ಅಂತಾರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್‌ಶಿಪ್ ಭಾರತಕ್ಕೆ ಬೆಳ್ಳಿ
ಮಂಗಳೂರು: ಮಲೇಷಿಯಾದ ಕುಲಾಲಂಪುರದಲ್ಲಿ ಜು.೧೯ರಿಂದ ೨೧ರ ವರೆಗೆ ನಡೆದ ಸ್ಪೀಡ್ ಪವರ್ ಓಪನ್ ಅಂತಾರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಲಭಿಸಿದೆ. ಗಡಿನಾಡು ಕಾಸರಗೋಡು ಪೆರ್ಲದ ಮಧುಶ್ರೀ ಮಿತ್ರ ಅವರು ಸೀನಿಯರ್ ಬಾಲಕಿಯರ ಪೂಮ್ಸೆ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಈ ಸ್ಪರ್ಧೆಯಲ್ಲಿ ವಿವಿಧ ದೇಶಗಳಿಂದ ಸುಮಾರು ೧,೫೦೦ ಕ್ರೀಡಾಪಟುಗಳು ಭಾಗವಹಿಸಿದ್ದರು. ಭಾರತದ ವಿವಿಧ ರಾಜ್ಯಗಳಿಂದ ೬೦ ಕ್ರೀಡಾಪಟುಗಳು ಭಾಗವಹಿಸಿದ್ದರು.
ಮಧುಶ್ರೀ ಮಿತ್ರ ಅವರು ಪ್ರಸ್ತುತ ಬೆಂಗಳೂರಿನ ಟೆಕ್ಸಿಸ್ಟಮ್ಸ್ ಕಂಪನಿಯ ಮಾನವ ಸಂಪನ್ಮೂಲ ನಿರ್ವಹಣೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಧುಶ್ರೀ ಅವರು ಕಾಸರಗೋಡು ಜಿಲ್ಲೆಯ ಚೆರುವತ್ತೂರಿನ ಗ್ರ್ಯಾಂಡ್ ಮಾಸ್ಟರ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಯಲ್ಲಿ ಅನಿಲ್ ಮಾಸ್ಟರ್ ಅವರ ಅಡಿಯಲ್ಲಿ ಟೇಕ್ವಾಂಡೋದಲ್ಲಿ ತರಬೇತಿಪಡೆದಿದ್ದಾರೆ.
ಮಧುಶ್ರೀ ಅವರು ಒಂಭತ್ತನೇ ವಯಸ್ಸಿನಿಂದ ಬದಿಯಡ್ಕದ ಮಾಸ್ಟರ್ ಪಿ. ಕೆ. ಆನಂದ್ ಅವರ ಬಳಿ ತರಬೇತಿ ಪಡೆದು ಕರಾಟೆಯಲ್ಲಿ ಎರಡನೇ ಪದವಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾರೆ.
ಈಕೆ ಪೆರ್ಲದ ವೆಂಕಟರಾಜ ಮಿತ್ರ ಮತ್ತು ಸುಮಿತ್ರಾ ದಂಪತಿಯ ಪುತ್ರಿ.