For the best experience, open
https://m.samyuktakarnataka.in
on your mobile browser.

ಅಕ್ರಮ ಕಟ್ಟಡ ಕುಸಿತ, ಭ್ರಷ್ಟಾಚಾರಕ್ಕಿಲ್ಲ ಅಂತ್ಯ

02:30 AM Oct 25, 2024 IST | Samyukta Karnataka
ಅಕ್ರಮ ಕಟ್ಟಡ ಕುಸಿತ  ಭ್ರಷ್ಟಾಚಾರಕ್ಕಿಲ್ಲ ಅಂತ್ಯ

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಸಚಿವರು ಮತ್ತು ಶಾಸಕರ ಕಣ್ಣುಮುಂದೆ ಭ್ರಷ್ಟಾಚಾರ ತನ್ನ ಕಬಂಧಬಾಹುಗಳನ್ನು ಚಾಚಿದ್ದರೂ ಕಣ್ಣುಮುಚ್ಚಿ ಕುಳಿತುಕೊಳ್ಳುವ ಸರ್ಕಾರವನ್ನು ನೋಡಿದರೆ ಇದಕ್ಕೆ ಪರಿಹಾರ ಇಲ್ಲ ಎಂಬುದು ಸ್ಪಷ್ಟ. ಅನಧಿಕೃತ ಕಟ್ಟಡ ತಲೆ ಎತ್ತಲು ಕಾರಣ ಯಾರು ಎಂದರೆ ಸಾವಿಲ್ಲದ ಮನೆಯಲ್ಲಿ ಸಾಸುವೆ ಹುಡುಕಿದಂತೆ. ದುಡ್ಡು ತಿನ್ನದವನೇ ಪಾಪಿ. ಸರ್ಕಾರಿ ಕೆಲಸಕ್ಕೆ ನಾಲಾಯಕ್. ಹಿಂದೆ ಬಿಬಿಎಂಪಿ, ಬಿಡಿಎದಲ್ಲಿ ಧರ್ಮ ಕರ್ಮ ಉಳಿಸಿಕೊಂಡು ಬಂದ ಅಧಿಕಾರಿಗಳಿದ್ದರು. ಈಗ ಪ್ರಾಮಾಣಿಕರನ್ನು ಹುಡುಕುವುದೇ ಕಷ್ಟ. ಬೆಂಗಳೂರಿಗೆ ಐಟಿಬಿಟಿ ಬರುವವರೆಗೆ ಬಿಬಿಎಂಪಿ ಹಿಡಿತದಲ್ಲಿ ಬೆಂಗಳೂರು ಇತ್ತು. ಐಟಿಬಿಟಿ ತಲೆ ಎತ್ತಿದ ಮೇಲೆ ಬೆಂಗಳೂರು ಎಗ್ಗಿಲ್ಲದೆ ಬೆಳೆಯಿತು. ಅದರಲ್ಲೂ ಕೆಆರ್‌ಪುರಂ ಮತ್ತು ಮಹದೇವಪುರ ಕಂಡ ಬೆಳವಣಿಗೆಯನ್ನು ನೋಡಿದರೆ ಎದೆ ಧಸಕ್ಕನ್ನುವುದು ಸಹಜ. ಬೀದಿಯಲ್ಲಿದ್ದವರು ಕೋಟ್ಯಧಿಪತಿಗಳಾಗಿ ವಿದೇಶಿ ಕಾರುಗಳಲ್ಲಿ ಸಂಚರಿಸಲು ಆರಂಭಿಸಿದರು. ರಿಯೆಲ್ ಎಸ್ಟೇಟ್ ಲಾಬಿ ಮಾಫಿಯಾ ಆಗಿ ಬೆಳೆಯಿತು. ಜನಪ್ರತಿನಿಧಿಗಳು ಈ ಮಾಫಿಯಾ ಅಡಿಯಾಳಾದರು. ಈಗ ರಾಜಕೀಯ ಪಕ್ಷಗಳೇ ಇವರ ಕೈಯಲ್ಲಿದೆ.
