ಅಕ್ರಮ ಮರಳುಗಾರಿಕೆಯಿಂದ ಸೇತುವೆಗೆ ಹಾನಿಯಾದರೆ ಅಧಿಕಾರಿಗಳೇ ಹೊಣೆ
ಮಂಗಳೂರು: ಭಾರೀ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆಯಿಂದ ಮುಲ್ಲರ್ ಪಟ್ಣ ಸೇತುವೆ ಕುಸಿದಂತೆ ಪೊಳಲಿ ಸೇತುವೆಗೂ ಬರುವ ಆತಂಕವಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಆತಂಕ ವ್ಯಕ್ತ ಪಡಿಸಿದರು.
ಅಡ್ಡೂರು ಬಳಿ ಅಕ್ರಮ ಮರಳು ಗಾರಿಕೆ ತಕ್ಷಣ ನಿಲ್ಲಿಸಲು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಈ ಹಿಂದೆ ಹಲವು ಬಾರಿ ಅಕ್ರಮ ಮರಳುಗಾರಿಕೆಯ ಬಗ್ಗೆ ಸಾಕ್ಷ್ಯ ಸಮೇತ ಜಿಲ್ಲಾಧಿಕಾರಿ ಸಹಿತ ಗಣಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇಲೂ ನಿಲ್ಲಿಸಲು ಸಾಧ್ಯವಾಗಿಲ್ಲ .ಎಲ್ಲಿಯವರೆಗೆ ಎಂದರೆ ಅಕ್ರಮ ಮರಳುಗಾರಿಯನ್ನು ಸೇತುವೆ ಬುಡದಲ್ಲಿ ಮಾಡುವುದರಿಂದ ಇದೀಗ ಇಲ್ಲಿನ ಸೇತುವೆ ದುರಸ್ತಿಗೆ ಬಂದು ನಿಂತಿದೆ.ಕೋಟ್ಯಾಂತರ ರೂ ಖರ್ಚು ಮಾಡಬೇಕಾದ ಸ್ಥಿತಿಯಿದೆ.ಆದರೂ ಇದೇ ರೀತಿ ಮರಳುಗಾರಿಕೆ ಆದಲ್ಲಿ ಸೇತುವೆಗೆ ಉಳಿಗಾಲವಿಲ್ಲ. ಇಂತಹ ಅಕ್ರಮ ಮರಳುಗಾರಿಕೆ ಶಾಶ್ವತವಾಗಿ ನಿಲ್ಲಿಸಲು ಕ್ರಮ ಜರಗಿಸಬೇಕು. ಮುಂದೆ ಇನ್ನಷ್ಟು ಸಮಸ್ಯೆಯಾದರೆ ಅಧಿಕಾರಿಗಳೇ ಜವಾಬ್ದಾರರು ಎಂದು ಎಚ್ಚರಿಸಿದರು. ಸುದ್ದಿ ಗೋಷ್ಟಿ ಯಲ್ಲಿ ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ರಾಜೇಶ್ ಕೊಠಾರಿ,ಪ್ರಮುಖರಾದ ಸಂದೀಪ್ ಪಚ್ಚನಾಡಿ,ಭರತ್ ರಾಜ್ ಕೃಷ್ಣಾಪುರ,ಶ್ರವಣ್ ಶೆಟ್ಟಿ, ಆಶ್ರಿತ್ ನೋಂಡಾ ಮತ್ತಿತರರು ಉಪಸ್ಥಿತರಿದ್ದರು