ಅಂತೂ ಬಂತು ವಕ್ಫ್ ಆದೇಶ: ಅಧಿಕಾರಿ ವಿರುದ್ಧ ಶಿಸ್ತು ಕ್ರಮ
ಬೆಂಗಳೂರು: ರೈತರ ಜಮೀನು ವಕ್ಫ್ ಆಸ್ತಿ ಎಂದು ದಾಖಲಾಗುತ್ತಿರುವ ಕುರಿತಂತೆ ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ರೈತರಿಗೆ ನೀಡಲಾಗಿರುವ ನೋಟಿಸ್ ಅನ್ನು ಕೂಡಲೇ ವಾಪಸ್ ಪಡೆಯುವಂತೆ ಸರ್ಕಾರ ಶನಿವಾರ ಆದೇಶ ನೀಡಿದೆ.
ಮುಖ್ಯಮಂತ್ರಿಗಳ ತುರ್ತು ಸೂಚನೆಯಂತೆ ದಿ. ೧೪-೫ ೨೦೨೪, ೨೩-೪-೨೦೨೪ ಹಾಗೂ ದಿ. ೭-೧೧-೨೦೨೪ ರಂದು ಹೊರಡಿಸಿದ್ದ ಸುತ್ತೋಲೆಯನ್ನು ತಕ್ಷಣದಿಂದಲೇ ಹಿಂಪಡೆಯಬೇಕು. ಮುಖ್ಯಮಂತ್ರಿಗಳ ಆದೇಶವಿದ್ದಾಗಲೂ ದಿನಾಂಕ ೭ರಂದು ನೆನಪೋಲೆ ಹೊರಡಿಸಿದ್ದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಸಿ. ವಿಮಲಮ್ಮ ಅವರ ಮೆಲೆ ಸೂಕ್ತ ಕ್ರಮ ಜರುಗಿಸ ಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸಂಯುಕ್ತ ಕರ್ನಾಟಕ ಪತ್ರಿಕೆ ದಿ. ೮ರಂದು `ಬಾರದ ಲಿಖಿತ ಆದೇಶ' ಎಂಬ ಶೀರ್ಷಿಕೆಯಡಿ ಸಾದ್ಯಂತವಾಗಿ ವರದಿ ಪ್ರಕಟಿಸಿತ್ತು. ಇದರ ಫಲಶ್ರುತಿಯಾಗಿ ಸರ್ಕಾರ ಶನಿವಾರ ಸಂಜೆ ಹೊಸ ಆದೇಶ ಹೊರಡಿಸಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮ್ಯುಟೇಶನ್ ಮಾಡಲು ಯಾವುದೇ ಕಚೇರಿ ಅಥವಾ ಪ್ರಾಧಿಕಾರ ದಿಂದ ನೀಡಲಾದ ನಿರ್ದೇಶನಗಳನ್ನು ತಕ್ಷಣದಿಂದಲೇ ಹಿಂಪಡೆಯುವುದು. ಹಾಗೂ ಮ್ಯುಟೇಶನ್ ಪ್ರಕ್ರಿಯೆ ಯನ್ನು ಕೂಡಲೇ ಸ್ಥಗಿತಗೊಳಿಸು ವುದು. ಹಾಗೂ ಮೊದಲು ನೀಡಿದ್ದ ಎಲ್ಲ ನೋಟಿಸ್‌ಗಳನ್ನು ಹಿಂಪಡೆಯುವುದು, ಜಮೀನು ಗಳಲ್ಲಿ ವ್ಯವಸಾಯ ಮಾಡುತ್ತಿರುವ ರೈತರ ವಿರುದ್ಧ ಯಾವುದೇ ಕ್ರಮ ಜರುಗಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನ.೨ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕಾನೂನು ಸಚಿವ ಎಚ್. ಕೆ ಪಾಟೀಲ್ ಅವರೊಂದಿಗೆ ಸಭೆ ನಡೆಸಿ ಇನ್ನು ಮುಂದೆ ಯಾವುದೇ ನೋಟಿಸ್ ಜಾರಿಯಾಗುವಂತಿಲ್ಲ. ಈಗ ನೀಡಿರುವ ನೋಟಿಸ್‌ಗಳನ್ನು ವಾಪಸ್ ಪಡೆ ಯಲು ಸೂಚಿಸಲಾಗುವುದು ಎಂದು ಹೇಳಿದ್ದರು. ತಹಶೀಲ್ದಾರ್‌ರ ತಪ್ಪಿನಿಂದಾಗಿ ಯಾವುದೇ ರೈತರ ಜಮೀನು ಖಾತೆಗಳಲ್ಲಿ ವಕ್ಫ್ ಹೆಸರು ಸೇರ್ಪಡೆಯಾಗಿದ್ದರೆ ತೆಗೆದುಹಾಕಲಾಗುವುದು ಎಂಬ ಭರವಸೆ ನೀಡಿದ್ದರು. ಆದರೆ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಸಿ. ವಿಮಲಮ್ಮ ರಾಜ್ಯದ ಎಲ್ಲ ಪ್ರಾದೇಶಿಕ ಆಯುಕ್ತರಿಗೆ ೨೧,೭೬೭ ಪ್ರಕರಣಗಳಲ್ಲಿ ಅಗತ್ಯ ಕ್ರಮ ಕೈಗೊಂಡು, ಖಾತೆ ಬದಲಾವಣೆ ಮಾಡಿ ಅನುಪಾಲನ ವರದಿಯನ್ನು ತುರ್ತಾಗಿ ಸರ್ಕಾರಕ್ಕೆ ಸಲ್ಲಿಸಲು ತಿಳಿಸಿದ್ದರು. ವಕ್ಫ್ ಕುರಿತಂತೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಜನರ ಆಸ್ತಿಯನ್ನು ವಕ್ಫ್ ಆಸ್ತಿಗೆ ಸೇರಿಸಿಕೊಳ್ಳಲಾಗಿದೆ ಎಂದು ಆರೋಪಗಳು ಕೇಳಿಬಂದಿದ್ದವು. ಸಂಯುಕ್ತ ಕರ್ನಾಟಕ ಪತ್ರಿಕೆ ಎಲ್ಲ ಜಿಲ್ಲೆಗಳ ಅಧಿಕಾರಿಗಳನ್ನು ಸಂಪರ್ಕಿಸಿ ವಿಚಾರಿಸಿದಾಗ ಸರ್ಕಾರದಿಂದ ನೋಟಿಸ್ ಹಿಂಪಡೆಯುವ ಯಾವುದೇ ಸುತ್ತೋಲೆ ಬಂದಿಲ್ಲ ಎಂದು ತಿಳಿಸಿದ್ದರು. ಈ ಹಿನ್ನೆಯಲ್ಲಿ ದಿ. ೮ ರಂದು ವರದಿ ಪ್ರಕಟಿಸಿದ ಬೆನ್ನಲ್ಲೇ ಶನಿವಾರ ಕಂದಾಯ ಇಲಾಖೆ ಯಿಂದ ನೋಟಿಸ್ ವಾಪಸ್ ಪಡೆಯುವ ಆದೇಶ ಹೊರಡಿಸಲಾಗಿದೆ.