಿಸಿದಾಗ, ಪ್ರತಿವಾದಿಯು ಮಾಲೀಕ ಮತ್ತು ಸ್ವಾಧೀನದಾರ ಎಂದು ತನ್ನ ಹೆಸರನ್ನು ದಾಖಲಿಸಿಕೊಂಡಿದ್ದನು. ರೂಪಾದೇವಿಯ ಗಂಡ ೨೧/೩/೨೦೦೪ ರಂದು ಮೃತನಾದನು. ಪ್ರತಿವಾದಿ ತಾನು ಮೃತನ ಮಗನು ಎಂದು ಸಾಧಿಸಿ, ರೂಪಾದೇವಿ ಜೊತೆ ತನ್ನ ಹೆಸರನ್ನು ೨೦೦೫ರಲ್ಲಿ ಮ್ಯೂಟೇಷನ್ ಮಾಡಿಸಿಕೊಂಡನು. ಪ್ರತಿವಾದಿಗೆ ದಾವಾ ಸ್ವತ್ತನ್ನು ತಮ್ಮ ಹೆಸರಿಗೆ ಬಿಟ್ಟು ಕೊಡಲು ಕೇಳಿ ಕೊಂಡರು. ಪ್ರತಿವಾದಿಯು ನಿರಾಕರಿಸಿದ. ಪ್ರತಿವಾದಿ ಮೃತ ರೂಪಾದೇವಿಯ ಮಗನು ಎಂದು ಸುಳ್ಳು ಸಾಧಿಸುತ್ತಿದ್ದು, ರೂಪಾದೇವಿಗೆ ಯಾವುದೇ ಸಂತಾನ ಇರುವುದಿಲ್ಲ ಎಂದು ವಾದಿಯರು ತಮ್ಮ ಹಕ್ಕನ್ನು ಸಾಧಿಸಿ ವಾದ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ದೀರ್ಘವಾದ ಕೈಫಿಯತ್/ತಕರಾರು ಸಲ್ಲಿಸಿ, ಮೃತ ರೂಪಾದೇವಿಯ ಗಂಡ ಮೃತನಾದ ನಂತರ, ೨೦೦೫ರಲ್ಲಿ ಪ್ರತಿವಾದಿ ತಾನು ಮೃತನ ಒಬ್ಬನೆ ಮಗ ಮತ್ತು ಹೆಂಡತಿ ರೂಪಾದೇವಿ ಉತ್ತರಾಧಿಕಾರಿಗಳು ಎಂದು ಹೆಸರನ್ನು ಸರಕಾರಿ ದಾಖಲೆಗಳಲ್ಲಿ ದಾಖಲಿಸಿಕೊಂಡನು. ಪ್ರತಿವಾದಿಯ ತಾಯಿ ರೂಪಾದೇವಿ ೨೦೧೦ರಲ್ಲಿ ಮೃತಳಾದಳು. ಮೃತಳ ಹೆಸರು ಕಡಿಮೆಯಾಗಿ ಪ್ರತಿವಾದಿ ತನ್ನ ಹೆಸರನ್ನು ಮಾತ್ರ ಸರಕಾರಿ ದಾಖಲೆಯಲ್ಲಿ ಉಳಿಸಿಕೊಂಡನು. ರೂಪಾದೇವಿ ಯಾವುದೇ ಮೃತ್ಯುಪತ್ರವನ್ನು ವಾದಿಯರ ಹೆಸರಿಗೆ ಬರೆದುಕೊಟ್ಟಿಲ್ಲ ಹಾಗೂ ಬರೆದುಕೊಡುವ ಪ್ರಸಂಗ ಇರುವುದಿಲ್ಲ. ವಾದಿಯರು ಹಾಜರುಪಡಿಸಿದ ಮೃತ್ಯು ಪತ್ರವು ಮೋಸತನದಿಂದ ಮಾಡಿಕೊಂಡಿದ್ದು ಇರುತ್ತದೆ. ರೂಪಾದೇವಿಯು ೯೦ ವರ್ಷದ ವಯೋವೃದ್ಧಳು ಇದ್ದು, ಅವಳಿಗೆ ಸರಿಯಾದ ಜ್ಞಾಪಕಶಕ್ತಿ ಇರಲಿಲ್ಲ. ಇದನ್ನು ದುರುಪಯೋಗಪಡಿಸಿಕೊಂಡು ವಾದಿಯರು ಖೊಟ್ಟಿಯಾದ ಮೃತ್ಯು ಪತ್ರವನ್ನು ಸೃಷ್ಟಿಸಿ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.
