For the best experience, open
https://m.samyuktakarnataka.in
on your mobile browser.

ಅಂಬೇಡ್ಕರ್‌ರನ್ನು ಅವಮಾನಿಸಿದ್ದು, ಸೋಲಿಸಿದ್ದೇ ಕಾಂಗ್ರೆಸ್

07:30 PM Dec 26, 2024 IST | Samyukta Karnataka
ಅಂಬೇಡ್ಕರ್‌ರನ್ನು ಅವಮಾನಿಸಿದ್ದು  ಸೋಲಿಸಿದ್ದೇ ಕಾಂಗ್ರೆಸ್

ಮಂಗಳೂರು: ನಮ್ಮ ದೇಶಕ್ಕೆ ಸಂವಿಧಾನವನ್ನು ನೀಡಿ ರಾಷ್ಟ್ರದ ಸಾರ್ವಭೌಮತ್ವವನ್ನು ಎತ್ತಿ ಹಿಡಿದ ಮಹಾಪುರುಷ ಡಾ.ಬಿ.ಆರ್. ಅಂಬೇಡ್ಕರ್ ರವರಿಗೆ, ಇವತ್ತು ಸಂವಿಧಾನದ ಪುಸ್ತಕ ವನ್ನು ಕೈಯಲ್ಲಿ ಹಿಡಿದು ಅದ್ಭುತವಾಗಿ ನಾಟಕ ಪ್ರದರ್ಶಿಸುತ್ತಿರುವ ರಾಹುಲ್ ಗಾಂಧಿ ಇತಿಹಾಸದಲ್ಲಿ ನೆಹರು ಮತ್ತು ಕಾಂಗ್ರೆಸಿಗರು ಅಂಬೇಡ್ಕರ್ ರವರಿಗೆ ಯಾವ ರೀತಿಯಲ್ಲಿ ಅನ್ಯಾಯ ಎಸಗಿದ್ದಾರೆ, ಅವಮಾನಿಸಿದ್ದಾರೆ ಎನ್ನುವುದನ್ನು ಮರೆತಿದ್ದಾರಾ, ಅಥವ ಮರೆತಂತೆ ಜಾಣತನ ತೋರುತ್ತಿದ್ದಾರಾ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಪ್ರಶ್ನಿಸಿದ್ದಾರೆ.
ಭಾರತದಲ್ಲಿ ಪರಿಶಿಷ್ಟ ಜಾತಿ ಜನರ ಅತ್ಯಂತ ಹೀನ ಪರಿಸ್ಥಿತಿಗೆ ಪರಿಹಾರ ನೀಡುವಲ್ಲಿ ವಿಫಲರಾಗಿದ್ದ ಮತ್ತು ಮುಸ್ಲಿಮರ ಮೇಲೆ ತೋರಿಸುತ್ತಿರುವ ಕಾಳಜಿಯನ್ನು ಪರಿಶಿಷ್ಟರ ಮೇಲೆ ತೋರದಿರುವ ನೆಹರು ಸರ್ಕಾರದ ವಿರುದ್ದ ಪತ್ರ ಬರೆದು ರಾಜೀನಾಮೆ ನೀಡಿದ್ದರು. ಅಂತಹ ಸಂಧರ್ಭದಲ್ಲಿ ಸದನದಲ್ಲಿ ಮಾತನಾಡಲೂ ಅವರಿಗೆ ಅವಕಾಶ ನೀಡಲಿಲ್ಲ. ನೆಹರು ರವರಿಗೆ ಅಂಬೇಡ್ಕರ್ ಮೇಲೆ ಇದ್ದಂತಹ ಅಸಹನೆ ಯಾವ ರೀತಿ ಇತ್ತು ಎಂದರೆ ಅಂಬೇಡ್ಕರ್ ರಾಜೀನಾಮೆ ಯಿಂದ ದೇಶಕ್ಕೆ ಯಾವುದೇ ನಷ್ಟ ಇಲ್ಲ ಎನ್ನುವ ಉದ್ಧಟತನದ ಮಾತನಾಡಿರುವುದನ್ನು ರಾಹುಲ್ ಗಾಂದಿ ನೆನಪಿಸಲಿ.
