ಸಾಧಕರ ಸಂಕಲ್ಪದ ಕೂಸು
೧೯೨೪ರಲ್ಲಿ ಬೆಳಗಾವಿಯ ಕಾಂಗ್ರೆಸ್ ರಾಷ್ಟ್ರೀಯ ಮಹಾಧಿವೇಶನ ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಒಂದು ಸಾಪ್ತಾಹಿಕ ಪತ್ರಿಕೆ ಸಂಯುಕ್ತ ಕರ್ನಾಟಕ ಎಂಬ ಹೆಸರಿನಲ್ಲಿ ಪ್ರಾರಂಭವಾಯಿತು. ೧೯೩೩ ಏಪ್ರಿಲ್ ೨೭ರ ಅಕ್ಷಯ ತೃತೀಯದ ಶುಭ ಮಹೂರ್ತ ಬೆಳಗಾವಿಯ ಹಿರಿಯ ನಾಯಕರಾದ ಬೆಳೆವಿ ದತ್ತ ರಾಯರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯನ್ನು ಲೋಕಾರ್ಪಣೆ ಮಾಡಿದರು. ನಂತರ ಹುಬ್ಬಳ್ಳಿಯಲ್ಲಿ ಪ್ರಾರಂಭವಾದ ಸಂಯುಕ್ತ ಕರ್ನಾಟಕ ಆಗಿನ ಇತರ ದಿನಪತ್ರಿಕೆಗಳಾದ ಲೋಕಮತ ತರುಣ ಕರ್ನಾಟಕ, ನವಯುಗ ಇವುಗಳ ಮಧ್ಯೆ ಜನಪ್ರಿಯತೆ ಪಡೆಯಿತು. ರಾಷ್ಟ್ರೀಯ ಭಾವನೆಗಳ ಉದ್ದೀಪನಕ್ಕೆ ಪತ್ರಿಕೆ ಸಹಕಾರಿಯಾಯಿತು.
ಸಂಯುಕ್ತ ಕರ್ನಾಟಕಕ್ಕಿಂತ ಮುಂಚೆಯ ಜನ್ಮ ತಳೆದಿದ್ದು ಕರ್ಮವೀರ ಸಾಪ್ತಾಹಿಕ ಈ ಕರ್ಮವೀರ ಎಂಬ ಹೆಸರಿಗೆ ಭಗವದ್ಗೀತೆಯೇ ಪ್ರೇರಣೆ, ಕರ್ಮವೀರ ಜನ್ಮ ತಳೆದಿದ್ದು ೧೫ ಫೆಬ್ರವರಿ ೧೯೨೧ರ ರಥಸಪ್ತಮಿಯ ದಿವಸ. ೧೯೫೬ರಲ್ಲಿ ಪತ್ರಿಕೋದ್ಯಮದಲ್ಲಿ ಹೊಸತನವನ್ನು ತರುವ ಆಲೋಚನೆಯಿಂದ ಕಸ್ತೂರಿ ಮಾಸಿಕ ಪ್ರಾರಂಭವಾಯಿತು ಪಾವೆಂ ಆಚಾರ್ಯ ಅವರು ಮಾಸಪತ್ರಿಕೆಗೆ ಸ್ವರೂಪವನ್ನು ನೀಡಿದರು.
ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ರಚನೆಯಾಗಬೇಕು ಎನ್ನುವ ಹೋರಾಟದ ಸುದ್ದಿಗಳನ್ನು ಸಂಯುಕ್ತ ಕರ್ನಾಟಕ ಆದ್ಯತೆಯಿಂದ ಪ್ರಕಟಿಸುತ್ತಿತ್ತು. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪತ್ರಿಕೆ ಮಹತ್ವದ ಪಾತ್ರವನ್ನು ವಹಿಸಿತು. ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾಗಿದ್ದ ರಂಗನಾಥ ದಿವಾಕರರ ಅಧ್ಯಕ್ಷತೆಯಲ್ಲಿ ನಡೆದ ಕಾಸರಗೋಡು ಸಮ್ಮೇಳನದಲ್ಲಿ ಕರ್ನಾಟಕ ಏಕೀಕರಣಕ್ಕೆ ಸಂಕಲ್ಪ ತೊಡಲಾಯಿತು. ಕರ್ನಾಟಕದಲ್ಲಿ ಜವಾಬ್ದಾರಿ ಸರ್ಕಾರ ಮತ್ತು ಏಕೀಕರಣ ಚಳವಳಿಯ ಬಗ್ಗೆ ಪತ್ರಿಕೆಯ ಮೂಲಕ ಜನಮಾನಸವನ್ನು ಎಚ್ಚರಿಸುವುದರಲ್ಲಿ ಯಶಸ್ವಿಯಾಯಿತು.