ನ್ಯಾಯಾಲಯವು ವಾದಿ ಪ್ರತಿವಾದಿಯರ ನಡುವೆ ಇರುವ ವ್ಯಾಜ್ಯವನ್ನು ಪರಿಹರಿಸಲು ಸಂಧಾನಕ್ಕೆ ಪ್ರಯತ್ನಿಸಿತು. ಸಂಧಾನ ವಿಫಲವಾಯಿತು.
ಪ್ರತಿವಾದಿ ರೂಪಾದೇವಿಯ ಮಗನು ಅಲ್ಲ. ಮೃತ್ಯುಪತ್ರ ನಿಜವಾದ ಮೃತ್ಯುಪತ್ರವೆಂದು ಸಾಕ್ಷಿ ಅಧಿನಿಯಮದ ಅಡಿಯಲ್ಲಿ ರುಜುವಾತು ಪಡಿಸುವ ಹೊಣೆಗಾರಿಕೆ ವಾದಿಯರ ಮೇಲೆ ಇದ್ದಿತು. ವಾದಿಯರು ಮೊದಲು ತಮ್ಮ ಸಾಕ್ಷಿಯನ್ನು ದಾಖಲಿಸಿದರು. ಮೃತ್ಯು ಪತ್ರ ದೃಢೀಕರಿಸಿ ಸಹಿ ಮಾಡಿದ ಇಬ್ಬರು ಸಾಕ್ಷಿದಾರರನ್ನು ಮೃತ್ಯುಪತ್ರವನ್ನು ಬರೆದ ಬಾಂಡ್ ರೈಟರ್ ಸಾಕ್ಷಿ ಹೇಳಿಸಿದರು. ವಾದಿ ಪರ ಸಾಕ್ಷಿದಾರರನ್ನು ಸುದೀರ್ಘವಾಗಿ ಪಾಟಿ ಸವಾಲು ಮಾಡಿದೆ. ಸತ್ಯ ಪ್ರತಿಜ್ಞೆ ಮಾಡಿ, ಸುಳ್ಳು ಹೇಳಿದ ಸಾಕ್ಷಿದಾರರು ನಂಬಲು ಅರ್ಹರಾದ ಸಾಕ್ಷಿದಾರರಲ್ಲ ಅಂತ ನಿರೂಪಿಸಿದೆ. ಪ್ರತಿವಾದಿ ಹಾಗೂ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ವಾದಿಯರ ವಕೀಲರು, ಪಾಟಿ ಸವಾಲಿನಲ್ಲಿ ಸಾಕ್ಷಿದಾರರಿಂದ ವ್ಯತಿರಿಕ್ತವಾದ ಹೇಳಿಕೆ ಪಡೆಯಲು ವಿಫಲರಾದರು.
ಪ್ರಕರಣದ ಅಂತಿಮ ಘಟ್ಟ ವಾದಿ ಪ್ರತಿವಾದಿಯರ ವಕೀಲರ ವಾದ: ಮೊದಲಿಗೆ ವಾದಿಯರ ಪರ ವಕೀಲರು ತಮ್ಮ ವಾದವನ್ನು ಮಂಡಿಸುತ್ತಾ, ಮೃತ ರೂಪಾದೇವಿ ಇವರು ತನಗೆ ಯಾವುದೇ ಸಂತಾನ ಇಲ್ಲದ್ದರಿಂದ ನೋಂದಾಯಿತ ಮೃತ್ಯು ಪತ್ರವನ್ನು ತಮ್ಮ ಸಹೋದರರಾದ ವಾದಿಯರ ಹೆಸರಿಗೆ ಬರೆದುಕೊಟ್ಟಿದ್ದಾಳೆ. ಇದನ್ನು ಪುಷ್ಟೀಕರಿಸಲು ವಾದಿಯರು ದೃಢೀಕೃತ ಸಾಕ್ಷಿದಾರರು ಮತ್ತು ಬಾಂಡ್ ರೈಟರ್ ಸಾಕ್ಷಿಯನ್ನು ಮಾಡಿಸಿದ್ದಾರೆ. ಪ್ರತಿವಾದಿ ರೂಪಾದೇವಿಯ ಮಗನು ಅಲ್ಲ, ಅವಳ ಗಂಡ ಮೃತನಾದ ನಂತರ ತನ್ನ ಹಾಗೂ ಅವಳ ಹೆಸರನ್ನು ಸರಕಾರಿ ದಾಖಲೆಯಲ್ಲಿ ದಾಖಲಿಸಿಕೊಂಡಿದ್ದಾನೆ. ಆದ್ದರಿಂದ ವಾದಿಯರು ದಾವಾ ಸ್ವತ್ತಿನ ಮಾಲೀಕರು ಮತ್ತು ಸ್ವಾಧೀನದಾರರು ಎಂದು ಘೋಷಿಸಲು ವಿನಂತಿಸಿ ತಮ್ಮ ವಾದವನ್ನು ಮುಗಿಸಿದರು.
