ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವ ಸಭಾಪತಿ ಹೊರಟ್ಟಿ
ಹುಬ್ಬಳ್ಳಿ: ಅಮೇರಿಕಾದ ವರ್ಜೀನಿಯಾ ರಿಚ್ಮಂಡ್‌ನಲ್ಲಿ ಆ. ೩೦ರಿಂದ ಸೆ. ೧ರ ವರೆಗೆ ಆಯೋಜನೆಗೊಂಡಿರುವ ೧೨ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕನ್ನಡ ನಾಡು, ನುಡಿ, ಭಾಷಾ ಬೆಳವಣಿಗೆ, ಕನ್ನಡದ ಅಸ್ಮಿತೆ, ಕನ್ನಡ ಭಾಷೆಯ ಪ್ರಚಾರಕ್ಕೆ ಕೈಗೊಳ್ಳಬೇಕಾದ ಇಂದಿನ ತುರ್ತು ಅವಶ್ಯಕತೆಗಳು ಸೇರಿದಂತೆ ಹಲವಾರು ಮಹತ್ವದ ವಿಷಯಗಳ ಕುರಿತು ಬಸವರಾಜ ಹೊರಟ್ಟಿರವರು ತಮ್ಮ ನಾಲ್ಕು ದಶಗಳಿಗಿಂತಲೂ ಹೆಚ್ಚು ಕಾಲದ ಅನುಭವ, ವಿಚಾರಗಳನ್ನು ಅಲ್ಲಿನ ಕನ್ನಡಿಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಅತಿದೊಡ್ಡ ಕನ್ನಡದ ಉತ್ಸವ ಎಂದೇ ಪರಿಗಣಿಸಲಾಗುವ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸುಮಾರು ೫ ಸಾವಿರಕ್ಕೂ ಹೆಚ್ಚು ಕನ್ನಡಿಗರು ಭಾಗವಹಿಸಲಿದ್ದಾರೆ. ಕನ್ನಡ ನಾಡು, ನುಡಿ, ರಕ್ಷಣೆ ಕುರಿತು ವಿವಿಧ ಗೋಷ್ಠಿಗಳು, ಚಿಂತನ-ಮಂಥನ, ಸಂವಾದಗಳು ಜರುಗಲಿದ್ದು, ಅತ್ಯುತ್ತಮ ಮನರಂಜನಾ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ.
ಕರ್ನಾಟಕದ ವಿವಿಧ ಬಗೆಯ ರುಚಿಕರ ತಿಂಡಿ-ತಿನಿಸುಗಳು, ವಿವಿಧ ವಾಣಿಜ್ಯ ಮತ್ತು ವ್ಯಾಪಾರ ಮೇಳ ಹಾಗೂ ಮಳಿಗೆಗಳು, ಕಲೆ ಮತ್ತು ಸಾಹಿತ್ಯಿಕ ವೇದಿಕೆಗಳು, ಮಹಿಳಾ ವೇದಿಕೆ, ಯುವ ವೇದಿಕೆ, ವಿದ್ಯಾ ಸಂಸ್ಥೆಗಳ ಹಳೇ ವಿದ್ಯಾರ್ಥಿಗಳ ಮಹಾಸಂಗಮ, ವಿವಿಧ ಕ್ರೀಡಾಕೂಟಗಳು, ಆರೋಗ್ಯ ಮತ್ತು ಅಧ್ಯಾತ್ಮಿಕ ವೇದಿಕೆಗಳು ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ಈ ಬಾರಿಯ ಅಕ್ಕ ಸಮ್ಮೇಳನದ ವಿಶೇಷ ಆಕರ್ಷಣೆಗಳಾಗಿವೆ.