೧೯೫೯ ಜನವರಿ ೨೬ರ ಗಣರಾಜ್ಯ ದಿನದಂದು ಸಯುಕ್ತ ಕರ್ನಾಟಕದ ಬೆಂಗಳೂರು ಆವೃತ್ತಿ ಬಿಡುಗಡೆಯಾಯಿತು ಆ ಸಂದರ್ಭದಲ್ಲಿ ಹೀಗೆ ಹೇಳಿದರು.
"ಸಂಯುಕ್ತ ಕರ್ನಾಟಕ ಭಾರತದ ಸ್ವಾತಂತ್ರö್ಯ ಸಂಗ್ರಾಮದಲ್ಲಿ ಅಪಾರ ಸೇವೆ ಸಲ್ಲಿಸಿದೆ. ಆ ಸಮರದ ಅಹಿಂಸಾತ್ಮಕ ಯೋಧರಿಗೆ ಚಿರಸ್ಫೂರ್ತಿಯ ಚಿಲುಮೆಯಾಗಿ ದುಡಿದು ಕೃತಕೃತ್ಯವಾಗಿದೆ. ಆ ಹಾದಿಯಲ್ಲಿ ಸಾಗುವಾಗ ಎದುರು ಬಂದ ಕಷ್ಟಗಳಿಗೆ ತಲೆಕೊಟ್ಟು ಅಗ್ನಿ ಪರೀಕ್ಷೆಯಲ್ಲಿ ಉತ್ತೀರ್ಣವಾಗಿ ಬಂದಿದೆ"
ಪತ್ರಿಕೆ ಅನೇಕ ಸಮಸ್ಯೆಗಳನ್ನು ಎದುರಿಸಿ ಸುಮಾರು ೮ ದಶಕಗಳನ್ನು ಯಶಸ್ವಿಯಾಗಿ ಪೂರೈಸಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅನೇಕ ಪ್ರಮುಖ ಪತ್ರಿಕೋದ್ಯಮಿಗಳನ್ನು ಈ ಕ್ಷೇತ್ರಕ್ಕೆ ಪರಿಚಯಿಸಿದ ಶ್ರೇಯಸ್ಸು ಪತ್ರಿಕೆಯದ್ದು. ಅನೇಕ ಹಿರಿಯರು ಈ ಟ್ರಸ್ಟ್‌ನ ನೇತೃತ್ವವನ್ನು ವಹಿಸಿ ಸಂಸ್ಥೆಯನ್ನು ಮುನ್ನಡೆಸುವುದರಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದರು. ಹೀಗೆ ಸಂಸ್ಥೆಯನ್ನು ಮುನ್ನಡೆಸಲು ಸಹಕಾರಿಯಾದವರಲ್ಲಿ ಪ್ರಮುಖರೆಂದರೆ ರಂಗನಾಥ ದಿವಾಕರ್, ಮೊಹರೆ ಹಣಮಂತ ರಾಯರು, ಬಿ.ಡಿ. ಜತ್ತಿ, ಎಆರ್ ಬದ್ರಿನಾರಾಯಣ್, ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾಯರು, ಕೆ. ಶಾಮರಾವ್, ಹಾರನಹಳ್ಳಿ ರಾಮಸ್ವಾಮಿ, ಉಮೇಶ್ ಭಟ್ ಮತ್ತು ಇನ್ನು ಅನೇಕ ಮಹನೀಯರು ಇದ್ದಾರೆ ಸಂಪಾದಕರಾಗಿ ಹಿರಿಯ ಪತ್ರಿಕೋದ್ಯಮಿಗಳಾದ ಖಾದ್ರಿ ಶಾಮಣ್ಣ, ರಾವ್ ಬಹದ್ದೂರ್, ಆರ್.ಎ. ಉಪಾಧ್ಯಾಯ, ಎನ್.ವಿ ಜೋಷಿ, ಎಸ್.ವಿ. ಜಯಶೀಲರಾವ್, ವಿ.ಎನ್. ಸುಬ್ಬರಾವ್, ಈಶ್ವರ ದೈತೋಟ ಸೇರಿದಂತೆ ಮತ್ತಿತರರು ಪತ್ರಿಕೆಯ ಏಳಿಗೆಗೆ ಸೇವೆ ಸಲ್ಲಿಸಿದ್ದಾರೆ.