ಪ್ರತಿವಾದಿಯ ಪರವಾಗಿ ನಾನು ಅರ್ಗ್ಯುಮೆಂಟ್ ಪ್ರಾರಂಭಿಸಿದೆ. ಯುವರ್ ಆನರ್, ಈ ಕೇಸಿನಲ್ಲಿ ಮೊಟ್ಟ ಮೊದಲನೆಯದಾಗಿ, ವಾದಿಯರು ಪ್ರತಿವಾದಿಯು ಮೃತ ರೂಪಾದೇವಿಯ ಮಗನು ಅಲ್ಲ ಅನ್ನುವುದನ್ನು ವಾದಿಸಿದ್ದಾರೆ. ಈ ವಾದದಲ್ಲಿ ಯಾವುದೇ ಹುರುಳು ಇಲ್ಲ. ಪ್ರತಿವಾದಿಯು ಮೃತಳ ಮಗನು ಅನ್ನುವುದನ್ನು ಸಾಕ್ಷೀಕರಿಸಲು ಶಾಲಾ ದಾಖಲಾತಿ, ಆಧಾರ್ ಕಾರ್ಡ್, ವೋಟರ್ ಕಾರ್ಡ್ ಹಾಜರುಪಡಿಸಿದ್ದಾನೆ. ಇದನ್ನು ಸಾಕ್ಷಿದಾರರು ಕೂಡ ಪುಷ್ಟೀಕರಿಸಿದ್ದಾರೆ. ಮೃತಳು ಬರೆದಿದ್ದಳು ಅನ್ನುವ ಮೃತ್ಯು ಪತ್ರವು ನಿಜವಾದ ಮೃತ್ಯುಪತ್ರವೆ ಅನ್ನುವುದನ್ನು ವಿಶ್ಲೇಷಿಸಲು ವಾದಿಯರ ಸಾಕ್ಷಿ ಹೇಳಿಕೆ ಪರಿಶೀಲಿಸೋಣ. ಮೃತ್ಯುಪತ್ರ ಬಹಳಷ್ಟು ಸಂದೇಹ ಪಡುವ ಪತ್ರ. ಬರೆದ ವ್ಯಕ್ತಿ ಮರಣ ಹೊಂದಿರುತ್ತಾನೆ, ಅವನ ಕೊನೆಯ ಇಚ್ಛೆ ರುಜುವಾತುಪಡಿಸುವಷ್ಟು ಕ್ಲಿಷ್ಟತೆ ಬೇರೆ ಪತ್ರಕ್ಕೆ ಇಲ್ಲ. ಬರೆದು ಕೊಟ್ಟವನ ವಯಸ್ಸು, ಮಾನಸಿಕ ದೈಹಿಕ ಆರೋಗ್ಯ, ಎಂಥಹ ಪರಿಸ್ಥಿತಿಯಲ್ಲಿ ಬರೆದು ಕೊಟ್ಟ, ಯಾರಿಗೆ ಬರೆದು ಕೊಟ್ಟ, ಯಾಕೆ ಬರೆದು ಕೊಟ್ಟ, ಪ್ರತಿ ಕ್ಷಣ, ಹೆಜ್ಜೆ ಇದೆಲ್ಲವನ್ನು ಸಂಶಯಾತೀತವಾಗಿ ರುಜುವಾತು ಪಡೆಸಬೇಕಾಗುವುದು ಎಂದು ನಿಲ್ಲಿಸಿದೆ.
