For the best experience, open
https://m.samyuktakarnataka.in
on your mobile browser.

ಅಂಚೆ ಕಚೇರಿ ಮುಂದೆ ನೂಕು ನುಗ್ಗಲು

12:10 AM Mar 19, 2024 IST | Samyukta Karnataka
ಅಂಚೆ ಕಚೇರಿ ಮುಂದೆ ನೂಕು ನುಗ್ಗಲು

ಬಿ.ಅರವಿಂದ
ಹುಬ್ಬಳ್ಳಿ: ಭಾರತೀಯ ಅಂಚೆಯಲ್ಲಿ ಐಪಿಪಿಬಿ (ಭಾರತೀಯ ಪೋಸ್ಟಲ್ ಪೇಮೆಂಟ್ ಬ್ಯಾಂಕ್) ಖಾತೆ ತೆರೆದರೆ ಪ್ರಧಾನಿ ಮೋದಿಯವರು ೩ ಸಾವಿರ ರೂಪಾಯಿ ಕೊಡುತ್ತಾರೆ ಎನ್ನುವ ಸುಳ್ಳು ಸುದ್ದಿ ಅಂಚೆ ಕಚೇರಿಗಳ ಮುಂದೆ ಬಹುದೊಡ್ಡ ಜನ ಗದ್ದಲವನ್ನು ಸೃಷ್ಟಿಸಿದೆ.
ಇದು ಸುಳ್ಳು ಸುದ್ದಿ ಎಂಬುದಾಗಿ ಹೇಳಿದರೂ ಜನ ಕೇಳುತ್ತಿಲ್ಲ. ಆದ್ದರಿಂದ ಸೋಮವಾರ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಸರ್ಕಾರ ಇಂತಹ ಯಾವುದೇ ಯೋಜನೆ ಜಾರಿಗೊಂಡಿಲ್ಲ ನಂಬಬೇಡಿ' ಎಂದು ಸ್ಪಷ್ಟಪಡಿಸಿದೆ. ಹುಬ್ಬಳ್ಳಿಯ ಡಾ. ಅಂಬೇಡ್ಕರ್ ಸರ್ಕಲ್‌ನಲ್ಲಿರುವ ಪ್ರಧಾನ ಅಂಚೆ ಕಚೇರಿ ಸೇರಿದಂತೆ ನಗರದ ಎಲ್ಲ ಉಪ ಅಂಚೆ ಕಚೇರಿಗಳ ಮುಂದೆ ಖಾತೆ ಆರಂಭಿಸಲು ಜನರು ಮುಗಿಬಿದ್ದಿದ್ದಾರೆ. ತಲೆಬುಡವಿಲ್ಲದೇ ಹಬ್ಬಿರುವ ಈ ಸುದ್ದಿಯಿಂದಾಗಿ, ಎದುರಾಗಿರುವ ಜನದಟ್ಟಣೆಯನ್ನು ನಿರ್ವಹಿಸಲು ಅಂಚೆ ಸಿಬ್ಬಂದಿ ತಿಣುಕಾಡಬೇಕಾಗಿದೆ. ಮೂರು ಸಾವಿರ ರೂಪಾಯಿಗಳನ್ನು ಅಂಚೆ ಕಚೇರಿಗೆ ಮೋದಿ ಹಾಕಲಿದ್ದಾರೆ. ಆದ್ದರಿಂದ ಬೇಗ ಅಂಚೆಯಲ್ಲಿ ಐಪಿಪಿಬಿ ಖಾತೆಯನ್ನು ತೆರೆಯಬೇಕು' ಎಂಬುದು ಈ ಸುಳ್ಳು ಸುದ್ದಿಯ ಸಾರಾಂಶವಾಗಿತ್ತು. ಪ್ರಧಾನ ಅಂಚೆ ಕಚೇರಿಯ ಸಹಾಯಕ ಪೋಸ್ಟ್ ಮಾಸ್ಟರ್ ಸಂಕನೂರ್ ಅವರು ಹೇಳಿದಂತೆ,ಸೋಮವಾರ ನಸುಕಿನ ೩ರ ಸುಮಾರಿನಿಂದಲೇ ಜನತೆ ಕ್ಯೂನಲ್ಲಿ ನಿಂತಿದ್ದರು'. ಇದು ಸಂಪೂರ್ಣ ಸುಳ್ಳು ಸುದ್ದಿ. ದಯವಿಟ್ಟು ಐಪಿಪಿಬಿ ಖಾತೆ ಮಾಡಿಸಿಕೊಳ್ಳಲು ಹೀಗೆ ಧಾವಂತ ಬೇಡ. ಯಾವತ್ತು ಬೇಕಾದರೂ ಈ ಖಾತೆಯನ್ನು ತೆರೆಯಲು ಅವಕಾಶ ಇದೆ' ಎಂಬುದಾಗಿ ಅಂಚೆ ಇಲಾಖೆಯ ಸಿಬ್ಬಂದಿ ಮನವರಿಕೆ ಮಾಡಿಕೊಡುವ ಯತ್ನ ವಿಫಲವಾಗಿದೆ.ನಿಮಗೆ ಖಾತೆ ತೆರೆದುಕೊಡಲು ಮನಸ್ಸಿಲ್ಲ. ಆದ್ದರಿಂದ ನೆಪ ಹೇಳುತ್ತಿದ್ದೀರಿ' ಎಂಬುದಾಗಿ ಜನ ಜಗಳವಾಡಿದ್ದರಿಂದ ಸಿಬ್ಬಂದಿ ಅಸಹಾಯಕರಾಗಿ ಖಾತೆಗಳನ್ನು ತೆರೆದುಕೊಡುತ್ತಿದ್ದಾರೆ. ಆದರೆ ಈ ಗದ್ದಲದಿಂದಾಗಿ ಅಂಚೆ ಕಚೇರಿಯ ಉಳಿದ ವ್ಯವಹಾರಗಳಿಗೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಅಂಚೆ ಸಿಬ್ಬಂದಿಗೂ ಏನು ಮಾಡುವುದು ತಿಳಿಯದಾಗಿದೆ.
ಏನಿದು ಐಪಿಪಿಬಿ?
ಐಪಿಪಿಬಿ ಎಂಬುದು ಅಂಚೆ ಇಲಾಖೆಯಲ್ಲಿ ಸರ್ಕಾರಗಳ ಕೇಂದ್ರ ಸರ್ಕಾರದ ನೇರ ನಗದು ವರ್ಗಾವಣೆಗೆ ತೆರೆಯುವ ಖಾತೆ. ಬ್ಯಾಂಕುಗಳಂತೆಯೇ ಇದೂ ಕೂಡ ಆಧಾರ್ ಲಿಂಕ್ ಆಧರಿತ ಖಾತೆಯಾಗಿದೆ. ಬ್ಯಾಂಕುಗಳಲ್ಲಿ ಯಾರಿಗೆ ಆಧಾರ್ ಲಿಂಕ್ ಮಾಡಲು ಆಗಿಲ್ಲವೋ, ಅಂಥವರು ಪೋಸ್ಟ್ನಲ್ಲಿ ಲಿಂಕ್ ಮಾಡಿಸಿ ಈ ಖಾತೆ ತೆರೆದರೆ ಸರ್ಕಾರದ ಯೋಜನೆಗಳು ಹಣ ಜಮಾವಣೆಯಾಗುತ್ತದೆ. ಇದೇ ಖಾತೆ ಮಾಡಿಸಿಕೊಳ್ಳಲು ಈಗ ಜನ ಸುಳ್ಳು ಸುದ್ದಿ ನಂಬಿ ಮುಗಿಬಿದ್ದಿದ್ದಾರೆ.