ಸಂಯುಕ್ತ ಕರ್ನಾಟಕ ಪತ್ರಿಕಾ ಬಳಗ ಒಂದು ಮುಕ್ತ ವಿಶ್ವವಿದ್ಯಾನಿಲಯದ ಸ್ವರೂಪ. ಈ ಸಂಸ್ಥೆಯಲ್ಲಿ ತರಬೇತಿ ಪಡೆದು ಕಾರ್ಯ ನಿರ್ವಹಿಸಿದ ಅನೇಕ ಮಂದಿ ಪತ್ರಕರ್ತರು ನಾಡಿನ ಅನೇಕ ಇಂಗ್ಲಿಷ್, ಕನ್ನಡ ಪತ್ರಿಕೆಗಳ ಹಿರಿಯ ಸ್ಥಾನದಲ್ಲಿ ಸೇವೆ ಸಲ್ಲಿಸಿ ಜನಮಾನ್ಯತೆ ಪಡೆದಿರುವುದು ಹೆಮ್ಮೆಯ ಸಂಗತಿ. ಯಾವುದೇ ರೀತಿಯ ತಾರತಮ್ಯದ ಧೋರಣೆ ಅನುಸರಿಸದೆ ಸುದ್ದಿಯಾಗಿ ನೋಡಿ, ವ್ಯಕ್ತಿಗಿಂತಲೂ ವಿಷಯಕ್ಕೆ ಪ್ರಾಧಾನ್ಯತೆ ನೀಡಿ ಸತ್ಯಸಂಧತೆಯನ್ನು ಆರಂಭದಿಂದಲೂ ರೂಢಿಸಿಕೊಂಡಿರುವುದು ಇದರ ವಿಶ್ವಾಸಾರ್ಹತೆಯ ಮೂಲ.
ಖಾಸಗಿ ವಲಯದ ಪತ್ರಿಕೆಗಳು ಹಲವಿರಬಹುದು. ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಗಳಿಸಿರಬಹುದು. ಆದರೆ, ಧರ್ಮದರ್ಶಿ ಮಂಡಳಿ ಮೂಲಕ ನಡೆಯುತ್ತಿರುವ ಪತ್ರಿಕಾ ಬಳಗವೆಂದರೆ ರಾಜ್ಯದಲ್ಲಿ ಇದೊಂದೇ. ದೇಶದಲ್ಲಿ ಈ ಸ್ವರೂಪದ ಕೇವಲ ಮೂರು ಪತ್ರಿಕೆಗಳ ಸಾಲಿನಲ್ಲಿ ಸಂಯುಕ್ತ ಕರ್ನಾಟಕವೂ ಒಂದು. ರಾಜಕೀಯ ಇಲ್ಲವೇ ಧಾರ್ಮಿಕ ವೈಚಾರಿಕತೆಗೆ ಕರ್ಮಠತ್ವಕ್ಕೆ ಶರಣಾಗದೇ ಮುಕ್ತವಾಗಿ ನೋಡುವ ಔದಾರ್ಯ ಮಾರ್ಗವೇ ಈ ಪತ್ರಿಕೆ ಮನೆಮಾತಾಗಲು ಕಾರಣ.