ಮುಂದುವರಿದು, ಮೃತಳ ವಯಸ್ಸು ೯೦. ಮಗನು ಇದ್ದಾನೆ. ಇದನ್ನು ಗಮನಿಸಬೇಕು. ವಾದಿ ಮೃತ್ಯುಪತ್ರ ಬರೆಯುವಾಗ ಇಬ್ಬರೂ ಇದ್ದೆವು ಎಂದು ಹೇಳುತ್ತಾನೆ, ಮೃತಳನ್ನು ಒತ್ತಾಯಿಸುವ ಸಂದರ್ಭ ಹೆಚ್ಚು, ಇದು ಸಂಶಯ ನಡೆ ಎಂದು ಸರ್ವೋಚ್ಚ ನ್ಯಾಯಾಲಯ ಹಲವು ಪ್ರಕರಣಗಳಲ್ಲಿ ಉದಾಹರಿಸಿದ್ದಾರೆ. ದೃಢೀಕೃತ ಸಾಕ್ಷಿದಾರರು, ಬಾಂಡ್ ರೈಟರನು, ಒಬ್ಬರಿಗೊಬ್ಬರು ವ್ಯತಿರಿಕ್ತವಾಗಿ ಹೇಳಿಕೆ ನೀಡಿ, ಮೃತ್ಯುಪತ್ರ ಬರೆಯಲು ವಾದಿಯರು ಮಾಹಿತಿ ನೀಡಿದ್ದರು ಎಂದು ಒಬ್ಬರು, ಇನ್ನೊಬ್ಬರು ಸಾಕ್ಷಿದಾರರು ನೀಡಿದ್ದಾರೆ ಎಂದು ಪಾಟಿ ಸವಾಲಿನಲ್ಲಿ ಉತ್ತರಿಸಿದ್ದು, ಯಾರೊಬ್ಬರೂ ಮೃತಳು ಮಾಹಿತಿ ನೀಡಿದ್ದಳು ಎಂದು ಹೇಳಿಲ್ಲ. ಅಂದರೆ ಇವರೆಲ್ಲರೂ ಕೂಡಿ ೯೦ ವಯಸ್ಸಿನ ವಯೋವೃದ್ಧಳನ್ನು ಕರೆದುಕೊಂಡು ಬಂದು ಸುಳ್ಳು ಬೋಗಸ್ ಪತ್ರ ಸೃಷ್ಟಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ೨೦೧೦ರಲ್ಲಿ ರೂಪಾದೇವಿ ಮರಣ ಹೊಂದಿದ್ದರೂ, ಮೃತ್ಯುಪತ್ರ ೨೦೧೬ರವರೆಗೆ ಬೆಳಕಿಗೆ ಬರಲಿಲ್ಲ ಇದು, ಸಂಶಯಕ್ಕೆ ಆಸ್ಪದ ನೀಡುವ ಅಂಶವಾಗಿದೆ. ವಾದಿಯರು ನಿಸ್ಸಂಶಯವಾಗಿ ಮೃತ್ಯು ಪತ್ರ ರುಜುವಾತುಪಡಿಸಲು ವಿಫಲರಾಗಿದ್ದು, ದಾವೆಯನ್ನು ವಜಾಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ವಿನಂತಿಸುತ್ತೇನೆ ಎಂದು ವಾದಕ್ಕೆ ವಿರಾಮ ನೀಡಿದೆ.
ನ್ಯಾಯಾಲಯವು, ಅಂತಿಮ ತೀರ್ಪು ನೀಡಿ, ಪ್ರತಿವಾದಿ ಪರ ನನ್ನ ವಾದವನ್ನು ಪ್ರಸ್ತಾಪಿಸಿ, ವಾದಿಯರು ಮೃತ್ಯು ಪತ್ರವನ್ನು ನಿಸ್ಸಂಶಯವಾಗಿ ರುಜುವಾತುಪಡಿಸಲು ವಿಫಲರಾಗಿದ್ದಾರೆ ಎಂಬ ಕಾರಣ ನೀಡಿ ವಾದಿಯ ದಾವೆಯನ್ನು ವಜಾಗೊಳಿಸಿತು.