ಬಹುಮಹಡಿ ಕಟ್ಟಡಗಳಂತೂ ರಾತ್ರೋರಾತ್ರಿ ತಲೆಎತ್ತಿದವು. ಬೆಂಗಳೂರು ಬಿಬಿಎಂಪಿ ಹಿಡಿತ ತಪ್ಪಿ ಹೋಯಿತು. ಇದರಿಂದ ಅನಧಿಕೃತ ಕಟ್ಟಡಗಳು ಎಷ್ಟಿವೆ ಎಂದು ಕೇಳಿದರೆ ಬಿಬಿಎಂಪಿ ಕಮಿಷನರ್‌ಗೆ ಗೊತ್ತಿಲ್ಲ. ಹೈಕೋರ್ಟ್ ಕೇಳಿದರೂ ಸರಿಯಾದ ಮಾಹಿತಿ ಕೊಡಲು ಸಾಧ್ಯವಾಗಿಲ್ಲ, ಬಿಬಿಎಂಪಿ ನಡೆಸಿದ ಒಂದು ಸಮೀಕ್ಷೆ ಪ್ರಕಾರ ೧.೮ ಲಕ್ಷ ಮನೆಗಳಿವೆ. ಅದೇರೀತಿ ಬಿಡಿಎ ಪ್ರಕಾರ ೨೭೯ ಅನಧಿಕೃತ ಲೇಔಟ್‌ಗಳಿವೆ. ೨೭ ಸಾವಿರ ನಿವೇಶನಗಳಿವೆ ಎಂದ ಮೇಲೆ ಸರ್ಕಾರ ಎಲ್ಲಿದೆ? ಇತ್ತೀಚೆಗೆ ೬ ಅಂತಸ್ತಿನ ಕಟ್ಟದ ಕುಸಿಯಿತು. ಅದು ಕೇವಲ ಸಾಂಕೇತಿಕ. ೬ ಅಂತಸ್ತು ಎತ್ತರ ಭ್ರಷ್ಟಾಚಾರ ಬೆಳೆದಿದೆ ಎಂಬುದು ಸ್ಪಷ್ಟ. ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳ ಪಾಲು ಇದೆ. ರಾಮಕೃಷ್ಣ ಹೆಗಡೆ ಕಾಲದಲ್ಲಿ ಇದಕ್ಕೆ ಬೀಜಾಂಕುರವಾಯಿತು. ಗುಡ್ಡಗಳು ಕರಗಿದವು. ಕೆರೆಗಳು ಮಾಯವಾದವು. ಬಹುಮಹಡಿ ಕಟ್ಟಡಗಳು ತಲೆಎತ್ತಿದವು. ಹಿಂದೆ ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡ ಸಂಸ್ಕೃತಿ ಇರಲಿಲ್ಲ. ವಠಾರ ಸಂಸ್ಕೃತಿ ಇತ್ತು. ಎಲ್ಲವೂ ಬದಲಾದವು. ನಡೆದು ಓಡಾಡುವರು ಕಡಿಮೆಯಾದರು. ವಾಹನ ಸಂಖ್ಯೆ ಹೆಚ್ಚಾಯಿತು. ಕನ್ನಡ ಮಾತನಾಡುವವರು ಕಡಿಮೆಯಾದರು. ಹಿಂದಿ ಮತ್ತು ಇಂಗ್ಲೀಷ್ ಪ್ರಧಾನವಾಯಿತು. ಬೆಂಗಳೂರು ಕಾಸ್ಮೋಪಾಲಿನ ನಗರವಾಯಿತು. ಮೂಲ ನಿವಾಸಿಗಳ ಮನೆಗಳನ್ನು ಮಾರಿಕೊಂಡು ಹಳ್ಳಿಗಳನ್ನು ಸೇರಿದರು. ಈಗ ದುಡ್ಡಿಲ್ಲದೆ ಒಂದು ಹುಲುಕಡ್ಡಿಯೂ ಅಲುಗಾಡುವುದಿಲ್ಲ. ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ನೋಡಿ ಸರ್ಕಾರ ಇದ್ದು ಇಲ್ಲದಂತೆ ನಡೆಯುತ್ತಿದೆ ಎಂಬುದು ಕಣ್ಣಿಗೆ ಕಾಣಿಸುತ್ತದೆ. ಇಲ್ಲಿಗೆ ಯಾವ ಬಡವರೂ ಬರುವುದಿಲ್ಲ. ಎಲ್ಲರೂ ಜೇಬು ತುಂಬ ಎಟಿಎಂ ಕಾರ್ಡ್ ಇಟ್ಟುಕೊಂಡವರು. ಇಂಟರ್‌ನೆಟ್-ಕಂಪ್ಯೂಟರ್ ಬಂದಿದ್ದರೂ ಭ್ರಷ್ಟಾಚಾರ ಅಧಿಕಗೊಂಡಿದೆಯೇ ಹೊರತು ಕಡಿಮೆಯಾಗಿಲ್ಲ. ಇದು ಬೆಂಗಳೂರು