For the best experience, open
https://m.samyuktakarnataka.in
on your mobile browser.

ಅಂಗನವಾಡಿ ಬಂದ್‌ಗೆ ರಾಜ್ಯ ಸರ್ಕಾರದ ಹುನ್ನಾರ?

03:30 AM Jun 19, 2024 IST | Samyukta Karnataka
ಅಂಗನವಾಡಿ ಬಂದ್‌ಗೆ ರಾಜ್ಯ ಸರ್ಕಾರದ ಹುನ್ನಾರ

ನರಸಿಂಹರಾವ್
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಪೂರ್ವಪ್ರಾಥಮಿಕ ತರಗತಿ(ಎಲ್‌ಕೆಜಿ-ಯುಕೆಜಿ) ಆರಂಭಿಸುವ ಸರ್ಕಾರದ ನಿರ್ಧಾರಕ್ಕೆ ಆತಂಕಗೊಂಡಿರುವ ಅಂಗನವಾಡಿ ಕಾರ್ಯಕರ್ತೆಯರು ಯಾವುದೇ ಕಾರಣಕ್ಕೆ ಅಂಗನವಾಡಿಗಳನ್ನು ನೇಪಥ್ಯಕ್ಕೆ ಸರಿಯಲು ಬಿಡುವುದಿಲ್ಲ ಎಂದು ಹೋರಾಟಕ್ಕೆ ಸಜ್ಜಾಗಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಮನವಿ ನೀಡಲು ಮುಂದಾಗಿದ್ದಾರೆ. ೧೯೭೫ರಲ್ಲಿ ಮಕ್ಕಳ ರಾಷ್ಟ್ರೀಯ ನೀತಿಯ ಆಧಾರದಲ್ಲಿ ಇಂದಿನ ಮಕ್ಕಳೇ ದೇಶದ ಪರಮೋಚ್ಛ ಆಸ್ತಿ ಎಂಬುದರ ಅಡಿಯಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಜಾರಿಗೆ ಬಂದಿತು. ಈ ಯೋಜನೆಯಲ್ಲಿ ೬ ವರ್ಷದೊಳಗಿನ ಮಕ್ಕಳು, ಗರ್ಭಿಣಿ-ಬಾಣಂತಿಯರು ಫಲಾನುಭವಿಗಳಾದರು. ಇದರಿಂದ ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬದುಕು ಕಟ್ಟಿಕೊಂಡರು.
ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳಿಗೆ ಶಿಕ್ಷಣದ ರಹದಾರಿ ಸಿಕ್ಕಿದ್ದೇ ಅಂಗನವಾಡಿಯಿಂದ. ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆಯೂ ಹೆಚ್ಚುತ್ತ ಹೋಯಿತು. ಈಗಲೂ ಸಾವಿರಾರು ಕಾರ್ಯಕರ್ತೆಯರು ಅಂಗನವಾಡಿಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿ ಸಂಖ್ಯೆ ಇಳಿಮುಖವಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ವೃಥಾ ಖರ್ಚು, ಈ ಖರ್ಚು ವೆಚ್ಚಗಳನ್ನು ಭರಿಸದೇ ಸರ್ಕಾರ
ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸುವ ನಿರ್ಧಾರ ಮಾಡಿತೇ? ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಸರ್ಕಾರ ಹಂತಹಂತವಾಗಿ ಅಂಗನವಾಡಿಗಳಿಗೆ ಬೀಗ ಹಾಕಲು ಮುಂದಾಗಿದೆಯಾ ಎನ್ನುವ ಶಂಕೆ ಗಾಢವಾಗಿದೆ.
ಒಂದನೇ ತರಗತಿಗೆ ಮಕ್ಕಳು ದಾಖಲಾಗುವ ಮೊದಲು ಅಂದರೆ ಮೂರರಿಂದ ಆರು ವರ್ಷದ ಮಕ್ಕಳನ್ನು ಅಂಗನವಾಡಿಗಳಿಗೆ ದಾಖಲಿಸಲಾಗುತ್ತಿದೆ. ಅವುಗಳನ್ನು ನೋಡಿಕೊಳ್ಳಲು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ನೇಮಕ ಮಾಡಲಾಗಿದೆ. ರಾಜ್ಯದ ಬಹುತೇಕ ಎಲ್ಲ ಕಡೆಗೆ ಖಾಸಗಿ ಶಾಲೆಗಳು ನಾಯಿಕೊಡೆಯಂತೆ ಸ್ಥಾಪನೆ ಆಗುತ್ತಿವೆ. ಎಷ್ಟೇ ಶಾಲೆಗಳು ಆರಂಭವಾದರೂ ಸಹ ಅಂಗನವಾಡಿಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆಯಾಗಿರಲಿಲ್ಲ. ಮಧ್ಯಮ, ಕೆಳಮಧ್ಯಮ ಮತ್ತು ಬಡವರ ಮಕ್ಕಳಿಗೆ ಅಂಗನವಾಡಿಗಳೇ ಆಶಾಕಿರಣದಂತಾಗಿವೆ.

ಈ ವರ್ಷದಿಂದಲೇ ಪ್ರಾಯೋಗಿಕ ಜಾರಿ
ರಾಜ್ಯದಲ್ಲಿ ಪ್ರಾಯೋಗಿಕವಾಗಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ೧೦೦೮ ಶಾಲೆಗಳಲ್ಲಿ ಈ ವರ್ಷದಿಂದ ಎಲ್‌ಕೆಜಿ-ಯುಕೆಜಿ ತರಗತಿಗಳನ್ನು ಆರಂಭ ಮಾಡಲು ಸರ್ಕಾರ ಹಸಿರು ನಿಶಾನೆ ತೋರಿದೆ. ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಇಲಾಖೆಯವರು ಮಾಡಿರುವ ಮನವಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಅಧೀನ ಕಾರ್ಯದರ್ಶಿ ಪರವಾನಗಿ ನೀಡಿ ಆದೇಶ ಹೊರಡಿಸಿದ್ದಾರೆ. ನಿಗದಿ ಪಡಿಸಿರುವ ಶಾಲೆಗಳಲ್ಲಿ ಈ ವರ್ಷದಿಂದಲೇ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು. ಎಸ್‌ಡಿಎಂಸಿ ಮತ್ತು ಶಾಲೆಯ ಮುಖ್ಯೋಪಾಧ್ಯಾಯರು, ಈ ಮಕ್ಕಳಿಗೆ ಬೋಧಿಸಲು, ಓರ್ವ ಅರ್ಹ ಶಿಕ್ಷಕ, ಇಲ್ಲವೇ ಶಿಕ್ಷಕಿ, ಓರ್ವ ಆಯಾರನ್ನು ನೇಮಕ ಮಾಡಿಕೊಳ್ಳಬೇಕು. ಅವರಿಗೆ `ಡಯಟ್'ನಿಂದ ತರಬೇತಿ ನೀಡಬೇಕು ಎನ್ನುವುದು ಸೇರಿದಂತೆ ಮಾರ್ಗಸೂಚಿಗಳನ್ನು ಕೂಡ ಪ್ರಕಟಿಸಿದೆ.