ನೆಹರು,ಇಂದಿರಾಗಾಂಧಿ, ರಾಜೀವ್ ಗಾಂಧಿ ತಮಗೆ ತಾವೇ ಭಾರತರತ್ನ ಕೊಟ್ಟಿದ್ದಾರೂ ಅಂಬೇಡ್ಕರ್ ರವರಿಗೆ ಭಾರತರತ್ನ, ಪದ್ಮಭೂಷಣ, ಪದ್ಮಶ್ರೀ ಯಾವುದೇ ಪ್ರಶಸ್ತಿಯನ್ನು ನೀಡದೆ ಅವಮಾನಿಸಿದರು. ಬದಲಾಗಿ ಅಂಬೇಡ್ಕರ್ ರವರನ್ನು ಸೋಲಿಸಿದ ನಾರಾಯಣ ಸಾಧುಬಾ ಕಜ್ರೋಳಕರ್ ಗೆ ಪದ್ಮಭೂಷಣ ನೀಡಿದರು.
ದೇಶದಲ್ಲಿ ನೆಹರು, ಇಂದಿರಾ, ರಾಜೀವ್ ಹೆಸರಲ್ಲಿ ಸ್ಮಾರಕ, ಆಸ್ಪತ್ರೆ, ರಸ್ತೆ, ವಿಮಾನ ನಿಲ್ದಾಣಗಳು ಇದ್ದರೂ ಸಂವಿಧಾನ ಪುರುಷರಾಗಿದ್ದರೂ ಅಂಬೇಡ್ಕರ್ ಹೆಸರಲ್ಲಿ ಕಾಂಗ್ರೆಸ್ ಸ್ಮಾರಕ ನಿರ್ಮಿಸಿಲ್ಲ. ಪ್ರಸ್ತುತ ನರೇಂದ್ರ ಮೋದಿಯವರು ಅಂಬೇಡ್ಕರ್ ರವರಿಗೆ ಸಂಭಂದಿಸಿದ ಜಾಗಗಳನ್ನು ಪಂಚತೀರ್ಥ ಗಳಾಗಿ ಅಭಿವೃದ್ಧಿ ಪಡಿಸಿ ಗೌರವ ಸಲ್ಲಿಸಿದೆ ಎಂದು ಕುಂಪಲ ಹೇಳಿದರು.
೧೯೫೨ ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತು ೧೯೫೪ ರಲ್ಲಿ ನಡೆದ ಉಪಚುನಾವಣೆ ಯಲ್ಲಿ ಕಾಂಗ್ರೆಸ್ ಅಂಬೇಡ್ಕರ್ ರವರನ್ನು ಸೋಲಿಸಿತು. ಈ ರೀತಿಯಾಗಿ ಜೀವಮಾನದ ಉದ್ದಕ್ಕೂ ಪರಿಪರಿಯಾಗಿ ಕಾಡಿದ ವಿಚಾರವನ್ನು ದೇಶದ ಗೃಹ ಮಂತ್ರಿ ಅಮಿತ್ ಶಾ ರವರು ಎಳೆಎಳೆಯಾಗಿ ಬಿಚ್ಚಿಟ್ಟಾಗ ಬೆಚ್ಚಿ ಬಿದ್ದ ರಾಹುಲ್ ಗಾಂಧಿ ಯಾದಿಯಾಗಿ ಕಾಂಗ್ರೆಸಿಗರಿಗೆ ಇರಿಸುಮುರುಸು ಆಗಿ ಕೋಲಾಹಲ ಸೃಷ್ಟಿಸುತ್ತಿದ್ದಾರೆ, ಸಂವಿಧಾನ ಹೆಸರಲ್ಲಿ ರಾಜಕೀಯ ಬೇಳೆ ಬೇಯಿಸಲು ಹೊರಟಿರುವ ಕಾಂಗ್ರೆಸಿಗರ ಬಂಡವಾಳ ವನ್ನು ದೇಶದ ಜನರು ತಿಳಿಯಬೇಕಿದೆ ಎಂದು ಅವರು ಹೇಳಿದರು.