ನಗರ ಒಂದರ ಪರಿಸ್ಥಿತಿಯಲ್ಲ. ರಾಜ್ಯದ ಪ್ರಮುಖ ನಗರಗಳಿಗೆ ಹೋಗಿ ನೋಡಿದರೆ ತಿಳಿಯುತ್ತದೆ. ರಾಜ್ಯ ಸರ್ಕಾರದ ಆದಾಯ ಅಧಿಕಗೊಳ್ಳಲು ಸ್ಟಾಂಪ್ ಶುಲ್ಕ ಅಧಿಕಗೊಂಡಿದ್ದು ಕಾರಣ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಸರ್ಕಾರಕ್ಕೆ ಸಂದ ಶುಲ್ಕಕ್ಕೆ ೧೦ ಪಟ್ಟು ಭ್ರಷ್ಟಾಚಾರದ ಕೈಗಳು ಮಲೀನಗೊಂಡಿವೆ ಎಂಬುದು ಸ್ಪಷ್ಟ. ರಾಜ್ಯ ಹೈಕೋರ್ಟ್ ಕೂಡ ಹಲವು ಬಾರಿ ಇದಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಿದೆ. ಅಧಿಕಾರಿಗಳು ಮತ್ತು ರಾಜಕಾರಣಿಗಳು ಒಂದುಗೂಡಿ ಜನರನ್ನು ಶೋಷಣೆ ಮಾಡಲು ತೀರ್ಮಾನಿಸಿದ ಮೇಲೆ ಇದಕ್ಕೆ ಪರಿಹಾರ ಕಂಡು ಹಿಡಿಯಲು ಹೇಗೆ ಸಾಧ್ಯ? ಜನರಿಗೆ ಈಗ ನ್ಯಾಯಾಲಯದಲ್ಲಿ ಮಾತ್ರ ನಂಬಿಕೆ ಉಳಿಯುವಂತಾಗಿದೆ. ಆದರೂ ಆಡಳಿತಾತ್ಮಕ ಕ್ರಮಗಳನ್ನು ಸರ್ಕಾರವೇ ಕೈಗೊಳ್ಳಬೇಕು. ಜನ ನಿರಾಶೆಯ ಮಡುವಿನಲ್ಲಿ ಮುಳುಗಿ ಹೋಗಿದ್ದಾರೆ. ಕಟ್ಟಡ ಬೈಲಾಗಳು ಇವೆ. ಬ್ಯಾಂಕ್‌ಗಳು ಮನೆ ನಿರ್ಮಾಣಕ್ಕೆ ಸಾಲ ನೀಡುತ್ತಿವೆ. ಆದರೂ ಅಕ್ರಮ ಕಟ್ಟಡ ತಲೆ ಎತ್ತುತ್ತಿರುವುದು ಹೇಗೆ? ಅದರಲ್ಲೂ ಎ ಮತ್ತು ಬಿ ಖಾತೆ ಸೃಷ್ಟಿಯೇ ವಿಚಿತ್ರವಾಗಿದೆ. ಬಿ ಖಾತೆ ಅಕ್ರಮ ಎಂದು ಸರ್ಕಾರವೇ ಹೇಳುತ್ತದೆ. ಆದರೆ ಬಿ ಖಾತೆಯನ್ನು ಎ ಖಾತೆಯಾಗಿ ಪರಿವರ್ತಿಸಬಹುದು ಎಂದು ಹೇಳುತ್ತದೆ. ಅಂದರೆ ಅಕ್ರಮವನ್ನು ಸಕ್ರಮಗೊಳಿಸುವ ಕೆಲಸವನ್ನು ಸರ್ಕಾರವೇ ಕೈಗೊಳ್ಳುತ್ತದೆ ಎಂದಾಯಿತು. ಇದರಲ್ಲಿ ಗೆಲ್ಲುವವರು ಶ್ರೀಮಂತರೇ ಹೊರತು ಬೇರೆಯವರಲ್ಲ. ರಾಜಧಾನಿಯ ಪರಿಸ್ಥಿತಿ ಇದಾಗಿರುವಾಗ ಇತರ ನಗರಗಳ ಬಗ್ಗೆ ಹೇಳುವ ಅಗತ್ಯವಿಲ್ಲ. ಸುದೈವದಿಂದ ಅಲ್ಲಿ ಭೂಮಿಯ ಬೆಲೆ ಗಗನಕ್ಕೇರಿಲ್ಲ. ಭೂ ಮಾಫಿಯಾ ಅಲ್ಲಿಗೆ ಇನ್ನೂ ಸಂಪೂರ್ಣವಾಗಿ ಕಾಲಿಟ್ಟಿಲ್ಲ. ನಗರ ಯೋಜನಾ ಪ್ರಾಧಿಕಾರ ಎಲ್ಲಿದೆಯೋ ಯಾರಿಗೂ ತಿಳಿಯದು. ವಿಚಿತ್ರದ ಸಂಗತಿ ಎಂದರೆ ಒಂದೂ ಅನಧಿಕೃತ ಕಟ್ಟಡವನ್ನು ಅಧಿಕಾರಿಗಳು ನೆಲಸಮ ಮಾಡಿಲ್ಲ. ನ್ಯಾಯಾಲಯ ಹೇಳಿದರೂ ಮಾಡೋಲ್ಲ.