For the best experience, open
https://m.samyuktakarnataka.in
on your mobile browser.

ಅಂಗನವಾಡಿ ಮಕ್ಕಳ ಆಹಾರ ಪೂರೈಕೆಯಲ್ಲೂ ಅವ್ಯವಹಾರ

08:13 PM Sep 12, 2024 IST | Samyukta Karnataka
ಅಂಗನವಾಡಿ ಮಕ್ಕಳ ಆಹಾರ ಪೂರೈಕೆಯಲ್ಲೂ ಅವ್ಯವಹಾರ

ತುಮಕೂರು: ರಾಜ್ಯದಲ್ಲಿ ಅಂಗನವಾಡಿ ಮಕ್ಕಳಿಗೆ ಆಹಾರ ಪೂರೈಕೆಯಲ್ಲಿ ದೊಡ್ಡಮಟ್ಟದ ಹಣಕಾಸಿನ ಅವ್ಯವಹಾರ ನಡೆಯುತ್ತಿದೆ. ಪೂರೈಸುತ್ತಿರುವ ಆಹಾರವು ಕಳಪೆಯಿಂದ ಕೂಡಿದ್ದು ಇದನ್ನು ಸಿಬಿಐ ಮೂಲಕ ತನಿಖೆಗೊಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಶಾಸಕ ಬಿ.ಸುರೇಶ್ ಗೌಡ ಆಗ್ರಹಿಸಿದರು.
ನಗರದ ಹೊಯ್ಸಳ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ಹಿಂದುಳಿದ ಮತ್ತು ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಬೇಕು ಎಂದು ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿದೆ. ಇಂಥ ಮಕ್ಕಳಿಗೆ ಮನೆಯಲ್ಲಿ ಸಮರ್ಪಕವಾದ ಪೌಷ್ಟಿಕ ಆಹಾರ ಸಿಗುವುದಿಲ್ಲ ಎಂದು ಸರ್ಕಾರವೇ ಎಲ್ಲ ಪೌಷ್ಟಿಕ ಅಂಶಗಳು ಇರುವಂಥ ಆಹಾರ ತಯಾರು ಮಾಡಿ ಅವರಿಗೆ ಉಣ ಬಡಿಸಬೇಕು ಎಂದು (ಎಂಎಸ್‌ಪಿಸಿ) ಮಹಿಳೆಯರು ಮತ್ತು ಮಕ್ಕಳಿಗೆ ಪೋಷಕಾಂಶ ಪೂರೈಸುವ ಯೋಜನೆ ರೂಪಿಸಲಾಗಿತ್ತು. ಮೊದಲು ಶಾಸಕರ ನೇತೃತ್ವದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿತ್ತು. ಏಕೆಂದರೆ ಶಾಸಕರು ನಿತ್ಯವೂ ಜನರ ಜೊತೆಗೆ ಒಡನಾಟ ಇರುವುದರಿಂದ ಅವರಿಗೆ ಎಲ್ಲಿ ಸಮಸ್ಯೆಯಿದೆ, ಅದನ್ನು ಹೇಗೆ ಪರಿಹರಿಸಬೇಕು ಎನ್ನುವುದು ತಿಳಿದಿರುತ್ತದೆ. ಅವರು ಜನರಿಗೆ ಉತ್ತರದಾಯಿಗಳೂ ಹೌದು. ಆ ವ್ಯವಸ್ಥೆಯಿದ್ದಾಗ ಈ ಯೋಜನೆ ಅತ್ಯಂತ ಸಮರ್ಪಕವಾಗಿ ನಡೆಯುತ್ತಿತ್ತು. ಯಾವುದೇ ದೂರು ಇರಲಿಲ್ಲ. ಈಗ ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಾಸಕರ ನೇತೃತ್ವದ ಸಮಿತಿಯ ಹೊಣೆಯನ್ನು ಕಿತ್ತು ಹಾಕಿ ಕ್ರಿಸ್ಟಿ ಎಂಬ ಸಂಸ್ಥೆಗೆ ಈ ಯೋಜನೆಯನ್ನು ವಹಿಸಿಕೊಟ್ಟಿದೆ. ಅವರೇ ಎಲ್ಲ ವಸ್ತುಗಳನ್ನು ತರುತ್ತಾರೆ. ಅದನ್ನು ಎಂಎಸ್‌ಪಿಸಿಗೆ ಕೊಡುತ್ತಾರೆ. ಆ ಸಂಸ್ಥೆ ಕೇವಲ ಪೊಟ್ಟಣ ಕಟ್ಟಿಕೊಡುವ ಮಟ್ಟಕ್ಕೆ ಇಳಿದಿದೆ. ಅಂಗನವಾಡಿ ಮಕ್ಕಳಿಗೆ ಆಹಾರ ಪೂರೈಕೆ ಆಗುತ್ತಿಲ್ಲ. ನನ್ನ ಹತ್ತಿರ ಈ ಯೋಜನೆಯ ಅನುಷ್ಠಾನದ ಅಧಿಕಾರಿಗಳು ಬರೆದ ಪತ್ರದ ದಾಖಲೆಯಿದೆ. ಅದನ್ನು ಇಟ್ಟುಕೊಂಡೇ ನಾನು ಮಾತನಾಡುತ್ತಿರುವೆ ಎಂದರು.