ಅಕ್ರಮ ಗಣಿಗಾರಿಕೆ ನಿಷೇಧಿಸುವಲ್ಲಿ ಯಶಸ್ವಿ: ಸುಮಲತಾ
ಮಂಡ್ಯ: ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ನಿರಂತರ ಹೋರಾಟ ಮಾಡಿದ್ದೇವೆ. ನಮ್ಮ ಹೋರಾಟದ ಫಲವಾಗಿ ಹೈಕೋರ್ಟ್ ಅಕ್ರಮ ಗಣಿಗಾರಿಕೆಯನ್ನು ನಿಷೇಧಿಸಿದೆ. ಕೆಆರ್‌ಎಸ್ ಉಳಿವಿಗಾಗಿ ಅಕ್ರಮದ ವಿರುದ್ಧ ಹೋರಾಟ ನಿರಂತರ ಎಂದು ಸಂಸದೆ ಸುಮಲತಾ ಅಂಬರೀಶ್ ಅವರು ಹೇಳಿದರು.
ಜಿಲ್ಲಾ ಪಂಚಾಯತ ಕಾವೇರಿ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ದಿಶಾ ಸಭೆಯ ನೇತೃತ್ವವಹಿಸಿ ಅವರು ಮಾತನಾಡಿದರು.
ಸಭೆಯ ಆರಂಭದಲ್ಲೇ ಐದು ವರ್ಷದ ಸಾಧನೆ ಪಟ್ಟಿ ಬಿಡುಗಡೆ ಮಾಡಿದರು. ಜೊತೆಗೆ 5 ವರ್ಷದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಗುಣಗಾನ ಮಾಡಿ, ಕುಡಿಯುವ ನೀರು, ಬಸ್ ನಿಲ್ದಾಣ, ರಸ್ತೆ ಸೇರಿ ಹಲವು ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.
ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ನಮಗೆ ಇನ್ನೂ ದೂರು ಬರುತ್ತಿದೆ. ಗಣಿ ಅಧಿಕಾರಿಗಳು ನಿಗಾ ವಹಿಸಬೇಕು. ಜೊತೆಗೆ ಗಣಿ ಮಾಲೀಕರಿಂದ ವಸೂಲಿ ಆಗಬೇಕಿರುವ ರಾಜಧನ ಸಂಗ್ರಹವನ್ನು ಚುರುಕುಗೊಳಿಸಿ ಎಂದರು.
ಹೆಣ್ಣು ಭ್ರೂಣ ಹತ್ಯೆಯ ಜಾಗೃತಿ ಸಮಿತಿಗಳು ಎಚ್ಚರದಿಂದ ಕೆಲಸ ನಿರ್ವಹಿಸಬೇಕು. ನಾಗಮಂಗಲ ತಾಲ್ಲೂಕಿನ 2 ಅಕ್ರಮ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಮುಚ್ಚಲಾಗಿದೆ. ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಅರಿವು ಮೂಡಿಸಬೇಕು. ಭ್ರೂಣ ಹತ್ಯೆ ಬಗ್ಗೆ ಸರಿಯಾದ ಮಟ್ಟದಲ್ಲಿ ತನಿಖೆ ಆಗ್ತಾ ಇಲ್ಲ ಎನ್ನುವ ದೂರುಗಳಿವೆ. ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಿ ಹೆಣ್ಣು ಭ್ರೂಣ ಹತ್ಯೆಯಲ್ಲಿ ಸಾಬೀತಾದಲ್ಲಿ ಕಾನೂನಿನ ಕ್ರಮಕೈಗೊಳ್ಳಿ ಎಂದರು.
ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಸಂಬಂಧ ಮಾಹಿತಿ ಏನಿದೆ. ಏನೇನು ಮುಂಜಾಗೃತ ಕ್ರಮ ಕೈಗೊಂಡಿದ್ದೀರಾ, ಎಷ್ಟು ಭ್ರೂಣ ಪತ್ತೆ ಹತ್ಯೆಯಾಗಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಅವರು ಮಾಹಿತಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಹಶೀಲ್ದಾರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದ್ದು, ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಗ್ರಾಮ ಮಟ್ಟದಲ್ಲಿ ಕಾನೂನು ಅರಿವು ಕಾರ್ಯಕ್ರಮಗಳನ್ನ ರೂಪಿಸಿದ್ದೇವೆ.
ಬಾಲ್ಯ ವಿವಾಹ ತಡೆಗಟ್ಟಲು ಸಹ ಕ್ರಮ ಕೈಗೊಳ್ಳಲಾಗಿದೆ ಎಂದರು. ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ಅವರು ಪ್ರತಿಕ್ರಿಯಿಸಿ ಪ್ರಕರಣ ಸಂಬಂಧ ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಭೇದಿಸಿ, 18 ಮಂದಿಯನ್ನ ಬಂಧಿಸಲಾಗಿದೆ. ಮಂಡ್ಯದ ಮೂವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಹೆಣ್ಣು ಭ್ರೂಣ ಹತ್ಯೆ ಪತ್ತೆಗೆ ಕಡಿವಾಣ ಹಾಕಿ. ಆ ನಿಟ್ಟಿನಲ್ಲಿ ವಿಶೇಷ ತನಿಖಾ ತಂಡದ ಮೂಲಕ ರೇಡ್ ಮಾಡುವ ಕೆಲಸ ಮಾಡಬೇಕು. ಭ್ರೂಣ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಡೆಗಟ್ಟಬೇಕು ಎಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಸಂಸದೆ ಸುಮಲತಾ ಅಂಬರೀಶ್ ಅವರು ಸೂಚಿಸಿದರು.
ಶಾಸಕ ಪಿ.ರವಿಕುಮಾರ್ ಅವರು ಮಾತನಾಡಿ, ಭತ್ತ ಖರೀದಿ ಕೇಂದ್ರದ ನೋಂದಣಿ ಪ್ರಕ್ರಿಯೆ ಮುಗಿದಿದೆ ಭತ್ತ ಖರೀದಿ ಕೇಂದ್ರ ಆರಂಭಿಸಿ, ಜೊತೆಗೆ ಅಕ್ರಮ ಪಡಿತರ ವರ್ಗವಣೆಗೆ ಕಡಿವಾಣ ಹಾಕಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಂಸದೆ ಸುಮಲತಾ ಅಂಬರೀಶ್ ಅವರ ಕೊನೆಯ ದಿಶಾ ಸಭೆ ಆಗಿದ್ದರಿಂದ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತರ ಸಿಇಓ ತನ್ವೀರ್ ಆಸೀಫ್, ಎಸ್ಪಿ ಎನ್.ಯತೀಶ್ ಅವರು ಸಂಸದೆ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ ಗಣಪತಿ ವಿಗ್ರಹ ಗಿಫ್ಟ್ ನೀಡಿ ಬೀಳ್ಕೊಡುಗೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ ಕುಮಾರ, ಜಿಲ್ಲಾ ವರಿಷ್ಠಾಧಿಕಾರಿ ಎನ್ ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ವಿಧಾನಸಭಾ ಶಾಸಕ ಪಿ. ರವಿಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.