ಮಾಧ್ಯಮ ಕ್ಷೇತ್ರವೆಂಬುದು ವರ್ತಮಾನದ ನಿಲುವುಗನ್ನಡಿ; ತಂತ್ರಜ್ಞಾನದ ದುರ್ವಿನಿಯೋಗದಿಂದಲೋ ಇಲ್ಲವೇ ಪಟ್ಟಭದ್ರರ ಕೈವಾಡದಿಂದಲೋ ಏನೋ ಇಂತಹ ನಿಲುವುಗನ್ನಡಿಯಲ್ಲಿ ವಕ್ರಬಿಂಬಗಳು ಕಾಣುತ್ತಿರುವುದನ್ನು ಒಪ್ಪಿಕೊಂಡರೂ ಕೂಡಾ ಸಾರಾಸಗಟಾಗಿ ಮಾಧ್ಯಮ ಕ್ಷೇತ್ರದ ಸತ್ಯ ಸಂಗತಿಯನ್ನು ನಿರಾಕರಿಸುವುದು ಸಾಧುವಲ್ಲ. ಸತ್ಯ ಎಂಬುದು ಒಪ್ಪುವ ಮಾತು. ಪರಮ ಸತ್ಯ ಎನ್ನುವುದು ವ್ಯಕ್ತಿಗತ ಕೈಗನ್ನಡಿಯ ಮಾತು. ನೊಬೆಲ್ ಪ್ರಶಸ್ತಿ ಪುರಸ್ಕೃತ ನಾಟಕಕಾರ ಹೆರಾಲ್ಡ್ ಪಿಂಟರ್ ಪ್ರತಿಪಾದಿಸುವಂತೆ `ಪರಮಸತ್ಯ ಎಂಬುದು ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ನಾನು ಕಂಡ ಸತ್ಯ ಅವನು ಕಂಡ ಸತ್ಯ. ಇವನು ಕಂಡ ಸತ್ಯ ಇರಬಹುದು. ಇವೆಲ್ಲವೂ ಕೂಡಾ ಸತ್ಯದ ದೃಷ್ಟಿಗಳು. ಆದರೆ, ಇದೆಲ್ಲವನ್ನೂ ಕ್ರೋಡೀಕರಿಸಿ ಪರಮಸತ್ಯ ಎಂದು ನಿರ್ಣಯಿಸಲು ಬರುವುದಿಲ್ಲ' ಎಂಬ ಮಾತುಗಳಲ್ಲಿ ಎದ್ದು ಕಾಣುವುದು ಚಲನಶೀಲ ಸಮಾಜದ ವಸ್ತುನಿಷ್ಠ ನಿಲುವು. ಇಂತಹ ವಸ್ತುನಿಷ್ಠ ನಿಲುವಿಗೆ ಮಾಧ್ಯಮ ಕ್ಷೇತ್ರದಲ್ಲಿ ಮನ್ನಣೆ ಕಡಿಮೆಯಾಗಲು ಅದರ ಸ್ವಾತಂತ್ರ್ಯ ಕಡಿಮೆಯಾಗುತ್ತಿರುವುದು ಕಾರಣ ಎಂಬುದು ತಜ್ಞರ ನಂಬಿಕೆ.
ನಿಜ. ಮಾಧ್ಯಮ ಕ್ಷೇತ್ರ ಸರ್ವತಂತ್ರ ಸ್ವತಂತ್ರವಲ್ಲ. ಅದೂ ಕೂಡಾ ಉಳಿದ ಕ್ಷೇತ್ರಗಳಂತೆ ಸಮಾಜದ ಸೃಷ್ಟಿ. ಸಮಾಜದಲ್ಲಿ ಇರುವ ಸಬಲ ಹಾಗೂ ದುರ್ಬಲ ಅಂಶಗಳು ಸಹಜವಾಗಿಯೇ ಅದರಲ್ಲಿಯೂ ಕೂಡಾ ಪ್ರತಿಧ್ವನಿಸುವುದು ಸ್ವಾಭಾವಿಕ ಎಂದು ಪ್ರತಿಪಾದಿಸಿದಾಕ್ಷಣ ಮಾಧ್ಯಮದ ಇಳಿಮುಖದ ಕಾರಣವನ್ನು ಒಪ್ಪಿಕೊಂಡಂತಲ್ಲ. ಇಳಿಮುಖಕ್ಕೆ ಕಾರಣಗಳು ಹಲವಾರು. ಇಂಟರ್‌ನೆಟ್ ಯುಗ ಆರಂಭಕ್ಕಿಂತಲೂ ಮೊದಲು ಜನರಿಗೆ ಸುದ್ದಿ ಸಮಾಚಾರದ ಕುತೂಹಲವನ್ನು ಇಂಗಿಸಲು ಮುದ್ರಣ ಹಾಗೂ ಆಕಾಶವಾಣಿ ಮಾಧ್ಯಮಗಳಷ್ಟೇ ಲಭ್ಯವಿದ್ದವು. ಇಂಟರ್‌ನೆಟ್ ಯುಗ ಆರಂಭವಾದ ಮೇಲೆ ಮುದ್ರಣ ಮಾಧ್ಯಮವನ್ನು ಹಿಂದಕ್ಕೆ ಹಾಕುವ ರೀತಿಯಲ್ಲಿ ತಂತ್ರಜ್ಞಾನ ವಿಶ್ವಾಮಿತ್ರ ಸೃಷ್ಟಿಯಾದ ಮಾಧ್ಯಮಗಳು ನಾಗಾಲೋಟದಲ್ಲಿ ಹೊರಟ ನಂತರ ಅದರ ಹಿಂದೆ ಬಿದ್ದದ್ದು ಸಾಮಾಜಿಕ ಜಾಲತಾಣ ಹಾಗೂ ಡಿಜಿಟಲ್ ಮಾಧ್ಯಮದ ಆಕರ್ಷಣೆ. ಬದಲಾದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸುದ್ದಿ ಸಮಾಚಾರಗಳನ್ನು ಗಂಭೀರವಾಗಿ ನೋಡುವ ಜನವರ್ಗ. ಅದರಲ್ಲಿ ಮಾಹಿತಿಗಿಂತಲೂ ಮನರಂಜನೆಗೆ ಮನಸೋತ ಪರಿಣಾಮವೆಂದರೆ ಸಣ್ಣ ಪುಟ್ಟ ಸಂಗತಿಗಳು ವೈಭವದಿಂದ ಜನರಿಗೆ ಮುಟ್ಟುವಂತಾದ ಮೇಲೆ ಸತ್ಯಕ್ಕೆ ಮಾತ್ರ ಬೆಲೆ ಕೊಡುವ ಮಾಧ್ಯಮಗಳು ಹಿಂದೆ ಬಿದ್ದದ್ದು ನಿಜಕ್ಕೂ ಬೇಸರದ ಸಂಗತಿ. ಇದು ಸಾಲದು ಎಂಬಂತೆ ಸಮಾಜಮುಖಿ ಚಿಂತನೆ ಹಾಗೂ ದೇಶದ ಪ್ರಗತಿಯ ವೈಚಾರಿಕತೆಗೆ ಬದ್ಧವಾಗಿದ್ದ ವ್ಯಕ್ತಿಗಳು ಹಾಗೂ ಸಂಸ್ಥೆಗಳು ನಡೆಸುತ್ತಿದ್ದ ಮಾಧ್ಯಮ ಸಂಸ್ಥೆಗಳಲ್ಲಿ ರಾಜಕೀಯ ವ್ಯಕ್ತಿಗಳ ಕೈವಾಡ ಆರಂಭವಾಗುತ್ತಿದ್ದಂತೆಯೇ ನಿಷ್ಪಕ್ಷಪಾತದ ಧೋರಣೆಯ ಬದಲು ಪಕ್ಷಪಾತದ ಧೋರಣೆಯ ಮಾಧ್ಯಮಗಳ ಭರಾಟೆ ಆರಂಭವಾದದ್ದು ಭಾರತದ ಮಟ್ಟಿಗೆ ದೊಡ್ಡ ಕಪ್ಪುಚುಕ್ಕೆ.
ಇಂತಹ ಬೆಳವಣಿಗೆಯ ಹಿನ್ನೆಲೆಯಲ್ಲಿ ಸತ್ಯ ನಿಷ್ಠುರವಾಗಿ ಕಾರ್ಯನಿರ್ವಹಿಸುತ್ತಿರುವ ಸಂಯುಕ್ತ ಕರ್ನಾಟಕ ಬಳಗದ ಪತ್ರಿಕೆಗಳು ಮತ್ತಷ್ಟು ಆಯಾಮದ ಜ್ಞಾನ ಹಾಗೂ ವಿನ್ಯಾಸದ ವಿಸ್ತಾರಗಳಲ್ಲಿ ತಮ್ಮ ಕಾರ್ಯ ಚಟುವಟಿಕೆಯನ್ನು ವಿಸ್ತರಿಸಿಕೊಂಡು ಅರಿವಿನ ದಾಸೋಹ ನಿರಂತರವಾಗಿ ನಡೆಯುವಂತೆ ನೋಡಿಕೊಂಡು ಲೋಕನಿಷ್ಠೆಯ ಕಾರ್ಯದಲ್ಲಿ ಲೋಕೋತ್ತರವಾಗಿ ಕಾರ್ಯ ನಿರ್ವಹಿಸಬಲ್ಲದು ಎಂಬ ಕನ್ನಡಿಗರ ವಿಶ್ವಾಸವೇ ನಮಗೆ ಆತ್ಮವಿಶ್ವಾಸ.